ತೈಲ ಬೆಲೆ ಏರಿಕೆ : ಆ. 16ರಿಂದ ದೇಶದಾದ್ಯಂತ ಲಾರಿಗಳ ಸಂಚಾರ ಸ್ಥಗಿತ

By Kannadaprabha NewsFirst Published Aug 14, 2021, 4:09 PM IST
Highlights
  • ಡೀಸೆಲ್‌ ದರ ಹೆಚ್ಚಳ ಖಂಡಿಸಿ ಹಾಗೂ ಕೊರೋನಾ ಲಾಕ್‌ಡೌನ್‌ನಿಂದ  ಲಾರಿ ಮಾಲೀಕರಿಗೆ ಆರ್ಥಿಕ ಸಂಕಷ್ಟ
  • ಆ. 16ರಿಂದ ದೇಶದಾದ್ಯಂತ ಲಾರಿಗಳ ಸಂಚಾರ ಸ್ಥಗಿತ

  ಗಂಗಾವತಿ (ಆ.14):  ಡೀಸೆಲ್‌ ದರ ಹೆಚ್ಚಳ ಖಂಡಿಸಿ ಹಾಗೂ ಕೊರೋನಾ ಲಾಕ್‌ಡೌನ್‌ನಿಂದ ತೀವ್ರ ಲಾರಿ ಮಾಲೀಕರು ಆರ್ಥಿಕ ಸಂಕಷ್ಟದಲ್ಲಿದ್ದು, ಹಮಾಲಿ ಕಾರ್ಮಿಕರಿಗೆ ಲೋಡಿಂಗ್‌ ಅನ್‌ ಲೋಡಿಂಗ್‌ ಮಾಮೂಲಿ ನಿರ್ಬಂಧಿಸಲು ಆಗ್ರಹಿಸಿ ಆ. 16ರಿಂದ ದೇಶದಾದ್ಯಂತ ಲಾರಿಗಳ ಸಂಚಾರ ಸ್ಥಗಿತಗೊಳಿಸಲಾಗುವುದು ಎಂದು ಲಾರಿಗಳ ಮಾಲೀಕರು ಮತ್ತು ಚಾಲಕರ ಫೆಡರೇಷನ್‌ ರಾಜ್ಯ ಉಪಾಧ್ಯಕ್ಷ ಹಾಗೂ ಗಂಗಾವತಿ ತಾಲೂಕು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸುರೇಶ ಸಿಂಗನಾಳ ಹೇಳಿದರು.

ಅವರು ಎಪಿಎಂಸಿ ಲಾರಿ ಟರ್ಮಿನಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಪೆಟ್ರೋಲ್‌, ಡೀಸೆಲ್‌ ತೆರಿಗೆಯಿಂದ ಕೇಂದ್ರಕ್ಕೆ 3.35 ಲಕ್ಷ ಕೋಟಿ ಆದಾಯ!

ಲಾರಿ ಉದ್ಯಮ ಕಳೆದೆರಡು ವರ್ಷಗಳಿಂದ ಕ್ಷಾಮದಿಂದ ನಲುಗುತ್ತಿದೆ. ಲಾರಿ ಖರೀದಿಗಾಗಿ ಮಾಡಿದ ಬ್ಯಾಂಕ್‌ ಫೈನಾನ್ಸ್‌ ಸಾಲದ ಕಂತುಪಾವತಿಸಲು ಕಷ್ಟಪಡುವಂತಾಗಿದೆ. ಇನ್ನೂ ಕೆಲವರು ಮನೆಯಲ್ಲಿದ್ದ ಬಂಗಾರ ಇತರೆ ವಸ್ತುಗಳನ್ನು ಮಾರಿ ಸಾಲದ ಕಂತು ತುಂಬಿದ್ದಾರೆ. ವಿಮೆಯ ಪ್ರಿಮಿಯಂ ಸೇರಿ ಡೀಸೆಲ್‌ ದರ ಹೆಚ್ಚಳ ಕೆಲವು ಪೊಲೀಸ್‌, ಆರ್‌ಟಿಒ ಅಧಿಕಾರಿಗಳು ಲಾರಿ ಚಾಲಕರ ಹತ್ತಿರ ವಿನಾಕಾರಣ ಹಣ ಪೀಕುವುದರಿಂದ ಲಾರಿ ಮಾಲೀಕರು ಚಾಲಕರಿಗೆ ಬಹಳ ತೊಂದರೆಯಾಗಿದೆ.

ಈ ಮಧ್ಯೆ ಲೋಡಿಂಗ್‌ ಅನ್‌ ಲೋಡಿಂಗ್‌ ಮಾಡಿದಾಗ ಹಮಾಲಿ ಕಾರ್ಮಿಕರಿಗೆ ಚಹಾ ಪಾನಿಗಾಗಿ ಮಾಮೂಲಿ ಕೊಡುವುದು ಕಡ್ಡಾಯ ಮಾಡಲಾಗುತ್ತಿದೆ. ಸ್ವಲ್ಪ ಆದಾಯದಲ್ಲಿ ಲೋಡಿಂಗ್‌ ಅನ್‌ ಲೋಡಿಂಗ್‌ ಮಾಮೂಲಿ ಕೊಡುವುದನ್ನು ಕಡ್ಡಾಯ ಮಾಡಿರುವುದು ಸರಿಯಲ್ಲ. ಇನ್ನೂ ಮುಂದೆ ಮಾಮೂಲಿ ಕೊಡಲು ಆಗುವುದಿಲ್ಲ. ಈಗಾಗಲೇ ಮಾಮೂಲಿ ಕೊಡಲು ಆಗುವುದಿಲ್ಲ ಎಂದು ಹಮಾಲಿ ಕಾರ್ಮಿಕ ಸಂಘದವರಿಗೆ, ಪೊಲೀಸ್‌ ಮಹಾನಿರ್ದೇಶಕರಿಗೆ, ಸಾರಿಗೆ ಇಲಾಖೆಯ ಮುಖ್ಯಸ್ಥರಿಗೆ ರಾಜ್ಯದ ಎಲ್ಲಾ ತಹಸೀಲ್ದಾರ್‌, ಜಿಲ್ಲಾಧಿಕಾರಿಗಳು, ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮನವರಿಕೆ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಲಾರಿ ಮಾಲೀಕರು ಮತ್ತು ಚಾಲಕರ ಸಂಘದ ಪದಾಧಿಕಾರಿಗಳಾದ ಕಮತಗಿ ಲಿಂಗಪ್ಪ, ಈಶ್ವರಪ್ಪ, ಟಿ. ಪ್ರಾಣೇಶರಾವ್‌, ಶಬ್ಬೀರ ಮನಿಯಾರ, ಅಮರೇಶಪ್ಪ, ವೀರೇಶ ಕಬ್ಬೇರ, ಜಿಲಾನಿಪಾಷಾ, ಕೆ. ಕೈಸರ, ಅಲಗೂರ ನಾಗರಾಜ ಸೇರಿ ಇತರೆ ಪದಾಧಿಕಾರಿಗಳಿದ್ದರು.

click me!