Mysuru : ಇಂದೋರ್‌ ಮಾದರಿಯಲ್ಲಿ ಕಸ ಸಂಗ್ರಹ, ವಿಲೇವಾರಿಗೆ ಚಿಂತನೆ

By Kannadaprabha News  |  First Published Jun 29, 2023, 6:14 AM IST

ಸತತವಾಗಿ ದೇಶದ ನಂ. 1 ಸ್ವಚ್ಛ ನಗರ ಸ್ಥಾನ ಪಡೆಯುತ್ತಿರುವ ಇಂದೋರ್‌ ಮಾದರಿಯಲ್ಲಿಯೇ ಮೈಸೂರಿನಲ್ಲಿಯೂ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಅಗತ್ಯವಿರುವ ಹೆಚ್ಚುವರಿ ಪೌರ ಕಾರ್ಮಿಕರ ನೇಮಕಕ್ಕೆ ಸರ್ಕಾರದ ಅನುಮತಿ ಕೋರಲು ನಗರ ಪಾಲಿಕೆ ತೀರ್ಮಾನಿಸಿದೆ.


  ಮೈಸೂರು :  ಸತತವಾಗಿ ದೇಶದ ನಂ. 1 ಸ್ವಚ್ಛ ನಗರ ಸ್ಥಾನ ಪಡೆಯುತ್ತಿರುವ ಇಂದೋರ್‌ ಮಾದರಿಯಲ್ಲಿಯೇ ಮೈಸೂರಿನಲ್ಲಿಯೂ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಅಗತ್ಯವಿರುವ ಹೆಚ್ಚುವರಿ ಪೌರ ಕಾರ್ಮಿಕರ ನೇಮಕಕ್ಕೆ ಸರ್ಕಾರದ ಅನುಮತಿ ಕೋರಲು ನಗರ ಪಾಲಿಕೆ ತೀರ್ಮಾನಿಸಿದೆ.

ಇತ್ತೀಚೆಗಷ್ಟೇ ನಗರ ಪಾಲಿಕೆ ಸದಸ್ಯರ ಒಂದು ತಂಡ ಇಂದೋರ್‌ಗೆ ಭೇಟಿ ನೀಡಿ ಅಲ್ಲಿನ ಸ್ವಚ್ಛತಾ ಕಾರ್ಯ ಮತ್ತು ವೈಜ್ಞಾನಿಕ ಸ್ವಚ್ಛತಾ ವಿಧಾನವನ್ನು ಪರಿಶೀಲಿಸಿತ್ತು. ಅದರಂತೆ ಎರಡು ಪಾಳಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಅಗತ್ಯವಿರುವ ಪೌರ ಕಾರ್ಮಿಕರ ನೇಮಕಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮೇಯರ್‌ ಶಿವಕುಮಾರ್‌ ನೇತೃತ್ವದಲ್ಲಿ ಬುಧವಾರ ನಡೆದ ಸಭೆ ತೀರ್ಮಾನಿಸಿತು.

Tap to resize

Latest Videos

ಮೈಸೂರು ಕೂಡ ಮುಂದಿನ ದಿನಗಳಲ್ಲಿ ದೇಶದ ನಂ. 1 ಸ್ವಚ್ಛ ನಗರ ಸ್ಥಾನಗಳಿಸಬೇಕು. ಈ ನಿಟ್ಟಿನಲ್ಲಿ ನಾವು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಕುರಿತು ಸುದೀರ್ಘ ಚರ್ಚೆ ನಡೆಯಿತು.

ಈ ವೇಳೆ ಮಾತನಾಡಿದ ಮೇಯರ್‌ ಶಿವಕುಮಾರ್‌, ಇಂದೋರ್‌ ಮಾದರಿಯಲ್ಲಿ ಸ್ವಚ್ಛತೆ ಕೈಗೊಳ್ಳಲು ಪೌರ ಕಾರ್ಮಿಕರ ನೇಮಕ ಅಗತ್ಯವಿದೆ. ಮೈಸೂರು ನಗರವನ್ನು ವಿಶೇಷವಾಗಿ ಪರಿಗಣಿಸಿ ಹೆಚ್ಚುವರಿ ಪೌರ ಕಾರ್ಮಿಕರ ನೇಮಕಕ್ಕೆ ಸರ್ಕಾರ ಅವಕಾಶ ಕೊಡಬೇಕು. ಈ ಸಂಬಂಧ ಮುಖ್ಯಮಂತ್ರಿಗಳ ಬಳಿ ತೆರಳಿ ಮನವಿ ಸಲ್ಲಿಸಲಾಗುವುದು. ಜೊತೆಗೆ ವಿಶೇಷ ಅನುದಾನವನ್ನೂ ಕೋರಲಾಗುವುದು ಎಂದರು.

ಇಂದೋರ್‌ನಲ್ಲಿ ಪ್ಲಾಸ್ಟಿಕ್‌ ಸಂಪೂರ್ಣ ನಿಷೇಧವಿದೆ. ಎಲ್ಲಿಯೂ ಪ್ಲಾಸ್ಟಿಕ್‌ ಕಂಡಬರುವುದಿಲ್ಲ. ಮನೆ ಮನೆ ಕಸ ಸಂಗ್ರಹಕ್ಕೆ ಪ್ರತ್ಯೇಕ ತಂಡ ರಚಿಸಲಾಗಿದೆ. ಅಂತೆಯ ವಾಣಿಜ್ಯ ರಸ್ತೆ, ಕೈಗಾರಿಕೆಗಳಿಂದ ಪ್ರತ್ಯೇಕವಾಗಿ ತ್ಯಾಜ್ಯ ಸಂಗ್ರಹಿಸುವ ವ್ಯವಸ್ಥೆ ಕೂಡ ಇದೆ. ಕಸ ಸಂಗ್ರಹಿಸುವ ವಾಹನವನ್ನು ವೆಬ್‌ಬೇಸ್ಡ್‌ ಮಾನಿಟರಿಂಗ್‌ ವ್ಯವಸ್ಥೆಯ ಮೂಲಕ ನಿಯಂತ್ರಿಸಲಾಗುತ್ತದೆ. ವಾಹನಗಳು ನಿಗದಿತ ಸ್ಥಳಕ್ಕೆ ನಿಗದಿತ ಸಮಯಕ್ಕೆ ತಲುಪದಿದ್ದರೆ ಕೂಡಲೇ ಚಾಲಕನಿಗೆ ಕರೆಮಾಡಿ ವಿಳಂಬಕ್ಕೆ ಕಾರಣ ತಿಳಿದುಕೊಳ್ಳಲಾಗುತ್ತದೆ. ನಗರದ ಎಲ್ಲೂ ಕೂಡ ತ್ಯಾಜ್ಯ ಕಾಣಲು ಸಾಧ್ಯವಿಲ್ಲ. ಜನರಲ್ಲಿ ಅರಿವು ಮೂಡಿಸುವಲ್ಲಿ ಅಲ್ಲಿನ ನಗರ ಪಾಲಿಕೆ ಯಶಸ್ವಿಯಾಗಿದೆ ಎಂದರು.

ಇಂದೋರ್‌ನಲ್ಲಿ ಹಸಿಕಸದಿಂದ ಬಯೋ ಗ್ಯಾಸ್‌ ತಯಾರಿಸಲಾಗುತ್ತಿದೆ. ಇದನ್ನು ಖಾಸಗಿ ಕಂಪನಿಗೆ ವಹಿಸಲಾಗಿದೆ. ಕಂಪನಿಯು ನಗರ ಪಾಲಿಕೆಗೆ ವಾರ್ಷಿಕ . 2.50 ಕೋಟಿ ನೀಡುತ್ತಿದೆ. ಈ ಬಯೋ ಗ್ಯಾಸ್‌ನ್ನು ಸರ್ಕಾರಿ ಸಿಎನ್‌ಜಿ ಬಸ್‌ಗಳಿಗೆ ಪೂರೈಸಲಾಗುತ್ತದೆ. ಒಣಕಸಕ್ಕೆ ಪ್ರತ್ಯೇಕ ಪ್ಲಾಂಟ್‌ ಇದೆ. ಒಟ್ಟು 5 ಕಡೆಗಳಲ್ಲಿ ಕಟ್ಟಡ ತ್ಯಾಜ್ಯ ವಿಲೇವಾರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ವಿವರಿಸಿದರು.

ನಗರ ಪಾಲಿಕೆ ಆಯುಕ್ತ ಜಿ. ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, ಇಂದೋರ್‌ನಲ್ಲಿ 32 ಲಕ್ಷ ಜನಸಂಖ್ಯೆ ಇದೆ. ಅಲ್ಲಿ 10 ಸಾವಿರ ಪೌರ ಕಾರ್ಮಿಕರು ಇದ್ದಾರೆ. ನಮ್ಮಲ್ಲಿ 14 ಲಕ್ಷ ಜನಸಂಖ್ಯೆ ಇದೆ. 2,200 ಪೌರ ಕಾರ್ಮಿಕರಿದ್ದಾರೆ. ಇಲ್ಲಿ 2 ಪಾಳಿಯಲ್ಲಿ ಕೆಲಸ ಮಾಡಲು 4 ಸಾವಿರಕ್ಕೂ ಹೆಚ್ಚು ಪೌರ ಕಾರ್ಮಿಕರು ಬೇಕು. ಇದಕ್ಕೆ . 5 ಕೋಟಿ ಅಗತ್ಯವಿದೆ ಎಂದರು.

ಸದಸ್ಯ ಮ.ವಿ. ರಾಮಪ್ರಸಾದ್‌ ವಾತನಾಡಿ, ಇಂದೋರ್‌ ನಗರದಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆದರೆ ದಂಡ ವಿಧಿಸಲಾಗುತ್ತದೆ. ಇಂದೋರ್‌ನಂತೆ ನಮ್ಮಲ್ಲೂ ಕಾನೂನುಗಳು ಇದ್ದರೂ ಜಾರಿಯಾಗುತ್ತಿಲ್ಲ ಎಂದರು.

ಕೆ.ವಿ. ಶ್ರೀಧರ್‌ ಮಾತನಾಡಿ, ನಗರದಲ್ಲಿ ಮನೆ ಮನೆಗಳಿಂದ ಪ್ರತಿನಿತ್ಯ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಆದರೆ, ಬಹುತೇಕ ಕಡೆ ಹಸಿ ಕಸ ಹಾಗೂ ಒಣಕಸವನ್ನು ಬೇರ್ಪಡಿಸಿ ನೀಡುತ್ತಿಲ್ಲ. ಮನೆಯವರು ಬೇರ್ಪಡಿಸಿ ನೀಡಿದರೂ ಪೌರ ಕಾರ್ಮಿಕರು ಎರಡೂ ಕಸವನ್ನು ಒಂದೇ ವಾಹನದಲ್ಲಿ ತುಂಬಿಕೊಂಡು ಹೋಗುತ್ತಾರೆ. ಕಸವನ್ನು ಮೂಲದಲ್ಲೇ ಬೇರ್ಪಡಿಸಲು ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.

ಸದಸ್ಯ ಬಿ.ವಿ. ಮಂಜುನಾಥ್‌ ಮಾತನಾಡಿ, ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಎಸೆಯುವುದು ತಪ್ಪಬೇಕು. ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿದರು, ಹೊರಗೆ ತಂದು ಕಸ ಹಾಕುವುದು ತಪ್ಪಿಲ್ಲ. ಇದು ಹೀಗೆಯೇ ಮುಂದುವರೆದರೆ ಎಂದಿಗೂ ನಂ. 1 ಸ್ಥಾನಕ್ಕೆ ಮರಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ದಂಡ ವಿಧಿಸಬೇಕು ಎಂದರು.

ಸಭೆಯಲ್ಲಿ ಮಾಜಿ ಮೇಯರ್‌ಗಳಾದ ಅಯೂಬ್‌ಖಾನ್‌, ಆರೀಫ್‌ ಹುಸೇನ್‌, ಸದಸ್ಯೆ ಶಾಂತಕುಮಾರಿ, ಉಪ ಆಯುಕ್ತ ಮಹೇಶ್‌, ಆರೋಗ್ಯಾಧಿಕಾರಿ ಡಾ.ಡಿ.ಜಿ. ನಾಗರಾಜ್‌ ಮೊದಲಾದವರು ಇದ್ದರು.

click me!