* ನಿತ್ಯ 300 ಕಾರು, 500 ಬೈಕ್‌ಗೆ ನಂದಿಗೆ ಎಂಟ್ರಿ
* ನಿಯಮ ಉಲ್ಲಂಘಿಸಿದೆ ಬೀಳುತ್ತೆ ಭಾರಿ ದಂಡ
* ವಾಹನ ಪ್ರವೇಶಕ್ಕೆ ಹೊಸ ನಿಯಮ ಜಾರಿ
ಚಿಕ್ಕಬಳ್ಳಾಪುರ(ಜು.19): ಕೊರೋನಾ ಎರಡನೇ ಅಲೆ ಮುಗಿದು ಇಡೀ ಜಗತ್ತು ಮೂರನೇ ಅಲೆ ಆತಂಕದಲ್ಲಿ ಇದೆ. ಇದರ ನಡುವೆ ವಿಶ್ವ ವಿಖ್ಯಾತ ನಂದಿಗಿರಿಧಾಮದಲ್ಲಿ ಕೋವಿಡ್ ಮುನ್ನೆಚ್ಚರಿಕೆ ಪಾಲಿಸದ ಪ್ರವಾಸಿಗರಿಗೆ ಮೂಗುದಾರ ಹಾಕಲು ಹೊರಟಿರುವ ಜಿಲ್ಲಾಡಳಿತ ಜು. 19 ರಿಂದ ಹೊಸ ನಿಯಮ ಅನುಷ್ಠಾನಕ್ಕೆ ಮುಂದಾಗಿದೆ.
ಹೌದು, ಕೊರೋನಾ ಆತಂಕದ ಮಧ್ಯೆಯು ಗಿರಿಧಾಮಕ್ಕೆ ಬರುವ ಪ್ರವಾಸಿಗರು ಮಾಸ್ಕ್ ಧರಿಸಲ್ಲ. ಸಾಮಾಜಿಕ ಅಂತರ ಕಾಪಾಡುವುದಿಲ್ಲ ಎಂಬ ಅಪವಾದಗಳ ಬಳಿಕ ಎಚ್ಚೆತ್ತಿಕೊಂಡಿರುವ ಜಿಲ್ಲಾಡಳಿ ಇನ್ನೂ ಮುಂದೆ ನಂದಿಗಿರಿಧಾಮಕ್ಕೆ ನಿತ್ಯ 300 ಕಾರು, 500 ದ್ವಿಚಕ್ರ ವಾಹನಗಳಿಗೆ ಟೋಕನ್ ಕೊಡಲು ನಿರ್ಧರಿಸಿ ಆ ಮೂಲಕ ಗಿರಿಧಾಮದ ಮೇಲೆ ವಾಹನ ದಟ್ಟಣೆ ಜೊತೆಗೆ ಪ್ರವಾಸಿಗರ ದಟ್ಟಣೆ ನಿಯಂತ್ರಣಕ್ಕೆ ಮುಂದಾಗಿದೆ.
ವೀಕೆಂಡ್ ಪ್ರವಾಸಕ್ಕೆ ನಂದಿ ಗಿರಿಧಾಮ ಹೆಚ್ಚು ಆಕರ್ಷಣೀಯ ಸ್ಥಳವಾಗಿದೆ. ಹೀಗಾಗಿ ವಾರಾಂತ್ಯದಲ್ಲಿ ಆರೇಳು ಸಾವಿರ ಪ್ರವಾಸಿಗರು ನಂದಿಗಿರಿಧಾಮಕ್ಕೆ ಬಂದು ದಟ್ಟಣೆ ಏರ್ಪಡುವುದರ ಜೊತೆಗೆ ಮಿತಿ ಮೀರಿದ ವಾಹನಗಳ ಆಗಮನದಿಂದ ಗಿರಿಧಾಮದಲ್ಲಿ ಒಂದಡೆ ಟ್ರಾಫಿಕ್ ಸಮಸ್ಯೆಯಾದರೆ ಪಾರ್ಕಿಂಗ್ ಸಮಸ್ಯೆ ಎದ್ದು ಕಾಣುತ್ತಿತ್ತು.
ಕೊರೋನಾ ಎರಡನೇ ಅಲೆ ಬಳಿಕ ಸರ್ಕಾರ ಅನ್‌ಲಾಕ್‌ಗೊಳಿಸಿದ ಬೆನ್ನಲೇ ಗಿರಿಧಾನಕ್ಕೆ ವಾರದ ದಿನಗಳ ಜೊತೆಗೆ ವಾರಾಂತ್ಯದಲ್ಲಿ ಪ್ರವಾಹದಂತೆ ಹರಿದು ಬರುತ್ತಿದ್ದರ ಪರಿಣಾಮ ಕೋವಿಡ್ ಸೋಂಕಿನ ಆತಂಕ ಎದುರಾಗಿತ್ತು. ಹೀಗಾಗಿ ಜಿಲ್ಲಾಡಳಿತ ವಾಹನ ಪ್ರವೇಶಕ್ಕೆ ಹೊಸ ನಿಯಮ ಜಾರಿಗೊಳಿಸಿದೆ.
ಸೋಂಕು ಹೆಚ್ಚಾಗುವ ಭೀತಿ: ಮತ್ತೆ ನಂದಿ ಬೆಟ್ಟ ಪ್ರವೇಶಕ್ಕೆ ನಿರ್ಬಂಧ..!
ಮೊದಲ ಹಂತದಲ್ಲಿ ಪ್ರವೇಶ ದ್ವಾರದಲ್ಲಿಯೇ ಟೋಕನ್ ವಿತರಿಸಲಿರುವ ನಂದಿಗಿರಿಧಾಮದ ಅಧಿಕಾರಿಗಳು ಬಳಿಕ ಮುಂದಿನ ದಿನಗಳಲ್ಲಿ ಸಂಪೂರ್ಣ ಅನ್‌ಲೈನ್ ಮಾಡಲು ಯೋಜನೆ ರೂಪಿಸಿದ್ದಾರೆ. ಹೀಗಾಗಿ ಇನ್ನೂ ಮುಂದೆ ನಂದಿ ಗಿರಿಧಾಮದ ಮೇಲೆ ಪಾರ್ಕಿಂಗ್ ಸ್ಥಳವಕಾಶ ನೋಡಿಕೊಂಡು ಕಾರು, ಬೈಕ್‌ಗಳಲ್ಲಿ ಬರುವ ಪ್ರವಾಸಿಗರಿಗೆ ಟೋಕನ್ ವಿತರಿಸಲಿದ್ದಾರೆ.
ನಿಯಮ ಉಲ್ಲಂಘಿಸಿದರೆ ಭಾರಿ ದಂಡ
ಇನ್ನೂ ಮುಂದೆ ನಂದಿಗಿರಿಧಾಮದಲ್ಲಿ ಮಾಸ್ಕ್ ಹಾಕದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ವರ್ತಿಸುವ ಪ್ರವಾಸಿಗರಿಗೆ ಭಾರೀ ಮೊತ್ತದ ದಂಡ ವಿಧಿಸಲಾಗುವುದು. ಪ್ರವಾಸಿಗರು ಬೆಟ್ಟಕ್ಕೆ ಪ್ಲಾಸ್ಟಿಕ್ ತರುವುದನ್ನು ನಿಲ್ಲಿಸಬೇಕು, ಯಾವುದೇ ಕಾರಣಕ್ಕೂ ಕೋವಿಡ್ ಉಲ್ಲಂಘನೆ ಆಗದಂತೆ ನಡೆದುಕೊಳ್ಳಬೇಕು. ಇಲ್ಲದೇ ಹೋದರೆ ದಂಡ ಹಾಕುವುದು ಅನಿರ್ವಾಯ ಎಂದು ನಂದಿಗಿರಿಧಾಮದ ವಿಶೇಷಾಧಿಕಾರಿ ಗೋಪಾಲ್ ಕನ್ನಡಪ್ರಭಗೆ ತಿಳಿಸಿದರು.