ಸರ್ಕಾರದ ಬೆಲೆ ಏರಿಕೆ ಬರೆ ನಡುವೆ ಕೆಎಂಎಫ್‌ನಿಂದ ಸಣ್ಣ ರಿಲೀಫ್; ನಂದಿನಿ ಮೊಸರು ದರ ಇಳಿಕೆ

Published : Nov 25, 2026, 09:45 PM IST
Nandini curd price decreased by kmf

ಸಾರಾಂಶ

ಇತ್ತೀಚೆಗೆ ಹಾಲಿನ ದರ ಏರಿಕೆ ಮಾಡಿದ್ದ ಕೆಎಂಎಫ್ ಇದೀಗ ಮೊಸರಿನ ದರವನ್ನು ಕಡಿತಗೊಳಿಸಿದೆ. ಪ್ರತಿ ಲೀಟರ್ ಮೊಸರಿಗೆ 2 ರೂ. ಹಾಗೂ ಅರ್ಧ ಲೀಟರ್‌ಗೆ 1 ರೂ. ಇಳಿಕೆ ಮಾಡಿದ್ದು, ನವೆಂಬರ್ 29 ರಿಂದ ಹೊಸ ದರ ಜಾರಿಗೆ ಬರಲಿದೆ.

ಬೆಂಗಳೂರು: ಇತ್ತೀಚೆಗೆ ನಂದಿನಿ ಹಾಲಿನ ದರ ಏರಿಕೆ ಮಾಡಿ ಗ್ರಾಹಕರಿಂದ ತೀವ್ರ ವಿರೋಧ ಎದುರಿಸಿದ್ದ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್), ಇದೀಗ ಮೊಸರಿನ ದರ ಕಡಿತಗೊಳಿಸಿದೆ. ಪ್ರತಿ ಲೀಟರ್ ಮೊಸರಿಗೆ 2 ರೂಪಾಯಿ ಇಳಿಕೆ ಮಾಡಿದೆ. ಅರ್ಧ ಲೀಟರ್ ಮೊಸರಿನ ಪ್ಯಾಕ್‌ಗೆ 1 ಕಡಿತ ಮಾಡಲಾಗಿದೆ. ಪರಿಷ್ಕೃತ ದರವು ನವೆಂಬರ್ 29 ರಿಂದ ಜಾರಿಗೆ ಬರಲಿದೆ.

ನಂದಿನಿ ಮೊಸರು ಖರೀದಿಸುವ ಗ್ರಾಹಕರಿಗೆ ಕೊಂಚ ನೆಮ್ಮದಿ ಸಿಗಲಿದೆ. ಈ ಹಿಂದೆ ಅರ್ಧ ಲೀಟರ್ ಮೊಸರಿನ ಪ್ಯಾಕ್ 34ಕ್ಕೆ ರೂಪಾಯಿಗೆ ಮಾರಾಟ ಆಗುತ್ತಿತ್ತು. ಇದೀಗ ₹1 ಕಡಿತದೊಂದಿಗೆ ₹33ಕ್ಕೆ ಸಿಗಲಿದೆ. ಅದೇ ರೀತಿ ಒಂದು ಲೀಟರ್ ಮೊಸರಿಗೆ ಈ ಹಿಂದೆ ₹68 ರೂಪಾಯಿ ಇತ್ತು. ಹೊಸ ದರದ ಪ್ರಕಾರ ಅದು 66 ರೂಪಾಯಿಗೆ ಸಿಗಲಿದೆ.

ಹಾಲಿನ ದರ ಏರಿಕೆ

ಇತ್ತೀಚೆಗೆ ಕೆಎಂಎಫ್ ನಂದಿನಿ ಹಾಲಿನ ದರವನ್ನು ಹೆಚ್ಚಳ ಮಾಡಿತ್ತು. ನವೆಂಬರ್ 1ರಿಂದ ಜಾರಿಗೆ ಬಂದ ದರ ಪರಿಷ್ಕರಣೆಯಲ್ಲಿ ವಿವಿಧ ಹಾಲಿನ ಉತ್ಪನ್ನಗಳ ಬೆಲೆ ಪ್ರತಿ ಲೀಟರ್‌ಗೆ ₹8ರಿಂದ ₹12ರವರೆಗೆ ಏರಿಕೆ ಆಗಿತ್ತು. ಟೋನ್ಡ್ ಹಾಲಿನ ದರ ₹46ರಿಂದ ₹54ಕ್ಕೆ, ಹೋಮೊಜೀನೈಸ್ಡ್ ಟೋನ್ಡ್ ಹಾಲು ₹47ರಿಂದ ₹56ಕ್ಕೆ ಹೆಚ್ಚಳವಾಗಿತ್ತು. ಸ್ಪೆಷಲ್ ಟೋನ್ಡ್ ಮತ್ತು ಶುಭಂ ಹಾಲಿನ ದರಗಳಲ್ಲೂ ₹12 ಏರಿಕೆ ಮಾಡಲಾಗಿತ್ತು. ಹಾಲಿನ ದರ ಏರಿಕೆಯಿಂದ ಗ್ರಾಹಕರಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಇದೀಗ ಮೊಸರಿನ ದರ ಇಳಿಕೆ ಮಾಡಿರುವ ಕೆಎಂಎಫ್ ನಿರ್ಧಾರ ಗ್ರಾಹಕರಿಗೆ ಸ್ವಲ್ಪ ಮಟ್ಟಿನ ಸಮಾಧಾನ ನೀಡಿದೆ.

ರಾಜ್ಯದಲ್ಲಿ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ ಜನಸಾಮಾನ್ಯರ ಮನೆ ಬಜೆಟ್ ಮೇಲೆ ಪರಿಣಾಮ ಬೀರುತ್ತಿದೆ. ಅಡುಗೆ ಎಣ್ಣೆ, ಬೇಳೆ, ಅಕ್ಕಿ, ತರಕಾರಿ, ಹಣ್ಣುಗಳು ಸೇರಿದಂತೆ ಅಗತ್ಯ ಆಹಾರ ಪದಾರ್ಥಗಳ ಬೆಲೆಯಲ್ಲಿ ಆಗುವ ಏರಿಳಿತದಿಂದ ಖರ್ಚು ನಿಭಾಯಿಸೋದು ಕಷ್ಟವಾಗಿದೆ. ವಿಶೇಷವಾಗಿ ಟೊಮೆಟೊ, ಈರುಳ್ಳಿ, ಹಸಿರು ತರಕಾರಿ ಸೇರಿದಂತೆ ಮಾರುಕಟ್ಟೆಯಲ್ಲಿ ಬೆಲೆ ಬದಲಾಗುವ ವಸ್ತುಗಳನ್ನು ಖರೀದಿಸುವಾಗ ಗ್ರಾಹಕರು ಹೆಚ್ಚು ಹಣ ನೀಡುತ್ತಿದ್ದಾರೆ. ಜೊತೆಗೆ ಹೋಟೆಲ್ ಊಟ, ತಿಂಡಿ ಹಾಗೂ ದಿನ ನಿತ್ಯದ ಸೇವೆಗಳ ದರಗಳೂ ಹೆಚ್ಚಾದರೆ ಮಧ್ಯಮ ವರ್ಗದ ಜನರ ಮೇಲಿನ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಾಗಲಿದೆ.

ಇನ್ನು ಮನೆ ಬಾಡಿಗೆ, ಸಾರಿಗೆ ವೆಚ್ಚ, ವಿದ್ಯುತ್ ಬಿಲ್, ಮಕ್ಕಳ ಶಿಕ್ಷಣ ಶುಲ್ಕ ಹಾಗೂ ವೈದ್ಯಕೀಯ ಖರ್ಚುಗಳು ಕೂಡ ಕುಟುಂಬಗಳ ಮಾಸಿಕ ಬಜೆಟ್‌ನಲ್ಲಿ ಪ್ರಮುಖ ಪಾಲು ಪಡೆಯುತ್ತಿವೆ. ಆದಾಯದಲ್ಲಿ ಹೆಚ್ಚಿನ ಬದಲಾವಣೆ ಇಲ್ಲದಿದ್ದರೂ ಖರ್ಚುಗಳು ಹೆಚ್ಚುತ್ತಿರುವುದರಿಂದ ಉಳಿತಾಯ ಕಷ್ಟವಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಹೀಗೆ ಮುಂದುವರಿದರೆ ಜನರು ಅನಿವಾರ್ಯ ಖರ್ಚುಗಳಿಗೆ ಆದ್ಯತೆ ನೀಡಿ, ಇತರೆ ಖರೀದಿ ಮತ್ತು ಉಳಿತಾಯದ ಮೊತ್ತದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.

PREV
Read more Articles on
click me!

Recommended Stories

ಮತ್ತೆ ಒಂದಾಯ್ತಾ ಸಿದ್ದು ಅಹಿಂದ ಗ್ಯಾಂಗ್? ಮಾಜಿ ಸಿಎಂ ನಿವಾಸಕ್ಕೆ ಮಹದೇವಪ್ಪ ದಿಢೀರ್ ಭೇಟಿ!
ಬಿಸಿಯೂಟ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್‌ನ್ಯೂಸ್ , ದೂರಾಯ್ತು ಆತಂಕ