
ಗದಗ(ಡಿ.18): ನಮ್ಮಲ್ಲಿನ ಕೆಲ ಕಾರ್ಯಕರ್ತರಿಗೂ ಹುಚ್ಚು ಹಿಡಿದಿದೆ. ಕೆಲವರಿಗೆ ನಿಗಮ ಮಂಡಳಿ ನೀಡುವಂತೆ ಪತ್ರ ಹಿಡಿದುಕೊಂಡು ಬರುತ್ತಿದ್ದಾರೆ. ಆದರೆ ನಾವು ಅವರ ಪಕ್ಷ ಸಂಘಟನೆ, ಪಕ್ಷಕ್ಕಾಗಿ ಅವರು ಮಾಡಿದ ಕೆಲಸ ಕಾರ್ಯವನ್ನು ನೋಡಿ ಸ್ಥಾನ ಮಾನ ನೀಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ್ ಹೇಳಿದ್ದಾರೆ.
ಗದಗ ಜಿಲ್ಲಾ ಬಿಜೆಪಿ ಕಾರ್ಯಾಲಯ ಭವನ ಶಿಲಾನ್ಯಾಸದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಕೂಡಾ ಬಿಜೆಪಿ ಕಾರ್ಯಾಲಯದಲ್ಲಿ ವಾಸ್ತವ್ಯ ಮಾಡಿದ್ದರು. ಅಲ್ಲಿಂದಲೇ ದೊಡ್ಡ ಮಟ್ಟದ ಹುದ್ದೆಯನ್ನು ಏರಿದ್ದಾರೆ. ರಾಜ್ಯದ ಎಲ್ಲಾ ಮಂಡಳದಲ್ಲಿ ಕಾರ್ಯಾಲಯ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಅಲ್ಲಿಂದಲೇ ಶಾಸಕರು ನಮ್ಮ ಕಾರ್ಯಚಟುವಟಿಕೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
'ಸಿದ್ದರಾಮಯ್ಯ ಹಿಂದು ವಿರೋಧಿ, ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ'
ಕಾಂಗ್ರೆಸ್‌ನವರು ಗಾಂಧಿ ಹೆಸರಿನಲ್ಲಿ ಜನರಿಗೆ ಟೋಪಿ ಹಾಕಿದ್ರು, ಲೋಕಸಭೆಯಲ್ಲಿ ಕಾಂಗ್ರೆಸ್ ಅತಿ ಕಡಿಮೆ ಸಂಸದರನ್ನು ಹೊಂದಿದ್ದು, ಬದುಕಲು ನಾಲಾಯಕ್ ಆಗಿದೆ. ಕಾಂಗ್ರೆಸ್ ಅಧಿಕಾರ ಇದ್ದಾಗ ಭ್ರಷ್ಟಾಚಾರ ಅಧಿಕಾರ ಹೋದಾಗ ಬೆಂಕಿ ಹಚ್ಚುವ ಕೆಲಸ ಮಾಡಿದ್ದೇ ಆ ಪಕ್ಷದ ಸಾಧನೆಯಾಗಿದೆ ಎಂದು ಕೈ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.
ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಭ್ರಷ್ಟಾಚಾರ ಕೇಸ್‌ನಲ್ಲಿದ್ದಾರೆ. ಇನ್ನೋರ್ವ ಉತ್ತರ ಕರ್ನಾಟಕದ ನಾಯಕ ಕೊಲೆ ಕೇಸ್‌ನಲ್ಲಿ ಜೈಲಿನಲ್ಲಿದ್ದಾರೆ. ಗದಗ ಜಿಲ್ಲೆಯಲ್ಲಿ ಗೂಂಡಾಗಿರಿ ರಾಜಕಾರಣ ಮುಗಿದು ಹೋಗಿದೆ. ಜಿಲ್ಲೆಯ ಬಿಜೆಪಿ ಕಾರ್ಯಕರ್ತರನ್ನು ಮುಟ್ಟಿ ನೋಡಿ ಎಂದು ಕಾಂಗ್ರೆಸ್ ನಾಯಕರಿಗೆ ಬಹಿರಂಗ ಸವಾಲ್ ಹಾಕಿದ್ದಾರೆ.