ನಾಡಿನ ಜೀವನದಿ ಕಾವೇರಿ ನದಿಯ ನ್ಯಾಯಯುತವಾದ ತೀರ್ಪಿಗಾಗಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ಸಲಹೆ ಸೂಚನೆ ಹಾಗೂ ನಿರ್ದೇಶನಂತೆ ಕಾವೇರಿ ನದಿ ರಕ್ಷಣಾ ಸಮಿತಿ ಅಸ್ಥಿತ್ವಕ್ಕೆ ಬಂದಿದ್ದು, ಕಾವೇರಿಯ ನ್ಯಾಯಯುತ ಹಕ್ಕಿಕ್ಕಾಗಿ ಮತ್ತೊಂದು ಕಾನೂನು ಹೋರಾಟಕ್ಕೆ ವೇದಿಕೆ ಸಿದ್ಧಗೊಂಡಿದೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಅ.25): ನಾಡಿನ ಜೀವನದಿ ಕಾವೇರಿ ನದಿಯ ನ್ಯಾಯಯುತವಾದ ತೀರ್ಪಿಗಾಗಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ಸಲಹೆ ಸೂಚನೆ ಹಾಗೂ ನಿರ್ದೇಶನಂತೆ ಕಾವೇರಿ ನದಿ ರಕ್ಷಣಾ ಸಮಿತಿ ಅಸ್ಥಿತ್ವಕ್ಕೆ ಬಂದಿದ್ದು, ಕಾವೇರಿಯ ನ್ಯಾಯಯುತ ಹಕ್ಕಿಕ್ಕಾಗಿ ಮತ್ತೊಂದು ಕಾನೂನು ಹೋರಾಟಕ್ಕೆ ವೇದಿಕೆ ಸಿದ್ಧಗೊಂಡಿದೆ. ಆ ಸಮಿತಿಯ ಕಾರ್ಯಾಚರಣೆಗೆ ಇಂದು ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿಯೇ ಚಾಲನೆ ನೀಡಲಾಯಿತು. ಕಾವೇರಿ ಉಗಮ ಸ್ಥಾನವಾದ ತಲಕಾವೇರಿಯ ಬ್ರಹ್ಮ ಕುಂಡಿಕೆ ಬಳಿ ಆಗಮಿಸಿದ್ದ ವಿವಿಧ ಮಠಾಧಿಪತಿಗಳು ಕುಳಿತು ವಿವಿಧ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸುವ ಮೂಲಕ ಸಂಘದ ವಿವಿಧ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.
undefined
ಮೈಸೂರಿನ ಆದಿ ಚುಂಚನಗಿರಿಯ ಶಾಖಾ ಮಠದ ಸೋಮನಾಥ ಸ್ವಾಮೀಜಿ, ಕಾಗಿನೆಲೆ ಮಠದ ಶಿವಾನಂದ ಸ್ವಾಮೀಜಿ, ಬೆಟ್ಟದಪುರದ ಅಮ್ಮತ್ತಿ ಸ್ವಾಮೀಜಿ, ವಿರಾಜಪೇಟೆಯ ರಾಮಕೃಷ್ಣ ಆಶ್ರಮದ ಆತ್ಮಾನಂದ ಸ್ವಾಮೀಜಿ, ಮನೇಹಳ್ಳ ಮಠದ ಸ್ವಾಮೀಜಿ, ಕಿರಿಕೊಡ್ಲಿಮಠದ ಸದಾಶಿವ ಸ್ವಾಮೀಜಿ ಸೇರಿದಂತೆ ಮೈಸೂರು ಭಾಗದ ಹಲವು ಸ್ವಾಮೀಜಿಗಳು ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ಕಾವೇರಿ ನದಿ ರಕ್ಷಣಾ ಸಮಿತಿ ಸಂಘದ ಬೈಲಾವನ್ನು ಇರಿಸಿ ಪೂಜೆ ಸಲ್ಲಿಸಿ ಸಂಘದ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ನೂತನ ಸಮಿತಿಯ ಅಧ್ಯಕ್ಷ ಎಚ್.ಕೆ. ರಾಮು ಶತಮಾನಕ್ಕೂ ಹಿಂದಿನಿಂದಲೂ ಕಾವೇರಿ ಸಮಸ್ಯೆಯನ್ನು ಸರಿಯಾಗಿ ಬಗೆಹರಿಸುತ್ತಿಲ್ಲ.
ಮಳೆಯ ಕೊರತೆಯಾಗುತ್ತಿದ್ದಂತೆ ಆ ವರ್ಷಗಳಲ್ಲಿ ಎರಡು ರಾಜ್ಯಗಳಲ್ಲಿ ಕಾವೇರಿ ಸಮಸ್ಯೆ ಉಲ್ಭಣಗೊಳ್ಳುತ್ತದೆ. ಆದರೆ ಸಮಸ್ಯೆಯನ್ನು ಸರಿಯಾದ ರೀತಿಯಲ್ಲಿ ಬಗೆಹರಿಸಲು ಸಾಧ್ಯವಾಗಿಲ್ಲ. ಒಮ್ಮೆ ನೀಡುವ ತೀರ್ಪು ತಮಿಳುನಾಡಿನ ಪರವಾಗಿದ್ದರೆ ಮತ್ತೊಂದು ತೀರ್ಪು ರಾಜ್ಯಕ್ಕೆ ನ್ಯಾಯ ಒದಗಿಸುವಂತೆ ಇರುವುದಿಲ್ಲ. ಹೀಗಾಗಿ ರಾಜ್ಯದ ಜನತೆ ಅನ್ಯಾಯವನ್ನೇ ಅನುಭವಿಸುವಂತೆ ಆಗಿದೆ. ಮತ್ತೆ ಆ ರೀತಿ ಆಗದಂತೆ ನಿವೃತ ನ್ಯಾಯಮೂರ್ತಿಗಳು, ನೀರಾವರಿ ತಜ್ಞರು, ಮಾಜಿ ಎಂಎಲ್ಸಿಗಳು, ಹೋರಾಟಗಾರರು ಸೇರಿದಂತೆ ಪ್ರಮುಖರೆಲ್ಲರೂ ಚರ್ಚಿಸಿ ಬಳಿಕ ಬಂದ ನಿರ್ಧಾರವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಸಲ್ಲಿಸಲಾಗುವುದು. ಆ ಮೂಲಕ ಕಾನೂನು ಹೋರಾಟದ ಮೂಲಕ ರಾಜ್ಯಕ್ಕೆ ನ್ಯಾಯ ಒದಗಿಸುವ ಚಿಂತನೆ ಇದೆ ಎಂದಿದ್ದಾರೆ.
Kodagu: ತನ್ನ ಶಿಷ್ಯಂದಿರಿಗೆ ಈಜುಕೊಳವನ್ನೇ ದಸರಾ ಉಡುಗೊರೆಯಾಗಿ ನೀಡಿದ ಶಿಕ್ಷಕರು
ಆದಿಚುಂಚನಗಿರಿ ಶಾಖಾ ಮಠದ ಸೋಮನಾಥ ಸ್ವಾಮೀಜಿ ಮಾತನಾಡಿ ಕಾವೇರಿ ಸಮಸ್ಯೆ ನೂರು ವರ್ಷಗಳಿಂದಲೂ ಇದೆ. ಈ ಸಮಸ್ಯೆ ಸೌಹಾರ್ದಯುತವಾಗಿ ಬಗೆಹರಿಯಲಿ ಎಂಬ ದೃಷ್ಟಿಯಿಂದ ಬುದ್ಧಿಜೀವಿಗಳು ಎಲ್ಲರೂ ಸೇರಿ ಈ ಸಮಿತಿಯನ್ನು ಅಸ್ಥಿತ್ವಕ್ಕೆ ತಂದಿದ್ದಾರೆ. ಈ ಸಮಿತಿಯ ಮೊದಲ ಕಾರ್ಯಗಳಿಗೆ ಕಾವೇರಿಯ ಉಗಮ ಸ್ಥಾನದಲ್ಲಿ ಚಾಲನೆ ನೀಡಲಾಗಿದೆ. ಇದು ಮುಂದಿನ ದಿನಗಳಲ್ಲಿ ಯಶಸ್ವಿಯಾಗಿ ಕಾವೇರಿ ನದಿಯ ಸಮಸ್ಯೆಯನ್ನು ಇತ್ಯರ್ಥ ಪಡಿಸುವಂತಾಗಲಿ ಎಂದು ಆಶಿಸಿದ್ದಾರೆ. ಒಟ್ಟಿನಲ್ಲಿ ಕಾವೇರಿ ನದಿಯ ಸಂರಕ್ಷಣೆ ಜೊತೆಗೆ ರಾಜ್ಯಕ್ಕೆ ಧಕ್ಕಬೇಕಾಗಿರುವ ಕಾವೇರಿಯ ನ್ಯಾಯ ಸಮ್ಮತ ಪಾಲಿಗಾಗಿ ಮತ್ತೊಂದು ಕಾನೂನು ಸಮರಕ್ಕೆ ವೇದಿಕೆ ಸಜ್ಜಾದಂತೆ ಆಗಿದೆ.