ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ಬಗ್ಗೆ ಸ್ಥಳೀಯರಿಗೆ ಸಂಶಯಗಳಿವೆ. ಈಗ ಶರಣಾದವರು ಕಾಡಿನ ಯಾವುದೋ ಒಂದು ಮೂಲೆಯಲ್ಲಿ ಶಸ್ತ್ರಾಸ್ರಗಳನ್ನು ತೋರಿಸಿದ್ದಾರೆ. ಈ ಬಗ್ಗೆ ಜನರಿಗೆ ನಂಬಿಕೆ ಬರುತ್ತಿಲ್ಲ, ಎಲ್ಲವೂ ಸಂಶಯಾಸ್ಪದವಾಗಿದೆ ಎಂದ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ
ಉಡುಪಿ(ಜ.12): ಶರಣಾದ ನಕ್ಸಲರು ನಂತರ ಸಾಮಾನ್ಯ ಜೀವನ ನಡೆಸುವುದು ಶರಣಾಗತಿ ಪಾಲಿಸಿಯ ಉದ್ದೇಶ, ಆದರೆ ಕರ್ನಾಟಕ ರಾಜ್ಯದಲ್ಲಿ ನಕ್ಸಲ್ ಎನ್‌ಕೌಂಟರ್ ಮತ್ತು ಶರಣಾಗತಿಯ ಪ್ರಕ್ರಿಯೆಗಳನ್ನು ನೋಡಿದರೆ ಎರಡು ವಿಚಾರದಲ್ಲಿ ಅನೇಕ ಸಂಶಯಗಳಿವೆ ಎಂದು ಮಾಜಿ ಪೊಲೀಸ್ ಅಧಿಕಾರಿ, ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿ, ಎಸ್ಪಿ ಸಮ್ಮುಖದಲ್ಲಿ ಶರಣಾಗತಿ ಆಗುವುದು ಕ್ರಮ, ಆದರೆ ಮುಖ್ಯಮಂತ್ರಿಗಳ ಉಸ್ತುವಾರಿಯಲ್ಲಿಯೇ ಶರಣಾಗತಿಯಾಗಿರುವುದು, ಶರಣಾಗತಿ ವಿಧಾನದ ಸಮಗ್ರತೆ ಬಗ್ಗೆ ಸಂಶಯ ಮೂಡುತ್ತದೆ. ಸರ್ಕಾರವೇ ನಕ್ಸಲರಿಗೆ ಸುಲಭವಾಗಿ ವ್ಯವಸ್ಥೆ ಮಾಡಿಕೊಟ್ಟಂತೆ ಕಾಣುತ್ತಿದೆ. ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ಬಗ್ಗೆ ಸ್ಥಳೀಯರಿಗೆ ಸಂಶಯಗಳಿವೆ. ಈಗ ಶರಣಾದವರು ಕಾಡಿನ ಯಾವುದೋ ಒಂದು ಮೂಲೆಯಲ್ಲಿ ಶಸ್ತ್ರಾಸ್ರಗಳನ್ನು ತೋರಿಸಿದ್ದಾರೆ. ಈ ಬಗ್ಗೆ ಜನರಿಗೆ ನಂಬಿಕೆ ಬರುತ್ತಿಲ್ಲ, ಎಲ್ಲವೂ ಸಂಶಯಾಸ್ಪದವಾಗಿದೆ ಎಂದರು.
ತಮಿಳುನಾಡಲ್ಲಿ ಗ್ರಾಮಮಟ್ಟದಿಂದ ಶ್ರಮ:
ತಮಿಳುನಾಡಲ್ಲಿ 2026 ಮೇನಲ್ಲಿ ಚುನಾವಣೆ ನಡೆಯಲಿದೆ. ಅಲ್ಲಿ ಎಂಟು ಪಕ್ಷಗಳಿವೆ, ಬಿಜೆಪಿಗೆ ಬೆಂಬಲ ಸಿಗಬೇಕು ಎಂದು ಗ್ರಾಮ ಮಟ್ಟದಲ್ಲಿ ಶ್ರಮಿಸುತ್ತಿದ್ದೇವೆ. ಅಲ್ಲಿ ಪ್ರಧಾನಿ ಮೋದಿ ಬಗ್ಗೆ ಒಳ್ಳೆ ಇಮೇಜ್ ಇದೆ. ಜೊತೆಗೆ ಬಿಜೆಪಿ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ. ಸ್ಥಳೀಯ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದೇವೆ, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇವೆ. ನಮ್ಮ ಪ್ರಯತ್ನ 2026ರಲ್ಲಿ ಗೆಲುವಾಗಿ ಮಾರ್ಪಡುತ್ತದೆ ಎಂಬ ವಿಶ್ವಾಸವಿದೆ ಎಂದು ಅಣ್ಣಾಮಲೈ ಹೇಳಿದರು.
ಚಪ್ಪಲಿ ಧರಿಸುವುದಿಲ್ಲ:
ತಮಿಳುನಾಡಿನಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಹೆಚ್ಚುತ್ತಿದೆ. ಈಗಿರುವ ಡಿಎಂಕೆ ಸರ್ಕಾರ ಬಂದ ನಂತರ ಅಣ್ಣಾ ಯುನಿವರ್ಸಿಟಿ ಒಳಗೆ ಒಬ್ಬಳ ರೇಪ್ ಆಗಿದೆ. ದಿನಂಪ್ರತಿ ಎಂಬಂತೆ, ಹೆಣ್ಣು ಮಗು, ಮಗಳು, ಸಹೋದರಿಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಆದ್ದರಿಂದ ಡಿಎಂಕೆ ಸರ್ಕಾರ ಅಧಿಕಾರದಿಂದ ಇಳಿಯುವ ತನಕ ನಾನು ಚಪ್ಪಲಿ ಧರಿಸುವುದಿಲ್ಲ ಎಂದು ನಿರ್ಧಾರ ಮಾಡಿದ್ದೇನೆ ಎಂದರು.
ನಕ್ಸಲರನ್ನು ವಿಧಾನಸೌಧಕ್ಕೆ ಕರೆತರದಿರುವುದೇ ಪುಣ್ಯ: ಜೆಡಿಎಸ್ ನಾಯಕ ಜ್ಯೋತಿ ಪ್ರಕಾಶ ಮಿರ್ಜಿ
ರಾಜಕೀಯ, ಸಿನಿಮಾ ಬೇರೆ ಬೇರೆ:
ತಮಿಳುನಾಡಿನಲ್ಲಿ ಸಿನಿಮಾ ಸ್ಟಾರ್‌ಗಳಿಗೆ ಬೆಂಬಲ ಇರೋದು ನಿಜ. ವಿಜಯ್ ಅವರು ಫೆಬ್ರವರಿಯಲ್ಲಿ ಪಕ್ಷ ಸ್ಥಾಪನೆ ಮಾಡಿದ್ದಾರೆ. ಆದರೆ ಇದುವರೆಗೆ ಅವರಿಗೆ ಪಕ್ಷಕ್ಕೆ ಜಿಲ್ಲಾಧ್ಯಕ್ಷರನ್ನೂ ನೇಮಕ ಮಾಡಲಿಕ್ಕಾಗಿಲ್ಲ. ಅವರು ಅಲ್ಲಿ ನಂಬರ್ ವನ್ ನಟ, ಆದರೆ ರಾಜಕೀಯ ಬೇರೆ, ಸಿನಿಮಾ ಬೇರೆ, ರಾಜಕೀಯ ಕಷ್ಟ ಇದೆ. ಮುಂದಿನ ಚುನಾವಣೆಯಲ್ಲಿ ಏನಾಗುತ್ತೆ ನೋಡೋಣ ಎಂದು ಹೇಳಿದರು.
ಒಳರಾಜಕೀಯದ ಹೆಸರೇ ಕಾಂಗ್ರೆಸ್
ಒಳರಾಜಕೀಯದ ಇನ್ನೊಂದು ಹೆಸರೇ ಕಾಂಗ್ರೆಸ್, ಅದು ಕರ್ನಾಟಕದಲ್ಲಿ ಕಾಣುತ್ತಿದೆ ಎಂದ ಅಣ್ಣಾಮಲೈ, ಎಷ್ಟು ದಿನ ಈ ನಾಟಕ ನಡೆಯುತ್ತೆ ನೋಡೋಣ ಎಂದರು. ಕರ್ನಾಟಕದಲ್ಲಿ ಯಾವಾಗ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಅಂತ ನಾನು ಕಾಯುತ್ತಿದ್ದೇನೆ, ನಮ್ಮದು ಪ್ರಜಾಪ್ರಭುತ್ವ ನಂಬಿರುವ, ಕಾರ್ಯಕರ್ತ ಕೇಂದ್ರೀಕೃತ ಪಕ್ಷ. ಎಲ್ಲರಿಗೂ ಅವರದ್ದೇ ಆದ ಅಭಿಪ್ರಾಯ ಇರುತ್ತವೆ. ಕಚ್ಚಾಟ ಅಲ್ಲ, ಮುಂದೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.