
ತುಮಕೂರು : ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳ ನಿಯಂತ್ರಣಕ್ಕಾಗಿ ಮಾಹಿತಿ ತಂತ್ರಜ್ಞಾನ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಹಭಾಗಿತ್ವದಲ್ಲಿ ಹೊಸ ಕಾನೂನು ರೂಪಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ್ದ 68ನೇ ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಹೀಗಾಗಿ ಇದನ್ನು ನಿಯಂತ್ರಿಸುವ ಸಲುವಾಗಿ ಕಾನೂನು ಬಲಿಷ್ಠಗೊಳಿಸಲು ಸೈಬರ್ ಕಾಯ್ದೆ ಜಾರಿಗೆ ತರಲಾಗುವುದು ಎಂದರು.
ಮರಾಠ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುವ ವೇಳೆ ರಾಜ್ಯದ ಕೆಎಸ್‌ಆರ್‌ಟಿಸಿ ಬಸ್‌ಗೆ ಬೆಂಕಿ ಹಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೇರಳ ಬಾಂಬ್ ಸ್ಫೋಟದ ನಂತರ ಮಂಗಳೂರು ಗಡಿಯಲ್ಲೂ ಎಚ್ಚರ ವಹಿಸಲಾಗಿದೆ ಎಂದರು.
ಬೆಳಗಾವಿಯಲ್ಲಿ ಕರಾಳ ದಿನ ಆಚರಣೆಯಲ್ಲಿ ಮಹಾರಾಷ್ಟ್ರದ ನಾಯಕರು ರಾಜ್ಯದ ಬಗ್ಗೆ ಕೀಳಾಗಿ ಮಾತನಾಡಿದರೆ ತಕ್ಷಣ ಬಂಧಿಸುವಂತೆಯೂ ಸೂಚನೆ ನೀಡಲಾಗಿದೆ.
ಪ್ರಪಂಚದೆಲ್ಲೆಡೆ ಕನ್ನಡ ಪರ ಸಂಘಟನೆಗಳಿವೆ, ಕನ್ನಡ ಪರ ಕೆಲಸ ಮಾಡುತ್ತಿವೆ. ಬಹ್ರೇನ್, ಲಾಸ್ ಏಂಜಲೀಸ್ ನಂತಹ ನಗರಗಳಲ್ಲಿ ಕನ್ನಡಿಗರು ಒಗ್ಗೂಡಿ ಕನ್ನಡದ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಪರಮೇಶ್ವರ್ ಊಟ ಹಾಕಿಸಿಲ್ಲ ಅಂದ್ರು. ಹಾಗಾಗಿ, ನಾಟಿಕೋಳಿ ಸಾರು, ಮುದ್ದೆ ಊಟ ಮಾಡಿಸಿ ಸಿದ್ದರಾಮಯ್ಯನವರನ್ನು ಮನೆಗೆ ಕರೆದು ಊಟ ಹಾಕಿಸಿದೆ ಅಷ್ಟೇ. ಇದಕ್ಕೆ ಬೇರೆ ಏನೇನೋ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.
ವಿರೋಧ ಪಕ್ಷಗಳು ಸರ್ಕಾರ ಬೀಳಿಸುವ ಕನಸು ಕಾಣುತ್ತಿವೆ. ಆದರೆ, ಅದು ಯಾವುದೂ ನಡೆಯುವುದಿಲ್ಲ ಎಂದರು.
ಮುಖ್ಯಮಂತ್ರಿ ಬದಲಾವಣೆ ವಿಚಾರ ಹೈಕಮಾಂಡ್‌ಗೆ ಬಿಟ್ಟ ವಿಚಾರ. ನಾನು ಮುಖ್ಯಮಂತ್ರಿ ಆಗುವ ವಿಚಾರ ಈಗ ಅಪ್ರಸ್ತುತ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಮೈಸೂರು, ಮಂಗಳೂರು ನಡೆದಿರುವ ಕಾಮಗಾರಿ ಗಮನಿಸಿದರೆ ತುಮಕೂರಿನಲ್ಲಿ ಕೆಲವು ಕಾಮಗಾರಿ ಕಳಪೆಯಾಗಿವೆ. ಈ ಬಗ್ಗೆ ತನಿಖೆ ನಡೆಸಲು ನಗರಾಭಿವೃದ್ಧಿ ಸಚಿವರಿಗೆ ತಿಳಿಸಿದ್ದು, ತನಿಖಾ ತಂಡ ರಚನೆಯಾಗಲಿದೆ ಎಂದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ನವೀಕರಣಗೊಂಡಿರುವ ಮಹಾತ್ಮಗಾಂಧಿ ಕ್ರೀಡಾಂಗಣವನ್ನು ಇನ್ನೆರಡು ದಿನಗಳಲ್ಲಿ ಸುಪರ್ದಿಗೆ ಪಡೆಯಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ರಾಜ್ಯದಲ್ಲಿ ಶೇ. 69 ರಷ್ಟು ಮಳೆ ಕೊರತೆಯಾಗಿದೆ. ಆದರೆ, ಬರ ಅಧ್ಯಯನಕ್ಕೆ ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ತಂಡದ ಕಣ್ಣಿಗೆ ಬರ ಕಾಣಿಸಿಲ್ಲ, ಹಸಿರಿದೆ ಎಂದು ಬರೆದುಕೊಂಡು ಹೋಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರಕ್ಕೆ 17 ಸಾವಿರ ಕೋಟಿ ರು.ಬರ ಪರಿಹಾರ ಹಣ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಇದುವರೆಗೂ ಒಂದು ರುಪಾಯಿ ಪರಿಹಾರ ನೀಡಿಲ್ಲ ಎಂದು ದೂರಿದರು.
ಬರ ಪರಿಸ್ಥಿತಿ ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ಪಿಡಿ ಖಾತೆಗೆ 500 ಕೋಟಿ ರು. ಹಣ ನೀಡಲಾಗಿದೆ. ಜಿಲ್ಲಾಧಿಕಾರಿಗಳು ಬರ ಪರಿಸ್ಥಿತಿ ಸಮರ್ಪಕ ನಿರ್ವಹಣೆಗೆ ಆ ಹಣವನ್ನು ವಿನಿಯೋಗಿಸಲಿದ್ದಾರೆ ಎಂದರು.
ಸರ್ಕಾರಿ ಶಾಲೆಗಳಿಗೆ ವಿದ್ಯುತ್ ಪೂರೈಕೆಗೆ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಪೂರೈಕೆಯಾಗಲಿದೆ ಎಂದರು.