
ಮೈಸೂರು (ಏ.19): ಕೆ.ಆರ್. ನಗರ ತಾಲೂಕಿನ ಅರ್ಕೇಶ್ವರ ಸ್ವಾಮಿ ದೇವಸ್ಥಾನದ ಬಳಿ ಕಾವೇರಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಭಾರಿ ಪರಿಹಾರ ಘೋಷಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೃತರ ಪ್ರತಿಯೊಂದು ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿಗಳ ಪರಿಹಾರ ಧನವನ್ನು ಘೋಷಿಸಿದ್ದು, ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ನೀಡಿದ ಕೆ.ಆರ್. ನಗರ ಶಾಸಕ ರವಿಶಂಕರ್, 'ಹಜರತ್ ಖಾದರ್ ಲಿಂಗವಲ್ಲಿ ಉರುಸ್ ಆಚರಣೆಗಾಗಿ ಸಂಬಂಧಿಕರು ಬೆಂಗಳೂರು, ಮೈಸೂರು ಮತ್ತು ಊಟಿಯಿಂದ ಬಂದಿದ್ದರು. ಮಧ್ಯಾಹ್ನ ಅರ್ಕೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ನದಿಯಲ್ಲಿ ಸ್ನಾನ ಮಾಡಲು ಇಳಿದಿದ್ದಾರೆ. ಈ ವೇಳೆ ಸಣ್ಣ ಮಗುವೊಂದು ನೀರಿನಲ್ಲಿ ಮುಳುಗುವುದನ್ನು ಕಂಡು, ಅದನ್ನು ರಕ್ಷಿಸಲು ಹೋದ ಎಂಟು ಮಂದಿ ನೀರಿನ ಆಳ ತಿಳಿಯದೆ ಒಬ್ಬರ ಹಿಂದೆ ಒಬ್ಬರಂತೆ ಮುಳುಗಿದ್ದಾರೆ. ಸ್ಥಳೀಯರು ಇಬ್ಬರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ, ಆದರೆ ಉಳಿದ ಆರು ಮಂದಿ ದುರ್ಮರಣಕ್ಕೀಡಾಗಿದ್ದಾರೆ' ಎಂದು ಘಟನೆಯ ಕರಾಳತೆಯನ್ನು ವಿವರಿಸಿದರು.
ನದಿಯ ಮಧ್ಯಭಾಗದಲ್ಲಿ ಕಾಮಗಾರಿಗಾಗಿ ಗುಂಡಿಗಳನ್ನು ತೆಗೆಯಲಾಗಿತ್ತು. ಈ ಬಗ್ಗೆ ಸ್ಥಳೀಯರಿಗೆ ಮಾಹಿತಿ ಇರುವುದರಿಂದ ಅವರು ಅತ್ತ ಸುಳಿಯುವುದಿಲ್ಲ. ಆದರೆ ಹೊರಗಿನಿಂದ ಬಂದ ಪ್ರವಾಸಿಗರಿಗೆ ಈ ಬಗ್ಗೆ ಅರಿವಿಲ್ಲದೆ ಗುಂಡಿಯತ್ತ ಹೋದ ಕಾರಣ ಈ ಅಚಾತುರ್ಯ ಸಂಭವಿಸಿದೆ ಎಂದು ಶಾಸಕರು ತಿಳಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿದ ಶಾಸಕರು, ತಕ್ಷಣವೇ ಪರಿಹಾರ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ, ಶಾಸಕ ರವಿಶಂಕರ್ ಅವರು ತಮ್ಮ ವೈಯಕ್ತಿಕ ನೆಲೆಯಲ್ಲಿ ಪ್ರತಿಯೊಬ್ಬ ಮೃತರ ಕುಟುಂಬಕ್ಕೆ 50 ಸಾವಿರ ರೂಪಾಯಿಗಳ ನೆರವು ನೀಡಿದ್ದಾರೆ.
ಕೆ.ಆರ್. ನಗರ ತಾಲೂಕು ಆಸ್ಪತ್ರೆಯಲ್ಲಿ ಆರು ಮಂದಿಯ ಮರಣೋತ್ತರ ಪರೀಕ್ಷೆ ಇಂದು ಯಶಸ್ವಿಯಾಗಿ ಪೂರ್ಣಗೊಂಡಿತು. ಪರೀಕ್ಷೆಯ ನಂತರ ಮೃತದೇಹಗಳನ್ನು ವಾರಸುದಾರರಿಗೆ ಹಸ್ತಾಂತರಿಸುವಾಗ ಆಸ್ಪತ್ರೆಯ ಆವರಣದಲ್ಲಿ ಸ್ಮಶಾನ ಮೌನ ಆವರಿಸಿತ್ತು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಶಾಸಕ ರವಿಶಂಕರ್ ಅವರು ಮೃತದೇಹಗಳಿಗೆ ಹೂವಿನ ಹಾರ ಹಾಕಿ ಅಂತಿಮ ನಮನ ಸಲ್ಲಿಸಿ, ಮೃತರ ಕುಟುಂಬಕ್ಕೆ ಧೈರ್ಯ ತುಂಬಿದರು.
ಮೈಸೂರಿನ ಕೆ.ಆರ್. ಆಸ್ಪತ್ರೆ ಮತ್ತು ಜಯದೇವ ಆಸ್ಪತ್ರೆಯಲ್ಲಿ ಅಸ್ವಸ್ಥಗೊಂಡು ದಾಖಲಾಗಿರುವ ಮೂವರು ಮಹಿಳೆಯರಿಗೆ ಉಚಿತ ಚಿಕಿತ್ಸೆ ನೀಡಲು ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ನದಿ ತೀರದಲ್ಲಿ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.