
ಬಿ. ಶೇಖರ್ ಗೋಪಿನಾಥಂ
ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಏರ್ ಶೋ ನೋಡಲು ನೆರೆದಿದ್ದ ಸಾವಿರಾರು ಜನಕ್ಕೆ ನಿರಾಸೆ ಉಂಟಾಯಿತು. ಆಕಾಶದಲ್ಲಿ ಸೂರ್ಯಕಿರಣ ವಿಮಾನಗಳ ಕಲರವ ನೋಡಲು ಜನಸ್ತೋಮ ನೆರೆದಿತ್ತು. ಮೋಡ ಕವಿದ ವಾತಾವರಣದಿಂದಾಗಿ ಏರ್ ಶೋ ಆರಂಭವಾದರೂ ಹೆಚ್ಚು ಸಮಯ ನಡೆಯಲಿಲ್ಲ. 9 ರಿಂದ 10 ನಿಮಿಷದೊಳಗೆ ವೈಮಾನಿಕ ಪ್ರದರ್ಶನವು ಮೊಟಕುಗೊಂಡಿತು.
ಇದರಿಂದಾಗಿ ನಗರದ ಬನ್ನಿಮಂಟಪದ ಪಂಜಿನ ಕವಾಯಿತು ಮೈದಾನದಲ್ಲಿ ಭಾನುವಾರ ರಜೆ ಹಿನ್ನೆಲೆಯಲ್ಲಿ ನೆರೆದಿದ್ದ ಸಹಸ್ರರಾರು ಜನರಲ್ಲಿ ನಿರಾಸೆ ಮೂಡಿತು.
ಕರ್ನಾಟಕದ ಎಚ್‌ಎಎಲ್ ನಿರ್ಮಿತ ಹಾಕ್ ಎಂಕೆ-132 ಸರಣಿಯ 9 ಜೆಟ್ ವಿಮಾನಗಳನ್ನು ಹೊಂದಿರುವ ಸೂರ್ಯಕಿರಣ್ ತಂಡವು ಬೆಂಗಳೂರಿನ ಯಲಹಂಕ ವಾಯುನೆಲೆಯಿಂದ ಆಕಾಶಕ್ಕೆ ಲಗ್ಗೆಯಿಟ್ಟವು. ಕೆಂಪು, ಬಿಳಿಯ ಬಣ್ಣದ ವಿಮಾನಗಳನ್ನು ಮೊದಲಿಗೆ ಬನ್ನಿಮಂಟಪ ಮೈದಾನದ ಸುತ್ತು ಪ್ರದಕ್ಷಿಣೆ ಹಾಕಿದವು. ಕೇಸರಿ, ಬಿಳಿ, ಹಸಿರು ಹೊಗೆಯ ಮೂಲಕ ತ್ರಿವರ್ಣವನ್ನು ಮೂಡಿಸುತ್ತಾ ಪ್ರದರ್ಶನ ಆರಂಭವಾದ 10 ನಿಮಿಷದಲ್ಲಿ ಅಂತ್ಯವಾಯಿತು.
ದಸರಾ ಏರ್ ಶೋ ಮೋಡ ಕವಿದ ವಾತಾವರಣ ಹಾಗೂ ಹವಾವಾನ ವೈಪರೀತ್ಯದಿಂದಾಗಿ ನಿರೀಕ್ಷಿತ ರೀತಿಯಲ್ಲಿ ಪ್ರದರ್ಶನ ನಡೆಯಲಿಲ್ಲ. ಬೆಳಗ್ಗೆ 11ಕ್ಕೆ ಏರ್ ಶೋ ಆರಂಭವಾಯಿತು. ಬಾನಂಗಳದಲ್ಲಿ 9 ವಿಮಾನಗಳು ಒಟ್ಟಿಗೆ ಸಾಗಿದಾಗ ಜನರಲ್ಲಿ ಹರ್ಷೋದ್ಘಾರ ಉಂಟಾಯಿತು. ಪಂಜಿನ ಕವಾಯತು ಮೈದಾನದ ಪೂರ್ವ ದಿಕ್ಕಿನಿಂದ ಬಂದ ವಿಮಾನಗಳು ಪಶ್ಚಿಮಕ್ಕೆ ತೆರಳಿದವು. ಆ ನಂತರ ಪಶ್ಚಿಮದಿಂದ ಉತ್ತರಕ್ಕೆ ಒಂದು ಬಾರಿ ಸಾಗಿದವು. ಮತ್ತೊಮ್ಮೆ ಕೇಸರಿ, ಬಿಳಿ, ಹಸಿರಿನಿಂದ ಕೂಡಿದ ತ್ರಿವರ್ಣ ಧ್ವಜದ ಬಣ್ಣ ಸೂಸುತ್ತ ಬಂದವು. ಈ ವೇಳೆಗೆ ಹವಾಮಾನ ವೈಪರೀತ್ಯದಿಂದಾಗಿ ಏರ್ ಶೋ ಮೊಟಕುಗೊಂಡಿದೆ ಎಂದು ನಿರೂಪಕರು ಮೈಕಿನಲ್ಲಿ ಪ್ರಕಟಿಸಿದರು. ಇದರಿಂದ ಸಾರ್ವಜನಿಕರು ನಿರಾಸೆಯಿಂದ ಮೈದಾನದಿಂದ ಹೊರನಡೆದರು.
ದಸರಾ ಸಂದರ್ಭದಲ್ಲಿ ವೈಮಾನಿತ ಪ್ರದರ್ಶನವು 20 ರಿಂದ 30 ನಿಮಿಷಗಳು ಮಾತ್ರ ನಡೆಯುತ್ತವೆ. ದಸರಾ ಏರ್ ಶೋ ನೋಡಲು ಭಾನುವಾರ ಬೆಳಗ್ಗೆ 9 ರಿಂದಲೇ ಟಿಕೆಟ್, ಗೋಲ್ಡ್ ಕಾರ್ಡ್, ವಿಐಪಿ ಪಾಸ್ ಹಾಗೂ ಆಹ್ವಾನಿತರ ಪಾಸ್ ಗಳ ಮೂಲಕ ಸಾರ್ವಜನಿಕ ಮೈದಾನ ಪ್ರವೇಶಿಸಿದ್ದರು. ಮಹಿಳೆಯರು, ಮಕ್ಕಳು, ಯುವಜನರು, ಮಧ್ಯ ವಯಸ್ಕರು, ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಒಂದೂವರೆಯಿಂದ 2 ಗಂಟೆ ಕಾದ ಬಳಿಕ ಏರ್ ಶೋ ಆರಂಭವಾದರೂ ಮೋಡ ಕವಿದ ವಾತಾವರಣದಿಂದಾಗಿ ಆ ಸಂಭ್ರಮ 10 ನಿಮಿಷಕ್ಕೆ ಅಂತ್ಯವಾಯಿತು.
ಇದರಿಂದ ಸಾವಿರಾರು ಜನ ಕುಟುಂಬದವರು, ಸ್ನೇಹಿತರು, ಮಕ್ಕಳೊಂದಿಗೆ ಆಗಮಿಸಿದ್ದವರು, ಪ್ರವಾಸಿಗರು ನಿರಾಸೆಯಿಂದ ಮೈದಾನದಿಂದ ನಿರ್ಗಮಿಸಿದರು.
ಮೈಸೂರು ದಸರಾ ಸಂದರ್ಭದಲ್ಲಿ ಮೈಸೂರಿಗೆ ಆಗಮಿಸಿರುವುದು ಸಂತಸ ತಂದಿದೆ. ಮೋಡ ಕವಿದ ವಾತಾವರಣ ಮತ್ತು ಬೆಳಗ್ಗೆ ಸುರಿದ ಮಳೆಯಿಂದಾಗಿ ನಿಗದಿತ ಎಲ್ಲಾ ವೈಮಾನಿಕ ಕಸರತ್ತುಗಳನ್ನು ನಡೆಸಲು ಸಾಧ್ಯವಾಗಲಿಲ್ಲ. ಸೋಮವಾರ (ಅ.19) ಹವಾವಾನ ಅನುಕೂಲಕರವಾಗುವ ನಿರೀಕ್ಷೆಯಿದ್ದು, ಪೂರ್ಣ ಪ್ರಮಾಣದ ಪ್ರದರ್ಶನ ನೀಡಲಾಗುವುದು ಎಂದು ಸೂರ್ಯಕಿರಣ್ ಏರೋಬ್ಯಾಟಿಕ್ ತಂಡದ ನಾಯಕ ಗ್ರೂಪ್ ಕ್ಯಾಪ್ಟನ್ ಅಜಯ್ ದಶರಥಿ ತಿಳಿಸಿದರು.