* ಕಲಬುರಗಿಯ ಚಿಂಚೋಳಿ ತಾಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ಭೂಕಂಪನ
* ಪದೇ-ಪದೇ ಭೂಕಪದಿಂದ ಭಯಗೊಂಡಿರುವ ಜನ
* ಜನರಲ್ಲಿ ಭಯ ಹೋಗಲಾಡಿಸಲು ಸಚಿವ ಸಮುರುಗೇಶ ನಿರಾಣಿ ಗ್ರಾಮ ವಾಸ್ತವ್ಯ
ಕಲಬುರಗಿ. (ನ.01): ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ಪದೇ-ಪದೇ ಭೂಕಂಪನದಿಂದಾಗಿ ಸುದ್ದಿಗೆ ಗ್ರಾಸವಾಗಿದ್ದು, ಇದರಿಂದ ಜನ ಭೀತಿಗೊಂಡಿದ್ದಾರೆ. ಅಲ್ಲದೇ ಗ್ರಾಮ ತೊರೆಯುತ್ತಿದ್ದಾರೆ.
ಜನರಲ್ಲಿ ಭಯ ಹೋಗಲಾಡಿಸಲು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಅವರು ಭೂಕಪನ ಭಯಗ್ರಸ್ತ ಗಡಿಕೇಶ್ವಾರದಲ್ಲಿ ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದಾರೆ.
ನಿರಂತರ ಭೂಕಂಪ: 'ಶೆಡ್ ಹಾಕಿ ಕೊಡಿ, ಅಲ್ಲೇ ಮಕ್ಕೊಂಡು ಜೀವಾ ಉಳಿಸ್ಕೋತೀವಿ'
ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕೈಗಾರಿಕಾ ಅದಾಲತ್, ಉದ್ಯಮಿಯಾಗು ಉದ್ಯೋಗ ನೀಡು, ವಿಜನ್-2050, ಕೆ.ಡಿ.ಪಿ.ತ್ರೈಮಾಸಿಕ ಸಭೆಗೆ ಪೂರ್ವಭಾವಿ ಹಾಗೂ ಗಡಿಕೇಶ್ವಾರ ಗ್ರಾಮ ವಾಸ್ತವ್ಯ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಭೂಕಂಪನದಿಂದ ತತ್ತರಿಸಿರುವ ಚಿಂಚೋಳಿ ತಾಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ನಎಂಬರ್ 11 ರಂದು ಜಿಲ್ಲಾಡಳಿತ ಮತ್ತು ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಗ್ರಾಮ ವಾಸ್ತವ್ಯ ಮಾಡುತ್ತೇನೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ.
ಅಂದು ಗ್ರಾಮದಲ್ಲಿ ಸಾರ್ವಜನಿಕರ ಅಹವಾಲು ಆಲಿಸಿ ಅಲ್ಲಿಯೆ ರಾತ್ರಿ ವಾಸ್ತವ್ಯ ಮಾಡಲಾಗುವುದು. ಎಲ್ಲಾ ರೀತಿಯ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಚಿಂಚೋಳಿ ತಹಶೀಲ್ದಾರ್ ಅಂಜುಂ ತಬ್ಬಸ್ಸುಮ್ ಅವರಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಮಾತನಾಡಿ, 2 ದಶಕಗಳಿಂದ ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ಭೂಕಂಪನ ಸದ್ದುಗಳು ಕೇಳಿಬರುತ್ತಿವೆ. ಆದರೆ ಕಳೆದ ಅಕ್ಟೋಬರ್ ಮಾಹೆಯಲ್ಲಿ ಗಡಿಕೇಶ್ವಾರ ಗ್ರಾಮದಲ್ಲಿ ನಿರಂತರವಾಗಿ ಕಂಪನಗಳು ಕೇಳಿಬಂದಿದ್ದರಿಂದ ಸಹಜವಾಗಿ ಗ್ರಾಮಸ್ಥರು ಭಯದಲ್ಲಿದ್ದಾರೆ ಎಂದರು.
ಇಲ್ಲಿನ ಜನರ ಭಯ ಹೋಗಲಾಡಿಸಲು ಮತ್ತು ಅವರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಲು ಜಿಲ್ಲಾಡಳಿತದಿಂದ ಎಲ್ಲಾ ಅಗತ್ಯ ಕ್ರಮ ವಹಿಸಿದೆ. ಭೂಕಂಪನದ ತೀವ್ರತೆ ಅಳೆಯಲು ಹೈದ್ರಾಬಾದಿನ ಭೂ ವಿಜ್ಞಾನಿಗಳು ಇಲ್ಲಿ ಸಿಸ್ಮೋಮೀಟರ್ ಸ್ಥಾಪಿಸಿದ್ದಾರೆ. ರಿಕ್ಟರ್ ಮಾಪಕದಲ್ಲಿ 1 ರಿಂದ 4ರಷ್ಟು ತೀವ್ರತೆ ಇಲ್ಲಿ ದಾಖಲಾಗುತ್ತಿದ್ದರೂ ಕೆಲವೊಂದು ಮನೆಗಳು ಬಿರುಕು ಬಿಟ್ಟರೆ ಹೆಚ್ಚಿನ ಹಾನಿಯಾಗಿಲ್ಲ. ಇದರಿಂದ 20 ಗ್ರಾಮಗಳು ಭಾದಿತವಾಗಿದ್ದು, 5 ಗ್ರಾಮದಲ್ಲಿ ಸಾಮೂಹಿಕ ಶೆಡ್ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಕಾಳಜಿ ಕೇಂದ್ರ ತೆರೆದು ಗ್ರಾಮಸ್ಥರಿಗೆ ಊಟ ಪೂರೈಸಲಾಗುತ್ತಿದೆ. ಈ ಪ್ರದೇಶ ಸುಣ್ಣದ ಕಲ್ಲು ಕೂಡಿದ್ದರಿಂದ ಹೀಗಾಗುತ್ತದೆ. ಇದಕ್ಕೆ ಭಯ ಪಡುವ ಅವಶ್ಯತೆವಿಲ್ಲ ಎಂದು ಭೂ ವಿಜ್ಞಾನಿಗಲು ಪ್ರಾಥಮಿಕ ಮಾಹಿತಿ ನೀಡಿದ್ದಾರೆ ಎಂದು ಸಚಿವರಿಗೆ ಮಾಹಿತಿ ನೀಡಿದರು.
ಚಿಂಚೋಳಿ ಶಾಸಕ ಡಾ. ಅವಿನಾಶ ಜಾಧವ ಮಾತನಾಡಿ, ಗಡಿಕೇಶ್ವಾರ ಸುತ್ತಮುತ್ತ 60 ಕಿ.ಮೀ. ವ್ಯಾಪ್ತಿಯಲ್ಲಿ ಭೂಕಂಪನದ ಸ್ದದಿನ ಕಾರಣ ಕಳೆದ 2 ತಿಂಗಳಿಂದ ಇಲ್ಲಿನ ಜನ ಸರಿಯಾಗಿ ನಿದ್ದೆ ಮಾಡಿಲ್ಲ. ಮನೆ ಮುಂದೆ ಶೆಡ್ ನಿರ್ಮಿಸಬೇಕು ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದ್ದು, ಸರ್ಕಾರ ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕಿದೆ ಎಂದರು.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವಾರ ಗ್ರಾಮ ಮತ್ತೆ ಭೂಕಂಪನದಿಂದಾಗಿ ಸುದ್ದಿಗೆ ಗ್ರಾಸವಾಗಿದ್ದು, ಭೂಮಿ ಕಂಪಿಸಿದ ಅನುಭದಿಂದಾಗಿ ಜನ ಭೀತಿಗೊಂಡಿದ್ದಾರೆ.
ಇಲ್ಲಿ ನಿತ್ಯ ಲಘು ಕಂಪನ ಸಂಭವಿಸುತ್ತಿದೆ ಇದರ ಅಧ್ಯಯನಕ್ಕಾಗಿ ಹೈದರಾಬಾದ್‌ನಲ್ಲಿ ರಾಷ್ಟ್ರೀಯ ಭೂಭೌತವಿಜ್ಞಾನ ಸಂಶೋಧನಾ ಸಂಸ್ಥೆ ಸಿಸ್ಮೊ ಮೀಟರ್ ಅಳವಡಿಸಿದೆ.
ಈಗಾಗಲೇ ಆತಂಕಗೊಂಡಿರುವ ಗ್ರಾಮಸ್ಥರಲ್ಲಿ ಧೈರ್ಯ ಮೂಡಿಸಲು ಜಿಲ್ಲಾಡಳಿತ ಹಲವು ಕ್ರಮಗಳನ್ನು ಕೈಗೊಂಡಿದೆ. ಅಧಿಕಾರಿಗಳು ಗ್ರಾಮದ ಆಯಕಟ್ಟಿನ ಸ್ಥಳಗಳಲ್ಲಿ ಮಾರ್ಗದರ್ಶಿ ಫಲಕಗಳ ಅಳವಡಿಸಿದ್ದು, ಇದರಲ್ಲಿ ಭೂಕಂಪನ ಸಂಭವಿಸಿದಾಗ ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳ ಕುರಿತು ಮಾರ್ಗದರ್ಶನ ಮಾಡಲಾಗಿದೆ.