ಹಕ್ಕಿಜ್ವರ ಪೀಡಿತ ಹರಿಹರ ತಾಲೂಕಿನ ಜನರ ಆತಂಕ ಹೆಚ್ಚಿಸಿದ ಘಟನೆ| ಕೋಳಿ ಫಾರಂನಲ್ಲಿ ಕೋಳಿಗಳ ನಿಗೂಢ ಸಾವಿಗೆ ಗ್ರಾಮಸ್ಥರಲ್ಲಿ ಆತಂಕ| ಬನ್ನಿಕೋಡು ಗ್ರಾಮದಿಂದ 10 ಕಿಮೀ ವ್ಯಾಪ್ತಿಯ ಸರ್ವೇಕ್ಷಣಾ ವಲಯದಲ್ಲಿ ಬುಧವಾರದಿಂದಲೇ ಡಿಎಸ್‌ಇನ್ಫೆಕ್ಷನ್ ಕೆಲಸ ಆರಂಭ|
ದಾವಣಗೆರೆ, ಹರಿಹರ(ಮಾ.25): ಹಕ್ಕಿ ಜ್ವರದಿಂದ ಸಾವಿರಾರು ಕೋಳಿಗಳ ಕಿಲ್ಲಿಂಗ್ ಮಾಡಿದ ಬೆನ್ನಲ್ಲೇ ಹರಿಹರ ತಾ. ಕೆಂಚನಹಳ್ಳಿಯ ಕೋಳಿ ಫಾರಂನಲ್ಲಿ ಸಾವಿರಾರು ಕೋಳಿಗಳು ಸತ್ತಿರುವುದು, ಗ್ರಾಮದ ಬಳಿ 20ಕ್ಕೂ ಹೆಚ್ಚು ಕೊಕ್ಕರೆಗಳು ಸಾವನ್ನಪ್ಪಿರುವುದು ಗ್ರಾಮಸ್ಥರಲ್ಲಿ ಭಯ ಹುಟ್ಟು ಹಾಕಿದೆ.
ಕೆಂಚನಹಳ್ಳಿ ಹೊರ ವಲಯದ ಕೋಳಿ ಫಾರ್ಮನಲ್ಲಿ ಸಾವಿರಾರು ಕೋಳಿಗಳು ಸತ್ತಿದ್ದು, ಯಾವ ಕಾರಣಕ್ಕಾಗಿ ಹೀಗೆ ಕೋಳಿಗಳು ಸಾಮೂಹಿಕವಾಗಿ ಸಾವನ್ನಪ್ಪಿವೆಯೆಂಬುದೇ ಗೊತ್ತಾಗದೇ ಸುತ್ತಮುತ್ತಲಿನ ಗ್ರಾಮಸ್ಥರಲ್ಲೂ ಭಯ ಉಂಟು ಮಾಡಿದೆ.
ಕೆಂಚನಹಳ್ಳಿ-ಕುರುಬರಹಳ್ಳಿ ಗ್ರಾಮಗಳ ಮಧ್ಯ ಇರುವ ಕೋಳಿ ಫಾರಂನಲ್ಲಿ ನೂರಾರು ಕೋಳಿಗಳು ಅಸಹಜವಾಗಿ ಸಾವನ್ನಪ್ಪಿವೆ. ಅಲ್ಲದೇ, ಕೊಕ್ಕರೆ(ಬೆಳ್ಳಕ್ಕಿ)ಗಳು ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಸತ್ತಿರುವುದು ಈಗ ಗ್ರಾಮಸ್ಥರು ಜೀವ ಕೈಯಲ್ಲಿ ಹಿಡಿದು ದಿನ ಕಳೆಯುವಂತಹ ಪರಿಸ್ಥಿತಿಗೆ ಕಾರಣವಾಗಿದೆ.
ಕೊರೋನಾ ಆತಂಕ: ನೀವು ಹೋಗೋ ATMಗಳಲ್ಲಿ ಸ್ಯಾನಿಟೈಸರ್ ಇರುತ್ತಾ?
ವಿಶ್ವವನ್ನೇ ಕಾಡುತ್ತಿರುವ ಕೊರೋನಾ ವೈರಸ್ ಭೀತಿಯ ಮಧ್ಯೆ ಇದೀಗ ನಿಗೂಢ ರೋಗಕ್ಕೆ ಕೋಳಿಗಳು, ಕೊಕ್ಕರೆಗಳು ಸಾವನ್ನಪ್ಪಿರುವುದು ಆಡಳಿತ ಯಂತ್ರದ ಚಿಂತೆ ಹೆಚ್ಚಿಸಿದೆ. ಹರಿಹರ ತಾ. ಬನ್ನಿಕೋಡು ಗ್ರಾಮದಲ್ಲಿ ಕೋಳಿಗಳಿಗೆ ಹಕ್ಕಿಜ್ವರ ಕಾಣಿಸಿಕೊಂಡು, ಸಾಕಷ್ಟುಕೋಳಿಗಳು ಸತ್ತಿದ್ದವು. ನಂತರ ಗ್ರಾಮದಲ್ಲಿ ಕಲ್ಲಿಂಗ್ ಮಾಡಿ, 10 ಕಿಮೀ ಪ್ರದೇಶದ ಮೇಲೆ ನಿಗಾ ವಹಿಸಲಾಗಿತ್ತು.
ಸತ್ತ ಕೋಳಿಗಳನ್ನು ಫಾರಂ ಮಾಲೀಕರು ಅಲ್ಲಿಯೇ ಗುಂಡಿ ತೋಡಿ ಮುಚ್ಚಿ ಹಾಕಿದ್ದಾರೆ. ವಿಷಯ ತಿಳಿದ ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಭಾಸ್ಕರ ನಾಯಕ ಮತ್ತು ತಂಡ ಸ್ಥಳಕ್ಕೆ ಭೇಟಿ ನೀಡಿ, ಕೋಳಿಗಳ ಸ್ಯಾಂಪಲ್, ಕೊಕ್ಕರೆಗಳ ಸ್ಯಾಂಪಲ್ ಸಂಗ್ರಹಿಸಿ, ಲ್ಯಾಬ್‌ಗೆ ಕಳಿಸಿಕೊಟ್ಟಿದೆ. ಇದೀಗ ಇಲಾಖೆ ಲ್ಯಾಬ್ ವರದಿ ನಿರೀಕ್ಷೆಯಲ್ಲಿದೆ.
ಆಶಾ ಕಾರ್ಯಕರ್ತೆಯರು, ವೈದ್ಯರು ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಗ್ರಾಮಸ್ಥರಿಗೆ ಹಕ್ಕಿ ಜ್ವರ ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸಿದರು. ಸಾವಿರಾರು ಕೋಳಿಗಳು, 20ಕ್ಕೂ ಹೆಚ್ಚು ಬೆಳ್ಳಕ್ಕಿಗಳ ಸಾವು ಗ್ರಾಮಸ್ಥರಲ್ಲಿ ತೀವ್ರ ಭಯವನ್ನು ಹುಟ್ಟು ಹಾಕಿದೆ.
ಬನ್ನಿಕೋಡು: ಭೂಪಾಲ್ ಲ್ಯಾಬ್‌ನ ವರದಿ ನಿರೀಕ್ಷೆಯಲ್ಲಿ ಇಲಾಖೆ
ಹರಿಹರ ತಾ. ಬನ್ನಿಕೋಡು ಗ್ರಾಮದಲ್ಲಿ ಹಕ್ಕಿಜ್ವರ ದೃಢಪಟ್ಟ ಹಿನ್ನೆಲೆಯಲ್ಲಿ 1 ಕಿಮೀ ವ್ಯಾಪ್ತಿಯಲ್ಲಿ ಕೋಳಿ ಮತ್ತು ಪಕ್ಷಿಗಳನ್ನು ವೈಜ್ಞಾನಿಕವಾಗಿ ನಾಶ(ಕಲ್ಲಿಂಗ್)ಪಡಿಸುವ ಕೆಲಸ ಮುಗಿದಿದೆ ಎಂದು ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಭಾಸ್ಕರ ನಾಯಕ ಡಿಸಿ ಕಚೇರಿ ಸಭೆಯಲ್ಲಿ ತಿಳಿಸಿದ್ದಾರೆ.
ಬನ್ನಿಕೋಡು ಗ್ರಾಮದಿಂದ 10 ಕಿಮೀ ವ್ಯಾಪ್ತಿಯ ಸರ್ವೇಕ್ಷಣಾ ವಲಯದಲ್ಲಿ ಬುಧವಾರದಿಂದಲೇ ಡಿಎಸ್‌ಇನ್ಫೆಕ್ಷನ್ ಕೆಲಸ ಆರಂಭವಾಗುತ್ತದೆ. ಇನ್ನು 3 ತಿಂಗಳವರೆಗೆ ಪ್ರತಿ 15 ದಿನಕ್ಕೊಮ್ಮೆ ಈ ಪ್ರದೇಶದಿಂದ ಸ್ಯಾಂಪಲ್ ತೆಗೆದು, ಪರೀಕ್ಷೆಗಾಗಿ ಭೂಪಾಲ್ ಲ್ಯಾಬ್‌ಗೆ ಕಳಿಸಲಾಗುವುದು ಎಂದು ಡಿಸಿ ಗಮನಕ್ಕೆ ತಂದರು.