'ಸಿದ್ದರಾಮಯ್ಯ ಹಿಂದು ವಿರೋಧಿ, ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ'
ಗೋ ಹತ್ಯೆ ಬಿಲ್ ಪಾಸ್ ಆಗುತ್ತದೆಂದು ಕಾಂಗ್ರೆಸ್ ರಾದ್ಧಾಂತ| ಕಾಂಗ್ರೆಸ್ ನಡೆಗೆ ಸಚಿವ ಸಿ.ಸಿ. ಪಾಟೀಲ ಆಕ್ರೋಶ| ಧೈರ್ಯವಿದ್ದರೆ ಅವಿಶ್ವಾಸ ಮಂಡನೆಗೆ ಅವಕಾಶ ನೀಡಬೇಕಿತ್ತು| ಮೇಲ್ಮನೆ ಉಪ ಸಭಾಪತಿ ಪೀಠಕ್ಕಾಗಿ ನಡೆದಿರುವ ಘಟನೆ ನೋವಿನ ಸಂಗತಿ: ಸಿ ಸಿ ಪಾಟೀಲ|
ಗದಗ(ಡಿ.16): ಮೇಲ್ಮನೆಯಲ್ಲಿ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ಬಿಲ್ ಪಾಸ್ ಮಾಡುತ್ತದೆ ಎಂದು ಕಾಂಗ್ರೆಸ್‌ನವರು ಗಲಾಟೆ ಮಾಡಿ ರಾದ್ಧಾಂತ ಮಾಡಿದ್ದಾರೆಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ. ಪಾಟೀಲ್ ಆರೋಪಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುತ್ತೇವೆ ಎಂದು ಹೇಳಿದ್ದಾರೆ. ಇದರಿಂದ ಅವರು ಹಿಂದು ವಿರೋಧಿಯಾಗಿದ್ದು, ನಮ್ಮ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮೇಲ್ಮನೆ ಉಪ ಸಭಾಪತಿ ಪೀಠಕ್ಕಾಗಿ ನಡೆದಿರುವ ಘಟನೆ ನೋವಿನ ಸಂಗತಿ ಎಂದಿರುವ ಸಚಿವರು, ಅವಿಶ್ವಾಸ ನಿರ್ಣಯ ಮಾಡಿದ ವೇಳೆ ಕಾಂಗ್ರೆಸ್‌ನವರು ಖುರ್ಚಿ ಮೇಲೆ ಕೂಡಬಾರದು. ಆದರೆ, ಕುಳಿತುಕೊಂಡು ಗಲಾಟೆ ಮಾಡುವ ಮೂಲಕ ತಮ್ಮ ಸಂಸ್ಕೃತಿ ತೋರಿಸಿದ್ದಾರೆ. ಈ ರೀತಿ ಗಲಾಟೆ ಮಾಡುವುದು ಸಿದ್ದರಾಮಯ್ಯನವರ ಕಾಲದಿಂದ ಬಂದ ಪರಂಪರೆಯಾಗಿದ್ದು, ಈ ಹಿಂದೆ ಶಂಕರ ಬಿದರಿ ಅವರನ್ನು ಸದನದಿಂದ ಹೊರಹಾಕಿ ಹೈಡ್ರಾಮ ಮಾಡಿದ್ದರು ಎಂದು ಕಿಡಿಕಾರಿದರು. ಧೈರ್ಯವಿದ್ದರೆ ಅವಿಶ್ವಾಸ ಮಂಡನೆಗೆ ಅವಕಾಶ ನೀಡಿ ಮತ ಹಾಕಬೇಕಿತ್ತು ಎಂದು ಸವಾಲು ಹಾಕಿದರು.
ಬೀದಿಗಿಳಿದ ನಲಪಾಡ್ ಹ್ಯಾರಿಸ್ : ಪ್ರತಿಭಟನೆಯಲ್ಲಿ ಹ್ಯಾರಿಸ್ ಪುತ್ರ
ಬಹುಮತವಿಲ್ಲದೆ ಸ್ಪೀಕರ್ ಸ್ಥಾನ ನೀಡಬೇಕಿತ್ತೆ ಎಂದು ಪ್ರಶ್ನಿಸಿದ ಅವರು, ನಮಗೆ ಬಹುಮತ ಸಿಕ್ಕಿದ್ದರೆ 10 ನಿಮಿಷದಲ್ಲಿ ಬಿಲ್ ಪಾಸ್ ಮಾಡಲಾಗಿತ್ತು ಎಂದು ಹೇಳಿದರು. ಡಿ. 17ರಂದು ನಗರದಲ್ಲಿ ಜಿಲ್ಲಾ ಬಿಜೆಪಿ ನೂತನ ಕಟ್ಟದ ಭೂಮಿಪೂಜಾ ಕಾರ್ಯಕ್ರಮ ಜರುಗಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ನೆರವೇರಿಸಲಾಗುವುದು ಎಂದು ತಿಳಿಸಿದ ಸಚಿವರು, ಈ ಹಿಂದೆ ಜಿಲ್ಲಾ ಬಿಜೆಪಿ ಅಧ್ಯಕ್ಷರಿದ್ದ ವೇಳೆ ಜಿಲ್ಲಾಧಿಕಾರಿ ಕಚೇರಿ ಎದುರಿನ ಹೆದ್ದಾರಿ ಪಕ್ಕದಲ್ಲಿಯೇ 12 ಸಾವಿರ ಸ್ಪೇರ್ ಫೀಟ್ ಜಾಗೆ ಖರೀದಿಸಲಾಗಿತ್ತು. ಈಗ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ವೇಳೆಯಲ್ಲಿ ಜಿಲ್ಲಾ ಬಿಜೆಪಿ ಭವನ ನಿರ್ಮಾಣಕ್ಕೆ ಚಾಲನೆ ದೊರೆಯುತ್ತಿರುವುದು ಸಂತಸದ ಸಂಗತಿ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಮೋಹನ ಮಾಳಶೆಟ್ಟಿ ಮಾತನಾಡಿ, ರಾಜ್ಯದ 14 ಜಿಲ್ಲೆಗಳಲ್ಲಿ ಜಿಲ್ಲಾ ಬಿಜೆಪಿ ಭವನ ನಿರ್ಮಿಸುತ್ತಿದ್ದು ಅಂದಾಜು ವೆಚ್ಚ, ನೀಲ ನಕ್ಷೆ ಎಲ್ಲವನ್ನು ಪಕ್ಷದ ವರಿಷ್ಠರೆ ನಿರ್ಧರಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯಕಾರಣಿ ಮಂಡಳಿ ಸದಸ್ಯ ರಾಜು ಕುರುಡಗಿ, ಎಂ.ಎಸ್. ಕರಿಗೌಡ್ರ, ಶ್ರೀಪತಿ ಉಡುಪಿ ಮುಂತಾದವರು ಹಾಜರಿದ್ದರು.