
ಶ್ರೀಶೈಲ ಮಠದ
ಬೆಳಗಾವಿ: ಕಳೆದ ಒಂದು ತಿಂಗಳಿನಿಂದ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಗಡಿ ಜಿಲ್ಲೆ ಬೆಳಗಾವಿ ನಗರದ ಹೋಟೆಲ್ ಮಾಲೀಕರಿಗೆ ತಟ್ಟಿದ ಬಿಸಿ ಇನ್ನೂ ಮುಗಿದಿಲ್ಲ. ನಿತ್ಯ ಪರದಾಡುತ್ತಲೇ ಇದ್ದಾರೆ. ನಗರದಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಕೊರತೆ ತೀವ್ರಗೊಂಡಿದ್ದು, ಹೋಟೆಲ್ ಉದ್ಯಮದ ಮೇಲೆ ನೇರ ಪರಿಣಾಮ ಬೀರಿದೆ. ಸಿಲಿಂಡರ್ ಅಭಾವದಿಂದ ಅನೇಕ ಹೋಟೆಲ್, ಕ್ಯಾಂಟೀನ್ ಹಾಗೂ ರೆಸ್ಟೋರೆಂಟ್‌ಗಳು ಸಂಕಷ್ಟಕ್ಕೆ ಸಿಲುಕಿವೆ. ಕೆಲವು ಹೋಟೆಲ್‌ಗಳು ಹಾಗೂ ರೆಸ್ಟೋರೆಂಟ್‌ಗಳು ತಾತ್ಕಾಲಿಕವಾಗಿ ಬಂದ್ ಕೂಡ ಆಗಿವೆ. ಸಂಕಷ್ಟದಿಂದ ಪಾರಾಗಲು ಈಗ ಹೊಟೇಲ್ ಉದ್ಯಮಿಗಳು ಬಯೋಮಾಸ್ ಒಲೆಗಳ ಮೊರೆ ಹೋಗುತ್ತಿದ್ದಾರೆ.
ನಗರದಲ್ಲಿರುವ ಸುಮಾರು 350ಕ್ಕೂ ಅಧಿಕ ಹೋಟೆಲ್‌ಗಳಿಗೆ ಪ್ರತಿದಿನ ಸುಮಾರು 1600 ಕಮರ್ಷಿಯಲ್ ಸಿಲಿಂಡರ್‌ಗಳ ಅಗತ್ಯವಿದೆ. ಆದರೆ, ಸದ್ಯ ಪೂರೈಕೆ ಆಗುತ್ತಿರುವುದು ಕೇವಲ 600 ಸಿಲಿಂಡರ್‌ಗಳು ಮಾತ್ರ. ಈ ದೊಡ್ಡ ಮಟ್ಟದ ಕೊರತೆಯಿಂದ ಅಡುಗೆ ಕಾರ್ಯನಿರ್ವಹಣೆ ಸವಾಲಾಗಿದೆ. ಜತೆಗೆ ಹೋಟೆಲ್ ಉದ್ಯಮಿಗಳ ಆದಾಯಕ್ಕೂ ಇದು ದೊಡ್ಡ ಹೊಡೆತ ಕೊಟ್ಟಿದೆ. ಇರಾನ್- ಇಸ್ರೇಲ್ ನಡುವಿನ ಸಂಘರ್ಷದಿಂದ ಜಾಗತಿಕ ಇಂಧನ ಸರಪಳಿಯಲ್ಲಿ ವ್ಯತ್ಯಯ ಉಂಟಾಗಿ, ಅದರ ಪರಿಣಾಮ ಭಾರತದಲ್ಲೂ ಎಲ್‌ಪಿಜಿ ಪೂರೈಕೆಯ ಮೇಲೆ ಸಾಕಷ್ಟು ಪರಿಣಾಮ ಬಿದ್ದಿದೆ. ಆಮದು ಅವಲಂಬಿತ ಇಂಧನ ವ್ಯವಸ್ಥೆಯ ಕಾರಣದಿಂದ ಬೆಳಗಾವಿಯಂತಹ ನಗರಗಳು ಕೂಡ ಈ ಸಂಕಷ್ಟವನ್ನು ಎದುರಿಸುತ್ತಿವೆ. ಕೆಲವು ಹೊಟೇಲ್‌ಗಳಲ್ಲಿ ಇದೀಗ ಸೌದೆ ಒಲೆಗಳನ್ನು ಬಳಕೆ ಮಾಡಲಾಗುತ್ತಿದೆ.
ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಹೋಟೆಲ್ ಮಾಲೀಕರು ಪರ್ಯಾಯವಾಗಿ ಬಯೋಮಾಸ್ ಒಲೆಗಳನ್ನು ಬಳಕೆ ಮಾಡುತ್ತಿದ್ದಾರೆ. ಮೊದಲು ಕೇವಲ ನಗರದ 30 ಹೋಟೆಲ್‌ಗಳಲ್ಲಿ ಮಾತ್ರ ಬಳಕೆಯಲ್ಲಿದ್ದ ಈ ತಂತ್ರಜ್ಞಾನ, ಇದೀಗ 180ಕ್ಕೂ ಹೆಚ್ಚು ಹೋಟೆಲ್‌ಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಕಡಿಮೆ ವೆಚ್ಚ ಹಾಗೂ ಸ್ಥಳೀಯ ಇಂಧನ ಲಭ್ಯತೆ ಇದರ ಪ್ರಮುಖ ಕಾರಣವಾಗಿದೆ.
ಈ ಬಯೋಮಾಸ್ ಒಲೆಗಳನ್ನು ಟಿಇಆರ್‌ಐ ಹಾಗೂ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಬೆಳಗಾವಿಯ ಉದ್ಯಮಿ ಸಮೀರ್ ಸುರೇಂದ್ರ ಕಣಬರಗಿ ಅವರು ತಮ್ಮ ಫಿನಿಕ್ಸ್ ಪ್ರೊಡಕ್ಟ್ ಸಂಸ್ಥೆಯಲ್ಲಿ ಕಳೆದ 25 ವರ್ಷಗಳಿಂದ ಈ ಒಲೆಗಳನ್ನು ತಯಾರಿಸಿ ಪೂರೈಕೆ ಮಾಡುತ್ತಿದ್ದಾರೆ.
ಕೃಷಿ ತ್ಯಾಜ್ಯ, ತೆಂಗಿನ ಚಿಪ್ಪು, ಕಟ್ಟಿಗೆ ಮುಂತಾದ ಜೈವಿಕ ಇಂಧನವನ್ನು ಬಳಸಿ ಕಾರ್ಯನಿರ್ವಹಿಸುವ ಈ ಒಲೆಗಳು ಸಾಮಾನ್ಯ ಕಟ್ಟಿಗೆ ಒಲೆಗಿಂತ ಸುಮಾರು ಶೇ.75ರಷ್ಟು ಹೆಚ್ಚು ಕಾರ್ಯಕ್ಷಮತೆ ಹೊಂದಿವೆ. ಗ್ಯಾಸ್ ವೆಚ್ಚದ ಹೋಲಿಕೆಯಲ್ಲಿ ಶೇ.70-80ರಷ್ಟು ಕಡಿಮೆ ಖರ್ಚಾಗುತ್ತದೆ. ಸ್ಟೀಮ್ ಉತ್ಪಾದನೆ ಮೂಲಕ ಇಡ್ಲಿ, ಹಾಲು ಹಾಗೂ ನೀರು ಕಾಯಿಸಲು ಸಹ ಉಪಯೋಗವಾಗುತ್ತಿದ್ದು, ಪರಿಸರ ಸ್ನೇಹಿ ಪರ್ಯಾಯವಾಗಿ ಸಹಕಾರಿಯಾಗಿದೆ.
ಇದನ್ನೂ ಓದಿ: ಹರ್ಮೋಜ್ ಜಲಸಂಧಿ ನಮಗೆ ಅಗತ್ಯವಿಲ್ಲ; ಯುದ್ಧ ಮುಗಿಸುವ ಸುಳಿವು ನೀಡಿದ ಡೊನಾಲ್ಡ್ ಟ್ರಂಪ್
ಕಳೆದ ಒಂದು ದಶಕದಲ್ಲಿ ಬಂದಿದ್ದ ಬೇಡಿಕೆ, ಈಗ ಕೆಲವೇ ದಿನಗಳಲ್ಲಿ ಹೆಚ್ಚಾಗಿದೆ. ಹೋಟೆಲ್‌ಗಳ ಜೊತೆಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳೂ ಬಯೋಮಾಸ್ ಗ್ಯಾಸಿಫೈರ್ ಬಳಕೆಗೆ ಮುಂದಾಗುತ್ತಿವೆ. ಈಗಾಗಲೇ ದೇಶಾದ್ಯಂತ ಸುಮಾರು 200 ಕೈಗಾರಿಕೆಗಳಲ್ಲಿ ಈ ತಂತ್ರಜ್ಞಾನ ಬಳಕೆಯಲ್ಲಿದ್ದು, ಇನ್ನೂ ಅನೇಕರು ಅಳವಡಿಸಲು ಆಸಕ್ತಿ ತೋರಿಸುತ್ತಿದ್ದಾರೆ.
ಬಯೋಮಾಸ್ ಒಲೆಗಳು ಕೇವಲ ಪರ್ಯಾಯವಲ್ಲ, ಬಹುಮುಖ ಉಪಯೋಗ ಹೊಂದಿವೆ. ಒಂದೇ ಸಮಯದಲ್ಲಿ ಅಡುಗೆ, ಸ್ಟೀಮ್ ಉತ್ಪಾದನೆ ಹಾಗೂ ನೀರು ಕಾಯಿಸುವ ವ್ಯವಸ್ಥೆ ಇರುವುದರಿಂದ ಇಂಧನ ಬಳಕೆ ಹೆಚ್ಚು ಪರಿಣಾಮಕಾರಿಯಾಗಿದೆ. ಸಿಲಿಂಡರ್ ಕೊರತೆ ಹಿನ್ನೆಲೆ ನಮ್ಮ ಹೋಟೆಲ್‌ನಲ್ಲಿ ಬಯೋಗ್ಯಾಸ್ ಒಲೆ ಬಳಕೆ ಮಾಡಲು ಆರಂಭಿಸಿದ್ದೇವೆ ಎಂದು ಬೆಳಗಾವಿ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಅಜಯ್ ಪೈ ಹೇಳುತ್ತಾರೆ.
ಇದನ್ನೂ ಓದಿ: ಹೆಣ ಹೊರುವುದೇ ಮಕ್ಕಳಿಗೆ ಆಟ: ಗಾಜಾದ ಭೀಕರ ಚಿತ್ರಣ ತೆರೆದಿಟ್ಟ ಪುಟಾಣಿಗಳ ಎದೆ ಝಲ್ಲೆನಿಸುವ ವಿಡಿಯೋ