ನಾರಿಹಳ್ಳ ಜಲಾಶಯ ಭರ್ತಿ: ಅಲ್ಲಲ್ಲಿ ಬೆಳೆ-ಮನೆಗಳಿಗೆ ಹಾನಿ| ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನಲ್ಲಿರುವ ನಾರಿಹಳ್ಳ ಜಲಾಶಯ| ಜಲಾಶಯದ ಎರಡೂ ಗೇಟ್‌ಗಳನ್ನ ಎರಡೂವರೆ ಅಡಿ ಎತ್ತಿ ನೀರು ಬಿಡುಗಡೆ|
ಬಳ್ಳಾರಿ(ಸೆ.14): ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಪಟ್ಟಣ ಸೇರಿದಂತೆ ದೊಣಿಮಲೈ ಟೌನ್‌ಶಿಫ್‌ಗೆ ಕುಡಿಯುವ ನೀರು ಪೂರೈಕೆ ಮಾಡುವ ನಾರಿಹಳ್ಳ ಜಲಾಶಯ ಭರ್ತಿಯಾಗಿದೆ.
ಈ ಹಿನ್ನೆಲೆಯಲ್ಲಿ ಜಲಾಶಯದ ಎರಡು ಗೇಟ್‌ಗಳನ್ನು ಎರಡೂವರೆ ಅಡಿ ಎತ್ತಿ ನೀರನ್ನು ಹೊರ ಬಿಡುಗಡೆ ಮಾಡಲಾಗಿದೆ. ಗಣಿ ಪ್ರದೇಶಗಳಿಂದ ಮಳೆಯ ನೀರು ಹರಿದು ಬರುತ್ತಿರುವುದರಿಂದ ಜಲಾಶಯದ ನೀರು ಕೆಂಪಾಗಿದೆ. ಇದು ಸಾಮಾನ್ಯವಾಗಿದ್ದು ಜಲಾಶಯದಿಂದ ನೀರನ್ನು ಶುದ್ಧೀಕರಿಸಿಯೇ ಪೂರೈಕೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಡೂರು ತಾಲೂಕಿನ ವಿವಿಧೆಡೆ ಶನಿವಾರ ರಾತ್ರಿ ಉತ್ತಮ ಮಳೆಯಾಗಿದೆ. ತೋರಣಗಲ್ ಹೋಬಳಿ ಪ್ರದೇಶದಲ್ಲಿ 36.11 ಮಿ.ಮೀ ಮಳೆಯಾಗಿದ್ದು, ಚೋರನೂರು 22.3, ಸಂಡೂರು 35.01 ಮಿ.ಮೀ ಮಳೆಯಾಗಿದೆ.
undefined
ಬಳ್ಳಾರಿಯಲ್ಲಿ ಭಾರೀ ಮಳೆ : ಸೇತುವೆ ಮುಳುಗಿ ಸಂಪರ್ಕ ಕಡಿತ
ಕೂಡ್ಲಿಗಿ ತಾಲೂಕಿನಲ್ಲಿ ನಿರಂತರವಾಗಿ ಜಿಟಿಜಿಟಿ ಮಳೆ ಸುರಿಯುತ್ತಿರುವುದರಿಂದ ಹೈಬ್ರೀಡ್ ಜೋಳ ಕಪ್ಪಾಗಿ ನಷ್ಟವಾಗುವ ಆತಂಕ ಸೃಷ್ಟಿಯಾಗಿದೆ. ಕೆರೆ-ಕಟ್ಟೆಗಳಲ್ಲಿ ನೀರಿನ ಸಂಗ್ರಹ ಏರಿಕೆಯಾಗಿದೆ. ಹೂವಿನಹಡಗಲಿ ತಾಲೂಕಿನಲ್ಲಿ 12.6 ಮಿ.ಮೀ ಮಳೆಯಾಗಿದೆ. ತಾಲೂಕಿನ ಹಿರೇಮಲ್ಲನಕೇರಿ ಗ್ರಾಮದಲ್ಲಿ ಮಳೆ ಹಾಗೂ ಗಾಳಿಯಿಂದಾಗಿ ಜೋಳದ ಬೆಳೆ ನೆಲಕ್ಕೊರಗಿದ್ದು ಬೆಳೆನಷ್ಟದ ಭೀತಿ ಎದುರಾಗಿದೆ.
ಬಾವಿಹಳ್ಳಿ, ಮಸಲವಾಡ, ಹೊಳಗುಂದಿ ಗ್ರಾಮಗಳ ರೈತರ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳ, ಜೋಳದ ಬೆಳೆಗೆ ನೀರು ನುಗ್ಗಿದ್ದು, ಹಾನಿ ಭೀತಿಯನ್ನು ರೈತರು ಎದುರಿಸುತ್ತಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಸಂಡೂರು, ಕೂಡ್ಲಿಗಿ ಹಾಗೂ ಹಡಗಲಿ ತಾಲೂಕಿನ ಅನೇಕ ಮನೆಗಳು ಹಾನಿಯಾಗಿವೆ. ಬೆಳೆನಷ್ಟದ ಬಗ್ಗೆ ಇನ್ನು ಮಾಹಿತಿ ಸಂಗ್ರಹಿಸಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.