
ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಗೋನೂರು ಗ್ರಾಮದ ಬಳಿ ಇರುವ ಕೆರೆಯ ಪ್ರದೇಶದಲ್ಲಿ ನವಜಾತ ಹೆಣ್ಣು ಶಿಶುವನ್ನು ಚೀಲವೊಂದರಲ್ಲಿ ಕಟ್ಟಿ ಬಿಸಾಕಿ ಹೋಗಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಅದೃಷ್ಟವಶಾತ್, ಸಮಯಕ್ಕೆ ಸರಿಯಾಗಿ ಮಗುವಿನ ಅಳು ಕೇಳಿ ಧಾವಿಸಿದ ಗ್ರಾಮಸ್ಥರ ಸಮಯಪ್ರಜ್ಞೆ ಹಾಗೂ ಮಾನವೀಯತೆಯಿಂದಾಗಿ ಮಗು ಪ್ರಾಣಾಪಾಯದಿಂದ ಪಾರಾಗಿದೆ.
ಗೋನೂರು ಕೆರೆಯ ಸೀಮೆ ಬಳಿ ಹಾದುಹೋಗುತ್ತಿದ್ದ ಕೆಲ ಗ್ರಾಮಸ್ಥರಿಗೆ ಚೀಲವೊಂದರಿಂದ ಮಗುವಿನ ಅಳುವಿನ ಶಬ್ದ ಕೇಳಿಬಂದಿದೆ. ಅನುಮಾನಗೊಂಡು ಹತ್ತಿರ ಹೋಗಿ ಪರಿಶೀಲಿಸಿದಾಗ, ನವಜಾತ ಹೆಣ್ಣು ಮಗುವನ್ನು ಚೀಲದಲ್ಲಿಟ್ಟು ಬಿಸಾಕಿರುವುದು ಕಂಡುಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಗ್ರಾಮಸ್ಥರು ಮಗುವನ್ನು ಚೀಲದಿಂದ ಹೊರತೆಗೆದು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಕೆರೆಯ ದಂಡೆಯ ಬಳಿ ನಿರ್ಜನ ಪ್ರದೇಶದಲ್ಲಿದ್ದ ಮಗುವನ್ನು ಕಂಡ ಗೋನೂರು ಗ್ರಾಮದ ಮಹಿಳೆಯರು ತಕ್ಷಣವೇ ಮಗುವಿಗೆ ನೀರು ಹಾಕಿ, ಶುಚಿಗೊಳಿಸಿ, ಬೆಚ್ಚಗಿನ ಬಟ್ಟೆ ಹೊದಿಸಿ ಆರೈಕೆ ಮಾಡಿದ್ದಾರೆ. ಮಹಿಳೆಯರ ಸಮಯಪ್ರಜ್ಞೆಯಿಂದಾಗಿ ಶಿಶುವಿಗೆ ಜೀವದಾನ ಸಿಕ್ಕಂತಾಗಿದೆ. ಹೆತ್ತ ತಾಯಿಯೇ ತೊರೆದರೂ, ಗ್ರಾಮದ ಮಹಿಳೆಯರು ತೋರಿದ ಈ ಮಾತೃವಾತ್ಸಲ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಮಗುವನ್ನು ರಕ್ಷಿಸಿದ ತಕ್ಷಣವೇ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಶಿಶುವನ್ನು ಸುರಕ್ಷಿತವಾಗಿ ಹಸ್ತಾಂತರಿಸಲಾಯಿತು. ಅಧಿಕಾರಿಗಳು ತಕ್ಷಣವೇ ಮಗುವಿನ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡಿದರು.
ಸದ್ಯ ರಕ್ಷಿಸಲ್ಪಟ್ಟ ಹೆಣ್ಣು ಮಗುವನ್ನು ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರ ಮೇಲ್ವಿಚಾರಣೆಯಲ್ಲಿ ಅಗತ್ಯ ಚಿಕಿತ್ಸೆ ಮತ್ತು ಆರೈಕೆ ನೀಡಲಾಗುತ್ತಿದೆ. ಮಗುವಿನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
9 ತಿಂಗಳು ಹೊತ್ತು ಜನ್ಮ ನೀಡಿದ ಹಸುಗೂಸನ್ನು ಈ ರೀತಿ ಕೆರೆಯ ಬಳಿ ಚೀಲದಲ್ಲಿ ಕಟ್ಟಿ ಎಸೆದುಹೋದ ಕರುಣೆಯಿಲ್ಲದ ಪೋಷಕರ ವಿರುದ್ಧ ಗೋನೂರು ಗ್ರಾಮಸ್ಥರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹಿಡಿಶಾಪ ಹಾಕುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮಗುವನ್ನು ಬಿಸಾಕಿ ಹೋದ ಕಿಡಿಗೇಡಿಗಳ ಪತ್ತೆಗೆ ಬಲೆ ಬೀಸಿದ್ದಾರೆ.