ಇಂದಿನಿಂದ ಕಿಮ್ಸ್‌ನಲ್ಲಿ ಇಲ್ಲ ಈ ಸೇವೆ

By Kannadaprabha NewsFirst Published Jul 16, 2018, 9:01 AM IST
Highlights

ಸಾರ್ವಜನಿಕರೇ ಇಲ್ಲೊಮ್ಮೆ ಗಮನಿಸಿ. ಇಂದಿನಿಂದ ಕಿಮ್ಸ್ ಆಸ್ಪತ್ರೆಯಲ್ಲಿ ಈ ಸೇವೆಯು ಲಭ್ಯವಿರುವುದಿಲ್ಲ. ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿರುವ ಕಿಮ್ಸ್ ಸಿಬ್ಬಂದಿ ಇಂದಿನಿಂದ  ಒಪಿಡಿ ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿದ್ದಾರೆ.

ಬೆಂಗಳೂರು :  ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಆಸ್ಪತ್ರೆಯಲ್ಲಿ ಅಗತ್ಯಕ್ಕಿಂತ ಹೆಚ್ಚುವರಿ ಸಿಬ್ಬಂದಿ ನೇಮಕ ಪ್ರಸ್ತಾಪ ಕೈ  ಬಿಡದಿರುವುದಕ್ಕೆ  ಆಕ್ರೋಶ ವ್ಯಕ್ತಪಡಿಸಿರುವ ವೈದ್ಯಕೀಯ ಸಿಬ್ಬಂದಿ ಸೋಮವಾರದಿಂದ ಎಲ್ಲಾ ಹೊರರೋಗಿ ಸೇವೆ ಬಂದ್ ಮಾಡಿ ಧರಣಿಗೆ ಮುಂದಾಗಿದ್ದಾರೆ. ಒಕ್ಕಲಿಗ ಸಂಘಕ್ಕೆ ಸೇರಿರುವ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಸಿಬ್ಬಂದಿ ನೇಮಕ ಮಾಡಲಾಗುತ್ತಿದೆ ಎಂದು ಆರೋಪಿಸಿ ರಾಜ್ಯ ಒಕ್ಕಲಿಗರ ಸಂಘದ ನೌಕರರ ಸಂಘ ತೀವ್ರ ಪ್ರತಿಭಟನೆ ನಡೆಸಿತ್ತು.

ಕಳೆದ ತಿಂಗಳು ವೈದ್ಯಕೀಯ ಸಿಬ್ಬಂದಿ ನೆರವಿನೊಂದಿಗೆ ಅರ್ಧದಿನದ ಮಟ್ಟಿಗೆ ಒಪಿಡಿ ಸೇವೆ ಬಂದ್ ಮಾಡಿ ಪ್ರತಿಭಟನೆ ನಡೆಸಿತ್ತು. ಜು.16 ರಂದು ಆಸ್ಪತ್ರೆ ವೈದ್ಯರು, ವೈದ್ಯ ಸಿಬ್ಬಂದಿ, ಶಾಲಾ-ಕಾಲೇಜುಗಳ ಬೋಧಕ, ಬೋಧಕೇತರ ಸಿಬ್ಬಂದಿ ಇದೀಗ ಮುಷ್ಕರಕ್ಕೆ ಮುಂದಾಗಿದ್ದಾರೆ. 

ಸಂಘದಲ್ಲಿ ಹೆಚ್ಚುವರಿ ನೇಮಕಾತಿ ಮಾಡಿಕೊಳ್ಳುತ್ತಿರುವ ಕ್ರಮ ಖಂಡಿಸಿ ಕಳೆದ ತಿಂಗಳು 12 ದಿನ ಪ್ರತಿಭಟನೆ ನಡೆಸಿದ್ದರು. ಇದರಿಂದ ಜೂ. 21ರಂದು ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಿಬ್ಬಂದಿ ಬೇಡಿಕೆಗಳನ್ನು ಈಡೇರಿಸುವುದಾಗಿ ಲಿಖಿತ ಭರವಸೆ ನೀಡಿತ್ತು. ಈ ವೇಳೆ ಕೆಲ ಷರತ್ತುಗಳೊಂದಿಗೆ ಮುಷ್ಕರವನ್ನು ಹಿಂತೆಗೆದುಕೊಳ್ಳಲಾಗಿತ್ತು. ಆದರೆ ನಿಗದಿತ ಗಡುವಿನೊಳಗೆ ಬೇಡಿಕೆ ಈಡೇರದ ಕಾರಣ ಪುನಃ ಅನಿರ್ದಿಷ್ಟಕಾಲ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಜು.೨ರೊಳಗೆ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದ ಆಡಳಿತ ಮಂಡಳಿ ಬಿಐಟಿಯಲ್ಲಿ 2014 - 15 ರಲ್ಲಿ ನೇಮಕಗೊಂಡಿದ್ದ ಸುಮಾರು 50 ಬೋಧಕ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿತ್ತು. ಉಳಿದಂತೆ ಹೊಸದಾಗಿ ನೇಮಕಗೊಂಡಿದ್ದ ಹೆಚ್ಚುವರಿ ಬೋಧಕೇತರ  ಸಿಬ್ಬಂದಿಯನ್ನು ಕೈಬಿಡುವ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ.

ಈ ಹಿನ್ನೆಲೆಯಲ್ಲಿ ಜು.೧೪ರೊಳಗೆ ಬೇಡಿಕೆ ಈಡೇರಿಸದಿದ್ದರೆ ಜು. 16 ರಿಂದ ಆರೋಗ್ಯ ಸೇವೆ ಸೇರಿದಂತೆ ಎಲ್ಲ ಕೆಲಸ ಕಾರ್ಯಗಳನ್ನು ಬಹಿಷ್ಕರಿಸಿ ಅನಿರ್ದಿಷ್ಟಕಾಲ ಮುಷ್ಕರ ನಡೆಸುವುದಾಗಿ ಸಂಘವು ಆಡಳಿತ ಮಂಡಳಿ ಪತ್ರ ಬರೆದು ಎಚ್ಚರಿಸಿತ್ತು. ಆದಾಗ್ಯೂ ಮಂಡಳಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಬದಲಿಗೆ ಪುನಃ ಜು.24 ರ ಕಾರ್ಯಾಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ ಒಪ್ಪಿಗೆ ಪಡೆದು ಕ್ರಮ ಕೈಗೊಳ್ಳುವುದಾಗಿ ಸಂಘಕ್ಕೆ ಪತ್ರ ಮುಖೇನ ಕೋರಿಕೆ ಸಲ್ಲಿಸಿದೆ. ಈ  ಹಿನ್ನೆಲೆಯಲ್ಲಿ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರೆಸಲು ಸಂಘ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

click me!