ನಗರದ ಹಳ್ಳದಕೇರಿ, ತೋಪಿನ ಬೀದಿ, ಕುರಬಗೇರಿ ಸೇರಿದಂತೆ 7 ವಾರ್ಡ್‌ಗಳನ್ನು ಕೊಳಚೆ ನಿರ್ಮೂಲನಾ ಮಂಡಳಿ ವ್ಯಾಪ್ತಿಗೆ ಸೇರಿಸಲಾಗಿದ್ದು, ಮಂಡಳಿಯವರಿಗೆ ಈ ಭಾಗದಲ್ಲಿ ವಾಸಿಸುವ ಜನರಿಗೆ ಸರ್ಕಾರದ ಸವಲತ್ತು ನೀಡುವಂತೆ ಪತ್ರ ಬರೆಯಲಾಗುವುದು ಎಂದು ನಗರಸಭೆ ಅಧ್ಯಕ್ಷ ಎಚ್.ಎಸ್. ಮಹದೇವಸ್ವಾಮಿ ತಿಳಿಸಿದರು.
ನಂಜನಗೂಡು : ನಗರದ ಹಳ್ಳದಕೇರಿ, ತೋಪಿನ ಬೀದಿ, ಕುರಬಗೇರಿ ಸೇರಿದಂತೆ 7 ವಾರ್ಡ್‌ಗಳನ್ನು ಕೊಳಚೆ ನಿರ್ಮೂಲನಾ ಮಂಡಳಿ ವ್ಯಾಪ್ತಿಗೆ ಸೇರಿಸಲಾಗಿದ್ದು, ಮಂಡಳಿಯವರಿಗೆ ಈ ಭಾಗದಲ್ಲಿ ವಾಸಿಸುವ ಜನರಿಗೆ ಸರ್ಕಾರದ ಸವಲತ್ತು ನೀಡುವಂತೆ ಪತ್ರ ಬರೆಯಲಾಗುವುದು ಎಂದು ನಗರಸಭೆ ಅಧ್ಯಕ್ಷ ಎಚ್.ಎಸ್. ಮಹದೇವಸ್ವಾಮಿ ತಿಳಿಸಿದರು.
ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. 7 ವಾರ್ಡ್‌ಗಳಲ್ಲಿ ಬಡವರು ವಾಸಿಸುವ ಪ್ರದೇಶಗಳಲ್ಲಿ ಮನೆ ನಿರ್ಮಾಣ ಮುಂತಾದ ಸವಲತ್ತುಗಳನ್ನು ನೀಡುವಂತೆ ತಿಳಿಸಲಾಗಿದೆ ಎಂದು ಹೇಳಿದರು.
undefined
ಸದಸ್ಯ ಕಪಿಲೇಶ್ ಮಾತನಾಡಿ, ನಮ್ಮ ವಾರ್ಡ್ ನಲ್ಲಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿ ಆರಂಭಿಸಿ 6 ತಿಂಗಳು ಕಳೆದಿವೆ. ಗುತ್ತಿಗೆದಾರ ಕಾಲಮಿತಿಯಲ್ಲಿ ಕೆಲಸ ನಿರ್ವಹಿಸದೆ ಕಾಮಗಾರಿ ಪೂರ್ಣಗೊಂಡಿಲ್ಲ. ನಗರಸಭೆಯಲ್ಲಿ ಸಾರ್ವಜನಿಕರು ಖಾತೆ ಮಾಡಿಸಿಕೊಳ್ಳಲು ಪರದಾಡುವ ಪರಿಸ್ಥಿತಿ ಇದೆ. ಜನರು ದಾಖಲೆಗಳು ಸಮರ್ಪಕವಾಗಿದ್ದರೂ ಅಧಿಕಾರಿಗಳು ಸಲ್ಲದ ಸಬೂಬು ಹೇಳಿ ಜನರನ್ನು ಅಲೆಯುವಂತೆ ಮಾಡುತ್ತಿದ್ದಾರೆ. ಜನ ನಗರಸಭೆಯನ್ನು ನರಕಸಭೆ ಎಂದು ಸಾರ್ವಜನಿಕವಾಗಿ ಹಳಿಯುತ್ತಿದ್ದಾರೆ ಎಂದರು.
45 ದಿನಗಳ ಒಳಗೆ ಖಾತೆ ಮಾಡಿಕೊಡಬೇಕು ಎಂಬ ನಿಯಮವಿದ್ದರೂ, ಅಧಿಕಾರಿಗಳು ನಿಯಮದಂತೆ ಖಾತೆ ಮಾಡಿಕೊಡುತ್ತಿಲ್ಲ ಎಂದು ದೂರಿದರು.
ಸದಸ್ಯ ಗಂಗಾಧರ್ ಮಾತನಾಡಿ, ಆರ್.ಪಿ. ರಸ್ತೆಯ ಗುಂಡಿಗಳನ್ನು ಮುಚ್ಚುವಂತೆ ಮನವಿ ಸಲ್ಲಿಸಿ 2 ವರ್ಷವಾದರೂ ಗುಂಡಿ ಮುಚ್ಚಲು ಮುಂದಾಗಿಲ್ಲ. ಮುಖ್ಯಮಂತ್ರಿಗಳು ಬಂದಾಗ ಮಾತ್ರ ಗುಂಡಿ ಮುಚ್ಚಿ ತೇಪೆ ಹಾಕಲಾಗಿದೆ. ತೆರಿಗೆ ಕಟ್ಟುತ್ತಿರುವ ಜನರಿಗೆ ಸಮರ್ಪಕವಾಗಿ ಮೂಲಸೌಲಭ್ಯ ಒದಗಿಸಲು ಮುಂದಾಗಿಲ್ಲ ಎಂದು ಆರೋಪಿಸಿದರು.
ಸದಸ್ಯೆ ಗಾಯತ್ರಿ ಮೋಹನ್, ಮಾತನಾಡಿ . 27 ಲಕ್ಷ ವೆಚ್ಚಮಾಡಿ ನಗರದ ಮನೆ-ಮನೆಗಳಿಗೆ ವಿತರಿಸಲಾಗಿರುವ ಕಸದ ಡಬ್ಬಿಗಳು ಕಳಪೆ ಗುಣ ಮಟ್ಟದಿಂದ ಕೂಡಿವೆ. ನಗರದ ಹಳೇ ಪಟ್ಟಣದ 10 ವಾರ್ಡ್‌ಗಳ ಜನ ಸಮರ್ಪಕ ಶುದ್ಧಕುಡಿಯುವ ನೀರು ಲಭ್ಯವಿಲ್ಲದೆ ಪರಿತಪಿಸುತ್ತಿದ್ದಾರೆ. 10 ವಾರ್ಡ್‌ಗಳಿಗೆ ನಿರಂತರ ನೀರು ಸರಬರಾಜು ಯೋಜನೆಯ ಪೈಪ್ ಲೈನ್ ಅಳವಡಿಸಲಾಗಿದ್ದು, ಸಂಪರ್ಕ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ನಗರಸಭೆ ಆಯುಕ್ತ ರಾಜಣ್ಣ ಪ್ರತಿಕ್ರಿಯಿಸಿ, ಈ ಬಗ್ಗೆ ಕ್ರಮವಹಿಸಲಾಗಿದೆ, ನಾಳೆಯಿಂದ ಹಳೇ ಟೌನ್‌ನ ವ್ಯಾಪ್ತಿಯಲ್ಲಿ ಧ್ವನಿವರ್ಧಕದ ಮೂಲಕ ಪ್ರಚಾರ ನಡೆಸಿ, ಸಂಪರ್ಕ ಪಡೆದುಕೊಳ್ಳುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಸದಸ್ಯೆ ಮೀನಾಕ್ಷಿ ಮಾತನಾಡಿ ನಗರದ ಕೆಎಚ್‌ಬಿ ಕಾಲೊನಿಯಿಂದ ಊಟಿ ರಸ್ತೆಗೆ ಸಂಪರ್ಕ ಕಲ್ಪಿಸುವ ಹನುಮಂತಪ್ಪ ಮಿಲ್ ಬಳಿಯ ರಸ್ತೆ ವಿಸ್ತೀರ್ಣ ಕಾಮಗಾರಿ ಭೂಮಿ ಪೂಜೆ ನಡೆಸಿ 6 ತಿಂಗಳಾದರೂ ಕೆಲಸ ಆರಂಭಗೊಂಡಿಲ್ಲ ಎಂದು ದೂರಿದರು.
ಎಸ್.ಪಿ. ಮಹೇಶ್, ಮಂಗಳಮ್ಮ ಮಾತನಾಡಿ, ವಾರ್ಡ್‌ಗಳಲ್ಲಿ ಬೀದಿ ದೀಪಗಳು ಕೆಟ್ಟು ನಿಂತಿವೆ. ಕಳೆದ 6 ತಿಂಗಳಿನಿಂದ ಬೀದಿ ದೀಪ ಅಳವಡಿಸುವಂತೆ ಮನವಿ ಮಾಡಿ ಸಾಕಾಗಿದೆ. ರಸ್ತೆ ಹಾಗೂ ಚರಂಡಿ ನಿರ್ಮಾಣ, ಸೇರಿದಂತೆ ವಿವಿಧ ಗುತ್ತಿಗೆ ಪಡೆದ ಗುತ್ತಿಗೆ ಪಡೆದ ಗುತ್ತಿಗೆದಾರ ನಂದೀಶ್ ಅವಧಿ ಮುಗಿಯುತ್ತಿದ್ದರೂ ಕಾಮಗಾರಿ ಆರಂಭಿಸಿಲ್ಲ. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಮತ್ತೆ ಕಾಮಗಾರಿ ನಿರ್ವಹಣೆಗಾಗಿ ಟೆಂಡರ್ ಕರೆಯಿರಿ ಎಂದು ಒತ್ತಾಯಿಸಿದರು.
ನಗರಸಭೆ ಅಧ್ಯಕ್ಷ ಎಚ್.ಎಸ್. ಮಹದೇವಸ್ವಾಮಿ ಬೀದಿ ದೀಪಗಳ ಸರಬರಾಜಿಗೆ ಕರೆದಿದ್ದ ಟೆಂಡರ್ ಒಪ್ಪಿಗೆಯಾಗಿದ್ದು ಶೀಘ್ರದಲ್ಲಿ ಬೀದಿ ದೀಪ ಅಳವಡಿಕೆಗೆ ಕ್ರಮ ವಹಿಸಲಾಗುವುದು. ಅಭಿವೃದ್ಧಿ ಕಾಮಗಾರಿಯನ್ನು ಕಾಲಮಿತಿಯಲ್ಲಿ ನಿರ್ವಹಿಸುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ನಗರಸಭೆ ನಗರಸಭಾ ಆಯುಕ್ತ ರಾಜಣ್ಣ, ಎಇಇ ಸುರೇಶ್, ಉಪಾಧ್ಯಕ್ಷೆ ನಾಗಮಣಿ ಶಂಕರಪ್ಪ, ಮಹದೇವ ಪ್ರಸಾದ್, ದೇವ, ಎನ್.ಎಸ್. ಯೋಗೇಶ್, ಗಿರೀಶ್ ಕುಮಾರ್, ಖಾಲೀದ್ ಅಹಮ್ಮದ್, ಮಹದೇವಮ್ಮ, ನಂದಿನಿ, ರೆಹೆನಾ ಬಾನು, ಶ್ವೇತ ಲಕ್ಷ್ಮಿ, ಪ್ರದೀಪ್, ವಿಜಯಲಕ್ಷ್ಮಿ, ವಸಂತಾ, ಮಂಜುಳಾ ಅನಂತ ಮೊದಲಾದವರು ಇದ್ದರು.