ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನ ಯುವಕರ ತಂಡದಿಂದ ಮಾದರಿ ಕಾರ್ಯ| ಕೊರೋನಾ ವೈರಸ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನಡೆಸಲು ಈ ಯುವಕರ ತಂಡ ಸ್ವಯಂಪ್ರೇರಣೆಯಿಂದ ಮುಂದೆ ಬಂದಿದ್ದು, ಇತರ ಯುವಕರಿಗೆ ಮಾದರಿ|
ಸಂತೋಷ ಮಹಾಂತಶೆಟ್ಟರ
ರಾಣಿಬೆನ್ನೂರು(ಜು.25): ಮಹಾಮಾರಿ ಕೊರೋನಾ ವೈರಸ್‌ನಿಂದ ಜಗತ್ತು ತಲ್ಲಣಗೊಂಡಿದ್ದು, ವೈರಸ್‌ನಿಂದ ಮೃತಪಟ್ಟ ವ್ಯಕ್ತಿಯ ಶವಸಂಸ್ಕಾರಕ್ಕೆ ಸಂಬಂಧಿಕರು ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಗರದಲ್ಲಿ ಮುಸ್ಲಿಂ ಯುವಕರ ತಂಡವೊಂದು ಕೊರೋನಾ ವೈರಸ್‌ನಿಂದ ಮೃತಪಟ್ಟವರಿಗೆ ಗೌರವಯುತ ಶವಸಂಸ್ಕಾರ ನಡೆಸಲು ಮುಂದಾಗಿದ್ದಾರೆ.
ನಗರದಲ್ಲಿ ಜು. 23ರಂದು ಕೊರೋನಾ ವೈರಸ್‌ನಿಂದ ಮೃತಪಟ್ಟವ್ಯಕ್ತಿಯ ಶವಕ್ಕೆ, ನಗರದ ಮುಸ್ಲಿಂ ಯುವಕರು ತಾಲೂಕು ಆಡಳಿತದ ಮಾರ್ಗದರ್ಶನದಲ್ಲಿ ಹಾಗೂ ಕೋವಿಡ್ ಮಾರ್ಗಸೂಚಿಯಂತೆ ಗೌರವಯುತವಾಗಿ ಸಂಸ್ಕಾರ ಮಾಡಿದ್ದಾರೆ.
ಸ್ವಯಂಪ್ರೇರಣೆಯಿಂದ ಮುಂದಾದ ತಂಡ:
ಕೊರೋನಾ ವೈರಸ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನಡೆಸಲು ಈ ಯುವಕರ ತಂಡ ಸ್ವಯಂಪ್ರೇರಣೆಯಿಂದ ಮುಂದೆ ಬಂದಿದ್ದು, ಇತರ ಯುವಕರಿಗೆ ಮಾದರಿಯಾಗಿದೆ. ಈಗಾಗಲೇ ತಾಲೂಕಿನಲ್ಲಿ ಕೊರೋನಾದಿಂದ ಮೃತಪಟ್ಟಶವಕ್ಕೆ ಹಿಂದೂ ಸಂಪ್ರದಾಯದಂತೆ ಪೂಜೆ ಸಲ್ಲಿಸಿ, ಗೌರಯುತವಾಗಿ ಅಂತ್ಯಸಂಸ್ಕಾರ ನಡೆಸಲಾಗಿದೆ. ಕೊರೋನಾ ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕು ಆರೋಗ್ಯ ನೀಡುವ ಸಲಹೆಯಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಅಂತ್ಯಸಂಸ್ಕಾರ ನಡೆಸಲಾಯಿತು ಎನ್ನುತ್ತಾರೆ ತಂಡದ ನಾಯಕ ಶೋಹೇಬ್.
ರಾಣಿಬೆನ್ನೂರು: ಕೊರೋನಾ ಸೋಂಕಿತ ವ್ಯಕ್ತಿಯ ಶವಸಂಸ್ಕಾರಕ್ಕೆ ಅಡ್ಡಿ, ಪ್ರತಿಭಟನೆ
ಲಾಕ್‌ಡೌನ್ ಅವಧಿಯಲ್ಲಿ ಉತ್ತಮ ಕಾರ್ಯ:
ಯುವಕರ ತಂಡ ಲಾಕ್‌ಡೌನ್ ಅವಧಿಯಲ್ಲಿಯೂ ಉತ್ತಮ ಕಾರ್ಯ ಮಾಡಿದ್ದು, ವಿವಿಧ ಭಾಗದಲ್ಲಿ ಬಡಜನರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿದೆ. ತಮ್ಮ ಕೆಲಸದ ಜತೆಗೆ ಒಂದಿಷ್ಟುಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವ ಉದ್ದೇಶವಿದೆ ಎನ್ನುತ್ತಾರೆ ತಂಡದ ಸದಸ್ಯರು. ಕೊರೋನಾದಿಂದ ಮೃತಪಟ್ಟವ್ಯಕ್ತಿಯ ಅಂತ್ಯಸಂಸ್ಕಾರದಲ್ಲಿ ತಂಡದ ಇರ್ಫಾನ್ ಅಹ್ಮದ್ ಕರ್ಜಗಿ, ಫೈರೋಜ್ ಖಾನ್, ಜಹೀರ್ ಅಹ್ಮದ್, ನವೀದ ಭಾಗಿಯಾಗಿದ್ದರು. ಕೊರೋನಾ ಸೋಂಕಿತರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುತ್ತಿರುವ ಯುವಕರ ತಂಡ ಕಾರ್ಯ ಶ್ಲಾಘನೀಯ. ಆರೋಗ್ಯ ಇಲಾಖೆ ಪರವಾಗಿ ಈ ತಂಡವನ್ನು ಅಭಿನಂದಿಸುತ್ತೇನೆ. ಕೋವಿಡ್ ಸಮಯದಲ್ಲಿ ಈ ಯುವಕರ ತಂಡ ಇತರರಿಗೆ ಮಾದರಿಯಾಗಿದೆ ಎಂದು ರಾಣಿಬೆನ್ನೂರು ತಾಲೂಕು ಆರೋಗ್ಯಾಧಿಕಾರಿ ಸಂತೋಷಕುಮಾರ ಹೇಳಿದ್ದಾರೆ.
ನಾವು ಸ್ವಯಂಪ್ರೇರಣೆಯಿಂದ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುತ್ತೇವೆ ಎಂದು ತಾಲೂಕು ಆಡಳಿತಕ್ಕೆ ಮಾಹಿತಿ ನೀಡಿದ್ದೇವೆ. ಮೃತಪಟ್ಟವ್ಯಕ್ತಿಯ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ನಡೆಸುವ ಉದ್ದೇಶದಿಂದ ಈ ಕೆಲಸಕ್ಕೆ ಮುಂದಾಗಿದ್ದೇವೆ ಎಂದು ಯುವಕರ ತಂಡ ಮುಖ್ಯಸ್ಥ ಶೋಹಿಬ್ ತಿಳಿಸಿದ್ದಾರೆ.