ಮಂಗಳೂರಿಗೆ ನೀರು ಪೂರೈಕೆ: ಸರಪಾಡಿಯಲ್ಲಿ ಬರಿದಾಯ್ತು ನೇತ್ರಾವತಿ!

By Kannadaprabha News  |  First Published Apr 23, 2023, 10:07 PM IST

: ಜಿಲ್ಲೆಯ ಜನರ ಜೀವನದಿ ನೇತ್ರಾವತಿಯಲ್ಲಿ ನೀರಿನಮಟ್ಟಕಡಿಮೆಯಾಗಿದ್ದು, ಸರಪಾಡಿಯಲ್ಲಿ ಬರಿದಾಗಿದೆ. ಈ ಕಾರಣಕ್ಕೆ ಕಳೆದ ಹಲವು ದಿನಗಳಿಂದ ಜನತೆ ಮಳೆಗಾಗಿ ಹಂಬಲಿಸುತ್ತಿದ್ದಾರೆ.


ಮೌನೇಶ ವಿಶ್ವಕರ್ಮ

ಬಂಟ್ವಾಳ (ಏ.23) : ಜಿಲ್ಲೆಯ ಜನರ ಜೀವನದಿ ನೇತ್ರಾವತಿಯಲ್ಲಿ ನೀರಿನಮಟ್ಟಕಡಿಮೆಯಾಗಿದ್ದು, ಸರಪಾಡಿಯಲ್ಲಿ ಬರಿದಾಗಿದೆ. ಈ ಕಾರಣಕ್ಕೆ ಕಳೆದ ಹಲವು ದಿನಗಳಿಂದ ಜನತೆ ಮಳೆಗಾಗಿ ಹಂಬಲಿಸುತ್ತಿದ್ದಾರೆ.

Tap to resize

Latest Videos

ನದಿಯಿಂದಲೇ ನೀರೊದಗಿಸುವ ಹಲವು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿರುವ ಬಂಟ್ವಾಳದಲ್ಲಿ ನದಿಯಲ್ಲೇ ನೀರಿಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ. ಪ್ರತೀವರ್ಷ ಶಂಭೂರು ಎಎಂಆರ್‌ ಡ್ಯಾಂನಲ್ಲಿ ನೀರು ಶೇಖರಿಸಿಡುವುದರಿಂದ ಸರಪಾಡಿ ಅಜಿಲಮೊಗರಿನ ಪ್ರದೇಶದಲ್ಲಿ ನದಿಯಲ್ಲಿ ತಕ್ಕಮಟ್ಟಿಗೆ ನೀರು ಕಾಣಿಸುತ್ತಿತ್ತು. ಆದರೆ ಈ ಬಾರಿ ಮಂಗಳೂರಿಗೆ ನೀರೊದಗಿಸುವ ತುಂಬೆ ವೆಂಟೆಡ್‌ ಡ್ಯಾಂನಲ್ಲಿ ನೀರಮಟ್ಟಕಾಯ್ದುಕೊಳ್ಳಲು ಎಎಂಆರ್‌ ನೀರನ್ನು ತುಂಬೆಯೆಡೆಗೆ ಹರಿಯ ಬಿಟ್ಟಿರುವುದೂ ಸರಪಾಡಿಯ ಆಸುಪಾಸಿನ ಗ್ರಾಮಗಳಲ್ಲಿ ನೀರ ಬವಣೆ ಕಾಣಿಸುವಂತಾಗಿದೆ. ಇದರಿಂದಾಗಿ ಸುತ್ತ ಮುತ್ತಲ 9 ಗ್ರಾಮಗಳ ಜನರಿಗೆ ನೀರಿನ ಅಭಾವ ಕಂಡು ಬಂದಿದೆ. ಜನ ಕುಡಿಯುವ ನೀರಿಗೆ ತತ್ವಾರ ಪಡುವ ಸ್ಥಿತಿ ನಿರ್ಮಾಣಗೊಂಡಿದೆ.

 

ನೇತ್ರಾವತಿ ನದಿಯಲ್ಲಿ ಮರಳು ಗಣಿಗಾರಿಕೆ, ನೀರಾವರಿ ಇಲಾಖೆಗೆ ಹಸಿರು ಪೀಠದಿಂದ 50 ಕೋಟಿ ಮೊತ್ತದ ಭಾರೀ ದಂಡ!

ಬರಿದಾದ ನೇತ್ರಾವತಿ: ಮಹತ್ವಾಕಾಂಕ್ಷೆಯ ಬಹುಗ್ರಾಮ ಕುಡಿಯುವ ನೀರಿನ ಸರಬರಾಜು ಯೋಜನೆ ಸರಪಾಡಿಯಲ್ಲಿ ಅನುಷ್ಠಾನಗೊಂಡಿದ್ದರೂ, ಮಂಗಳೂರು ಮಹಾಜನತೆ ನಗರದ ಜನತೆಗೆ ನೀರೊದಗಿಸಲು ಶಂಭೂರು ಎಎಂಆರ್‌ ಅಣೆಕಟ್ಟಿನ ನೀರನ್ನು ಹರಿಯಬಿಟ್ಟಪರಿಣಾಮ ಸರಪಾಡಿ ಪರಿಸರದಲ್ಲಿ ನೇತ್ರಾವತಿ ಬರಿದಾಗಿದೆ. ಇದರಿಂದ ಅಂತರ್ಜಲವೂ ಬತ್ತಿ ಹೋಗಿ ಕೊಳವೆ ಬಾವಿಯಲ್ಲಿಯೂ ನೀರು ಬತ್ತಿದೆ. ಮಳೆಗಾಲದಲ್ಲಿ ಅಣೆಕಟ್ಟಿನಿಂದಾಗಿ ಮುಳುಗಡೆಯಾಗುವ ಪೆರ್ಲ- ಬೀಯಪಾದೆ ಪ್ರದೇಶ ಬೇಸಿಗೆಯಲ್ಲಿ ಬರಡಾಗಿದೆ. ಜನರು ಕುಡಿಯಲು ಹಾಗೂ ಕೃಷಿ ಉಳಿಸಲು ಖಾಸಗಿಯಾಗಿ ನದಿಗೆ ಪಂಪ್‌ ಅಳವಡಿಸಿ ಒಂದೂವರೆ ಕಿ.ಮೀ. ದೂರದವರೆಗೆ ಪೈಪ್‌ ಮೂಲಕ ನೀರು ಪೂರೈಸುವ ವ್ಯವಸ್ಥೆ ಕಲ್ಪಿಸಿ ಕೊಂಡಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ಜನತೆಗೆ ಇನ್ನು ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆಯಾಗಬಾರದು ಎಂಬ ದೃಷ್ಟಿಯಿಂದ ತುಂಬೆ ಡ್ಯಾಂನಲ್ಲಿ 6 ಮೀಟರ್‌ ನೀರಿನ ಮಟ್ಟಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಎಎಂಆರ್‌ ಡ್ಯಾಂನಿಂದ ಎಲ್ಲ ಗೇಟ್‌ ತೆರೆದು ನೀರು ಬಿಡಲಾಗಿದೆ.

ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ 97 ಜನವಸತಿ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಿಂದ ಸರಪಾಡಿ, ಮಣಿನಾಲ್ಕೂರು, ಉಳಿ, ಬಡಗಕಜೆಕಾರು, ಕಾವಳಮೂಡೂರು, ಕಾವಳಪಡೂರು, ಇರ್ವತ್ತೂರು, ಪಿಲಾತಬೆಟ್ಟು, ನಾವೂರು ಪಂಚಾಯತ್ಗಳಿಗೆ ನೀರು ಪೂರೈಕೆಯಾಗುತ್ತಿತ್ತು. ಇದರಿಂದ ಈ ಭಾಗದ ಜನತೆಯ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹಾರಗೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತು. ಶಂಭೂರು ಎಎಂಆರ್‌ ಡ್ಯಾಂನಲ್ಲಿ ನೀರು ನಿಂತರೆ ಸಾಕಷ್ಟುನೀರು ದೊರೆಯುತ್ತದೆ. ಆದರೆ ಇದೀಗ ಸರಪಾಡಿ ಜಾಕ್‌ವೆಲ್‌ನಲ್ಲಿ ನೀರಿಲ್ಲದೆ ನೀರು ಸರಬರಾಜು ಸ್ಥಗಿತಗೊಂಡಿದ್ದು, ಜನರು ಸಂಕಷ್ಟಕ್ಕೊಳಗಾಗಿದ್ದಾರೆ.

ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಈ ವ್ಯವಸ್ಥೆಯನ್ನೇ ನಂಬಿದ ಜನತೆಗೆ ಕೆಲವು ಗ್ರಾಮದಲ್ಲಿ ಪಂಚಾಯಿತಿ ಸದಸ್ಯರು ಟ್ಯಾಂಕರ್‌ ಮೂಲಕ ನೀರನ್ನು ವಿತರಣೆ ಮಾಡುತ್ತಿರುವುದು ಕಂಡು ಬಂದಿದೆ. ಒಟ್ಟಿನಲ್ಲಿ ಶಾಶ್ವತ ಪರಿಹಾರ ಇಲ್ಲಿನವರ ಪ್ರಮುಖ ಬೇಡಿಕೆ.

ಬರಿದಾದ ನದಿಯಲ್ಲಿ ರಸ್ತೆ ಮಾಡಿದರು..!

ಅಜಿಲಮೊಗರು ಪರಿಸರದ ನದಿ ನೀರು ಬತ್ತಿ ಹೋಗಿರುವ ಹಿನ್ನೆಲೆಯಲ್ಲಿ ಕಡೇಶ್ವಾಲ್ಯ ಸಂಪರ್ಕಕ್ಕೆ ನದಿಯಲ್ಲೇ ರಸ್ತೆ ಮಾಡಿದ್ದಾರೆ. ಕಳೆದ ಎರಡು ದಿನಗಳಹಿಂದೆ ಸಂಪನ್ನಗೊಂಡ ಕಡೇಶ್ವಾಲ್ಯ ದೇವಸ್ಥಾನದ ಜಾತ್ರೆಗೆ ತೆರಳಲು ಸರಪಾಡಿ, ಅಜಿಲಮೊಗರು ಪ್ರದೇಶದ ಜನತೆ ಇದೇ ರಸ್ತೆಯನ್ನು ಬಳಸಿದ್ದು ವಿಶೇಷವೆನ್ನಿಸಿದೆ.

 

ಕೊಡಗು: ಮಡಿಕೇರಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ..!

ಎಎಂಆರ್‌ ಡ್ಯಾಂನಿಂದ ನೀರನ್ನು ಹೊರಬಿಟ್ಟಿರುವುದರಿಂದ ಸರಪಾಡಿ ಪರಿಸರದಲ್ಲಿ ನೇತ್ರಾವತಿ ಬರಿದಾಗಿದೆ. ಈಗ ನದಿಯಲ್ಲಿ ದೊಡ್ಡ ಹೊಂಡಗಳಲ್ಲಿ ಮಾತ್ರ ನೀರು ಇದೆ. ಅದನ್ನು ಶುದ್ಧೀಕರಣ ಮಾಡಿ ಅದರಿಂದ ಪಂಪ್‌ ಮೂಲಕ ಮೇಲೆತ್ತಿ ನೀರು ಸರಬರಾಜು ಮಾಡಲಾಗುವುದು

- ಜಿ.ಕೆ. ನಾಯಕ್‌, ಎಇಇ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಬಂಟ್ವಾಳ ಉಪ ವಿಭಾಗ

click me!