Udupi; ಆಕಾಶದಲ್ಲಿ ಕಂಡ ಚಲಿಸುವ ಚುಕ್ಕಿಗಳು, ಏಲಿಯನ್ಸ್ ಎಂದು ಬೆಚ್ಚಿಬಿದ್ದ ಜನತೆ!

By Suvarna News  |  First Published Oct 29, 2022, 7:40 PM IST

ಉಡುಪಿಯಲ್ಲಿ ಶುಕ್ರವಾರ ಸಂಜೆ ಚಲಿಸುವ ನಕ್ಷತ್ರಗಳನ್ನು ಕಂಡು ಜನ ಬೆಚ್ಚಿಬಿದ್ದಿದ್ದಾರೆ. ಜಿಲ್ಲೆಯ ಬೈಂದೂರು, ಕಾಪು ಸೇರಿದಂತೆ ಹಲವುಡೆ ಆಕಾಶ ವೀಕ್ಷಿಸುತ್ತಿದ್ದ ಜನರಿಗೆ ಈ ಚಲಿಸುವ ನಕ್ಷತ್ರಗಳು ಕಂಡು ಬಂದಿವೆ.


ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಅ.29): ಉಡುಪಿಯಲ್ಲಿ ಶುಕ್ರವಾರ ಸಂಜೆ ಚಲಿಸುವ ನಕ್ಷತ್ರಗಳನ್ನು ಕಂಡು ಜನ ಬೆಚ್ಚಿಬಿದ್ದಿದ್ದಾರೆ. ಜಿಲ್ಲೆಯ ಬೈಂದೂರು, ಕಾಪು ಸೇರಿದಂತೆ ಹಲವುಡೆ ಆಕಾಶ ವೀಕ್ಷಿಸುತ್ತಿದ್ದ ಜನರಿಗೆ ಈ ಚಲಿಸುವ ನಕ್ಷತ್ರಗಳು ಕಂಡು ಬಂದಿವೆ. ಇವು ಅನ್ಯಗ್ರಹ ಜೀವಿಗಳ ಸಂಚಾರ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಖಗೋಳ ವಿಜ್ಞಾನಿಗಳು ಸತ್ಯಾಂಶ ಬಯಲು ಮಾಡಿದ್ದಾರೆ. ಇವು ಯಾವುದೇ ಅನ್ಯಗ್ರಹ ಜೀವಿಗಳಲ್ಲ. ಕಳೆದ ವರ್ಷವೂ ಇದೇ ರೀತಿ ಸರಳ ರೇಖೆಯಲ್ಲಿ ಸಂಚರಿಸುವ ಬೆಳಕಿನ ಕಿರಣಗಳನ್ನು ಜನ ನೋಡಿದ್ದಾರೆ. ಈ ಸರಳ ರೇಖೆಯ ಬೆಳಕಿನ ಕಿರಣಗಳ ಸಂಚಾರದ ಬಗ್ಗೆ ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ. ಹಾಗಾದರೆ ಆಕಾಶದಲ್ಲಿ ಕಂಡು ಬಂದ, ಈ ಬೆಳಕಿನ ಚುಕ್ಕಿಗಳು ಮತ್ತು ಅವುಗಳ ಸಂಚಾರದ ನಿಜಗುಟ್ಟೇನು? ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಉಪನ್ಯಾಸಕ ಖಗೋಳಾಸಕ್ತ ಅತುಲ್ ಭಟ್ ವಿವರಿಸಿದ್ದಾರೆ. ಆಕಾಶದಲ್ಲಿ ಬೆಳಕಿನ ಸಾಲಿನ ಕೌತುಕದ ಬಗ್ಗೆ, ಖಗೋಳಶಾಸ್ತ್ರಜ್ಞ ಅತುಲ್ ಭಟ್ ಮಾಹಿತಿ ನೀಡಿದ್ದಾರೆ. ನಿನ್ನೆ ಮಂಗಳೂರು ಉಡುಪಿ ಭಾಗದಲ್ಲಿ 30 ರಿಂದ 50 ಸರಳ ರೇಖೆಯ ಚುಕ್ಕಿಗಳು ಕಂಡಿವೆ. ಈ ಬೆಳಕಿನ ಚುಕ್ಕಿಗಳು ಒಂದೇ ಸರಳ ರೇಖೆಯಲ್ಲಿ ಸಂಚರಿಸಿದಂತೆ ಕಂಡು ಬಂದಿವೆ. ಜನ ಇದನ್ನು ಏಲಿಯನ್ಸ್ ಎಂದು ಭಾವಿಸಿ ಪ್ರಶ್ನಿಸುತ್ತಿದ್ದಾರೆ. ಆದರೆ ಇವು ಏಲಿಯನ್ಸ್ ಅಲ್ಲ , ಇವು ಸ್ಟಾರ್ ಲಿಂಕ್ ಎಂಬ ಕಂಪನಿಯ ಸ್ಯಾಟಲೈಟ್ ಗಳು ಎಂದು ಸ್ಪಷ್ಟಪಡಿಸಿದ್ದಾರೆ.

Tap to resize

Latest Videos

undefined

ಅಮೆರಿಕದ ವಿಜ್ಞಾನಿ ಎಲಾನ್ ಮಸ್ಕ್ ಇವರ ಕಂಪನಿ ಸ್ಟಾರಲಿಂಕ್.ಈ  ಕಂಪೆನಿಯಿಂದ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಕಳುಹಿಸಿದ್ದಾರೆ. ಹಳ್ಳಿಗಳು ಮತ್ತು ನೆಟ್ವರ್ಕ್ ಸಿಗದ ಪ್ರದೇಶಗಳಿಗೆ ಇಂಟರ್ನೆಟ್ ವ್ಯವಸ್ಥೆ ಕಲ್ಪಿಸಲು ಈ ವ್ಯವಸ್ಥೆ ಮಾಡಲಾಗಿದೆ. ಭೂಮಿಯ ಸುತ್ತಲೂ ಹನ್ನೆರಡು ಸಾವಿರ ಸೆಟಲೈಟ್ ಗಳನ್ನು ಕವಚದ ರೂಪದಲ್ಲಿ ಕಳುಹಿಸಲಿದ್ದಾರೆ. ನೆಟ್ವರ್ಕ್ ತಲುಪದ ಪ್ರದೇಶಗಳಿಗೂ ಇಂಟರ್ನೆಟ್ ವ್ಯವಸ್ಥೆ ಮಾಡಲು ಇವುಗಳನ್ನು ಬಿಡಲಾಗಿದೆ ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ 44,000 ಸ್ಯಾಟಲೈಟ್ ಗಳನ್ನು ಬಿಡುವ ಸಾಧ್ಯತೆ ಇದೆ.ಈಗಾಗಲೇ ಮೂರುವರೆ ಸಾವಿರ ಸ್ಯಾಟಲೈಟ್ ಗಳು ಬಿಡುಗಡೆಯಾಗಿವೆ. ಈ ಸ್ಯಾಟಿಲೈಟುಗಳು ಕಕ್ಷೆಯನ್ನು ಸೇರುವ ಮುಂಚೆ ಒಂದೇ ಸರಳ ರೇಖೆಯಲ್ಲಿ ಆಕಾಶದಲ್ಲಿ ಸಂಚರಿಸುತ್ತವೆ. ನಿನ್ನೆ ಸಂಜೆ ಕಂಡಿರುವುದು ಸ್ಟಾರ್ ಲಿಂಕ್ ಜಿ 31 ಸೀರೀಸ್ ನ ಸ್ಯಾಟಲೈಟ್. ನಿನ್ನೆ ಈ ರೀತಿಯ  53 ಉಪಗ್ರಹಗಳನ್ನು ಬಿಡುಗಡೆ ಮಾಡಲಾಗಿತ್ತು. ಶನಿವಾರ ಸಂಜೆ ಕೂಡ ಕ್ಷಿತಿಜಕ್ಕೆ ತುಂಬಾ ಹತ್ತಿರ ಹಾದು ಹೋದಂತೆ ಕಾಣುತ್ತದೆ‌ ಎಂದು ಮಾಹಿತಿ‌ ನೀಡಿದ್ದಾರೆ.

ಅಬ್ಬಾ.. ಇದೆಂಥಾ ಖಗೋಳ ಸ್ಫೋಟ: ನಾಸಾ ವಿಜ್ಞಾನಿಗಳೇ ಕಂಗಾಲು!

ಖಗೋಳ ಶಾಸ್ತ್ರಜ್ಞರ ವಿರೋಧ ಯಾಕೆ?
48 ಗಂಟೆಗಳ ಬಳಿಕ ಈ ಸ್ಯಾಟಿಲೈಟ್ ಗಳು ತಮ್ಮ ಕಕ್ಷೆ ಸೇರಲಿವೆ.ಈ ಹಿಂದೆಯೂ ಒಂದು ಬಾರಿ ಸರಳ ರೇಖೆಯಲ್ಲಿ ಸ್ಯಾಟಲೈಟ್ ಗಳ ಸಂಚಾರ ನೋಡಿದ್ದೇವೆ‌. ಇದರಿಂದ ಮನುಷ್ಯನಿಗೆ ಯಾವುದೇ ಹಾನಿ ಇಲ್ಲ. ಆದರೆ ಖಗೋಳ ಶಾಸ್ತ್ರಜ್ಞರು ಈ ಬಗ್ಗೆ ಸ್ವಲ್ಪ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಯಾಕಂದ್ರೆ, ಟೆಲಿಸ್ಕೋಪ್ ಮೂಲಕ ಆಕಾಶದ ಅಧ್ಯಯನ ಮಾಡುವಾಗ, ಈ ರೀತಿ ಸರಳ ರೇಖೆಯಲ್ಲಿ ಬರುವ ಸ್ಯಾಟಲೈಟ್ ಗಳು ಅಧ್ಯಯನಕ್ಕೆ ಅಡ್ಡಿಪಡಿಸುತ್ತವೆ. ಈ ಕಾರಣಕ್ಕೆ ಖಗೋಳಶಾಸ್ತ್ರಜ್ಞರು ಇದನ್ನು ವಿರೋಧಿಸಿದ್ದಾರೆ‌. ಆದರೆ ಭೂಮಿಯ ಅನೇಕ ಪ್ರದೇಶಗಳಲ್ಲಿ ಇಂಟರ್ನೆಟ್ ಸೌಲಭ್ಯ ಸಿಗುತ್ತಿಲ್ಲ. ಇಂಟರ್ನೆಟ್ ಸೌಲಭ್ಯ ಈಗ ಮೂಲಭೂತ ಅಗತ್ಯವಾಗಿ ಮಾರ್ಪಟ್ಟಿದೆ. ಹಾಗಾಗಿ ಈ ರೀತಿಯ ಸ್ಯಾಟಲೈಟ್ ಬಿಡುಗಡೆ ಮಾಡುವುದು ಅನಿವಾರ್ಯ. ಈ ಸ್ಯಾಟಲೈಟ್ ಗಳಿಂದ ಭೂಮಿಯ ಎಲ್ಲಾ ಪ್ರದೇಶಕ್ಕೂ ಇಂಟರ್ನೆಟ್ ಸೌಲಭ್ಯ ಸಿಗುತ್ತೆ.ಇನ್ನು ಮುಂದೆಯೂ ಈ ರೀತಿಯ ಸ್ಯಾಟಲೈಟ್ ಗಳು ಬರಿಯ ಕಣ್ಣಿಗೆ ಕಾಣಿಸುತ್ತೆ ಎಂದು ಅತುಲ್ ಭಟ್ ಹೇಳಿದ್ದಾರೆ.

click me!