ರಾಜ್ಯದ 15 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದ್ದು ಈ ನಿಟ್ಟಿನಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಮೈಸೂರು [ನ.27]: ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಡಿ.5 ರಂದು ನಡೆಯಲಿರುವುದರಿಂದ ಹುಣಸೂರು ತಾಲೂಕಿನಾದ್ಯಂತ ಚುನಾವಣೆ ನ್ಯಾಯ ಸಮ್ಮತ, ನಿಷ್ಪಕ್ಷಪಾತ ಮತ್ತು ಶಾಂತಿಯುತವಾಗಿ ಹಾಗೂ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಚುನಾವಣೆ ನಡೆಸಲು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಸೂಚಿಸಿದ್ದಾರೆ.
ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ದಿನ ಮದ್ಯಸಾರಯುಕ್ತ ಮದ್ಯ ಹಾಗೂ ಇನ್ನಿತರ ಮಾದಕ ವಸ್ತುಗಳನ್ನು ಯಾವುದೇ ಹೊಟೇಲ್, ಅಂಗಡಿ ಹಾಗೂ ಇತರೆ ಸ್ಥಳಗಳಲ್ಲಿ ಸಾರ್ವಜನಿಕ ಅಥವಾ ಖಾಸಗಿಯಾಗಿ ನೀಡಬಾರದೆಂದು ಅವರು ಸೂಚಿಸಿದ್ದಾರೆ.
ಮದ್ಯ ಸರಬರಾಜು ಮಾಡುವ ಮದ್ಯದಂಗಡಿಗಳು, ಬಾರ್ ಆ್ಯಂಡ್ ರೆಸ್ಟೋರೆಂಟ್, ಕ್ಲಬ್ ಇನ್ನಿತರೆ ಎಲ್ಲ ವಿಧದ ಮದ್ಯ ಮಾರಾಟ ಮಾಡುವ ಸನ್ನದು ಸ್ಥಳಗಳಲ್ಲಿ ಮದ್ಯ ಮಾರಾಟ ಹಾಗೂ ಸರಬರಾಜು ಮಾಡುವಂತಿಲ್ಲ ಎಂದು ಅವರು ನಿರ್ದೇಶಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಭಾರತ ಚುನಾವಣಾ ಆಯೋಗದ ನಿರ್ದೇಶನಗಳಿಗನುಗುಣವಾಗಿ ಹಾಗೂ ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಡಿ.3ರ ಸಂಜೆ 6 ರಿಂದ ಡಿ.5ರ ಮಧ್ಯರಾತ್ರಿ 12 ರವರೆಗೆ ಹಾಗೂ ಡಿ.8ರ ಮಧ್ಯರಾತ್ರಿ 12 ರಿಂದ ಡಿ.9ರ ಮಧ್ಯರಾತ್ರಿಯವರೆಗೆ ಹುಣಸೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿ ಮತ್ತು ಅದರ ಪರಿಧಿಯಿಂದ ಹೊರಗೆ 5 ಕಿ.ಮೀ. ವರೆಗಿನ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಿಧದ ಮದ್ಯದಂಗಡಿಗಳನ್ನು ಮುಚ್ಚಲು ಮತ್ತು ಯಾವುದೇ ತರಹದ ಮದ್ಯ ಹೊಂದುವಿಕೆ, ಮಾರಾಟ, ಸಾಗಾಣಿಕೆ, ಶೇಖರಣೆ, ವಿತರಣೆಯನ್ನು ನಿಷೇಧಿಸಿ ಒಣ ದಿವಸ ಎಂದು ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.