ನಾಡಪ್ತಭು ಕೆಂಪೇಗೌಡ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಾಡಿದ ಸಾಧನೆಯನ್ನು ಯಾರಿಂದಲೂ ಮಾಡಲು ಸಾಧ್ಯವಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಖಚಿತವಾಗಿ ನುಡಿದರು.
ಮಂಡ್ಯ (ಜೂ.27) :
ನಾಡಪ್ತಭು ಕೆಂಪೇಗೌಡ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಾಡಿದ ಸಾಧನೆಯನ್ನು ಯಾರಿಂದಲೂ ಮಾಡಲು ಸಾಧ್ಯವಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಖಚಿತವಾಗಿ ನುಡಿದರು.
undefined
ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡ(Nadaprahu kempegowda jayanti)ರ 514ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇವರು ಮಾಡಿದ ಸಾಧನೆಯನ್ನು ಸರ್ಕಾರಗಳಿಂದಲೂ ಮಾಡಲು ಸಾಧ್ಯವಾಗಿಲ್ಲ. ಅಭಿವೃದ್ಧಿಯಲ್ಲಿ ಅವರಿಗಿದ್ದ ದೂರದೃಷ್ಟಿ, ಜನಪರವಾದ ಕೆಲಸ-ಕಾರ್ಯಗಳು ಇಡೀ ನಾಡಿಗೇ ಮಾದರಿಯಾಗಿವೆ ಎಂದರು.
ಕರುನಾಡಿನ ಹೆಗ್ಗುರುತು ನಾಡಪ್ರಭು ಕೆಂಪೇಗೌಡ: ಡಾ.ಸಿ.ಎನ್.ಅಶ್ವತ್ಥನಾರಾಯಣ
ಭಾರತದ ಕೇಂದ್ರಸ್ಥಾನ ದೆಹಲಿಯಾಗಿದ್ದರೆ, ವಾಣಿಜ್ಯ ಕೇಂದ್ರ ಮುಂಬೈ ಆಗಿದೆ. ಆದರೆ, ಬೆಂಗಳೂರು ವಿಶ್ವಕ್ಕೇ ಪರಿಚಿತವಾಗಿರುವ ನಗರವಾಗಿದೆ. ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಬೆಳವಣಿಗೆ ಸಾಧಿಸಿರುವ ಬೆಂಗಳೂರು ವಿಶ್ವದಾದ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ಇದಕ್ಕೆ ಪ್ರಮುಖ ಕಾರಣಕರ್ತರು ಕೆಂಪೇಗೌಡರು ಎಂದು ಸ್ಮರಿಸಿದರು.
ಇತಿಹಾಸ ತಿಳಿಯಿರಿ:
ಇತಿಹಾಸವನ್ನು ತಿಳಿಯದಿದ್ದರೆ ಯಾವುದೇ ಉಪಯೋಗವಿಲ್ಲ. ಪ್ರತಿಯೊಬ್ಬರಿಗೂ ಇತಿಹಾಸದ ಅರಿವಿರಬೇಕು. ಕೆರೆಗಳ ನಿರ್ಮಾಣ, ಹೂಳೆತ್ತುವುದು, ನೀರು ಸಂಗ್ರಹಣೆ ಬಗ್ಗೆ ಅಂದೇ ಕೆಂಪೇಗೌಡರು ಯೋಚಿಸಿದ್ದರು. ವ್ಯಾಪಾರಕ್ಕೆ ಅನೇಕ ಪೇಟೆಗಳನ್ನು ನಿರ್ಮಿಸಿಕೊಟ್ಟಿದ್ದರು. ಇದು ಒಬ್ಬ ಸಮರ್ಥ ಆಡಳಿತಗಾರನಿಗಿದ್ದ ದೂರದೃಷ್ಟಿತ್ವಕ್ಕೆ ಸಾಕ್ಷಿಯಾಗಿದೆ. ಒಬ್ಬರನ್ನು ಪ್ರೀತಿಸುತ್ತಾ, ಗೌರವಿಸುತ್ತಾ ಅವರ ಸಾಧನೆಯನ್ನು ಮುಂದಿನ ಪೀಳಿಗೆಗೆ ತಿಳಿಸುತ್ತಾ ಹೆಜ್ಜೆ ಇಡುವಂತೆ ಸಲಹೆ ನೀಡಿದರು.
ಬೆಂಗಳೂರು-ಮೈಸೂರು ಮಧ್ಯೆ ಮಂಡ್ಯ ಜಿಲ್ಲೆ ಅಭಿವೃದ್ಧಿ ವಿಷಯದಲ್ಲಿ ಕಣ್ಮರೆಯಾಗಿದೆ. ನಿಮ್ಮೆಲ್ಲರ ಸಹಕಾರದಿಂದ ಅಭಿವೃದ್ಧಿಯತ್ತ ಮುನ್ನಡೆಸಲು ನಾನು ಶಕ್ತಿ ಮೀರಿ ಶ್ರಮಿಸುವೆ. ಎಲ್ಲವನ್ನೂ ಒಂದೇ ಬಾರಿಗೆ ಮಾಡಲಾಗುವುದಿಲ್ಲ. ಹಂತ ಹಂತವಾಗಿ ಪ್ರಗತಿಯತ್ತ ಕೊಂಡೊಯ್ಯುವ ಭರವಸೆ ನೀಡಿದರು.
500 ಕೋಟಿ ರು.ಪ್ರಸ್ತಾವನೆ:
ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ಅಭಿವೃದ್ಧಿಯಲ್ಲಿ ಮಂಡ್ಯ ಜಿಲ್ಲೆಗೆ ಹೊಸ ಸ್ವರೂಪ ನೀಡಬೇಕಿದೆ. ನಗರದ ಅಭಿವೃದ್ಧಿಗೆ ಬಜೆಟ್‌ನಲ್ಲಿ 500 ಕೋಟಿ ರು. ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದ್ದೇವೆ. ಮಂಡ್ಯದ ಉತ್ತರದಲ್ಲಿ ಬೈಪಾಸ್ ರಸ್ತೆ ಕೂಡಿಕೊಳ್ಳುವಂತೆ ದಕ್ಷಿಣ ಭಾಗದಲ್ಲಿ ಮತ್ತೊಂದು ರಸ್ತೆ ನಿರ್ಮಿಸಿ ರಿಂಗ್ ರಸ್ತೆ ಮಾಡಲಾಗುವುದು. ಹೊಸ ಬಡಾವಣೆ ನಿರ್ಮಾಣಕ್ಕೆ 500 ಎಕರೆ ಜಾಗ ಗುರುತಿಸಿದ್ದೇನೆ. ಅಲ್ಲಿ ಬಡಾವಣೆ ನಿರ್ಮಾಣಕ್ಕೆ ಸಹಕರಿಸುವಂತೆ ಸಚಿವರಲ್ಲಿ ಮನವಿ ಮಾಡಿದರಲ್ಲದೆ, 65 ಲಕ್ಷ ರು. ವೆಚ್ಚದಲ್ಲಿ ನಿರ್ಮಿತಿ ಕೇಂದ್ರದಿಂದ ಕಲಾ ಮಂದಿರವನ್ನು ಪುನಶ್ಚೇತನಗೊಳಿಸುವುದಾಗಿ ತಿಳಿಸಿದರು.
ಹೊಸ ಕಾರ್ಖಾನೆ ನಿರ್ಮಾಣ ಅಗತ್ಯ:
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಒಕ್ಕಲಿಗ ಸಮುದಾಯದ ಅಸ್ಮಿತೆ ಹಾಗೂ ಮುಕುಟಮಣಿ ಎಂದರೆ ಕೆಂಪೇಗೌಡರು. ಅವರು 300ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿ ನಾಲ್ಕು ದಿಕ್ಕುಗಳಲ್ಲೂ ಬೆಂಗಳೂರು ವಿಸ್ತಾರವಾಗಿ ಬೆಳೆಯುವಂತೆ ಮಾಡಿದರು. ಬೆಂಗಳೂರು ನಗರದಿಂದ ಶೇ.28ರಷ್ಟುಆದಾಯ ಕೇಂದ್ರಕ್ಕೆ ಹೋಗುತ್ತಿದ್ದರೆ, 1 ಲಕ್ಷ ಕೋಟಿ ರು. ಆದಾಯವನ್ನು ರಾಜ್ಯ ಸರ್ಕಾರಕ್ಕೆ ಸೃಷ್ಟಿಸಿಕೊಟ್ಟಿದೆ. ಇಂದು ವಿಶ್ವಮಾನ್ಯ ನಗರವಾಗಿ ಬೆಂಗಳೂರು ಬೆಳೆದಿದೆ ಎಂದರು.
ಮಂಡ್ಯದ ಮೈಸೂರು ಸಕ್ಕರೆ ಕಾರ್ಖಾನೆ ಅಳಿವಿನಂಚಿನಲ್ಲಿದೆ. ಹೊಸ ಕಾರ್ಖಾನೆ ನಿರ್ಮಿಸುವ ಅವಶ್ಯಕತೆ ಇದ್ದು, ಇದರಲ್ಲಿ ಉಸ್ತುವಾರಿ ಸಚಿವರ ಹೊಣೆಗಾರಿಕೆ ಹೆಚ್ಚಿದೆ. ಅವರೇ ಶಂಕುಸ್ಥಾಪನೆ ಮಾಡುವ ಮೂಲಕ ಉದ್ಘಾಟನೆಯನ್ನೂ ಮಾಡಿ ಅಭಿವೃದ್ಧಿಯಲ್ಲಿ ಕೆಂಪೇಗೌಡರಂತೆ ಜಿಲ್ಲೆಗೆ ಕೊಡುಗೆ ನೀಡಲಿ ಎಂದು ಆಶಿಸಿದರು.
ಮೂವರಿಗೆ ಪ್ರಶಸ್ತಿ ಪ್ರದಾನ:
ಕಾರ್ಯಕ್ರಮದಲ್ಲಿ ಬಿಬಿಎಂಪಿ ವಿಶೇಷ ಆಯುಕ್ತ ಜಯರಾಂ ರಾಯಪುರ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎನ್.ನಾಗರಾಜು, ಜಿಲ್ಲಾ ಆರೋಗ್ಯಾಧಿಕಾರಿ ಟಿ.ಎನ್.ಧನಂಜಯ ಅವರಿಗೆ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೆಂಪೇಗೌಡ ಪ್ರಶಸ್ತಿಗೆ ಜಯದೇವ ಆಸ್ಪತ್ರೆ, ನಿತಿನ್ ಕಾಮತ್, ಅದಿತಿ ಅಶೋಕ್ ಆಯ್ಕೆ: 5 ಲಕ್ಷ ರೂ. ನಗದು ಘೋಷಣೆ
ಕಾರ್ಯಕ್ರಮದಲ್ಲಿ ಆದಿ ಚುಂಚನಗಿರಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯರಾದ ಮಧು ಜಿ.ಮಾದೇಗೌಡ, ಮರಿತಿಬ್ಬೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಮೀರಾ ಇತರರಿದ್ದರು.