Mandya: 4 ವರ್ಷವಾದ್ರೂ ಮುಗಿಯದ ನೂತನ ಸೇತುವೆ ಕಾಮಗಾರಿ

By Govindaraj SFirst Published Sep 12, 2022, 11:23 PM IST
Highlights

ಪ್ರಸಿದ್ಧ ಪ್ರವಾಸಿಗರ ಪ್ರೇಕ್ಷಣೀಯ ಸ್ಥಳ ಮುತ್ತತ್ತಿಗೆ ಹೋಗುವ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಕುಸಿದು ನೀರಿನಲ್ಲಿ ಕೊಚ್ಚಿ ಹೋಗಿರುವುದರಿಂದ ವಾಹನಗಳ ಸಂಚಾರ ಸಂಪೂರ್ಣ ಬಂದ್‌ ಆಗಿದೆ. 

ಎಚ್‌.ಎನ್‌.ಪ್ರಸಾದ್‌

ಹಲಗೂರು (ಸೆ.12): ಪ್ರಸಿದ್ಧ ಪ್ರವಾಸಿಗರ ಪ್ರೇಕ್ಷಣೀಯ ಸ್ಥಳ ಮುತ್ತತ್ತಿಗೆ ಹೋಗುವ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಕುಸಿದು ನೀರಿನಲ್ಲಿ ಕೊಚ್ಚಿ ಹೋಗಿರುವುದರಿಂದ ವಾಹನಗಳ ಸಂಚಾರ ಸಂಪೂರ್ಣ ಬಂದ್‌ ಆಗಿದೆ. ನೂತನ ಸೇತುವೆ ಕಾಮಗಾರಿ ಪ್ರಾರಂಭವಾಗಿ 4 ವರ್ಷವಾದರೂ ಮಾತ್ರ ಮುಗಿದಿಲ್ಲ. ಕಳೆದ ಕೆಲ ದಿನಗಳಿಂದ ಸತತ ಮಳೆಯಾಗುತ್ತಿರುವುದರಿಂದ ಭೀಮಾನದಿ ತುಂಬಿ ಹರಿಯುತ್ತಿತ್ತು. ಇದಕ್ಕೂ ಮೊದಲೇ ಶೀತಲಗೊಂಡಿದ್ದ ತಾತ್ಕಾಲಿಕ ಸೇತುವೆ ನೀರಿನ ರಭಸಕ್ಕೆ ಕುಸಿದು ಬಿದ್ದು ಹಲಗೂರಿನಿಂದ ಮುತ್ತತ್ತಿಗೆ ಹೋಗುವ ಮಾರ್ಗಗಳ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು.

ಈಗಾಗಲೇ ಹೊಸ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಿ 4 ವರ್ಷವಾಗಿದೆ. ಇದೂವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ತಾತ್ಕಾಲಿಕವಾಗಿ ನಿರ್ಮಿಸಿದ್ದ ಹಳೇ ಸೇತುವೆಯಲ್ಲೇ ವಾಹನಗಳು ಸಂಚಾರ ಮಾಡುತ್ತಿದ್ದವು. ಸತತವಾಗಿ ಮಳೆ ಸುರಿಯುತ್ತಿದ್ದರಿಂದ ಭೀಮಾನಂದಿ ತುಂಬಿ ಹರಿದು ಆ ಸೇತುವೆ ಕುಸಿದಿತ್ತು. ಈಗ ಮಳೆ ಸ್ವಲ್ಪ ಬಿಡುವು ನೀಡಿರುವುದರಿಂದ ನದಿಯಲ್ಲಿ ನೀರಿನ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ಹಲಗೂರಿನಿಂದ ಮುತ್ತತ್ತಿ ಹೋಗುವ ತಾತ್ಕಾಲಿಕ ಸೇತುವೆ ಕುಸಿತದಿಂದ ಈ ಮಾರ್ಗವಾಗಿ ಹಲವು ಹಳ್ಳಿಗಳು, ಪ್ರವಾಸಿ ತಾಣಗಳಿಗೆ ಕಲ್ಪಿಸುವ ಸಂಪರ್ಕ ಬಂದ್‌ ಆಗಿತ್ತು. ಮುತ್ತತ್ತಿ ಕಡೆ ಹೋಗುವ ಪ್ರವಾಸಿಗರು ಹಾಗೂ ಈ ಭಾಗದ ಹಳ್ಳಿಗಳ ಗ್ರಾಮಸ್ಥರು ಎಚ್‌.ಬಸಾಪುರ ಮಾರ್ಗವಾಗಿ ತಮ್ಮ ವಾಹನಗಳಲ್ಲಿ ಸಂಚಾರ ಮಾಡುವಂತಾಗಿದೆ.

ಪ್ರತಿಪಕ್ಷ ನಾಯಕರಿಂದ ಚುನಾವಣಾ ರಾಜಕೀಯ: ವಿಜಯೇಂದ್ರ ಕಿಡಿ

ದ್ವಿಚಕ್ರ ವಾಹನ ಸಂಚಾರಕ್ಕೆ ಮಾತ್ರ ಅನುವು: ತಾತ್ಕಾಲಿಕ ಸೇತುವೆ ಕುಸಿತದಿಂದ ಈ ಮಾರ್ಗದ ಗ್ರಾಮಸ್ಥರು ಹತ್ತಾರು ಕಿ.ಮೀ. ಬಳಸಿ ತಮ್ಮ ಗ್ರಾಮಗಳಿಗೆ ಹೋಗಬೇಕಿತ್ತು. ಇದನ್ನು ಅರಿತ ಹಲಗೂರು ಸಮೀಪದ ಗೊಲ್ಲರಹಳ್ಳಿ ಗ್ರಾಮಸ್ಥರು ನೂತನವಾಗಿ ನಿರ್ಮಾಣವಾಗುತ್ತಿರುವ ಸೇತುವೆಯಲ್ಲೇ ದ್ವಿಚಕ್ರ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. 

ಗೊಲ್ಲರಹಳ್ಳಿ ಗ್ರಾಪಂ ಸದಸ್ಯ ರಾಜೇಶ್‌ ಮತ್ತು ಹಲಗೂರು ಗ್ರಾಪಂ ಸದಸ್ಯ ಆನಂದ್‌ ಕುಮಾರ್‌ ಹಾಗೂ ಗ್ರಾಮಸ್ಥರು ಸೇರಿ ತಮ್ಮ ಸ್ವಂತ ಖರ್ಚಿನಲ್ಲೇ ತಮ್ಮ ಗ್ರಾಮಕ್ಕೆ ಹಾಗೂ ಮುಂದಿನ ಊರುಗಳಿಗೆ ದ್ವಿಚಕ್ರ ವಾಹನ ಸವಾರರು ಹೋಗುವುದಕ್ಕೆ ತೊಂದರೆ ಆಗುತ್ತದೆ ಎಂಬುದನ್ನು ಅರಿತು ನೂತನ ಸೇತುವೆ ಮೇಲೆ ದ್ವಿಚಕ್ರ ವಾಹನ ಹೋಗುವುದಕ್ಕೆ ಮಾತ್ರ ವ್ಯವಸ್ಥೆ ಮಾಡಿದ್ದಾರೆ. ಇದರಿಂದ ಹತ್ತಾರು ಕಿಮೀ ಬಳಸಿ ಬರುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ಅನುಕೂಲವಾಗಿದೆ. ಗ್ರಾಮಸ್ಥರು, ಯುವಕರು ಸೇರಿ ಗುರುವಾರ ಸಂಜೆ ಹೊಸ ಸೇತುವೆಯ ಎರಡು ಭಾಗದಲ್ಲೂ ಕಲ್ಲು, ಮಣ್ಣುಗಳಿಂದ ಭರ್ತಿ ಮಾಡಿ ಸೇತುವೆಯಲ್ಲಿದ್ದ ಹಳ್ಳ, ಕೊಳ್ಳಗಳನ್ನು ಮುಚ್ಚಿ ದ್ವಿಚಕ್ರ ವಾಹನಗಳ ಸಂಚಾರ ಮಾಡಲು ಅವಕಾಶ ಕಲ್ಪಿಸಿದ್ದಾರೆ. 

ಸುಮಾರು ನಾಲ್ಕು ವರ್ಷಗಳ ಹಿಂದೆಯೇ ಹೊಸ ಸೇತುವೆ ನಿರ್ಮಾಣಕ್ಕಾಗಿ ತಾತ್ಕಾಲಿಕವಾಗಿ ಸೇತುವೆ ನಿರ್ಮಿಸಲಾಗಿತ್ತು. ಆದರೆ, ಇದುವರೆಗೂ ಹೊಸ ಸೇತುವೆ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಅಧಿಕಾರಿಗಳು, ಗುತ್ತಿಗೆದಾರನ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲಗೂರು ಮಾರ್ಗವಾಗಿ ಗೊಲ್ಲರಹಳ್ಳಿ, ಕರಲುಕಟ್ಟೆ, ಗಾಣಾಳು ಸೇರಿ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಪ್ರವಾಸಿ ತಾಣ ಕಾವೇರಿ ಫೀಶಿಂಗ್‌ ಕ್ಯಾಂಪ್‌ ಹೋಗಲು ಭೀಮಾ ನದಿಯ ಸೇತುವೆ ಮಾರ್ಗ ಅನಿವಾರ್ಯ. ಸೇತುವೆ ಪೂರ್ಣಗೊಳ್ಳದೆ ಇರುವುದು ಪ್ರವಾಸಿಗರ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಆದಷ್ಟು ಬೇಗ ನೂತನ ಸೇತುವೆ ಕಾಮಗಾರಿ ಮುಗಿಸಿ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದಲ್ಲೇ ಹಲಗೂರು ಪ್ರದೇಶ ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಪ್ರೇಕ್ಷಣೀಯ ತಾಣಗಳನ್ನು ನೋಡಲು ನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ತಾತ್ಕಾಲಿಕ ಸೇತುವೆ ಕುಸಿದಿರುವುದರಿಂದ ಆದಷ್ಟು ಬೇಗ ನೂತನ ಸೇತುವೆ ಕಾಮಗಾರಿ ಮುಗಿಸಲು ಸಂಬಂಧಪಟ್ಟಅಧಿಕಾರಿಗಳು ಕ್ರಮ ವಹಿಸಬೇಕು.
-ರಾಜೇಶ್‌, ಗ್ರಾಪಂ ಸದಸ್ಯರು, ಗೊಲ್ಲರಹಳ್ಳಿ.

Mandya: ಮದ್ದೂರಲ್ಲಿ ಪೆಲಿಕನ್‌ ಪಕ್ಷಿಗೆ ಜಿಪಿಎಸ್‌: ದೇಶದಲ್ಲೇ ಫಸ್ಟ್‌

ನೂತನ ಸೇತುವೆ ನಿರ್ಮಾಣ ಕಾಮಗಾರಿ 4 ವರ್ಷ ಕಳೆದರೂ ಇನ್ನೂ ಮುಗಿದಿಲ್ಲ. ಇದರಿಂದ ಹಲವು ಗ್ರಾಮಗಳ ಜನರು ತೊಂದರೆ ಪಡುತ್ತಿದ್ದಾರೆ. ತಾತ್ಕಾಲಿಕ ಸೇತುವೆ ಕುಸಿದಿರುವುದರಿಂದ ಹೊಸ ಸೇತುವೆಯಲ್ಲೇ ದ್ವಿಚಕ್ರ ವಾಹನಗಳ ಸಂಚಾರಕ್ಕಾಗಿ ಅವಕಾಶ ಮಾಡಿಕೊಡಲಾಗಿದೆ. ಸಂಬಂಧಪಟ್ಟವರು ಸೇತುವೆ ಕಾಮಗಾರಿಯನ್ನು ಆದಷ್ಟುಬೇಗ ಮುಗಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು.
-ಆನಂದ್‌, ಗ್ರಾಪಂ ಸದಸ್ಯರು, ಹಲಗೂರು.

click me!