ಬೆಂಗಳೂರು[ಡಿ.09]: ದೇಶದ ಸಣ್ಣ ನಗರಗಳಲ್ಲಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಮೆಟ್ರೋ ರೈಲಿಗಿಂತ ಅಗ್ಗವಾದ ‘ಮೆಟ್ರೋ ಲೈಟ್‌’ (ಲಘು ನಗರ ರೈಲು ವ್ಯವಸ್ಥೆ) ಯೋಜನೆಯನ್ನು ಬೆಂಗಳೂರು ನಗರದಲ್ಲೂ ಆರಂಭಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್‌ (ಬಿಎಂಆರ್‌ಸಿಎಲ್‌) ಚಿಂತನೆ ನಡೆದಿದೆ.

ಕೇಂದ್ರ ಸರ್ಕಾರದ ಹೊಸ ಮೆಟ್ರೋ ನಿಯಮಗಳಲ್ಲಿ, ಕೇವಲ ಒಂದೇ ಗಂಟೆಯಲ್ಲಿ 20 ಸಾವಿರಕ್ಕಿಂತ ಹೆಚ್ಚು ಜನರು ಪ್ರಯಾಣಿಸುವ ಮಾರ್ಗಗಳಲ್ಲಿ (ಕಾರಿಡಾರ್‌) ಸಂಪೂರ್ಣ ಮೆಟ್ರೋ ರೈಲು ಯೋಜನೆ ರೂಪಿಸಬೇಕು. 15ರಿಂದ 20 ಸಾವಿರ ಜನರು ಪ್ರಯಾಣಿಸುವ ಮಾರ್ಗಕ್ಕೆ ಮೆಟ್ರೋಲೈಟ್‌ ರೈಲು ಯೋಜನೆ ಸಾಕು ಎಂಬ ಸಲಹೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ, ಬಿಎಂಆರ್‌ಸಿಎಲ್‌ ನಗರದ ಹೊರವಲಯದಲ್ಲಿ ಬರುವ ನಮ್ಮ ಮೆಟ್ರೋ-3ನೇ ಹಂತದ ಪ್ರಮುಖ ಮೂರು ಮಾರ್ಗದಲ್ಲಿ ಮೆಟ್ರೋಲೈಟ್‌ ರೈಲು ಯೋಜನೆಗೆ ಚಿಂತನೆ ನಡೆಸಿದೆ.

ಈ ಸಂಬಂಧ, ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕರ್ನಾಟಕ) ಮೂಲಕ ಸಿದ್ಧಪಡಿಸಲಾಗಿರುವ ಸಮಗ್ರ ಸಂಚಾರ ಯೋಜನೆ (ಸಿಎಂಪಿ) ಪ್ರಕಾರ, ಮಾಗಡಿ ರಸ್ತೆ ಟೋಲ್‌ಗೇಟ್‌ನಿಂದ ಕಡಬಗೆರೆವರೆಗೆ (13 ಕಿ.ಮೀ), ವೈಟ್‌ಫೀಲ್ಡ್‌ನಿಂದ- ದೊಮ್ಮಲೂರು ವರೆಗೆ (16 ಕಿ.ಮೀ) ಮತ್ತು ಹೊಸಕೋಟೆ ಹತ್ತಿರದ ಕಟಮನಲ್ಲೂರ್‌ ಗೇಟ್‌ನಿಂದ ಸರ್ಜಾಪುರ ರಸ್ತೆ - ಹೆಬ್ಬಾಳ (25 ಕಿ.ಮೀ)ವರೆಗೆ ಮೆಟ್ರೋ ಲೈಟ್‌ ರೈಲು ಆರಂಭಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ.

ಆದರೆ, ಮೂರನೇ ಹಂತದಡಿ ಈ ಮೊದಲು ಗುರುತಿಸಲಾಗಿದ್ದ ಗೊಟ್ಟಿಗೆರೆಯಿಂದ ಬಸವಪುರ, ನಾಗವಾರದಿಂದ ಏರೋಸ್ಪೇಸ್‌ ಪಾರ್ಕ್ವರೆಗೆ, ಕೋಗಿಲು ಕ್ರಾಸ್‌ನಿಂದ ರಾಜಾನುಕುಂಟೆವರೆಗೆ, ಇಬ್ಬಲೂರಿನಿಂದ ಕಾರ್ಮೆಲ್‌ ರಾಂವರೆಗೆ (ಸರ್ಜಾಪುರ ರಸ್ತೆ) ಮತ್ತು ಬೊಮ್ಮಸಂದ್ರದಿಂದ ಅತ್ತಿಬೆಲೆವರೆಗಿನ ಮಾರ್ಗಗಳ ಬಗ್ಗೆ ಸಮಗ್ರ ಸಂಚಾರ ಯೋಜನೆಯಲ್ಲಿ ಯಾವುದೇ ಪ್ರಸ್ತಾಪವಿಲ್ಲ. ಉಳಿದಂತೆ ಇದೇ ಹಂತದ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಹೊರ ವರ್ತುಲ ರಸ್ತೆಯ 58 ಕಿ.ಮೀ. ಉದ್ದದ ಮಾರ್ಗ ಮತ್ತು ಜೆಪಿ ನಗರದಿಂದ ಹೆಬ್ಬಾಳವರೆಗಿನ 30 ಕಿ.ಮೀ. ಮಾರ್ಗದಲ್ಲಿ ಮೆಟ್ರೋ ರೈಲು ಯೋಜನೆಯೇ ಇರಲಿದೆ.

ಸದ್ಯ ಎರಡನೇ ಹಂತ ಪೂರ್ಣಗೊಂಡ ಬಳಿಕ 3ನೇ ಹಂತದಲ್ಲಿ ಎಲ್ಲೆಲ್ಲಿ ಮೆಟ್ರೋಲೈಟ್‌ ರೈಲು ಜಾರಿಗೆ ತರಬೇಕು ಎಂಬ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬಿಎಂಆರ್‌ಸಿಎಲ್‌ ಉನ್ನತ ಅಧಿಕಾರಿಯೊಬ್ಬರು ಹೇಳಿದರು.

ನೈಸ್‌ ರಸ್ತೆಗೂ ಮೆಟ್ರೋಲೈಟ್‌?

ನಗರದ ಉದ್ದೇಶಿತ ಪೆರಿಫೆರಲ್‌ ರಿಂಗ್‌ ರಸ್ತೆ ಮತ್ತು ಹಾಲಿ ಇರುವ ನೈಸ್‌ ರಸ್ತೆಯಲ್ಲೂ ಪ್ರಯಾಣಿಕರ ಅನುಕೂಲಕ್ಕೆ ತ್ವರಿತ ಬಸ್‌ ಸಾರಿಗೆ ವ್ಯವಸ್ಥೆ (ಬಿಆರ್‌ಟಿಎಸ್‌) ಅಥವಾ ಮೆಟ್ರೋಲೈಟ್‌ ರೈಲು ಯೋಜನೆ ಆರಂಭಿಸುವಂತೆ ಸಿಎಂಪಿಯಲ್ಲಿ ಸೂಚಿಸಲಾಗಿದೆ. ಪರಿಶೀಲಿಸಿ ಎರಡರಲ್ಲಿ ಒಂದು ಸಾರಿಗೆಯನ್ನು ಆಯ್ಕೆ ಮಾಡಬೇಕಾಗುತ್ತದೆ.

ಮೆಟ್ರೋ ರೈಲು ಯೋಜನೆಗೆ ತಗಲುವ ವೆಚ್ಚಕ್ಕೆ ಹೋಲಿಸಿದರೆ ಮೆಟ್ರೋಲೈಟ್‌ ರೈಲು ಯೋಜನೆಯ ವೆಚ್ಚ ಶೇ.50ರಷ್ಟುಕಡಿಮೆಯಾಗಲಿದೆ. ಪ್ರತಿ ಕಿ.ಮೀ. ಮೆಟ್ರೋ ರೈಲು ಮಾರ್ಗ ನಿರ್ಮಾಣಕ್ಕೆ 200 ಕೋಟಿ ರು. ವೆಚ್ಚವಾದರೆ, ಮೆಟ್ರೋ ಲೈಟ್‌ ರೈಲು ಮಾರ್ಗಕ್ಕೆ 60ರಿಂದ 100 ಕೋಟಿ ರು. ವೆಚ್ಚ ತಗುಲಲಿದೆ. ಆದರೆ, ಪ್ರತಿ ಮೆಟ್ರೋ ರೈಲು 1034 ಪ್ರಯಾಣಿಕರನ್ನು ಮೆಟ್ರೋ ಲೈಟ್‌ ರೈಲು ಗರಿಷ್ಠ 300 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿರುತ್ತದೆ.

ಏನಿದು ಮೆಟ್ರೋಲೈಟ್‌ ರೈಲು?

‘ಮೆಟ್ರೋಲೈಟ್‌’ ರೈಲು ಪ್ರಸ್ತುತ ಇರುವ ಮೆಟ್ರೋ ರೈಲುಗಳ ಸಂಚಾರ ವ್ಯವಸ್ಥೆಗಿಂತ ಕಡಿಮೆ ವೆಚ್ಚದಲ್ಲಿ ಇದನ್ನು ಅಭಿವೃದ್ಧಿ ಪಡಿಸಬಹುದಾಗಿದೆ. ಸುಮಾರು 300 ಪ್ರಯಾಣಿಕರು ಇವುಗಳಲ್ಲಿ ಪ್ರಯಾಣಿಸಬಹುದು. ಗಂಟೆಗೆ 25 ಕಿ.ಮೀ ವೇಗದಲ್ಲಿ ಸಂಚರಿಸುವ ಮೆಟ್ರೋಲೈಟ್‌ ರೈಲುಗಳಿಗೆ ರಸ್ತೆಯ ಪಕ್ಕದಲ್ಲೇ ಮಾರ್ಗ ನಿರ್ಮಿಸಬಹುದಾಗಿದೆ. ಅಗತ್ಯ ಇರುವಲ್ಲಿ ಎತ್ತರಿಸಿದ ಮಾರ್ಗಗಳನ್ನು ನಿರ್ಮಾಣ ಮಾಡಲಾಗುತ್ತದೆ. ಸುರಕ್ಷತೆಗಾಗಿ ರೈಲು ಸಂಚಾರ ಮಾರ್ಗದ ಎರಡೂ ಬದಿಗೆ ತಂತಿಬೇಲಿಗಳನ್ನು ಹಾಕಬೇಕು ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.
ಮಹಿಳೆಯರಿಗೆ ಶುಭ ಸುದ್ದಿ ನೀಡಿದ ನಮ್ಮ ಮೆಟ್ರೋ..'ಪೆಪ್ಪರ್ ಸ್ಪ್ರೇ' ಕೊಂಡೊಯ್ಯಲು ಅವಕಾಶ...

ನೂತನ ಮೆಟ್ರೋ ನಿಯಮಗಳಲ್ಲಿ ಹದಿನೈದರಿಂದ ಇಪ್ಪತ್ತು ಸಾವಿರ ಪ್ರಯಾಣಿಕರು ಸಂಚರಿಸುವ ಮಾರ್ಗದಲ್ಲಿ ಮೆಟ್ರೋ ಲೈಟ್‌ ರೈಲು ಯೋಜನೆಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ. ಆ ಹಿನ್ನೆಲೆಯಲ್ಲಿ ನಗರದ ವೈಟ್‌ಫೀಲ್ಡ್‌ನಂತಹ ಹೊರವಲಯದ ಮಾರ್ಗಗಳಲ್ಲಿ ಮೆಟ್ರೋಲೈಟ್‌ ರೈಲು ಯೋಜನೆ ಕೈಗೊಳ್ಳುವ ಚಿಂತನೆ ಇದೆ. ಪ್ರಸ್ತುತ ನಡೆಯುತ್ತಿರುವ ಮೆಟ್ರೋ ಯೋಜನೆ ಪೂರ್ಣಗೊಂಡು ಮುಂದಿನ ಹಂತದ ಯೋಜನೆ ಕೈಗೊಳ್ಳುವ ವೇಳೆಗೆ ಈ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.

- ಅಜಯ್‌ ಸೇಠ್‌, ವ್ಯವಸ್ಥಾಪಕ ನಿರ್ದೇಶಕ, ಬಿಎಂಆರ್‌ಸಿಎಲ್‌