ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಈ ಬಾರಿ ಹೊಸ ಕಾರ್ಪೊರೇಟರ್‌ಗಳ ಹವಾ. ಒಟ್ಟು 60 ಕಾರ್ಪೊರೇಟರ್‌ಗಳಲ್ಲಿ ಬರೋಬ್ಬರಿ 40 ಮಂದಿ ಹೊಸಬರೇ ಆಗಿರುವುದು ಈ ಬಾರಿಯ ವಿಶೇಷ. ಪಾಲಿಕೆಗೆ ನಡೆದ 1984ರ ಮೊದಲ ಚುನಾವಣೆಯಿಂದ ಇದುವರೆಗೆ 7 ಚುನಾವಣೆಗಳು ನಡೆದಿವೆ. ಇದೇ ಮೊದಲ ಬಾರಿಗೆಂಬಂತೆ ಇಷ್ಟುದೊಡ್ಡ ಸಂಖ್ಯೆಯಲ್ಲಿ ಹೊಸ ಸದಸ್ಯರು ಪಾಲಿಕೆಗೆ ಪಾದಾರ್ಪಣೆ ಮಾಡಿ ಅಧಿಕಾರ ಗಿಟ್ಟಿಸಿಕೊಂಡಿದ್ದಾರೆ.
ಮಂಗಳೂರು(ನ.19): ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಈ ಬಾರಿ ಹೊಸ ಕಾರ್ಪೊರೇಟರ್‌ಗಳ ಹವಾ. ಒಟ್ಟು 60 ಕಾರ್ಪೊರೇಟರ್‌ಗಳಲ್ಲಿ ಬರೋಬ್ಬರಿ 40 ಮಂದಿ ಹೊಸಬರೇ ಆಗಿರುವುದು ಈ ಬಾರಿಯ ವಿಶೇಷ.
ಪಾಲಿಕೆಗೆ ನಡೆದ 1984ರ ಮೊದಲ ಚುನಾವಣೆಯಿಂದ ಇದುವರೆಗೆ 7 ಚುನಾವಣೆಗಳು ನಡೆದಿವೆ. ಇದೇ ಮೊದಲ ಬಾರಿಗೆಂಬಂತೆ ಇಷ್ಟುದೊಡ್ಡ ಸಂಖ್ಯೆಯಲ್ಲಿ ಹೊಸ ಸದಸ್ಯರು ಪಾಲಿಕೆಗೆ ಪಾದಾರ್ಪಣೆ ಮಾಡಿ ಅಧಿಕಾರ ಗಿಟ್ಟಿಸಿಕೊಂಡಿದ್ದಾರೆ.
ಬಿಜೆಪಿಯವರೇ ಹೆಚ್ಚು:
ಪಾಲಿಕೆಯಲ್ಲಿ ಈ ಬಾರಿ ಹೊಸ ಸದಸ್ಯರಲ್ಲಿ ಬಿಜೆಪಿಯ ಪಾಲು ಹೆಚ್ಚು. ಬಿಜೆಪಿಯಿಂದ ಗೆದ್ದವರು 44 ಮಂದಿ. ಅವರಲ್ಲಿ ಅತಿ ಹೆಚ್ಚು 34 ಸದಸ್ಯರು ಹೊಸಬರೇ ಆಗಿದ್ದಾರೆ. ಕಾಂಗ್ರೆಸ್‌ನಿಂದ ಗೆದ್ದ 14ರಲ್ಲಿ ನಾಲ್ವರು ಹೊಸ ಕಾರ್ಪೊರೇಟರ್‌ಗಳು, ಉಳಿದಂತೆ ಎಸ್‌ಡಿಪಿಐನಿಂದ ಗೆದ್ದ ಇಬ್ಬರೂ ಹೊಸಬರೇ.
ಬಿಜೆಪಿ ಜಿಲ್ಲಾಧ್ಯಕ್ಷಗಾದಿ ಆಕಾಂಕ್ಷಿಗಳಿಗೆ ವಯೋಮಿತಿ ನಿಯಮ ಅಡ್ಡಿ!
ಈ ಚುನಾವಣೆಯಲ್ಲಿ 29 ಮಂದಿ ನಿಕಟಪೂರ್ವ ಮತ್ತು 13 ಮಾಜಿ ಕಾರ್ಪೊರೇಟರ್‌ಗಳು (ಇವರಲ್ಲಿ ಇಬ್ಬರು ಪಕ್ಷೇತರರಾಗಿ ಸ್ಪರ್ಧಿಸಿದ್ದರು) ಸೇರಿ ಒಟ್ಟು 42 ಮಂದಿ ‘ಮಾಜಿ’ಗಳು ಕಣದಲ್ಲಿದ್ದರು. ಬಿಜೆಪಿಯು 20 ನಿಕಟಪೂರ್ವ ಸದಸ್ಯರ ಪೈಕಿ 7 ಮಂದಿಗೆ ಟಿಕೆಟ್ ನೀಡಿದ್ದರೆ, ಕಾಂಗ್ರೆಸ್‌ನ 35 ನಿಕಟಪೂರ್ವ ಸದಸ್ಯರಲ್ಲಿ 18 ಮಂದಿ ಅದೃಷ್ಟಪರೀಕ್ಷೆಗೆ ಮುಂದಾಗಿದ್ದರು. ಜೆಡಿಎಸ್‌ನಿಂದ ಇಬ್ಬರು ನಿಕಟಪೂರ್ವ ಸದಸ್ಯರು ಮತ್ತೆ ಸ್ಪರ್ಧಿಸಿದ್ದರು. ಬಿಜೆಪಿ ಒಟ್ಟು 49 ಹೊಸ ಮುಖಗಳನ್ನು ಪರಿಚಯಿಸಿದ್ದರೆ, ಕಾಂಗ್ರೆಸ್‌ನಿಂದ 38 ಮಂದಿ ಹೊಸಬರಿದ್ದರು. ಕೊನೆಗೂ ಪಾಲಿಕೆ ವ್ಯಾಪ್ತಿಯ ಮತದಾರರು ಹಳಬರನ್ನು ಬಿಟ್ಟು 40 ಮಂದಿ ಹೊಸ ಮುಖಗಳ ಆಯ್ಕೆಗೆ ಈ ಬಾರಿ ಉತ್ಸುಕತೆ ತೋರಿದ್ದಾರೆ.
ಚರ್ಚೆಗೆ ಪಳಗಿದವರಿಲ್ಲ:
ಸಾಮಾನ್ಯವಾಗಿ ಪಾಲಿಕೆ ಸಭೆಯ ಚರ್ಚೆಗಳಲ್ಲಿ ಹಳೆ ಕಾರ್ಪೊರೇಟರ್‌ಗಳ ಅಬ್ಬರ- ಮಾತಿನ ಬಿರುಸು ಜೋರಾಗಿರುತ್ತಿತ್ತು. ಅನುಭವಸ್ಥರಾಗಿರುವುದರಿಂದ ಸಭೆಗಳಲ್ಲಿ ಅವರೇ ಹೆಚ್ಚಾಗಿ ಮಿಂಚುತ್ತಿದ್ದರು. ನಿಯಮಗಳನ್ನು ಉಲ್ಲೇಖಿಸಿ ಎದುರಾಳಿಗಳ ಸದ್ದಡಗಿಸುತ್ತಿದ್ದರು. ವಿವಾದಾಸ್ಪದ ವಿಚಾರಗಳನ್ನು ಜಾಣ್ಮೆಯಿಂದ ನಿಭಾಯಿಸುತ್ತಿದ್ದರು. ಆದರೆ ಈ ಅವಧಿಯಲ್ಲಿ ಕೇವಲ 20 ಮಂದಿ ಮಾತ್ರ ಹಳೆ ಕಾರ್ಪೊರೇಟರ್‌ಗಳು ಇರುವುದರಿಂದ ಚರ್ಚೆಗೆ ‘ಪಳಗಿದವರು’ ಸಾಕಷ್ಟಿಲ್ಲದೆ ನೀರಸವಾದಂತಾಗಿದೆ.
ಚರ್ಚಾಪಟುಗಳೇ ಸೋಲುಂಡರು!
ಪ್ರತಿಯೊಂದು ಪಾಲಿಕೆ ಸಭೆಗಳಲ್ಲಿ ಚರ್ಚೆಯಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಘಟಾನುಘಟಿಗಳೇ ಈ ಬಾರಿ ಸೋತಿದ್ದಾರೆ. ಚರ್ಚೆಯಲ್ಲಿ ನಿಸ್ಸೀಮರಾಗಿದ್ದ ಕಾಂಗ್ರೆಸ್‌ನ ಮಾಜಿ ಮೇಯರ್ ಹರಿನಾಥ್ ಬೋಂದೆಲ್, ಮಾಜಿ ಕಾರ್ಪೊರೇಟರ್ ಅಶೋಕ್ ಕುಮಾರ್ ಡಿ.ಕೆ. ಸೇರಿದಂತೆ ಹಲವರು ಈ ಸಲ ಪಾಲಿಕೆಯಲ್ಲಿಲ್ಲ. ಇವರು ಸೋತಿದ್ದಕ್ಕೆ ಜಾಲತಾಣದಲ್ಲೂ ಸಾರ್ವಜನಿಕರಿಂದ ವ್ಯಾಪಕ ಚರ್ಚೆ ನಡೆದಿತ್ತು. ಆದರೂ ಮಾಜಿ ಮೇಯರ್ ಶಶಿಧರ ಹೆಗ್ಡೆ, ಕಾರ್ಪೊರೇಟರ್‌ಗಳಾದ ಸುಧೀರ್ ಶೆಟ್ಟಿಕಣ್ಣೂರು, ಪ್ರೇಮಾನಂದ ಶೆಟ್ಟಿಮುಂತಾದವರು ಗೆದ್ದಿರುವುದು ಪಾಲಿಕೆ ಸಭೆಯ ಜೀವಂತಿಕೆಯನ್ನು ಉಳಿಸಿಕೊಂಡಂತಾಗಿದೆ.
-ಸಂದೀಪ್ ವಾಗ್ಲೆ