
ಮಂಡ್ಯ (ಆ.22): ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನನ್ನ ಸ್ಪರ್ಧೆ ನೂರಕ್ಕೆ ನೂರರಷ್ಟುಖಚಿತ. ಅದು ಯಾವುದೇ ರಾಜಕೀಯ ಪಕ್ಷದಿಂದಲಾದರೂ ಆಗಿರಬಹುದು ಅಥವಾ ಸ್ವತಂತ್ರ ಅಭ್ಯರ್ಥಿಯಾಗಾದರೂ ಕಣಕ್ಕಿಳಿಯುತ್ತೇನೆ ಎಂದು ಜೆಡಿಎಸ್ ಮುಖಂಡ ಕೀಲಾರ ರಾಧಾಕೃಷ್ಣ ಖಡಕ್ಕಾಗಿ ಹೇಳಿದರು. ನಗರದ ಬಂದೀಗೌಡ ಬಡಾವಣೆಯಲ್ಲಿ ಶನಿವಾರ ಮುಂಬರುವ ಸಾರ್ವತ್ರಿಕ ಚುನಾವಣೆ ಅಂಗವಾಗಿ ಆಯೋಜಿಸಿದ್ದ ಜನಮನ ಅಭಿಯಾನ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಾತುಕೊಟ್ಟಿದ್ದ ಎಚ್‌ಡಿಕೆ: ನಾನಿನ್ನೂ ಜೆಡಿಎಸ್ ಪಕ್ಷದಲ್ಲೇ ಇದ್ದೇನೆ. ಈಗಲೂ ಜೆಡಿಎಸ್ ಟಿಕೆಟ್ ನನಗೇ ಸಿಗುವ ಬಗ್ಗೆ ವಿಶ್ವಾಸವಿಟ್ಟಿದ್ದೇನೆ. ಪಕ್ಷ ಟಿಕೆಟ್ ಕೊಟ್ಟರೆ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ. ಮೂರು ವರ್ಷದ ಹಿಂದೆ ಮಂಡ್ಯ ಕ್ಷೇತ್ರದ ಅಭ್ಯರ್ಥಿ ನೀನೇ ಎಂದು ಎಚ್.ಡಿ.ಕುಮಾರಸ್ವಾಮಿ ಅವರು ಮಾತುಕೊಟ್ಟಿದ್ದರು. ಚುನಾವಣೆಗೆ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆಯೂ ನನಗೆ ತಿಳಿಸಿದ್ದರು. ಅದರಂತೆ ನಾನು ಕ್ಷೇತ್ರದೊಳಗೆ ಕಾರ್ಯಕ್ರಮಗಳನ್ನು ನಡೆಸುತ್ತಾ ಪಕ್ಷ ಸಂಘಟನೆ ಹಾಗೂ ಜನರ ವಿಶ್ವಾಸ ಗಳಿಸಿಕೊಳ್ಳುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೆನು ಎಂದು ಹೇಳಿದರು.
ನಾಗಮಂಗಲದಲ್ಲಿ ಜೋರಾದ ಚುನಾವಣಾ ಕಾವು, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಶಿವರಾಮೇಗೌಡ ಭರ್ಜರಿ ಸಜ್ಜು
ಗೊಂದಲದ ವಾತಾವರಣ: ಇದೀಗ ಹೊಸ ಮುಖಗಳು, ಮುಖಂಡರು ತಾವೇ ಅಭ್ಯರ್ಥಿ ಎಂದು ಹೇಳಿಕೊಂಡು ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ಇದರಿಂದ ನನಗೆ ಸಹಜವಾಗಿಯೇ ಮುಜುಗರವಾಗುತ್ತಿದೆ. ಕ್ಷೇತ್ರದೊಳಗೆ ಗೊಂದಲಮಯ ವಾತಾವರಣ ಸೃಷ್ಟಿಯಾಗುತ್ತಿದೆ. ಎಲ್ಲರನ್ನೂ ಕರೆದು ಈ ಗೊಂದಲಗಳಿಗೆ ತೆರೆ ಎಳೆಯುವ ಕೆಲಸವನ್ನೂ ವರಿಷ್ಠರು ಮಾಡುತ್ತಿಲ್ಲ. ಅಭ್ಯರ್ಥಿ ವಿಚಾರವಾಗಿ ನನ್ನನ್ನೂ ಕರೆದು ಮಾತನಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಹಿಂದಿನ ಚುನಾವಣೆಯಲ್ಲೇ ನನಗೆ ಟಿಕೆಟ್ ಸಿಗಬೇಕಿತ್ತು.
ಆದರೆ, ಎಂ.ಶ್ರೀನಿವಾಸ್‌ಗೆ ಕೊನೆಯ ಅವಕಾಶವೆಂಬ ಕಾರಣಕ್ಕೆ ನಾನೇ ಹಿಂದೆ ಸರಿದು ಅವರ ಪರವಾಗಿ ನಿಂತು ಚುನಾವಣಾ ಪ್ರಚಾರದಲ್ಲಿ ತೊಡಗಿ ಗೆಲುವಿಗೆ ಶ್ರಮವಹಿಸಿದೆ. ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ ಅಭ್ಯರ್ಥಿ ಆಯ್ಕೆಯನ್ನು ವರಿಷ್ಠರು ಸ್ಪಷ್ಟಪಡಿಸದೆ ಗೊಂದಲದಲ್ಲೇ ಉಳಿಸಿದ್ದಾರೆ. ಹೀಗಾಗಿ ನಮ್ಮ ಮುಂದಿನ ರಾಜಕೀಯ ಬೆಳವಣಿಗೆ ದೃಷ್ಟಿಯಿಂದ ದೃಢ ತೀರ್ಮಾನ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದರು.
ಕಾಂಗ್ರೆಸ್‌ನಿಂದ ಆಹ್ವಾನ: ನನಗೆ ಕಾಂಗ್ರೆಸ್ ಪಕ್ಷದಿಂದ ಆಹ್ವಾನ ಬಂದಿದೆ. ಆ ಪಕ್ಷದಲ್ಲೂ ನನಗೆ ಹಳೆಯ ಸ್ನೇಹಿತರು, ಹಿತೈಷಿಗಳಿದ್ದಾರೆ. ಟಿಕೆಟ್ ಕೊಟ್ಟರೆ ಕಾಂಗ್ರೆಸ್ ಸೇರುವುದಕ್ಕೂ ಸಿದ್ಧನಿದ್ದೇನೆ. ಇಲ್ಲವೇ ಪಕ್ಷೇತರ ಅಭ್ಯರ್ಥಿಯಾಗುವುದಕ್ಕೂ ರೆಡಿಯಾಗಿದ್ದೇನೆ. ಯಾವ ಕಾರಣಕ್ಕೂ ಚುನಾವಣಾ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಚುನಾವಣೆಗೆ ಸ್ಪರ್ಧಿಸುವ ವಿಚಾರವನ್ನು ಸ್ಪಷ್ಟಪಡಿಸಿದರು. ಸದ್ಯಕ್ಕೆ ನಾನು ಯಾವುದೇ ಆತುರದ ತೀರ್ಮಾನವನ್ನು ಕೈಗೊಳ್ಳುವುದಿಲ್ಲ. ಜೆಡಿಎಸ್‌ನಲ್ಲಿರಬೇಕೇ ಬೇಡವೇ ಎಂಬ ವಿಷಯವಾಗಿ ಅಭಿಮಾನಿಗಳು, ಬೆಂಬಲಿಗರು, ಕ್ಷೇತ್ರದ ಜನರೊಂದಿಗೆ ಚರ್ಚಿಸಿ ನಂತರ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.
ಜನರ ನಡುವೆ ಸೇತುವೆಯಾಗಿ ಕೆಲಸ ಮಾಡುವೆ: ಮುಂಬರುವ ಚುನಾವಣೆಯಲ್ಲಿ ಅಭ್ಯರ್ಥಿಯಾಗಲು ಇಚ್ಛಿಸಿರುವ ನಾನು ಜನರ ಸಮಸ್ಯೆಗಳಿಗೆ ಸ್ಪಂದಿಸಿ ನಿವಾರಿಸುವ ನಿಟ್ಟಿನಲ್ಲಿ ಸೇತುವೆಯಾಗಿ ಕೆಲಸ ಮಾಡುತ್ತೇನೆ ಎಂದು ಜೆಡಿಎಸ್ ಮುಖಂಡ ಕೆ.ಕೆ.ರಾಧಾಕೃಷ್ಣ ಹೇಳಿದರು. ನಗರದ ಬಂದೀಗೌಡ ಬಡಾವಣೆಯಲ್ಲಿರುವ ಗೃಹ ಕಚೇರಿಯಲ್ಲಿ ನಡೆದ ಜನಮನ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಳೆದ 6 ವರ್ಷಗಳಿಂದ ಕ್ಷೇತ್ರದೊಳಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಮಂಡ್ಯ, ಕೆರಗೋಡು, ಬಸರಾಳಿನಲ್ಲಿ ಕಚೇರಿ ತೆರೆದು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ದೇವಸ್ಥಾನ ಜೀರ್ಣೋದ್ಧಾರ, ಕೊರೋನಾ ಸಂಕಷ್ಟಕಾಲದಲ್ಲಿ ಆಹಾರ ಕಿಟ್ ವಿತರಣೆ, ಮಳೆ ಸಂತ್ರಸ್ತರಿಗೆ ನೆರವು ಹೀಗೆ ವಿವಿಧ ಜನಪರ ಕಾರ್ಯಗಳನ್ನು ನಡೆಸಿಕೊಂಡು ಬಂದಿರುವುದಾಗಿ ತಿಳಿಸಿದರು.
ಆಸ್ತಿಗಾಗಿ ಎಚ್‌ಐವಿ ಪೀಡಿತ ಗಂಡನಿಗೆ ಗೃಹಬಂಧನ : ಪತ್ನಿ, ಮಕ್ಕಳ ವಿರುದ್ಧ ಆರೋಪ
ಚುನಾವಣೆ ಸಮೀಪಿಸುತ್ತಿರುವುದರಿಂದ ನನ್ನ ಸ್ಪರ್ಧೆಯ ಉದ್ದೇಶ, ಗುರಿ, ಕ್ಷೇತ್ರದ ಅಭಿವೃದ್ಧಿ ಚಿಂತನೆ ಕುರಿತು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಅದಕ್ಕಾಗಿ ಜನಮನ ಅಭಿಯಾನ ನಡೆಸುತ್ತಿದ್ದು, ಪ್ರತಿ ಗ್ರಾಮ ಪಂಚಾಯಿತಿ ಮತ್ತು ವಾರ್ಡ್‌ಗೆ 5 ಮಂದಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ನನ್ನ ವ್ಯಕ್ತಿತ್ವ, ಆಶಯ, ಸಾಮಾಜಿಕ ಕಾರ್ಯಗಳನ್ನು ಜನರಿಗೆ ತಿಳಿಸುವರು. ಜೊತೆಗೆ ಜನರ ಸಮಸ್ಯೆಗಳನ್ನು ಗುರುತಿಸಲಾಗುವುದು. ಈ ಸಮಸ್ಯೆಗಳನ್ನು ಪ್ರಾಮುಖ್ಯತೆ ಆಧರಿಸಿ ಸ್ಥಳೀಯವಾಗಿ ಬಗೆಹರಿಸುವ ಸಾಧ್ಯತೆಗಳಿದ್ದರೆ ಒತ್ತು ನೀಡಲಾಗುತ್ತದೆ. ಸರ್ಕಾರ, ಅಧಿಕಾರದ ಮಟ್ಟದಲ್ಲಿದ್ದರೆ ಪ್ರಯತ್ನ ನಡೆಸಿ ಪರಿಹಾರ ಒದಗಿಸುವ ಕೆಲಸವನ್ನು ಮಾಡಲಿದ್ದಾರೆ ಎಂದರು.