ಬೆಂಗಳೂರಿಗರಿಗೆ ಬಿಡಿಎ ಗುಡ್ ನ್ಯೂಸ್: 3,200 ಕೋಟಿ ರೂ. ವೆಚ್ಚದಲ್ಲಿ ತಲೆಯೆತ್ತಲಿವೆ 4,200ಕ್ಕೂ ಹೆಚ್ಚು ಫ್ಲಾಟ್‌ಗಳು!

Published : Apr 01, 2026, 10:43 PM IST
BDA Flat

ಸಾರಾಂಶ

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಸತಿ ಬೇಡಿಕೆಯನ್ನು ಪೂರೈಸಲು, ಬಿಡಿಎ 'ವರ್ಟಿಕಲ್ ಗ್ರೋತ್' ಪರಿಕಲ್ಪನೆಯಡಿ 3,200 ಕೋಟಿ ರೂ. ವೆಚ್ಚದಲ್ಲಿ ಆರು ಹೊಸ ವಸತಿ ಯೋಜನೆಗಳನ್ನು ಆರಂಭಿಸಿದೆ. ಕೋಣದಾಸಪುರ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹಲವೆಡೆ 1BHK ಯಿಂದ 4BHK ವರೆಗಿನ ಫ್ಲಾಟ್‌ಗಳನ್ನು ನಿರ್ಮಿಸಲಾಗುತ್ತಿದೆ.

ಬೆಂಗಳೂರು (ಏ.1): ನಗರದ ವಸತಿ ಮೂಲಸೌಕರ್ಯವನ್ನು ವಿಸ್ತರಿಸುವ ನಿಟ್ಟಿನಲ್ಲಿ ಬಿಡಿಎ ಮಹತ್ವದ ಹೆಜ್ಜೆ ಇಟ್ಟಿದೆ. ಸೀಮಿತ ಜಾಗದಲ್ಲಿ ಹೆಚ್ಚಿನ ಕುಟುಂಬಗಳಿಗೆ ವಸತಿ ಕಲ್ಪಿಸುವ 'ವರ್ಟಿಕಲ್ ಗ್ರೋತ್' ಉದ್ದೇಶದಿಂದ ನಗರದ ವಿವಿಧೆಡೆ ಆರು ಹೊಸ ವಸತಿ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಸುಮಾರು 3,200 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಗಳು ಕೋಣದಾಸಪುರ, ಎಲೆಕ್ಟ್ರಾನಿಕ್ ಸಿಟಿ, ವಲಗೇರಹಳ್ಳಿ, ಕಲತಮ್ಮನಹಳ್ಳಿ ಮತ್ತು ಕೆಂಚನಪುರದಲ್ಲಿ ಹರಡಿಕೊಂಡಿವೆ. ಇಲ್ಲಿ 1BHK ಯಿಂದ ಹಿಡಿದು 4BHK ವರೆಗಿನ ಫ್ಲಾಟ್‌ಗಳ ನಿರ್ಮಾಣ ನಡೆಯುತ್ತಿದ್ದು, ರಸ್ತೆ, ಚರಂಡಿ ಮತ್ತು ವಿದ್ಯುತ್‌ನಂತಹ ಮೂಲಸೌಕರ್ಯ ಕಾಮಗಾರಿಗಳು ಪ್ರಗತಿಯಲ್ಲಿವೆ.

ಕೋಣದಾಸಪುರ ಫೇಸ್ 1: ಬಿದರಹಳ್ಳಿ ಹೋಬಳಿಯ ಈ ಯೋಜನೆಯಲ್ಲಿ 1,928 ಫ್ಲಾಟ್‌ಗಳು (480 2BHK ಮತ್ತು 1,448 3BHK) ನಿರ್ಮಾಣವಾಗುತ್ತಿದ್ದು, ಇದಕ್ಕೆ 713.5 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.

ಕೋಣದಾಸಪುರ ಫೇಸ್ 3: ಇಲ್ಲಿ 532 ಫ್ಲಾಟ್‌ಗಳ (2BHK, 3BHK ಮತ್ತು 3.5BHK) ಜೊತೆಗೆ ಸಿನಿಮಾ ಥಿಯೇಟರ್, ಫುಡ್ ಕೋರ್ಟ್ ಮತ್ತು ಮನರಂಜನಾ ಸೌಲಭ್ಯವುಳ್ಳ ವಾಣಿಜ್ಯ ಸಂಕೀರ್ಣವನ್ನೂ 42.4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.

ಸೇನಾ ಮಂಡಳಿ ಹಾಗೂ ಬ್ಯಾಂಕ್‌ಗಳ ಆಸಕ್ತಿ

ನಿರ್ಮಾಣ ಹಂತದಲ್ಲಿರುವ ಈ ಫ್ಲಾಟ್‌ಗಳ ಮೇಲೆ ಈಗಲೇ ಬೇಡಿಕೆ ಕುದುರಿದೆ. ಆರ್ಮಿ ವೆಲ್ಫೇರ್ ಹೌಸಿಂಗ್ ಬೋರ್ಡ್ (AWHB) ಸುಮಾರು 300-400 ಫ್ಲಾಟ್‌ಗಳಿಗಾಗಿ ಮನವಿ ಮಾಡಿದೆ. ಅಲ್ಲದೆ, ಇತ್ತೀಚೆಗೆ ಕೆನರಾ ಬ್ಯಾಂಕ್ ಕೊಮ್ಮಘಟ್ಟದ ಅಪಾರ್ಟ್‌ಮೆಂಟ್‌ಗಳಲ್ಲಿ 120 2BHK ಫ್ಲಾಟ್‌ಗಳನ್ನು ಖರೀದಿಸಿದ್ದು, ಹೆಚ್ಚುವರಿಯಾಗಿ 120 3BHK ಫ್ಲಾಟ್‌ಗಳಿಗೆ ಬೇಡಿಕೆ ಇಟ್ಟಿದೆ.

10 ಸಾವಿರಕ್ಕೂ ಹೆಚ್ಚು ಫ್ಲಾಟ್‌ಗಳ ಮಾರಾಟ

ಬಿಡಿಎ ಇದುವರೆಗೆ 30 ವಸತಿ ಯೋಜನೆಗಳ ಅಡಿಯಲ್ಲಿ 13,118 ಫ್ಲಾಟ್‌ಗಳನ್ನು ಪೂರ್ಣಗೊಳಿಸಿದ್ದು, ಈ ಪೈಕಿ 10,153 ಫ್ಲಾಟ್‌ಗಳು ಈಗಾಗಲೇ ಹಂಚಿಕೆಯಾಗಿವೆ. ಆಗಸ್ಟ್ 2025 ರಿಂದ ಫೆಬ್ರವರಿ 2026 ರವರೆಗೆ ಹುಣ್ಣಿಗೆರೆ, ಕೊಮ್ಮಘಟ್ಟ, ಕನಿಮಿಣಿಕೆ ಮತ್ತು ಗುಂಜೂರು ಭಾಗಗಳಲ್ಲಿ 575 ಫ್ಲಾಟ್‌ಗಳು ಮಾರಾಟವಾಗಿವೆ.

ಬಿಡಿಎ ಅಧಿಕಾರಿಗಳ ಪ್ರಕಾರ, ಈ ಹಿಂದೆ ಪಾರದರ್ಶಕತೆ ಮತ್ತು ಸಂವಹನದ ಕೊರತೆಯಿಂದಾಗಿ ಜನರು ಫ್ಲಾಟ್‌ಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದರು. ಆದರೆ ಈಗ ಆನ್‌ಲೈನ್ ಸಿಸ್ಟಮ್ ಮೂಲಕ ಜನರು ತಮಗೆ ಇಷ್ಟವಾದ ಫ್ಲಾಟ್ ಆರಿಸಿಕೊಳ್ಳಬಹುದು. ಗುಣಮಟ್ಟದ ಬಗ್ಗೆ ಇದ್ದ ಅನುಮಾನಗಳನ್ನು ಬಿಡಿಎ ಈಗ ನಿವಾರಿಸಿದೆ.

"ಅಪಾರ್ಟ್‌ಮೆಂಟ್‌ಗಳಿಗೆ ಭಾರಿ ಬೇಡಿಕೆ ಇದೆ. ಮುಂಬೈನಂತಹ ನಗರಗಳ ಮಾದರಿಯಲ್ಲಿ ನಾವು ವರ್ಟಿಕಲ್‌ ಗ್ರೋತ್‌ಗೆ ಒತ್ತು ನೀಡುತ್ತಿದ್ದೇವೆ. ಭೂಮಿಯ ಲಭ್ಯತೆ ಕಡಿಮೆಯಾಗುತ್ತಿರುವುದರಿಂದ ಮತ್ತು ಬೆಂಗಳೂರು ವೇಗವಾಗಿ ಬೆಳೆಯುತ್ತಿರುವುದರಿಂದ ಇದು ಅನಿವಾರ್ಯ" ಎಂದು ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ತಿಳಿಸಿದ್ದಾರೆ.

ಲೇಔಟ್‌ಗಳ ಕಥೆಯೇನು?

ಒಂದೆಡೆ ಅಪಾರ್ಟ್‌ಮೆಂಟ್ ನಿರ್ಮಾಣ ನಡೆಯುತ್ತಿದ್ದರೆ, ಮತ್ತೊಂದೆಡೆ ಪ್ರಮುಖ ಲೇಔಟ್‌ಗಳ ಅಭಿವೃದ್ಧಿಯೂ ಸಾಗುತ್ತಿದೆ. ಕೆ. ಶಿವರಾಮ ಕಾರಂತ ಲೇಔಟ್ಅನ್ನು ಉತ್ತರ ಬೆಂಗಳೂರಿನ 11 ಹಳ್ಳಿಗಳಿಗೆ ಇದನ್ನು ವಿಸ್ತರಿಸಲಾಗುತ್ತಿದ್ದು, ಮೂಲಸೌಕರ್ಯ ಕಾಮಗಾರಿಗಳು ನಡೆಯುತ್ತಿವೆ. ನಾಡಪ್ರಭು ಕೆಂಪೇಗೌಡ ಲೇಔಟ್ (NPKL)ಗಾಗಿ ಇಲ್ಲಿಯವರೆಗೆ 3,811 ಕೋಟಿ ರೂ. ಖರ್ಚು ಮಾಡಲಾಗಿದೆ. 30,843 ನಿವೇಶನಗಳು, 409 ಪಾರ್ಕ್‌ಗಳು ಮತ್ತು ಆಟದ ಮೈದಾನಗಳ ಅಭಿವೃದ್ಧಿ ಪ್ರಗತಿಯಲ್ಲಿದೆ. ಅರ್ಕಾವತಿ ಲೇಔಟ್‌ಗಾಗಿ 567 ಎಕರೆ ಪ್ರದೇಶದಲ್ಲಿ 8,286 ನಿವೇಶನಗಳನ್ನು ನಿರ್ಮಿಸಲಾಗಿದ್ದು, ರಸ್ತೆ ಡಾಂಬರೀಕರಣ, ಕುಡಿಯುವ ನೀರು ಮತ್ತು ಒಳಚರಂಡಿ ಕಾಮಗಾರಿಗಳು ಶೇ. 80-90 ರಷ್ಟು ಪೂರ್ಣಗೊಂಡಿವೆ. ಒಟ್ಟಾರೆಯಾಗಿ, ಬಿಡಿಎ ಈಗ ಬೆಂಗಳೂರಿನ ಜನಸಂಖ್ಯೆ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ವಸತಿ ಯೋಜನೆಯ ಹಾದಿಯನ್ನೇ ಬದಲಿಸಿದೆ.

 

PREV
Read more Articles on
click me!

Recommended Stories

ಸಣ್ಣಪುಟ್ಟ ಅಂಗಡಿಗಳಲ್ಲೂ ಮದ್ಯ ಮಾರಾಟ: ಸಚಿವ ಎಚ್‌.ಕೆ.ಪಾಟೀಲ್‌ ಕಳವಳ
'ಮೂರ್ಖ ಯೋಜನೆಗಳ' ವಿರುದ್ಧ ಬೆಂಗಳೂರಿಗರ ಆಕ್ರೋಶ: ನಗರಾಭಿವೃದ್ಧಿ ಯೋಜನೆಗಳ ಮರುಕಲ್ಪನೆಗೆ ಆಗ್ರಹ