
ಬೆಂಗಳೂರು: ಬಿಸಿಯೂಟ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರ ಕೊನೆಗೂ ಸಿಹಿಸುದ್ದಿ ನೀಡಿದೆ. ಕ್ಲಸ್ಟರ್ ಕಿಚನ್ ಮಾಡಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ.
ಕ್ಲಸ್ಟರ್ ಕಿಚನ್ ಬಗ್ಗೆ ರಾಜ್ಯ ಸರ್ಕಾರ ಪ್ಲಾನ್ ಮಾಡಿತ್ತು. ಇದಕ್ಕೆ ಬಿಸಿಯೂಟ ತಯಾರಿಸುವ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಇವತ್ತಿನಿಂದ ಬೆಂಗಳೂರಿನ ಫ್ರಿಡಂ ಪಾರ್ಕ್ನಲ್ಲಿ ಪ್ರತಿಭಟನೆ ಕೂಡ ಶುರುವಾಗಿತ್ತು. ಖಾಸಗಿ ಸಂಘ ಸಂಸ್ಥೆಗಳು ಊಟದ ವ್ಯವಸ್ಥೆ ಮಾಡುವ ಜವಾಬ್ದಾರಿ ಕೊಡುವುದು ಸರಿಯಲ್ಲ ಎಂದಿದ್ದರು. ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುವ ಮೊದಲೇ ಸರ್ಕಾರ ಎಚ್ಚೆತ್ತುಕೊಂಡಿದೆ. ಇದೀಗ ಸರ್ಕಾರ ಬಿಸಿಯೂಟ ಯೋಜನೆಯನ್ನು ಯಥಾಸ್ಥಿಸಿ ನಡೆಸಲು ಮುಂದಾಗಿದೆ.
ಕ್ಲಸ್ಟರ್ ಕಿಚನ್ (Cluster Kitchen) ಎಂದರೆ ಹಲವು ಶಾಲೆಗಳಿಗೆ ಪ್ರತ್ಯೇಕವಾಗಿ ಆಯಾ ಶಾಲೆಗಳಲ್ಲೇ ಅಡುಗೆ ಮಾಡುವ ಬದಲು ಒಂದು ನಿರ್ದಿಷ್ಟ ಕೇಂದ್ರದಲ್ಲಿ (ಕೇಂದ್ರೀಕೃತ ಅಡುಗೆಮನೆ) ದೊಡ್ಡ ಪ್ರಮಾಣದಲ್ಲಿ ಬಿಸಿಯೂಟ ತಯಾರಿಸಿ ಸುತ್ತಮುತ್ತಲಿನ ಶಾಲೆಗಳಿಗೆ ಸರಬರಾಜು ಮಾಡುವ ವ್ಯವಸ್ಥೆ ಆಗಿದೆ. ಈ ವ್ಯವಸ್ಥೆ ಜಾರಿಗೆ ತರುವ ಪ್ರಸ್ತಾವನೆ ವಿರೋಧಿಸಿ ಕರ್ನಾಟಕದಾದ್ಯಂತ ಬಿಸಿಯೂಟ ತಯಾರಿಸುವ ಕಾರ್ಯಕರ್ತೆಯರು (ಅಕ್ಷರ ದಾಸೋಹ ನೌಕರರು) ತೀವ್ರ ಪ್ರತಿಭಟನೆ ನಡೆಸಿದ್ದರು.
ಕೇಂದ್ರೀಕೃತ ಅಡುಗೆಮನೆ ವ್ಯವಸ್ಥೆ ಜಾರಿಯಾದರೆ ಆಯಾ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಮಹಿಳಾ ಅಡುಗೆ ಸಿಬ್ಬಂದಿ ಹಾಗೂ ಸಹಾಯಕರು ತಮ್ಮ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದರು. ಇದೀಗ ಸಚಿವರ ಭರವಸೆ ಹಿನ್ನೆಲೆಯಲ್ಲಿ ಉದ್ಯೋಗದ ಭದ್ರತೆ ಸಿಕ್ಕಂತಾಗಿದೆ. ಕ್ಲಸ್ಟರ್ ಕಿಚನ್ ಹೆಸರಿನಲ್ಲಿ ಬಿಸಿಯೂಟ ತಯಾರಿಕೆ ಮತ್ತು ವಿತರಣೆಯ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗಳಿಗೆ ಅಥವಾ ಎನ್ಜಿಒ (NGO) ಗಳಿಗೆ ವಹಿಸುವ ಹುನ್ನಾರ ನಡೆದಿದೆ ಎಂದು ನೌಕರರ ಸಂಘಗಳು ಆರೋಪಿಸಿದ್ದವು.
ಶಾಲೆಗಳಲ್ಲೇ ಬಿಸಿಯಾಗಿ ಅಡುಗೆ ತಯಾರಿಸಿ ಬಡಿಸುವುದರಿಂದ ಮಕ್ಕಳಿಗೆ ರುಚಿಕರ ಮತ್ತು ಪೌಷ್ಟಿಕ ಆಹಾರ ಸಿಗುತ್ತದೆ. ಆದರೆ ದೂರದ ಕೇಂದ್ರಗಳಿಂದ ಪ್ಯಾಕೆಟ್ಗಳಲ್ಲಿ ಬರುವ ಆಹಾರ ತಣ್ಣಗಾಗಿರುತ್ತದೆ ಮತ್ತು ಗುಣಮಟ್ಟ ಕಳೆದುಕೊಳ್ಳುತ್ತದೆ ಎಂಬುದು ಕಾರ್ಯಕರ್ತರ ವಾದವಾಗಿತ್ತು. ಹಲವು ತಿಂಗಳುಗಳಿಂದ ಬಾಕಿ ಇರುವ ಗೌರವಧನವನ್ನು ತಕ್ಷಣ ಬಿಡುಗಡೆ ಮಾಡಬೇಕು. ತಿಂಗಳ ಗೌರವಧನವನ್ನು ಹೆಚ್ಚಿಸಬೇಕು (ಕನಿಷ್ಠ ವೇತನ ನೀಡಬೇಕು) ಹಾಗೂ ನಿವೃತ್ತಿ ಸೌಲಭ್ಯಗಳನ್ನು ಒದಗಿಸಬೇಕು ಎಂಬ ಬೇಡಿಕೆಗಳೂ ಈ ಹೋರಾಟದ ಭಾಗವಾಗಿವೆ. ಇದೀಗ ಮಧು ಬಂಗಾರಪ್ಪ ಅವರು ಸರ್ಕಾರದ ಮುಂದೆ ಕ್ಲಸ್ಟರ್ ಕಿಚನ್ ಸ್ಥಾಪಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.