ಹೊಸಕೋಟೆ (ಸೆ.13): ನಗರದ ನಾಲ್ಕನೆ ವಾರ್ಡಿನ ಗಾಣಿಗರ ಪೇಟೆ ಮುಖ್ಯ ರಸ್ತೆ ಡಾಂಬರೀಕರಣ ಕಾಮಗಾರಿಗೆ ಸ್ಥಳೀಯ ನಗರಸಭೆ ಸದಸ್ಯನನ್ನು ಪರಿಗಣಿಸದೇ ಶಾಸಕ ಶರತ್ ಬಚ್ಚೇಗೌಡ ಭೂಮಿ ಪೂಜೆ ನೆರವೇರಿಸಿ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಈ ವೇಳೆ ನಗರಸಭೆ ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿ ನಗರದ ವಿವಿಧ ವಾರ್ಡ್‌ಗಳಿಗೆ ಸುಮಾರು 5 ಕೋಟಿ ವೆಚ್ಚದ ಕಾಮಗಾರಿಗೆ ಜೆಸಿ ವೃತ್ತದಲ್ಲಿ ಉಸ್ತುವಾರಿ ಸಚಿವರೊಂದಿಗೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಶಾಸಕರು ಈ ರೀತಿ ಪ್ರತ್ಯೇಕವಾಗಿ ವಾರ್ಡಿಗೆ ತೆರಳಿ ಅಲ್ಲಿನ ನಗರಸಭೆ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳದೆ ಭೂಮಿ ಪೂಜೆ ನೆರವೇರಿಸುವ ಜನರ ದಿಕ್ಕು ತಪ್ಪಿಸುವ ಪ್ರಮೇಯ ಏನಿತ್ತು. ಒಂದು ವೇಳೆ ನೀವು ಪ್ರತ್ಯೇಕವಾಗಿ ವಾರ್ಡ್‌ವಾರು ಪೂಜೆ ಮಾಡುವ ಇಚ್ಛೆ ಇದ್ದಿದ್ದರೆ ಕಾರ್ಯಕ್ರಮವನ್ನು ರೂಪಿಸುವ ಮೊದಲೆ ತಿಳಿಸಬೇಕಿತ್ತು. ಉಸ್ತುವಾರಿ ಸಚಿವರೊಂದಿಗೆ ಪೂಜೆ ಮಾಡಬಹುದಿತ್ತು ಎಂದು ಕಿಡಿಕಾರಿದರು.
'ಶರತ್ ಬಚ್ಚೇಗೌಡ ಕಾಂಗ್ರೆಸ್‌ನಿಂದ ಸಿಎಂ ಆಗಲಿದ್ದಾರೆ'
ಕ್ಷಮೆ ಕೇಳಲಿ : ಕಳೆದ ಭಾರಿಯ ಅಧಿವೇಶನದಲ್ಲಿ ಪ್ರೋಟೊಕಾಲ್ ವಿಚಾರವಾಗಿ ಸುದೀರ್ಘ ಚರ್ಚೆ ಮಾಡಿ ಸದನದಲ್ಲಿ ಸಮಯವನ್ನು ವ್ಯರ್ಥ ಮಾಡಿ ಈಗ ನಗರಸಭೆ ಸದಸ್ಯನನ್ನು ಕಡೆಗಣಿಸಿ ಪೂಜೆ ಮಾಡುವ ಮೂಲಕ ಶಿಷ್ಟಾಚಾರ ಉಲ್ಲಂಘನೆ ಮಾಡಿರುವ ಶಾಸಕ ಶರತ್ ಬಚ್ಚೇಗೌಡರು ಸದನದಲ್ಲೇ ಕ್ಷಮೆ ಕೇಳಬೇಕು ಎಂದು ನಾಲ್ಕನೇ ವಾರ್ಡಿನ ಸದಸ್ಯ ನವೀನ್ ಆಕ್ರೋಶ ವ್ಯಕ್ತಪಡಿಸಿದರು.