ಮುರುಡೇಶ್ವರದಲ್ಲಿ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ, ಕಾಂಗ್ರೆಸ್-ಜೆಡಿಎಸ್ ವಿರುದ್ಧ ಕಟೀಲ್ ವಾಗ್ದಾಳಿ

By Suvarna News  |  First Published Dec 20, 2022, 7:51 PM IST

ರಾಜ್ಯ ರಾಜಕಾರಣದಲ್ಲಿ ಬಿಜೆಪಿಯ ನಡೆ ಇದೀಗ ಹೊಸ ಸಂಚಲನ ಮೂಡಿಸಿದೆ. ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರದ ಆರ್‌ಎನ್‌ಎಸ್ ಸಭಾಭವನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಪಕ್ಷದ ರಾಜ್ಯ ಪದಾಧಿಕಾರಿಗಳ‌ ಸಭೆ ನಡೆದಿದ್ದು, ಮುಂದಿನ ಚುನಾವಣೆ ಗೆಲ್ಲಲು ತಂತ್ರಗಾರಿಕೆ ರೂಪಿಸಲಾಗಿದೆ. 


ವರದಿ: ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣನ್ಯೂಸ್

ಕಾರವಾರ (ಡಿ.20): ರಾಜ್ಯ ರಾಜಕಾರಣದಲ್ಲಿ ಬಿಜೆಪಿಯ ನಡೆ ಇದೀಗ ಹೊಸ ಸಂಚಲನ ಮೂಡಿಸಿದೆ. ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರದ ಆರ್‌ಎನ್‌ಎಸ್ ಸಭಾಭವನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಪಕ್ಷದ ರಾಜ್ಯ ಪದಾಧಿಕಾರಿಗಳ‌ ಸಭೆ ನಡೆದಿದ್ದು, ಮುಂದಿನ ಚುನಾವಣೆ ಗೆಲ್ಲಲು ತಂತ್ರಗಾರಿಕೆ ರೂಪಿಸಲಾಗಿದೆ. ಎರಡು ದಿನಗಳ ಕಾಲ ನಡೆಯುವ ಸಭೆಗೆ ಚಾಲನೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಚಿವ ಕೋಟ ಶ್ರೀನಿವಾಸ ಪೂಜಾರಿಯಂತೂ ಕಾಂಗ್ರೆಸ್ ಪಕ್ಷ, ಸಿದ್ಧರಾಮಯ್ಯ, ಡಿಕೆಶಿ ಹಾಗೂ ಕುಮಾರಸ್ವಾಮಿ ವಿರುದ್ಧ ಕಿಡಿ ಕಾರಿದ್ದಾರೆ. 

Tap to resize

Latest Videos

ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರದ ಆರ್‌ಎನ್‌ಎಸ್ ಸಭಾಭವನದಲ್ಲಿ ಎರಡು ದಿನಗಳ ಕಾಲ ನಡೆಯುವ ಬಿಜೆಪಿ ರಾಜ್ಯ ಪದಾಧಿಕಾರಿಗಳ‌ ಸಭೆಗೆ ಚಾಲನೆ ದೊರಕಿದೆ. ಕಲಶದಲ್ಲಿ ಅಡಿಕೆ ಹಿಂಗಾರವನ್ನು ಅರಳಿಸುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದ್ದು, ಶಾಸಕರಾದ ದಿನಕರ ಶೆಟ್ಟಿ, ರೂಪಾಲಿ ನಾಯ್ಕ್, ಸುನೀಲ್ ನಾಯ್ಕ್, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯ್ಕ್ ಉಪಸ್ಥಿತರಿದ್ದರು.‌ 

ಈ ಕಾರ್ಯಕ್ರಮದಲ್ಲಿ ಸುಮಾರು 150 ಬಿಜೆಪಿ ಪದಾಧಿಕಾರಿಗಳು ಭಾಗವಹಿಸಿದ್ದು, ಪಕ್ಷ ಸಂಘಟನೆ, ಮುಂದಿನ ಚುನಾವಣೆಯಲ್ಲಿ ಗೆಲುವು ಸಂಬಂಧಿಸಿ ನಾಯಕರ ಜತೆ ಚರ್ಚೆ ಹಾಗೂ ತಂತ್ರಗಾರಿಕೆ ರೂಪಿಸಲಾಗಿದೆ. ಸಭೆಯ ಉದ್ಘಾಟನೆಯ ಬಳಿಕ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಯಾವುದೊ ಕುಟುಂಬವೇ ಸ್ವಾತಂತ್ರ್ಯ ತಂದುಕೊಟ್ಟಿತು ಅನ್ನೋ ಕಾಂಗ್ರೆಸಿಗರು ನೈಜ ದೇಶಪ್ರೇಮಿಗಳನ್ನು ಮರೆ ಮಾಚುವ ಕೆಲಸ ಮಾಡಿದ್ದಾರೆ. ಅಂಬೇಡ್ಕರ್ ಅಂತ್ಯ ಸಂಸ್ಕಾರದ ವೇಳೆಯಲ್ಲೂ ಚಕಾರವೆತ್ತಿದೆ ಕಾಂಗ್ರೆಸ್ ಅಂಬೇಡ್ಕರ್ ಹೆಸರಿನಲ್ಲಿ ಮತ‌ ಪಡೆದು ಅವರಿಗೆ ಗೌರವ ಸಲ್ಲಿಸಲು ವಿಫಲವಾಯಿತು. ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ಬದಲಾಗಿದ್ದು, ಇಂದು ನಕಲಿ ಕಾಂಗ್ರೆಸ್ ದೇಶದಲ್ಲಿದೆ.‌ ಮಹಾತ್ಮಾಗಾಂಧಿ ಕೂಡಾ ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ವಿಸರ್ಜನೆ ಮಾಡಬೇಕೆಂದಿದ್ದರು.‌ ಮೋದಿ ಅಧಿಕಾರಕ್ಕೆ ಬಂದ ಬಳಿಕವೇ ಗಾಂಧೀಜಿಯ ರಾಮರಾಜ್ಯದ ಪರಿಕಲ್ಪನೆ ಸಾಕಾರಗೊಳ್ಳುತ್ತಿದೆ. ಕಾಂಗ್ರೆಸ್ ಆಳ್ವಿಕೆಯಲ್ಲಿ ಕೇವಲ ಬಾಂಬಿನ, ಭಯೋತ್ಪಾದನೆಯ ಕಾರ್ಖಾನೆ ಪ್ರಾರಂಭವಾಯ್ತು. ಟಿಪ್ಪು ಜಯಂತಿ ಮಾಡುವ ಮೂಲಕ ಅಲ್ಪಸಂಖ್ಯಾತರ ತುಷ್ಠೀಕರಣ ನಡೆಸ್ತಿತ್ತು.

ಒಡೆದಾಳುವ ಕೆಲಸವನ್ನು ಕಾಂಗ್ರೆಸ್ ನಡೆಸಿದ್ದರಿಂದಲೇ ಭಯೋತ್ಪಾದನೆ, ಉಗ್ರವಾದ ಚಟುವಟಿಕೆ ಹೆಚ್ಚಾಯ್ತು. ಇದನ್ನು ನಿಯಂತ್ರಣ ಮಾಡಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ಭಯೋತ್ಪಾದನೆ ನಿಯಂತ್ರಣಕ್ಕೆ ಬಂದದ್ದೇ ಮೋದಿ ಅಧಿಕಾರಕ್ಕೆ ಬಂದ ಬಳಿಕ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಸಿದ್ಧರಾಮಯ್ಯರದ್ದು ಹತ್ಯೆ, ಭಯೋತ್ಪಾದನೆ, ಸ್ಯಾಂಡ್ ಮಾಫಿಯಾ, ಲೂಟಿ ಮಾಡುವವರ, ಲ್ಯಾಂಡ್ ಮಾಫಿಯಾ, ಡ್ರಗ್ ಮಾಫಿಯಾವನ್ನು ಬೆಂಬಲ ನೀಡುವ ಸರಕಾರವಾಗಿತ್ತು‌.‌ ಡಿಕೆಶಿಯಂತೂ ಗೂಂಡಾಗಿರಿಯಿಂದ ರಾಜಕಾರಣದಿಂದ ಪ್ರಾರಂಭಿಸಿ ರೌಡಿಸಂ ರಾಜಕಾರಣ ಮಾಡ್ತಿದ್ದಾರೆ.‌ ಕುಕ್ಕರ್ ಮೇಲೆ ಡಿಕೆಶಿಗೆ ಬಹಳ ಪ್ರೀತಿ.‌ ಬೆಳಗಾಂ ಕುಕ್ಕರ್, ಮಂಗಳೂರು ಕುಕ್ಕರ್ ಒಂದೇ ಅಂದುಕೊಂಡಿದ್ದಾರೆ. ಬೆಳಗಾಂ ಕುಕ್ಕರ್ ಒಡೆದರೆ ಅವರ ಫ್ಯಾಮಿಲಿ ಒಡೆಯುತ್ತದೆ, ಆದರೆ, ಮಂಗಳೂರು ಕುಕ್ಕರ್ ಒಡೆದರೆ ಜನರಿಗೆ ಹಾನಿಯಾಗುತ್ತದೆ ಎಂದು ಅವರಿಗೆ ಗೊತ್ತಿಲ್ಲ. ಭಯೋತ್ಪಾದಕರಿಗೆ ಬೆಂಬಲ ನೀಡುವ ಅವರೂ ಒಬ್ಬ ಭಯೋತ್ಪಾದಕರಿಗೆ ಸರಿ. ಕಾಂಗ್ರೆಸ್ ಕೂಡಾ ಭಯೋತ್ಪಾದಕ ಪಾರ್ಟಿ. ಕಾಂಗ್ರೆಸಿಗರು ಕಳಂಕಿತರು, ಆದರೆ, ಬಿಜೆಪಿ ಪ್ರಮುಖರು, ಮೋದಿ ಕಳಂಕ ರಹಿತ‌ ಆಡಳಿತ ನೀಡ್ತಿದ್ದಾರೆ.

‌‌ಸಿಬಿಐ ರೈಡ್ ಮಾಡಿದ್ರೆ ಇವರಿಗೆ ರಾಜಕೀಯ ಕಾಣುತ್ತದೆ. ಅವರು ರಾಹುಲ್ ಗಾಂಧಿ, ಸೋನಿಯಾ  ಅವರ ವಿಚಾರ ಬಂದ್ರೆ ಪ್ರತಿಭಟನೆ ಮಾಡ್ತಾರೆ. ಮೋದಿಯವರನ್ನು 9 ಗಂಟೆಗಳ ಕಾಲ ವಿಚಾರಣೆ ಮಾಡಿದ್ರೂ ನಾವು ಪ್ರತಿಭಟಿಸಿಲ್ಲ ಕಾನೂನು ಮಾರ್ಗವಾಗಿಯೇ ಹೋಗಿ ಗೆದ್ದಿದ್ದೇವೆ. ರೌಡಿಸಂ ರಾಜಕಾರಣದಿಂದ ಭಯೋತ್ಪಾದನಾ ರಾಜಕಾರಣಕ್ಕೆ ಡಿಕೆಶಿ ಇಳಿದಿದ್ದಾರೆ. ಇಂದು ಕಾಂಗ್ರೆಸ್ ಮುಕ್ತ ಭಾರತವಾಗುತ್ತಿದೆ. ಇವರ ನೀಚ ರಾಜಕಾರಣ, ತುಷ್ಠೀಕರಣ ರಾಜನೀತಿಯಿಂದಾಗಿ ಕಾಂಗ್ರೆಸ್ ಮೂಲೆ ಗುಂಪಾಗ್ತಿದೆ. ಮುಂದಿನ ಚುನಾವಣೆಯಲ್ಲೂ ಕುಟುಂಬ, ಪರಿವಾರ ರಾಜಕಾರಣ ಹೋಗಿ ಅಭಿವೃದ್ಧಿ ರಾಜಕಾರಣ ಬರ್ತದೆ. ಖರ್ಗೆಯನ್ನು ಮುಗಿಸಿ, ಪರಮೇಶ್ವರ ಅವರನ್ನು ಸೋಲಿಸಿದ್ದು ಸಿದ್ಧರಾಮಯ್ಯ.‌
 
ಅಂಬೇಡ್ಕರ್ ಫೋಟೋ ಕೂಡಾ ಇಡಲು ಬಿಡದ ಸಿದ್ಧರಾಮಯ್ಯ ಅಹಿಂದ ಹೆಸರಿನಲ್ಲೇ ಅಧಿಕಾರ ಪಡೆದುಕೊಂಡಿದ್ರು. ಡಿಕೆಶಿ ಕೊಟ್ಟ ಸೀಟ್ ಸಿದ್ಧರಾಮಯ್ಯ, ಸಿದ್ಧರಾಮಯ್ಯ ಕೊಟ್ಟ ಸೀಟ್ ಡಿಕೆಶಿ ಮುಗಿಸ್ತಾರೆ.‌ ಇವರಿಬ್ಬರನ್ನೂ ಕೂಡಾ ಮೇಲಿಂದ ಖರ್ಗೆ ಮುಗಿಸ್ತಾರೆ. ಕುಮಾರಣ್ಣ ನಮ್ಮ‌ ಮುಖ್ಯಮಂತ್ರಿ ಮುಸಲ್ಮಾನ ಎಂದು ಹೇಳ್ತಾರೆ‌.‌ ಮತ್ತೊಂದು ಕಡೆ ಮಹಿಳಾ‌ ಮುಖ್ಯಮಂತ್ರಿ, ಇನ್ನೊಂದೆಡೆ ದಲಿತ ಮುಖ್ಯಮಂತ್ರಿ ಅಂತಾರೆ. ಕುಮಾರಸ್ವಾಮಿ ಅಭ್ಯರ್ಥಿಯ ಹೆಸರು ಹೇಳಿದರೆ ಅವರ ಹೆಂಡತಿ ಬಿಟ್ಟು ಹೋಗ್ತಾರೆ. ಕುಮಾರಣ್ಣ ಹಾಗೂ ರೇವಣ್ಣ ನಡುವೆ ಜಗಳವಾಗಿದ್ದು, ಹಾಸನದಲ್ಲಿ ಅವರ ಪಕ್ಷದಿಂದ ಚುನಾವಣೆಗೆ‌‌ ಇಳಿಯಲು ಅಭ್ಯರ್ಥಿಗಳಿಲ್ಲ‌ ಎಂದು‌ ವ್ಯಂಗ್ಯವಾಡಿದರು.

ಬಿಜೆಪಿಗೆ ಕ್ರಿಮಿನಲ್‌ಗಳ ಸೇರ್ಪಡೆ ಇಲ್ಲ: ನಳಿನ್‌ಕುಮಾರ್‌ ಕಟೀಲ್‌

ಇನ್ನು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ,‌‌ ಟಿಪ್ಪು ಸುಲ್ತಾನ್ ಲಕ್ಷಾಂತರ ಹಿಂದೂಗಳ ಮಾರಣಹೋಮ‌ ಮಾಡಿದ್ದಾನೆ ಅಂತಾರೆ ಯತ್ನಾಳ್. ಸಿದ್ಧರಾಮಯ್ಯ ಕೂಡಾ ಅದು ಹೌದು, ಆದ್ರೂ ಆತ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾನೆ ಹೇಳ್ತಾರೆ. ದಾಖಲೆಯಲ್ಲಿ, ಬಿಜೆಪಿಯ ವಿಚಾರದಲ್ಲಿ ಸಾವರ್ಕರ್ ಒಬ್ಬ ವೀರ ಸೇನಾನಿ ಎಂಬುದು ಸ್ಪಷ್ಟವಿದೆ.‌ ಹೆಮ್ಮೆಯಿಂದ ಗೌರವದಿಂದ ಸಾವರ್ಕರ್ ಭಾವಚಿತ್ರವನ್ನು ಅನಾವರಣ ಮಾಡಿದ್ದೇವೆ.‌

ರೌಡಿಗಳೊಂದಿಗೆ ಕಾರ್ಯಕ್ರಮ: ಕಟೀಲ್‌ಗೆ ಸಮಜಾಯಿಷಿ ಕೊಟ್ಟ ಬಿಜೆಪಿ ಸಂಸದರು

ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದಲ್ಲಿ ಸಿಲುಕಿದ ಯುವಕನನ್ನು ಆರೋಪಿ, ಅಪರಾಧಿ ಎಂದಿದ್ದು ಸರಿಯಾ ಎಂದು‌ ಡಿಕೆಶಿ ಪ್ರಶ್ನಿಸುತ್ತಾರೆ. ರಿಕ್ಷಾದಲ್ಲಿ ಬಾಂಬ್ ಸ್ಫೋಟವಾಗದಿದ್ರೆ ಪಕ್ಕದ ಸಂಘನಿಕೇತನದಲ್ಲಿ ಮಕ್ಕಳಿದ್ದ ಸ್ಥಳ ಟಾರ್ಗೆಟ್ ಆಗುತ್ತಿತ್ತು. ಸಂಘನಿಕೇತನ, ಕದ್ರಿ ದೇವಸ್ಥಾನ ಸೇರಿದಂತೆ ಹೆಚ್ಚು ಜನರಿದ್ದ ಸ್ಥಳವೇ ಆರೋಪಿಯ ಟಾರ್ಗೆಟ್ ಆಗಿತ್ತು. ಡಿಕೆಶಿ ಬಳಿ ನಾನು ಕೇಳ್ತೇನೆ ಆ ಕುಕ್ಕರ್‌ನಲ್ಲಿ ಏನು ಮೊಸರನ್ನ ಇತ್ತಾ..? ಸಂಘನಿಕೇತನದಲ್ಲಿ ಸ್ಫೋಟವಾಗ್ತಿದ್ರೆ ಸಾವಿರಾರು ಮಕ್ಕಳ ಜೀವಕ್ಕೆ ತೊಂದರೆಯಾಗ್ತಿತ್ತು. ನೀವು ಭಯೋತ್ಪಾದನೆಯ ಪರ ಇದ್ದೀರಾ? ಅಥವಾ ವಿರುದ್ಧವಾಗಿದ್ದೀರಾ ಎಂದು ಸ್ಪಷ್ಟಪಡಿಸಿ. ಸರಕಾರ, ಕಾನೂನು, ಪೊಲೀಸರನ್ನು ವಿರೋಧಿಸುವ ಭರದಲ್ಲಿ ಸಮಾಜವನ್ನು ಎಲ್ಲಿ ತೆಗೆದುಕೊಂಡು ಹೋಗ್ತಿದ್ದೀರಿ. ಪಕ್ಷದ ಅಧ್ಯಕ್ಷರಾಗಿ ನೀವು ಹೇಳ್ಬೇಕು ಇದು ನಿಮ್ಮ ನಿಲುವೋ, ಪಕ್ಷದ ನಿಲುವೋ..? ತಪ್ಪನ್ನು ತಪ್ಪು ಎಂದು ಹೇಳದಿದ್ರೆ ಸಮಾಜವನ್ನು ಕಾಯೋರ್ಯಾರು? ಭಯೋತ್ಪಾದಕನನ್ನು ಸಮರ್ಥನೆ ಮಾಡಿಕೊಳ್ಳುವುದು ಸರಿಯಲ್ಲ. ನಿಮ್ಮ ಮಾತುಗಳನ್ನು ಪುನಃ ಪರಿಶೀಲಿಸಿ ಪ್ರಮಾದ ಒಪ್ಪಿಕೊಳ್ಳಬೇಕು ಎಂದು ಹೇಳಿದರು. ಒಟ್ಟಿನಲ್ಲಿ ಬಿಜೆಪಿ ರಾಜ್ಯ ಪದಾಧಿಕಾರಿಗಳ‌ ಸಭೆಯಲ್ಲಿ ಬಿಜೆಪಿಯ‌ ರಾಜ್ಯ ಮುಖಂಡರು ಕಾಂಗ್ರೆಸ್ ಹಾಗೂ ಜೆಡಿಎಸ್ ಅನ್ನು ಟಾರ್ಗೆಟ್ ಮಾಡಿ ವಾಗ್ದಾಳಿ ನಡೆಸಿದ್ದು, ಬಿಜೆಪಿ ಮುಖಂಡರ ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಯಾವ ಮಟ್ಟದ ಬೆಳವಣಿಗೆಗೆ ಕಾರಣವಾಗಲಿದೆ ಎಂದು ಕಾದು ನೋಡಬೇಕಷ್ಟೇ.

click me!