ಮಲೆನಾಡು ಪ್ರದೇಶದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು ಈ ನಿಟ್ಟಿನಲ್ಲಿ ಮಂಕಿ ಪಾರ್ಕ್ ಮಾಡಲು ಉದ್ದೇಶಿಸಿದ್ದು ಇದಕ್ಕೆ ಗ್ರಾಮಸ್ಥರಿಂದ ತೋವ್ರ ವಿರೋಧ ವ್ಯಕ್ತವಾಗಿದೆ.
ಹೊಸನಗರ [ನ.27]: ಮಂಗಗಳ ಹಾವಳಿಯಿಂದ ಬೇಸತ್ತು ಮಂಕಿಪಾರ್ಕ್ಗಾಗಿ ಹೋರಾಟಕ್ಕೆ ಸರ್ಕಾರ ಸ್ಪಂದಿಸುವ ಮೂಲಕ ಪ್ರಥಮ ಗೆಲವು ಸಿಕ್ಕಿತ್ತು. ಆದರೆ ಪ್ರಾಯೋಗಿಕವಾಗಿ ಮಂಕಿಪಾರ್ಕ್ ಮಾಡಲು ಹೊರಟ ಗ್ರಾಮದಲ್ಲಿ ವಿರೋಧ ವ್ಯಕ್ತವಾಗಿದೆ.
ಶಿವಮೊಗ್ಗದಲ್ಲಿ ನಡೆದ ಮಂಕಿಪಾರ್ಕ್ ಹೋರಾಟ ಬೆಂಗಳೂರು ತಲುಪಿ ಯೋಜನೆಗೆ ಹಸಿರು ನಿಶಾನೆ ಸಿಕ್ಕಿತ್ತು. ನಿಟ್ಟೂರು-ನಾಗೋಡಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ನಾಗೋಡಿ ಗ್ರಾಮದ ಸರ್ವೇನಂ 305ರಲ್ಲಿ ಮಂಕಿಪಾರ್ಕ್ ನಿರ್ಮಾಣ ಸಂಬಂಧ ಪರಿಶೀಲಿಸಿ ವರದಿ ಸಲ್ಲಿಸುವಂತೆ ಶಾಸಕ ಹರತಾಳು ಹಾಲಪ್ಪ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಇದರ ಬೆನ್ನಲ್ಲೆ ವಿರೋಧ ಕಂಡು ಬಂದಿದ್ದು ಸ್ಥಳೀಯರು ನಿಟ್ಟೂರು ಗ್ರಾಮಪಂಚಾಯ್ತಿಗೆ ಮನವಿ ಸಲ್ಲಿಸಿದ್ದಾರೆ.
ಸರ್ವೇನಂ 305 ರಲ್ಲಿ 423 ಎಕರೆ ಪ್ರದೇಶವಿದ್ದು ಜನವಸತಿ ಕೂಡ ಇದೆ. ನಿಟ್ಟೂರು, ಮರಕುಟಿಕ, ಕ್ಯಾಸನಾಡಿ, ಮಾವಿನಗುಡ್ಡ, ಆಳಗೋಡು ಸೇರಿದಂತೆ ವಿವಿಧ ಮಜರೆ ಹಳ್ಳಿಗಳಿವೆ. ಪಾರ್ಕ ನಿರ್ಮಾಣ ಅವೈಜ್ಞಾನಿಕವಾಗಿದ್ದು, ಉದ್ದೇಶಿತ ಪ್ರದೇಶದಲ್ಲಿ ಬುಡಕಟ್ಟು ಜನಾಂಗಗಳು ವಾಸಿಸುತ್ತಿವೆ. ಪಾರ್ಕ್ ಸ್ಥಾಪನೆಯಾದಲ್ಲಿ ಭವಿಷ್ಯದಲ್ಲಿ ತೊಂದರೆಯಾಗುವ ಸಾಧ್ಯತೆ ಇದೆ. ಹಾಗಾಗಿ ಈ ಬಗ್ಗೆ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಜನರ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅಲ್ಲದೆ ಮಂಕಿಪಾರ್ಕ್ ಸಂಬಂಧ ಜನಾಭಿಪ್ರಾಯ ಪಡೆಯದೆ ಸ್ಥಳವನ್ನು ಗುರುತಿಸುವುದು ಸರಿಯಲ್ಲ. ತುರ್ತು ಗ್ರಾಮಸಭೆ ನಡೆಸಿ ಈ ಬಗ್ಗೆ ಚರ್ಚಿಸಬೇಕು. ಅಲ್ಲಿಯವರೆಗೂ ಸ್ಥಳ ಗುರುತು ಮಾಡದಂತೆ ಗ್ರಾಮಸ್ಥರು ತಾಕೀತು ಮಾಡಿದರು.
ಗ್ರಾಪಂ ಸದಸ್ಯರಾದ ವಿಶ್ವ ನಾಗೋಡಿ, ಕಾಂತ್ ಅಟ್ಟಳ್ಳಿ, ನಾಗೇಂದ್ರ ಜೋಗಿ, ಮಂಜಪ್ಪ ಬೆನ್ನಟ್ಟೆ, ಪ್ರಮುಖರಾದ ಶಿವರಾಮಶೆಟ್ಟಿ, ಪ್ರಶಾಂತ ನಿಟ್ಟೂರು, ಚಂದ್ರಶೇಖರ ಜೋಗಿ, ಚಂದ್ರಶೇಖರ ಶೆಟ್ಟಿಬೇಳೂರು, ಚಂದಯ್ಯ ಜೈನ್, ರಾಜೇಶ್ ನಿಟ್ಟೂರು ಮತ್ತಿತರರು ಇದ್ದರು.
ಹೊಸನಗರದ ಉದ್ದೇಶಿತ ನಾಗೋಡಿ ಗ್ರಾಮದ ಸನಂ 305ರಲ್ಲಿ ಮಂಕಿಪಾರ್ಕ್ಗೆ ವಿರೋಧಿಸಿ ಗ್ರಾಮಸ್ಥರು ನಿಟ್ಟೂರು ಗ್ರಾಪಂಗೆ ಮನವಿ ಸಲ್ಲಿಸಿದರು.