Koppal: ಮುಸ್ಲಿಂ ವ್ಯಕ್ತಿಯ ಆಂಜನೇಯನ ಭಕ್ತಿ: ಹಲಾಲ್ ಗದ್ದಲದ ನಡುವೆ ಮಾದರಿಯಾದ ಅಜೀಮ್ ಸಾಬ್

By Govindaraj S  |  First Published Apr 8, 2022, 4:39 PM IST

ಇಮಾಮ್ ಸಾಬ್‌ಗೂ ಗೋಕುಲಾಷ್ಟಮಿಗೂ ಎಲ್ಲಿಂದ  ಸಂಬಂಧ ಎನ್ನುವ ಮಾತಿದೆ. ಈ ಮಾತಿನಂತೆ ಇಲ್ಲೊಂದು ಅಪರೂಪದ ಘಟನೆ ಇದೆ. ಈ ಘಟನೆಯನ್ನ ನೀವು ನೋಡಿದರೆ ನಾವು ಬದುಕಿದರೆ ಇವರಂತೆ ಬದುಕಬೇಕು ಎನ್ನುವ ಭಾವನೆ ನಿಮ್ಮಲ್ಲಿ ಮೂಡದೆ ಇರದು. ಅಂತಹ ಭಾವೈಕ್ಯತೆಯ ಕುರಿತು ನಾವಿಂದು ನಿಮಗೆ ಹೇಳುತ್ತೇವೆ.


ವರದಿ: ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್

ಕೊಪ್ಪಳ (ಏ.08): ಇಮಾಮ್ ಸಾಬ್‌ಗೂ ಗೋಕುಲಾಷ್ಟಮಿಗೂ ಎಲ್ಲಿಂದ  ಸಂಬಂಧ ಎನ್ನುವ ಮಾತಿದೆ. ಈ ಮಾತಿನಂತೆ ಇಲ್ಲೊಂದು ಅಪರೂಪದ ಘಟನೆ ಇದೆ. ಈ ಘಟನೆಯನ್ನ ನೀವು ನೋಡಿದರೆ ನಾವು ಬದುಕಿದರೆ ಇವರಂತೆ ಬದುಕಬೇಕು ಎನ್ನುವ ಭಾವನೆ ನಿಮ್ಮಲ್ಲಿ ಮೂಡದೆ ಇರದು. ಅಂತಹ ಭಾವೈಕ್ಯತೆಯ ಕುರಿತು ನಾವಿಂದು ನಿಮಗೆ ಹೇಳುತ್ತೇವೆ.

Tap to resize

Latest Videos

ಏನಿದು ಭಾವೈಕ್ಯತೆಯ ಬೆಸುಗೆ: ಆತನೊಬ್ಬ ಮುಸ್ಲಿಂ (Muslim) ಸಮುದಾಯಕ್ಕೆ ಸೇರಿದ ವ್ಯಕ್ತಿ. ಆತ ಮೊಹರಂ ಹಬ್ಬದಲ್ಲಿ ಅಲಾಯಿ ದೇವರನ್ನು ಹೊರುತ್ತಾರೆ, ನಿತ್ಯ ಹನುಮಂತ (Hanuman) ದೇವರ ಪೂಜೆ ಮಾಡುತ್ತಾರೆ. ಹನುಮಂತ ದೇವರ ಪೂಜೆ ಮಾಡದೆ ಅವರು ತಮ್ಮ ವೃತ್ತಿ ಆರಂಭಿಸುವುದಿಲ್ಲ. ಮನೆಯ ಮುಂದೆ ಹನುಮಂತ ದೇವರನ್ನು ಪ್ರತಿಷ್ಠಾಪಿಸಿದ್ದಾರೆ. ರಾಜ್ಯದಲ್ಲಿ ಧರ್ಮಗಳ ಮಧ್ಯೆ ವಿವಾದ ಇರುವಾಗಲೇ ಅಜೀಮ್‌ರ ಧರ್ಮಾತೀತ ಆಚರಣೆ ಗಮನ ಸೆಳೆಯುತ್ತಿದೆ.

Koppal: ಅಪಘಾತದಲ್ಲಿ ಗಾಯಗೊಂಡಿದ್ದವರ ನೆರವಿಗೆ ಧಾವಿಸಿ ಮಾನವೀಯತೆ ಮೆರೆದ ಗವಿಸಿದ್ದೇಶ್ವರ ಸ್ವಾಮೀಜಿ

ಯಾರು ಈ ಭಾವೈಕ್ಯತೆಯ ಹರಿಕಾರ: ನಾವು ನಿಮಗೆ ಹೇಳಲು ಹೊರಟಿರುವ ಭಾವೈಕ್ಯತೆಯ ಹರಿಕಾರ ವ್ಯಕ್ತಿಯ ಹೆಸರು, ಅಜೀಮ್ ಸಾಬ್ ಹಳ್ಳಿಕೆರಿ (Azim Saab). ಕೊಪ್ಪಳ (Koppal) ತಾಲೂಕಿನ ಕವಲೂರು (Kavaluru) ಗ್ರಾಮದವರು. ಕೂಲಿ ಕಾರ್ಮಿಕನಾಗಿ ಕಾರ್ಯನಿರ್ವಹಿಸುವ ಈತ, ಕವಲೂರು ಗ್ರಾಮದ ತಮ್ಮ ಮನೆಯ ಮುಂದೆ ಹನುಮಂತ ದೇವರ ಪ್ರತಿಷ್ಠಾಪಿಸಿದ್ದಾರೆ. ಕೂಲಿ ಕೆಲಸ ಮಾಡುವ ಅಜೀಮ್ ಸಾಬ್ ನಿತ್ಯ ಕೆಲಸಕ್ಕೆ ಹೋಗುವ ಮುನ್ನ ಮೊದಲು ಹನುಮಂತದೇವರಿಗೆ ಪೂಜೆ ಸಲ್ಲಿಸುತ್ತಾರೆ, ದೇವರ ಮುಂದೆ ಕುಳಿತು ಪ್ರಾರ್ಥನೆ ಮಾಡುತ್ತಾರೆ.

ಹನುಮಂತನ ಭಕ್ತನಾಗಲು ಕಾರಣ: ಪ್ರತಿಯೊಂದು ಕೆಲಸವಾಗಲಿ,ಆಚರಣೆ ಆಗಲಿ ಅದಕ್ಕೊಂದು ಕಾರಣ ಇರಲೇಬೇಕು. ಹಾಗೇಯೇ ಅಜೀಮ್ ಸಾಬ್ ಹನುನಂತನ ಭಕ್ತನಾಗಲು ಒಂದು ಕಾರಣವು ಇದೆ. ಆ ಕಾರಣ ಏನೆಂದರೆ, ಅಜೀಮ್ ಸಾಬ್‌ ಬಾಲ್ಯದಲ್ಲಿರುವಾಗ ಅವರ ಮನೆತನದಲ್ಲಿ ಅಲಾಯಿ ದೇವರ ಹೊರುವ ಕುರಿತು ತಮ್ಮ ಕುಟುಂಬದ ತಂದೆಯ ಅಣ್ಣ ತಮ್ಮಂದಿರ ಮಧ್ಯೆ ಜಗಳವಾಯಿತು, ಆಗ ಬೇಸರವಾಗಿ ರಾತ್ರಿ ವೇಳೆ ಮನೆ ಬಿಟ್ಟು ಹೋಗಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದುಕೊಂಡು ಗ್ರಾಮದಿಂದ ಸುಮಾರು 8 ಕಿಮೀ ದೂರದಲ್ಲಿರುವ ಜವಳಗಟ್ಟಿಯಲ್ಲಿಯ ಹನುಮಂತ ದೇವರ ಗುಡಿಯ ಮುಂದೆ ಕುಳಿತಾಗ ಯಾವುದೊ ಶಕ್ತಿ ನಿನ್ನ ಸಮಸ್ಯೆ ಬಗೆಹರಿದಿದೆ ಮನೆಗೆ ಹೋಗು ಎಂದು ಹೇಳಿದಂತಾಗಿದೆ. ಆಗ ಮನೆಗೆ ಬಂದ ನಂತರ ತಮ್ಮ ಕುಟುಂಬದಲ್ಲಿಯ ಜಗಳ ಬಗೆಹರಿದಿದೆ, ಅಂದಿನಿಂದ ಅಜೀಮ್‌ ಸಾಬ್ ಹನುನಂತನ ಭಕ್ತನಾಗಿದ್ದಾನೆ.

ಅಜೀಮ್ ಸಾಬ್‌ನ ಇತರೆ ಧಾರ್ಮಿಕ ಕಾರ್ಯಗಳು: ಅಜೀಮ್ ಸಾಬ್ ಪ್ರತಿ ವರ್ಷ ಮೊಹರಂ ಸಂದರ್ಭದಲ್ಲಿ ಅವರು ಅಲಾಯಿ ದೇವರ ಹೊರುತ್ತಾರೆ. ಹಿಂದೂ ಮುಸ್ಲಿಂ ಭಾವೈಕ್ಯರಾಗಿರುವ ಅಜೀಮ ಸಾಬ್ ಈಗ ಗಮನ ಸೆಳೆಯುತ್ತಾರೆ, ಹನುಮಂತ ದೇವರ ಆರಾಧಕರಾಗಿರುವದರಿಂದ ಅವರನ್ನು ಜನ ಸಹ ಅವರನ್ನು ಸ್ವಾಮೀಗಳಂತೆ ಕಾಣುತ್ತಿದ್ದಾರೆ. ಆಗಾಗ ಜನರು ತಮ್ಮ ಕಷ್ಟಗಳನ್ನು ಹೇಳಿಕೊಂಡು ಅವರ ಬಳಿ ಬರುತ್ತಾರೆ ಆಗ ಅವರು ಯಾವುದೇ ಫಲಾಪೇಕ್ಷೆ ಇಲ್ಲದೆ ಅವರಿಗೆ ಸಲಹೆ ಸೂಚನೆ ನೀಡುತ್ತಾರೆ. ಅಜೀಮ ಸಾಬ್‌ರ ಕುಟುಂಬವು ಸಹ ಅವರ ಆಚರಣೆಯನ್ನು ಅನುಸರಿಸಿಕೊಂಡು ಹೋಗುತ್ತಿದ್ದಾರೆ. 

Koppal: ನಿವೃತ್ತ ಶಿಕ್ಷಕಿಯ ಬದುಕಿಗೆ ನರೇಗಾ ಆಸರೆ: ಇಳಿ ವಯಸ್ಸಲ್ಲೂ ದುಡಿದು ತಿನ್ನುವ ಪರಿಸ್ಥಿತಿ..!

ಇಂದಿನ ದಿನ ರಾಜ್ಯದಲ್ಲಿ ಹಿಂದೂ ಮುಸ್ಲಿಂ ಜನಾಂಗದ ಮಧ್ಯೆ ಹಿಜಾಬ್, ಜಾತ್ರೆ, ದೇವರ ಮುಂದೆ ವ್ಯಾಪಾರಕ್ಕಾಗಿ ವಿವಾದ ಉಂಟಾಗಿರುವ ದಿನಗಳಲ್ಲಿ ಸೂಫಿ ಶರಣರ ನಾಡಾಗಿರುವ ಕೊಪ್ಪಳ ಜಿಲ್ಲೆಯಲ್ಲಿ ಅಜೀಮಸಾಬ್‌ರ ಭಾವೈಕ್ಯತೆ ಸಾಮರಸ್ಯಕ್ಕೆ ಸಾಕ್ಷಿಯಾಗಿದ್ದಾರೆ. ಇದು ಉದಾಹರಣೆ ಮಾತ್ರ ಇದೇ ರೀತಿ ಅನೇಕರು ದೇವರೊಬ್ಬ ನಾಮ ಹಲವು ಎಂಬಂತೆ ಬದುಕುತ್ತಿದ್ದಾರೆ.

click me!