
ಗಂಗಾವತಿ (ಜೂ.24): ಹಲವಾರು ವರ್ಷಗಳ ಬೇಡಿಕೆಯಾಗಿದ್ದ ಕೊಪ್ಪಳ ಜಿಲ್ಲೆಯ ನವಲಿ ಬಳಿ ಸಮತೋಲನಾ ಜಲಾಶಯ ನಿರ್ಮಾಣದ ಪ್ರಸ್ತಾವನೆ ಮೂರು ರಾಜ್ಯಗಳ ಸರಕಾರದ ಮುಂದೆ ಪ್ರಸ್ತಾವನೆ ಇದ್ದು, ತುಂಗಭದ್ರಾ ಜಲಾಶಯದ 33 ಸ್ಪಿಲ್ ವೇ ಗೇಟುಗಳ ಉದ್ಘಾಟನೆಗೆ ಆಗಮಿಸುವ ಮೂರು ರಾಜ್ಯಗಳ ಮುಖ್ಯಮಂತ್ರಿಗಳಿಂದ ಹಸಿರು ನಿಶಾನೆ ದೊರೆಯುವದೆ ಎನ್ನುವ ಲೆಕ್ಕಚಾರ ರೈತರಲ್ಲಿ ಇದೆ. ತುಂಗಭದ್ರಾ ಜಲಾಶಯದಲ್ಲಿ 32 ಟಿಎಂಸಿ ಹೂಳು ತುಂಬಿದೆ. ಇದರಿಂದ ನೀರಿನ ಸಾಮರ್ಥ್ಯ ಇಳಿಮುಖವಾಗಿದ್ದರಿಂದ ಪರ್ಯಾಯವಾಗಿ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ನವಲಿ ಬಳಿ ಸಮತೋಲನ ಜಲಾಶಯ ನಿರ್ಮಾಣಕ್ಕೆ 2008 ರಲ್ಲಿ ಸರಕಾರ ಸರ್ವೆ ಮಾಡಿತ್ತು.
32 ಟಿಎಂಸಿ ನೀರು ಸಂಗ್ರಹ
ನವಲಿ ಬಳಿ 32 ಟಿಎಂಸಿ ನೀರು ತುಂಬುವ ಸಾಮರ್ಥ್ಯದ ಸಮತೋಲನಾ ಜಲಾಶಯ ನಿರ್ಮಾಣಕ್ಕೆ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್ ಯಡಿಯೂರಪ್ಪ ನೇತ್ರತ್ವದ ಸರಕಾರದ ಮುಂದೆ ಪ್ರಸ್ತಾವನೆ ಇತ್ತು. ಇದಕ್ಕಾಗಿ ವಿಸೃತ ಯೋಜನೆ( ಡಿಪಿಆರ್) ತಯಾರಿಸುವದಕ್ಕೆ ಸರಕಾರ ಆಡಳಿತಾತ್ಮಕ ಒಪ್ಪಿಗೆ ಸೂಚನೆ ನೀಡಿದ್ದಲ್ಲದೆ ಇದಕ್ಕಾಗಿ 14 ಕೋಟಿ 30 ಲಕ್ಷ ರು ಅನುದಾನ ನೀಡಿತ್ತು. ಅಲ್ಲದೆ ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದ ಬಸವರಾಜ್ ಬೊಮ್ಮಾಯಿ ಅವರು ನವಲಿ ಬಳಿ ಜಲಾಶಯದ ಸ್ಥಳವನ್ನು ಪರಿಶೀಲನೆ ಮಾಡಿದ್ದರು.
ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿವೇಶನದಲ್ಲಿ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಪ್ರಸ್ತಾವನೆಗೆ ಸಮತೋಲನ ಜಲಾಶಯ ಮಾಡುವ ಭರವಸೆಯನ್ನು ಮುಖ್ಯಮಂತ್ರಿಗಳು ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಗೇಟ್ ದುರಸ್ಥಿ ಸಂದರ್ಭದಲ್ಲಿ ಜಲಾಶಯ ವಿಕ್ಷಣೆಗೆ ಆಗಮಿಸಿದ್ದ ಜಲಸಂಪನ್ಮೂಲ ಸಚಿವರಾಗಿದ್ದ ಇಂದಿನ ಮುಖ್ಯಮಂತ್ರಿನ ಡಿ.ಕೆ.ಶಿವಕುಮಾರ ಅವರು ಸಹ ನವಲಿ ಬಳಿ ಸಮತೋಲನ ಜಲಾಶಯ ನಿರ್ಮಾಣಕ್ಕೆ ಭರವಸೆ ನೀಡಿದ್ದರು.
ಆಂಧ್ರ, ತೆಲಂಗಾಣ ರಾಜ್ಯಕ್ಕೆ ಸಮರ್ಪಕ ನೀರು
ನವಲಿ ಬಳಿ 32 ಟಿಎಂಸಿ ನೀರಿನ ಸಾಮರ್ಥ್ಯದ ಸಮತೋಲನಾ ಜಲಾಶಯ ನಿರ್ಮಾಣವಾಗುವದರಿಂದ ಕರ್ನಾಟಕಕ್ಕೆ ಶೇ. 20 ರಷ್ಟು ತನ್ನ ನೀರಿನ ಪಾಲು ಮೀಸಲಿರುತ್ತದೆ. ಜೊತೆಗೆ ಆಂಧ್ರ ಮತ್ತು ತೆಲಂಗಾಣ, ರಾಜ್ಯಕ್ಕೆ ತುಂಗಭದ್ರಾ ಜಲಾಶಯದಿಂದ ತನ್ನ ಪಾಲಿನ ನೀರಿನ ಜೊತೆಗೆ 10 ಟಿಎಂಸಿ ಅದಿಕ ನೀರು ಕಾಲುವೆ ಮೂಲಕ ಹಂಚಿಕೆಯಾಗಲಿದೆ.
16 ಸಾವಿರ ಎಕರೆ ಪ್ರದೇಶದಲ್ಲಿ ಸಮತೋಲನಾ ಜಲಾಶಯ
ನವಲಿ ಯಿಂದ ಕರಡೋಣಿ ಹೋಗುವ ಮಾರ್ಗದಲ್ಲಿ ಜಲಾಶಯ ನಿರ್ಮಾಣಕ್ಕೆ ಸ್ಥಳ ನಿಗದಿಯಾಗಿದ್ದು ಸುಮಾರು 16 ಸಾವಿರ ಎಕರೆ ಜಮೀನನ್ನು ಸರ್ವೆ ಮಾಡಿದೆ. ಜಲಾಶಯ ನಿರ್ಮಾಣವಾಗುವದರಿಂದ 20 ಗ್ರಾಮಗಳು ಮುಳಗಡೆಯಾಗಲಿವೆ. ನವಲಿಯಿಂದ ಸೋಮನಾಳ ಗ್ರಾಮದ ಬಳಿ ಇರುವ ತುಂಗಭದ್ರಾ ಎಡದಂಡೆ ಕಾಲುವೆಗೆ ಜೋಡಣೆಯಾಗಲಿದೆ.
ಪ್ರಧಾನಿ ಭರವಸೆ ಈಡೇರುವುದೇ
ಕಳೆದ 8 ವರ್ಷಗಳ ಹಿಂದೆ ಗಂಗಾವತಿ ವಿದಾನ ಸಭಾ ಕ್ಷೇತ್ರದ ಚುನಾವಣೆಯ(2019) ಪ್ರಚಾರಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಬಹಿರಂಗ ಸಭೆಯಲ್ಲಿ ನವಲಿ ಬಳಿ ಸಮತೋಲನ ಜಲಾಶಯ ನಿರ್ಮಾಣ ಮಾಡುವದು ಖಚಿತ ಇದಕ್ಕೆ ಆಂದ್ರ ಮತ್ತು ತೆಲಂಗಾಣ ಸರಕಾರದಿಂದ ಒಪ್ಪಿಗೆ ಸೂಚಿಸುವ ಭರವಸೆ ಜೊತೆಗೆ ಕೇಂದ್ರದ ಸಂಪೂರ್ಣ ಸಹಕಾರ ಇದೆ ಎಂದು ಭರವಸೆ ನೀಡಿದ್ದರು. ಮೂರು ರಾಜ್ಯದ ಮುಖ್ಯಮಂತ್ರಿಗಳ ಮುಂದೆ ಇದೆ.
ಪ್ರಸ್ತಾವನೆ
ನವಲಿ ಬಳಿ ಸಮತೋಲನಾ ಜಲಾಶಯ ನಿರ್ಮಾಣ ಮಾಡುವ ಪ್ರಸ್ತಾವನೆ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯ ಸರಕಾರದ ಮುಂದೆ ಇದೆ. ಜೂನ್ .25 ರಂದು ತುಂಗಭದ್ರಾ ಜಲಾಶಯಕ್ಕೆ ಅಳವಡಿಸಿದ 33 ಸ್ಪಿಲ್ ವೇ ಗೇಟುಗಳ ಉದ್ಘಾಟನೆಗೆ ಆಗಮಿಸುವ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ ರೆಡ್ಡಿ ಅವರು ತುಂಗಭದ್ರಾ ಬೋರ್ಡ್ ಮೂಲಕ ಸಮತೋಲನ ಜಲಾಶಯದ ಪ್ರಸ್ತಾವನೆಗೆ ಹಸಿರು ನಿಶಾನೆ ತೋರಿಸಿದರೆ ಜಲಾಶಯ ನಿರ್ಮಾಣ ಸುಗಮವಾಗಲಿದೆ. ಇದರಿಂದಾಗಿ ಈ ಭಾಗದ ರೈತರ ಬಹುದಿನಗಳ ಬೇಡಿಕೆಗೆ ಹಸಿರು ನಿಶಾನೆ ದೊರೆತಂತಾಗುತ್ತದೆ.
ಕೊಪ್ಪಳ ಜಿಲ್ಲೆಯ ನವಲಿ ಬಳಿ ಸಮತೋಲನ ಜಲಾಶಯ ನಿರ್ಮಾಣವಾಗುವದರಿಂದ ಮೂರು ರಾಜ್ಯಗಳಿಗೆ ಹೆಚ್ಚಿನ ನೀರಿನ ಲಭ್ಯತೆ ಆಗುತ್ತದೆ. ಜೊತೆಗೆ ಅಂದ್ರ ಮತ್ತು ತೆಲಂಗಾಣ ರಾಜ್ಯಗಳಿಗೆ ತನ್ನ ನೀರಿನ ಪಾಲುದಾರಿಕೆ ಜೊತೆಗೆ ಶೇ.10 ಟಿಎಂಸಿ ನೀರು ಅಧಿಕವಾಗಿ ಲಭ್ಯವಾಗುತ್ತದೆ. ಮೂರು ರಾಜ್ಯದ ಮುಖ್ಯಮಂತ್ರಿಗಳು ಪರಿಶೀಲನೆ ಮಾಡಿ ಜಲಾಶಯ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದರೆ ನೀರಾವರಿ ಯೋಜನೆಗೆ ಆದ್ಯತೆ ದೊರೆತಂತಾಗುತ್ತದೆ.
-ವಿ.ಪಿ.ಉದ್ದಿಹಾಳ, ನೀರಾವರಿ ತಜ್ಞರು ಮತ್ತು ನಿವೃತ್ತ ಮುಖ್ಯ ಅಭಿಯಂತರರು, ಜಲಸಂಪನ್ಮೂಲ ಇಲಾಖೆ