ಮೈಸೂರು: ಶೀಘ್ರ ಕಾವೇರಿ ನದಿಯಿಂದ ಶುದ್ಧ ನೀರು ಸರಬರಾಜು

By Kannadaprabha News  |  First Published Jan 31, 2024, 1:15 PM IST

ಅಮೃತ ಯೋಜನೆಯಡಿ ಕಾವೇರಿ ನದಿಯಿಂದ ಪಟ್ಟಣಕ್ಕೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು 30 ಕೋಟಿ ರು. ಗಳನ್ನು ಶಾಸಕ ಡಿ. ರವಿಶಂಕರ್ ಅವರು ಮಂಜೂರು ಮಾಡಿಸಿದ್ದು, ಶೀಘ್ರದಲ್ಲಿಯೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಡಾ. ಜಯಣ್ಣ ಹೇಳಿದರು.


  ಕೆ.ಆರ್. ನಗರ :  ಅಮೃತ ಯೋಜನೆಯಡಿ ಕಾವೇರಿ ನದಿಯಿಂದ ಪಟ್ಟಣಕ್ಕೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು 30 ಕೋಟಿ ರು. ಗಳನ್ನು ಶಾಸಕ ಡಿ. ರವಿಶಂಕರ್ ಅವರು ಮಂಜೂರು ಮಾಡಿಸಿದ್ದು, ಶೀಘ್ರದಲ್ಲಿಯೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಡಾ. ಜಯಣ್ಣ ಹೇಳಿದರು.

ಪಟ್ಟಣದ ಪುರಸಭೆ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ  ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಇದರ ಜತೆಗೆ ಒಳಚರಂಡಿ ಹೆಚ್ಚುವರಿ ಕಾಮಗಾರಿಗೆ 20 ಕೋಟಿ ಅನುದಾನ ನೀಡಲಾಗಿದ್ದು, ಆ ಕೆಲಸವು ತ್ವರಿತವಾಗಿ ಆರಂಭವಾಗಲಿದೆ ಎಂದರು.

Latest Videos

undefined

ಕೆಲಸಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ಪಟ್ಟಣದ ಸಂಪೂರ್ಣ ಡಿಪಿಆರ್ ತಯಾರಿಸಲು ಶಾಸಕರು ಸೂಚನೆ ನೀಡಿದ್ದು, ಆ ಕೆಲಸವು ಪ್ರಗತಿಯಲ್ಲಿದ್ದು, ಇಂದಿನ ಸಭೆಯಲ್ಲಿ ಸದಸ್ಯರು ಮತ್ತು ಸಾರ್ವಜನಿಕರು ನೀಡಿರುವ ಸಲಹೆಗಳನ್ನು ಅನುಷ್ಠಾನಗೊಳಿಸಲು ಅನುದಾನ ಲಭ್ಯತೆಯ ಆಧಾರದ ಮೇಲೆ ಗಮನ ಹರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಸದಸ್ಯ ಪ್ರಕಾಶ್ ಮಾತನಾಡಿ, ಪಟ್ಟಣಾದ್ಯಂತ ಹೊಸದಾಗಿ ವಾಣಿಜ್ಯ ಮಳಿಗೆ ನಿರ್ಮಾಣ ಮಾಡುತ್ತಿರುವ ಕೆಲವು ಮಾಲೀಕರು ನಿಯಮ ಬಾಹಿರವಾಗಿ ಒತ್ತುವರಿ ಮಾಡಿಕೊಂಡಿದ್ದು, ಅವರಿಗೆ ಕೂಡಲೇ ನೋಟಿಸ್ ನೀಡುವುದರ ಜತೆಗೆ ಕೆಲಸ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದರು.

ಉಮೇಶ್ ಮಾತನಾಡಿ, ಪುರಸಭೆ ಬಯಲು ರಂಗ ಮಂದಿರದ ಸುತ್ತ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಚಿಕ್ಕದಾಗಿ ಮಳಿಗೆಗಳನ್ನು ನಿರ್ಮಾಣ ಮಾಡುವುದರ ಜತೆಗೆ ಒಳಾಂಗಣದಲ್ಲಿ ಸಾರ್ವಜನಿಕರು ಕುಳಿತು ಕಾರ್ಯಕ್ರಮ ವೀಕ್ಷಿಸಲು ಅನುಕೂಲವಾಗುವಂತೆ ಆಸನದ ವ್ಯವಸ್ಥೆ ಮತ್ತು ಇಲ್ಲಿಗೆ ಬರುವವರು ವಾಯುವಿಹಾರ ನಡೆಸಲು ರಸ್ತೆ ಮಾಡಬೇಕೆಂದು ಸಲಹೆ ನೀಡಿದರು.

ನಟರಾಜು ಮಾತನಾಡಿ, ಒಳಚರಂಡಿಗೆ ಅಕ್ರಮವಾಗಿ ಸಂಪರ್ಕ ಕಲ್ಪಿಸಿಕೊಂಡಿದ್ದು, ಈ ಬಗ್ಗೆ ಕೂಡಲೇ ಸ್ಥಳ ತನಿಖೆ ಮಾಡಿ ಅಕ್ರಮ ಮಾಡಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಸದಸ್ಯರಾದ ಶಂಕರ್ ಮತ್ತು ಕೆ.ಎಲ್. ಜಗದೀಶ್ ಮಾತನಾಡಿ, ಒಳಚರಂಡಿ ಮೂಲಕ ಕೊಳಚೆ ನೀರು ನಾಲೆಗೆ ಸೇರುತ್ತಿದ್ದು, ಅದನ್ನು ತಪ್ಪಿಸಲು ತುರ್ತು ಗಮನ ಹರಿಸಬೇಕೆಂದರು.

ಸದಸ್ಯರಾದ ಸಂತೋಷ್ ಗೌಡ, ತೋಂಟದಾರ್ಯ, ವೀಣಾ ವೃಷಬೇಂದ್ರ, ಶಂಕರ್, ಮಾಜಿ ಸದಸ್ಯರಾದ ಕೆ. ವಿನಯ್, ಉಮಾಶಂಕರ್ ಮಾತನಾಡಿದರು.

ವಾಣಿಜ್ಯ ಮಳಿಗೆಗಳಿಗೆ ತೆರಿಗೆ ನಿಗದಿ ಮಾಡುವಾಗ ಸಾಕಷ್ಟು ತಾರತಮ್ಯ ಮಾಡುತ್ತಿದ್ದು, ಇದರಿಂದ ಪುರಸಭೆಗೆ ಆದಾಯ ಖೋತಾ ಆಗುತ್ತಿದೆ, ಆದ್ದರಿಂದ ಮುಂದೆ ಬಾಕಿ ತೆರಿಗೆ ವಸೂಲಿ ಮಾಡುವುದರೊಂದಿಗೆ ಸರ್ಕಾರದ ಆದೇಶಾನುಸಾರ ವಾಣಿಜ್ಯ ತೆರಿಗೆ ನಿಗದಿ ಪಡಿಸಬೇಕು ಎಂದು ಬಹುತೇಕ ಸದಸ್ಯರು ಒಕ್ಕೊರಲಿನಿಂದ ಆಗ್ರಹ ವ್ಯಕ್ತಪಡಿಸಿದರು.

ಬೆಳಗ್ಗೆ 11ಕ್ಕೆ ಪುರಸಭೆಯ ಆಡಳಿತಾಧಿಕಾರಿಗಳಾದ ಹುಣಸೂರು ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಬಜೆಟ್ ಪೂರ್ವಭಾವಿ ಸಭೆ ನಿಗದಿಯಾಗಿತ್ತು. ಆದರೆ ಅವರು ಸಭೆಗೆ ಬಾರದೆ ಮಧ್ಯಾಹ್ನ 3ಕ್ಕೆ ಬರುತ್ತೇನೆ. ನೀವೆ ಸಭೆ ಮಾಡಿ ಎಂದು ಹೇಳಿದ್ದಾರೆ. ಹೀಗಾದರೆ ನಾವು ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳುವುದು ಎಂದು ಕೆಲವು ಸದಸ್ಯರು ತಮ್ಮ ಅಸಮಾಧಾನ ಹೊರ ಹಾಕಿದರು.

click me!