ಬೆಂಗಳೂರಲ್ಲಿ 2 ಲಕ್ಷ ಸಮೀಪಕ್ಕೆ ಸೋಂಕಿತರ ಸಂಖ್ಯೆ : ಎಚ್ಚರಿಕೆ ಅಗತ್ಯ

By Kannadaprabha NewsFirst Published Apr 27, 2021, 7:37 AM IST
Highlights

24 ಗಂಟೆಗಳಲ್ಲಿ ಕೊರೋನಾ ಸೋಂಕು 16,545 ಮಂದಿಯಲ್ಲಿ ಪತ್ತೆಯಾಗಿದ್ದು, 105 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಸದ್ಯ 1,92,669 ಸಕ್ರಿಯ ಪ್ರಕರಣಗಳಿವೆ. ಇನ್ನೂ ಹೆಚ್ಚಾಗುವ ಆತಂಕ ಎದುರಾಗಿದೆ. 

 ಬೆಂಗಳೂರು (ಏ.27):  ರಾಜಧಾನಿ ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೋನಾ ಸೋಂಕು 16,545 ಮಂದಿಯಲ್ಲಿ ಪತ್ತೆಯಾಗಿದ್ದು, 105 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಸದ್ಯ 1,92,669 ಸಕ್ರಿಯ ಪ್ರಕರಣಗಳಿದ್ದು, ಇಂದು ಸಕ್ರಿಯ ಪ್ರಕರಣಗಳ ಸಂಖ್ಯೆ 2 ಲಕ್ಷ ಮೀರುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಸೋಮವಾರ ಬರೋಬ್ಬರಿ 16,545 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 6,70,201ಕ್ಕೆ ಏರಿಕೆಯಾಗಿದೆ. ಒಂದೇ ದಿನ 4313 ಮಂದಿ ಬಿಡುಗಡೆ ಹೊಂದಿದ್ದು, ಈವರೆಗೆ ಸೋಂಕಿನಿಂದ 4,71,626 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್‌ ಸೋಂಕಿಗೆ 105 ಮಂದಿ ಮೃತಪಟ್ಟಿದ್ದು, ಇದುವರೆಗೂ ಸೋಂಕಿಗೆ 5,905 ಮಂದಿ ಸಾವನ್ನಪ್ಪಿದ್ದಾರೆ. 590 ಮಂದಿ ಸೋಂಕಿತರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

11 ದಿನಗಳಲ್ಲಿ 885 ಸಾವು :  ಏ.17ರಂದು ನಗರದಲ್ಲಿ ಸಾವಿನ ಸಂಖ್ಯೆ 5,020 ಇದ್ದು ಕೇವಲ 11 ದಿನಗಳಲ್ಲಿ ಬರೋಬ್ಬರಿ 885 ಮಂದಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆ 5,905 ಇದ್ದು ಇನ್ನೆರಡು ದಿನಗಳಲ್ಲಿ ನಗರದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ ಆರು ಸಾವಿರ ದಾಟಲಿದೆ ಎಂದು ಆರೋಗ್ಯ ಇಲಾಖೆ ವರದಿಗಳು ತಿಳಿಸಿವೆ. ಕಳೆದ ನಾಲ್ಕು ದಿನಗಳಲ್ಲಿ ಸತತವಾಗಿ 100ಕ್ಕಿಂತ ಹೆಚ್ಚು ಸಾವಿನ ಪ್ರಕರಣಗಳು ದಾಖಲಾಗುತ್ತಿದ್ದು, ನಾಲ್ಕೇ ದಿನದಲ್ಲಿ ಒಟ್ಟು 455 ಮಂದಿ ಮೃತಪಟ್ಟಿದ್ದಾರೆ.

ಕೊರೋನಾ ಸೋಂಕಿನಿಂದ ಪೊಲೀಸ್ ಅಧಿಕಾರಿ ಸಾವು ...

ದಕ್ಷಿಣ ವಲಯದಲ್ಲಿ ಹೆಚ್ಚು ಸೋಂಕಿತ ಕೇಸ್‌

ಪಾಲಿಕೆಯ ಎಂಟು ವಲಯಗಳಲ್ಲಿ ಕಳೆದ 10 ದಿನಗಳಲ್ಲಿ ದಕ್ಷಿಣ ವಲಯದಲ್ಲಿ ಅತೀ ಹೆಚ್ಚು (ಶೇ.16), ಮತ್ತು ದಾಸರಹಳ್ಳಿ ವಲಯದಲ್ಲಿ ಅತೀ ಕಡಿಮೆ (ಶೇ.3ರಷ್ಟು) ಸೋಂಕು ದೃಢಪಟ್ಟಿದೆ.

ದಕ್ಷಿಣ ವಲಯ 23,772 (ಶೇ.16), ಪೂರ್ವ ವಲಯ 22,329 (ಶೇ.15), ಬೊಮ್ಮನಹಳ್ಳಿ ವಲಯ 20,491 (ಶೇ.14), ಪಶ್ಚಿಮ ವಲಯದ 18,952 ಮತ್ತು ಮಹದೇವಪುರ ವಲಯ 18,729 (ತಲಾ ಶೇ.13), ಆರ್‌ಆರ್‌ ನಗರ ವಲಯ (ಶೇ.9), ಯಲಹಂಕ 12,102 (ಶೇ.9) ಹಾಗೂ ಬೆಂಗಳೂರು ಹೊರವಲಯ 12,625(ಶೇ.9) ಮತ್ತು ದಾಸರಹಳ್ಳಿ 4866 (ಶೇ.3) ಮಂದಿ ಕಳೆದ 10 ದಿನಗಳಲ್ಲಿ ಸೋಂಕಿಗೆ ಒಳಗಾಗಿದ್ದಾರೆ ಎಂದು ಬಿಬಿಎಂಪಿ ವರದಿ ತಿಳಿಸಿದೆ.

15 ಸಾವಿರ ಮಂದಿಗೆ ಲಸಿಕೆ

ಪಾಲಿಕೆ ವ್ಯಾಪ್ತಿಯ ಎಂಟು ವಲಯಗಳಲ್ಲಿ 155 ಖಾಸಗಿ ಮತ್ತು 198 ಸರ್ಕಾರಿ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು 15,188 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಖಾಸಗಿ ಲಸಿಕಾ ಕೇಂದ್ರಗಳಲ್ಲಿ 892 ಮತ್ತು ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ 14,296 ಮಂದಿ ಲಸಿಕೆ ಪಡೆದಿದ್ದಾರೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ಕೋವಿಡ್ ಸೋಂಕಿತರು ಹೇಗೆ ಅಲರ್ಟ್ ಆಗಬೇಕು? 
 

click me!