ಮಲ್ಟಿಪ್ಲೆಕ್ಸ್ ಗಳಲ್ಲಿ ನಿಮ್ಮ ದುಡ್ಡಿಗೆ ಬೆಲೆ ಇಲ್ಲ

By Kannadaprabha NewsFirst Published Jul 16, 2018, 9:16 AM IST
Highlights

ಒಂದು ಕಾಫಿ ಅಥವಾ ಟೀ 120 ! ಅರ್ಧ ಲೀಟರ್ ನೀರು 60, 300 ಎಂಎಲ್ ಪೆಪ್ಸಿ 200. ಬೊಗಸೆಯಷ್ಟು ಪಾಪ್‌ಕಾರ್ನ್‌ಗೆ 300 ರು.! ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಮಾಲ್‌ಗಳ ಮಲ್ಟಿಪ್ಲೆಕ್ಸ್‌ಗಳು ಗ್ರಾಹಕರ ಹಗಲು ದರೋಡೆ ಮಾಡುತ್ತಿರುವುದರ ಸ್ಯಾಂಪಲ್ ಇದು.

ವಿಶ್ವನಾಥ ಮಲೆಬೆನ್ನೂರು
ಮೋಹನ್ ಹಂಡ್ರಂಗಿ

ಬೆಂಗಳೂರು : ಒಂದು ಕಾಫಿ ಅಥವಾ ಟೀ 120 ! ಅರ್ಧ ಲೀಟರ್ ನೀರು 60, 300 ಎಂಎಲ್ ಪೆಪ್ಸಿ 200. ಬೊಗಸೆಯಷ್ಟು ಪಾಪ್‌ಕಾರ್ನ್‌ಗೆ 300 ರು.! ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಮಾಲ್‌ಗಳ ಮಲ್ಟಿಪ್ಲೆಕ್ಸ್‌ಗಳು ಗ್ರಾಹಕರ ಹಗಲು ದರೋಡೆ ಮಾಡುತ್ತಿರುವುದರ ಸ್ಯಾಂಪಲ್ ಇದು.

ಜನಸಾಮಾನ್ಯರಿಗೆ ಇಲ್ಲಿನ ಆಹಾರ, ತಿಂಡಿ-ತಿನಿಸು, ತಂಪು ಪಾನೀಯಗಳು ಗಗನಕುಸುಮವಾಗಿವೆ. ಇಲ್ಲಿ ಎಂಆರ್‌ಪಿ ದರ ಲೆಕ್ಕಕ್ಕೇ ಇಲ್ಲ. ಹಾಡಹಗಲೇ ಗ್ರಾಹಕರ ಸುಲಿಗೆ ನಡೆಯುತ್ತಿದ್ದರೂ ಕೇಳುವವರು ಯಾರೂ ಇಲ್ಲ. ಎಲ್ಲ ಗೊತ್ತಿದ್ದರೂ ಸರ್ಕಾರ ಮಾತ್ರ ತುಟಿ ಬಿಚ್ಚುತ್ತಿಲ್ಲ. ಹೊರಗಡೆ ಕೇವಲ 10ಕ್ಕೆ ಸಿಗುವ ಅರ್ಧ ಲೀಟರ್ ನೀರಿಗೆ 60, 8 ರಿಂದ 10 ರು. ಸಿಗುವ ಕಾಫಿಗೆ 120 ರು. ವಸೂಲಿ ಮಾಡಲಾಗುತ್ತಿದೆ. ಇಷ್ಟು ದುಬಾರಿ ದರ ವಿಧಿಸಲು ಆ ಪಾನಿಯಗಳಲ್ಲೇನೂ ಅಂತಹ ವಿಶೇಷತೆ ಏನೂ ಇಲ್ಲ. 

ಗ್ರಾಹಕರ ಹೊರಗಡೆ ದರದಲ್ಲಿ ಕೊಂಚ  ಚೌಕಾಸಿ ಮಾಡಲು ಅವಕಾಶವಾದರೂ ಇದೆ. ಈ ಮಲ್ಟಿಫ್ಲೆಕ್ಸ್‌ಗಳಲ್ಲಿ ಚೌಕಾಸಿಯ ಮಾತೇ ಇಲ್ಲ. ಅವರು ವಿಧಿಸಿದಷ್ಟು ದರ ಪಾವತಿಸಿ ಖರೀದಿಸಬೇಕು. ಅಲ್ಲಿ ಅವರೇ ಮಾಡಿದ್ದೇ ಕಾನೂನು. ಅವರು ಹೇಳಿದ್ದೇ ನಿಯಮ. ಗ್ರಾಹಕರಿಗೆ ಪ್ರಶ್ನಿಸುವ ಅವಕಾಶವಿಲ್ಲ.  ಪ್ರಶ್ನಿಸಿದರೂ ಸ್ಪಷ್ಟ ಉತ್ತರ ಸಿಗುವುದಿಲ್ಲ. ಮಾಲ್‌ಗಳೆಂದರೆ, ಸುಮ್ಮನೇ ಹೋಗಬೇಕು. ಇಷ್ಟವಾದರೆ, ಅವರು ನಿಗದಿಪಡಿಸಿದಷ್ಟು ಹಣ ಕೊಟ್ಟು ತೆಗೆದುಕೊಳ್ಳಬೇಕು. 

ಅಲ್ಲಿ ಯಾಕೆ ಅಷ್ಟೊಂದು ದುಬಾರಿ?: ಮಲ್ಟಿಪ್ಲೆಕ್ಸ್‌ಗೆ ಬಂದು ಸಿನಿಮಾ ನೋಡುವ ಸಿನಿ ರಸಿಕರಿಗೆ ನಾವು ಐಷಾರಾಮಿ ವ್ಯವಸ್ಥೆ ಕಲ್ಪಿಸುತ್ತೇವೆ. ಹವಾನಿಯಂತ್ರಣ ಕೊಠಡಿ (ಎಸಿ), ಅಲ್ಲದೇ ಸಾಮಾನ್ಯ ಚಿತ್ರಮಂದಿರಕ್ಕಿಂತ ಒಳ್ಳೆಯ ಗುಣಮಟ್ಟದ ವ್ಯವಸ್ಥೆ ಒದಗಿಸುತ್ತೇವೆ. ಅದಕ್ಕೆ ಜನ ಕೊಡುವ ಟಿಕೆಟ್ ದರ ಸರಿಹೊಂದುವುದಿಲ್ಲ. 

ಹಾಗಾಗಿ, ಸಿನಿಮಾ ವಿರಾಮದ ಅವಧಿಯಲ್ಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡಿ ವೆಚ್ಚ ಸರಿದೂಗಿಸುತ್ತೇವೆ. ಟಿಕೆಟ್‌ನ ದರದಲ್ಲಿ ಶೇ.೨೮ ರಷ್ಟು ಸರ್ಕಾರಕ್ಕೆ ತೆರಿಗೆ ಪಾವತಿ ಮಾಡಬೇಕು, ಶೇ.50  ರಷ್ಟು ಚಲನಚಿತ್ರ ವಿತರಕರಿಗೆ ನೀಡಬೇಕು, ಉಳಿದ ಶೇ.22 ರಷ್ಟ ದರದಲ್ಲಿ ಎಸಿ, ವಿದ್ಯುತ್, ಸಿಬ್ಬಂದಿ ವೇತನ ಪಾವತಿ ಮಾಡುವುದಕ್ಕೆ ಸಾಧ್ಯವಾಗಲಿದೆ. ಹಾಗಾಗಿ, ಆಹಾರ ಪದಾರ್ಥಗಳನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಮಲ್ಟಿಫ್ಲೆಕ್ಸ್‌ನವರು ಸಬೂಬು ಹೇಳುತ್ತಾರೆ.

ಕನಿಷ್ಠ 230, ಗರಿಷ್ಠ 640: ಬೆಂಗಳೂರಿನಲ್ಲಿರುವ ಪ್ರಮುಖ ಮಾಲ್‌ನಲ್ಲಿರುವ ಮಲ್ಟಿಪ್ಲೆಕ್ಸ್‌ಗಳಲ್ಲಿ ಮಾರಾಟ ಮಾಡಲಾಗುವ ದರ ಪಟ್ಟಿಯನ್ನು ನೋಡಿದರೆ, ಅಲ್ಲಿ ಆರಂಭವಾಗುವ ಆಹಾರ ಪದಾರ್ಥಗಳ ದರ 230 ರು.ಗಳಿಂದ ಗರಿಷ್ಠ 640  ರು. ವರೆಗೆ ಮಾರಾಟ ಮಾಡಲಾಗುತ್ತಿದೆ. ಅಷ್ಟೊಂದು ಹಣ ಕೊಟ್ಟರೆ ನಿಮಗೆ ಭರ್ಜರಿ ಭೋಜನ ಸಿಗಲಿದೆ ಎಂದು ಭಾವಿಸಿಕೊಳ್ಳಬೇಡಿ. ಹೆಚ್ಚೆಂದರೆ, ನಿಮಗೆ ನೀವು ಕೊಟ್ಟ ಹಣಕ್ಕೆ ಲಾರ್ಜ್ ಟಬ್ (ಬಕೇಟ್) ಪಾಪ್‌ಕಾರ್ನ್, ಎರಡು ಲಾರ್ಜ್ ಕೋಕ್ ಅಥವಾ ಪೆಪ್ಸಿ ತಂಪು ಪಾನೀಯ ಸಿಗಬಹುದು ಅಷ್ಟೆ. ಕೆಲವು ಮಾಲ್‌ಗಳಲ್ಲಿ ಚಿಕನ್ ಪದಾರ್ಥಗಳು ಮತ್ತು ಪಿಜಾ ಸಿಗಲಿದೆ.

ನಿಮ್ಮ ಆಹಾರ ಕಿತ್ತುಕೊಳ್ಳುತ್ತಾರೆ: ಮಲ್ಟಿಫ್ಲೆಕ್ಸ್‌ನಲ್ಲಿ ಸಿನಿಮಾ ನೋಡುವುದಕ್ಕೆ ನೀವು ಒಳಗೆ ಹೋಗುವ ದ್ವಾರದಲ್ಲಿ ನಿಮ್ಮನ್ನು ಭಯೋತ್ಪಾದಕರಂತೆ ಅಡಿಯಿಂದ ಮುಡಿವರೆಗೆ ಪರಿಶೀಲನೆ ಮಾಡುತ್ತಾರೆ. ನಿಮ್ಮ ಬ್ಯಾಗ್ ಅನ್ನು ತಪಾಸಣೆ ಮಾಡಿ, ಬ್ಯಾಗ್‌ನಲ್ಲಿ ಏನಾದರೂ ಆಹಾರ ಪದಾರ್ಥ, ನೀರು, ತಂಪು ಪಾನಿಯ ಇದ್ದರೆ ಕಿತ್ತುಕೊಂಡು ವಾಪಸ್ ಬರುವಾಗ ನೀಡುವುದಾಗಿ ಹೇಳುತ್ತಾರೆ. ನೀವು ಅನಿವಾರ್ಯವಾಗಿ ಅಲ್ಲಿ ನಿಗದಿ ಪಡಿಸಿದ ಬೆಲೆಗೆ ಆಹಾರ ಪದಾರ್ಥ ಕೊಂಡುಕೊಳ್ಳುವ ಪರಿಸ್ಥಿತಿ ನಿರ್ಮಿಸುತ್ತಾರೆ.

click me!