ಬೆಂಗಳೂರು: ಕಸ ಸಂಗ್ರಹಕ್ಕೆ 3 ತಿಂಗಳಲ್ಲಿ ಹೊಸ ಗುತ್ತಿಗೆ

By Kannadaprabha NewsFirst Published Nov 30, 2022, 9:30 AM IST
Highlights

ಕಸ ಸಂಗ್ರಹಕ್ಕೆ ಟೆಂಡರ್‌ ಪ್ರಕ್ರಿಯೆ ಪೂರ್ಣ, ಇನ್ನೊಂದು ತಿಂಗಳಲ್ಲಿ ಹೊಸ ಅಂತಿಮ, ಕಸ ಸಂಗ್ರಹಕ್ಕೆ ಅನುಗುಣವಾಗಿ ಪ್ಯಾಕೇಜ್‌

ವಿಶ್ವನಾಥ ಮಲೆಬೆನ್ನೂರು

ಬೆಂಗಳೂರು(ನ.30):  ಬಿಬಿಎಂಪಿ ಹೊಸದಾಗಿ ಟೆಂಡರ್‌ ಆಹ್ವಾನಿಸಿದ ಎಲ್ಲ 243 ವಾರ್ಡ್‌ಗಳ 89 ಪ್ಯಾಕೇಜ್‌ಗಳಿಗೂ ಗುತ್ತಿಗೆದಾರರು ಅರ್ಜಿ ಸಲ್ಲಿಸುವ ಮೂಲಕ ಭಾಗವಹಿಸಿದ್ದು, ಒಂದು ತಿಂಗಳಲ್ಲಿ ಗುತ್ತಿಗೆದಾರರನ್ನು ಅಂತಿಮಗೊಳಿಸುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಮೂರು ತಿಂಗಳಲ್ಲಿ ಹೊಸ ಗುತ್ತಿಗೆದಾರರು ಕಸ ಸಂಗ್ರಹಿಸುವ ಕಾರ್ಯ ಆರಂಭಿಸಲಿದ್ದಾರೆ.

ಸಿಲಿಕಾನ್‌ ಸಿಟಿ ಬೆಂಗಳೂರಿನ ಕಸದ ಸಮಸ್ಯೆ ಪರಿಹಾರ ಮಾಡುವ ನಿಟ್ಟಿನಲ್ಲಿ ಆರಂಭಿಸಲಾದ ‘ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಸಂಸ್ಥೆ’ಯಿಂದ ಪಾಲಿಕೆಯ 243 ವಾರ್ಡ್‌ಗಳಿಗೆ ಹಸಿ, ಒಣ ಕಸ ಸೇರಿದಂತೆ ಎಲ್ಲಾ ಮಾದರಿಯ ತ್ಯಾಜ್ಯ ವಿಲೇವಾರಿಗೆ .590 ಕೋಟಿ ಅಂದಾಜು ವೆಚ್ಚದ ಟೆಂಡರ್‌ ಆಹ್ವಾನಿಸಲಾಗಿದೆ. ಟೆಂಡರ್‌ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ತಾಂತ್ರಿಕ ಅರ್ಹತೆ ಪರಿಶೀಲನೆ ಹಾಗೂ ದಾಖಲಿಸಿದ ಬಿಡಿಂಗ್‌ ಮೊತ್ತ ಪರಿಶೀಲನೆ ಬಾಕಿ ಇದೆ. ಒಂದು ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಮೂರು ತಿಂಗಳಲ್ಲಿ ಹೊಸ ಗುತ್ತಿಗೆದಾರರು ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಪ್ರಕ್ರಿಯೆ ಆರಂಭಿಸಲಿದ್ದಾರೆ.

ಬೆಂಗಳೂರಿನ ತ್ಯಾಜ್ಯ ಸುರಿಯಲು ಬಿಬಿಎಂಪಿಗೆ ಜಾಗವೇ ಸಿಗುತ್ತಿಲ್ಲ..!

243 ವಾರ್ಡ್‌ಗೆ 89 ಪ್ಯಾಕೇಜ್‌:

ಕಳೆದೊಂದು ದಶಕದಿಂದ ಬೆಂಗಳೂರಿನಲ್ಲಿ ಕಸ ನಿರ್ವಹಣೆಗೆ ಸಂಬಂಧಿಸಿದಂತೆ ಬಿಬಿಎಂಪಿ ಕೈಗೊಂಡ ಟೆಂಡರ್‌ ಪ್ರಕ್ರಿಯೆಗಳು ವಿಫಲವಾಗಿವೆ. ಇದೀಗ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಸಂಸ್ಥೆಯ ಮೂಲಕ ಟೆಂಡರ್‌ ಆಹ್ವಾನಿಸಲಾಗಿದೆ. ಸದ್ಯ ಆಯಾ ವಾರ್ಡ್‌ಗಳಲ್ಲಿ ಸಂಗ್ರಹವಾಗುತ್ತಿರುವ ತ್ಯಾಜ್ಯದ ಪ್ರಮಾಣಕ್ಕೆ ಅನುಗುಣವಾಗಿ ಮೂರರಿಂದ ನಾಲ್ಕು ವಾರ್ಡ್‌ಗಳನ್ನು ಒಟ್ಟು ಗೂಡಿಸಿ ಪ್ಯಾಕೇಜ್‌ ರಚಿಸಲಾಗಿದೆ. ಅದರಂತೆ 243 ವಾರ್ಡ್‌ಗಳನ್ನು 89 ಪ್ಯಾಕೇಜ್‌ಗಳಾಗಿ ಮಾಡಿ ಟೆಂಡರ್‌ ಕರೆಯಲಾಗಿದೆ.

ಎಲ್ಲಾ 89 ಪ್ಯಾಕೇಜ್‌ಗಳಿಗೂ ಗುತ್ತಿಗೆದಾರರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ತಾಂತ್ರಿಕ ಅರ್ಹತೆ ಪರಿಶೀಲನೆ ಕಾರ್ಯ ನಡೆಯುತ್ತಿದ್ದು, ಒಂದು ವಾರದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಅದಾದ ಬಳಿಕ ಗುತ್ತಿಗೆದಾರರು ಅಂದಾಜು ಮೊತ್ತಕ್ಕಿಂತ ಶೇಕಡಾ ಎಷ್ಟು ಪ್ರಮಾಣದ ಹೆಚ್ಚಿನ ದರ ಅಥವಾ ಕಡಿಮೆ ದರ ನಿಗದಿ ಪಡಿಸಿದ್ದಾರೆ ಎಂಬುದನ್ನು ಪರಿಶೀಲಿಸಲಾಗುತ್ತದೆ.

ಬಳಿಕ ಅಗತ್ಯ ಬಿದ್ದರೆ ಮಾತುಕತೆ ನಡೆಸಿ ಟೆಂಡರ್‌ ಅಂತಿಮಗೊಳಿಸಲಾಗುವುದು. ನಿರ್ದಿಷ್ಟಪ್ರಮಾಣದ ಪ್ಯಾಕೇಜ್‌ಗಳನ್ನು ಬಿಬಿಎಂಪಿಯ ಅಧಿಕಾರಿಗಳು ಆಯುಕ್ತರ ಮಟ್ಟದಲ್ಲಿ ಅಂತಿಮಗೊಳಿಸಿ ಕಾರ್ಯಾದೇಶ ನೀಡಲಾಗುತ್ತದೆ. ಹೆಚ್ಚಾಗಿದ್ದರೆ ಸರ್ಕಾರದ ಅನುಮೋದನೆ ಪಡೆಯಬೇಕಾಗಲಿದೆ. ಅಂತಿಮಗೊಳ್ಳದ ಪ್ಯಾಕೇಜ್‌ಗಳಿಗೆ ಮತ್ತೆ ಟೆಂಡರ್‌ ಆಹ್ವಾನಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡ್ದಿದ್ದಾರೆ.

ಸಂಪೂರ್ಣ ಹೊಣೆ ಗುತ್ತಿಗೆದಾರನಿಗೆ

ಮನೆ ಮನೆಯಿಂದ ಹಸಿ, ಒಣ ಮತ್ತು ಸ್ಯಾನಿಟರಿ ತ್ಯಾಜ್ಯ ಸಂಗ್ರಹಿಸುವುದು. ಬ್ಲಾಕ್‌ಸ್ಪಾಟ್‌ ಸ್ವಚ್ಛಗೊಳಿಸುವುದು, ಮಾಂಸ ತ್ಯಾಜ್ಯ ಸಂಗ್ರಹಣೆ, ಕಟ್ಟಡ ತ್ಯಾಜ್ಯ ವಿಲೇವಾರಿ, ರಸ್ತೆ, ಮೈದಾನ ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದು ಗುತ್ತಿಗೆದಾರನ ಜವಾಬ್ದಾರಿಯಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಗುತ್ತಿಗೆದಾರರಿಗೆ ಭಾರೀ ಪ್ರಮಾಣ ದಂಡ ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಷರತ್ತು ಅನ್ವಯ:

ಕಸವನ್ನು ಗುತ್ತಿಗೆದಾರರು ಬೇರ್ಪಡಿಸಿದ ಮಾದರಿಯಲ್ಲಿ ಮನೆ-ಮನೆಯಿಂದ ಮುಚ್ಚಿದ ವಾಹನಗಳಲ್ಲಿ ಸಂಗ್ರಹಿಸುವುದು ಕಡ್ಡಾಯಗೊಳಿಸಲಾಗಿದೆ. ಒಬ್ಬ ಗುತ್ತಿಗೆದಾರರನಿಗೆ ಒಂದು ಪ್ಯಾಕೇಜ್‌ ಮಾತ್ರ ನೀಡಲಾಗುವುದು ಎಂದು ಷರತ್ತು ವಿಧಿಸಲಾಗಿದೆ.

ಹಸಿ ಕಸ ವಾಸನೆ ತಡೆಗೆ ಹೊಸ ತಂತ್ರಜ್ಞಾನ: ಸಿಎಂ ಬೊಮ್ಮಾಯಿ

590 ಕೋಟಿ ಅಂದಾಜು

ಈ ಹಿಂದೆ ಹಸಿ ತ್ಯಾಜ್ಯ ಸಂಗ್ರಹಿಸುವುದಕ್ಕೆ ಬಿಬಿಎಂಪಿ ಸುಮಾರು .450 ಕೋಟಿ ವಾರ್ಷಿಕ ವೆಚ್ಚ ಮಾಡುವ ಯೋಜನೆ ಸಿದ್ಧಪಡಿಸಲಾಗಿತ್ತು. ಒಣ ತ್ಯಾಜ್ಯವನ್ನು ಸ್ವಯಂ ಸೇವಾ ಸಂಸ್ಥೆಗಳೇ ಸಂಗ್ರಹಿಸುತ್ತಿದ್ದವು. ಬಿಬಿಎಂಪಿ ಈ ಸ್ವಯಂ ಸೇವಾ ಸಂಸ್ಥೆಗಳಿಗೆ ಹಣ ಕೊಡುತ್ತಿರಲಿಲ್ಲ. ಆದರೆ, ಇದೀಗ ಬಿಬಿಎಂಪಿ ಆಹ್ವಾನಿಸಿರುವ ಟೆಂಡರ್‌ ಮೊತ್ತ .590 ಕೋಟಿಗೆ ಹೆಚ್ಚಳವಾಗಿದೆ. ಗುತ್ತಿಗೆದಾರರು ಬಿಡ್‌ ಮಾಡುವ ಸಂದರ್ಭದಲ್ಲಿ ಟೆಂಡರ್‌ನ ಅಂದಾಜು ವೆಚ್ಚ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಎಲ್ಲ 89 ಪ್ಯಾಕೇಜ್‌ನಲ್ಲಿಯೂ ಗುತ್ತಿಗೆದಾರರು ಅರ್ಜಿ ಸಲ್ಲಿಸುವ ಮೂಲಕ ಭಾಗವಹಿಸಿದ್ದಾರೆ. ತಾಂತ್ರಿಕ ಅರ್ಹತೆ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಒಂದು ತಿಂಗಳಲ್ಲಿ ಹೊಸ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗುವುದು. ಮೂರು ತಿಂಗಳಲ್ಲಿ ಗುತ್ತಿಗೆದಾರರು ಕೆಲಸ ಆರಂಭಿಸಲಿದ್ದಾರೆ ಅಂತ ಪಾಲಿಕೆ ಘನತ್ಯಾಜ್ಯ ವಿಭಾಗ ವಿಶೇಷ ಆಯುಕ್ತ ಹರೀಶ್‌ ಕುಮಾರ್‌ ತಿಳಿಸಿದ್ದಾರೆ.  

ಯಾವ ವಲಯಕ್ಕೆ ಎಷ್ಟು ಪ್ಯಾಕೇಜ್‌?: ವಲಯ ಪ್ಯಾಕೇಜ್‌

ಪೂರ್ವ 16
ಪಶ್ಚಿಮ 16
ದಕ್ಷಿಣ 18
ಬೊಮ್ಮನಹಳ್ಳಿ 9
ದಾಸರಹಳ್ಳಿ 4
ಮಹದೇವಪುರ 11
ಆರ್‌ಆರ್‌ ನಗರ 9
ಯಲಹಂಕ 6
ಒಟ್ಟು 89
 

click me!