ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗೇ ಕೊರೋನಾ ಪಾಸಿಟಿವ್ ಬಂದಿದೆ ಎಂಬ ಸುದ್ದಿ ಮಂಗಳವಾರ ಬೆಳಗ್ಗೆ 7 ಗಂಟೆಯಿಂದೇ ಪಟ್ಟಣದಲ್ಲಿ ಹರಿದಾಡಲು ಪ್ರಾರಂಭವಾಗಿದ್ದೇ ತಡ, ತಾಲೂಕಿನಾದ್ಯಂತ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿದೆ. ಜನ ಇದೀಗ ಆತಂಕದಲ್ಲಿ ದಿನದೂಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಮೂಡಿಗೆರೆ(ಮೇ.20): ಮಲೆನಾಡಿನ ಹೃದಯಭಾಗಕ್ಕೂ ತಟ್ಟಿರುವ ಕೊರೋನಾದಿಂದ ಜನ ಆತಂಕ ಮತ್ತು ಭಯದಿಂದ ಬದುಕುವತಾಗಿದೆ. ಗ್ರೀನ್‌ಝೋನ್ ಎಂದು ಹೇಳಿಕೊಂಡು ಯಾವುದೇ ಭಯವಿಲ್ಲದೆ ಓಡಾಡುತ್ತಿದ್ದವರಿಗೆ ಒಮ್ಮೆಲೇ ಅಘಾತವಾಗಿದೆ.
ಪಟ್ಟಣದಲ್ಲಿ ವಾಸವಿರುವ ತಾಲೂಕಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗೇ ಕೊರೋನಾ ಪಾಸಿಟಿವ್ ಬಂದಿದೆ ಎಂಬ ಸುದ್ದಿ ಮಂಗಳವಾರ ಬೆಳಗ್ಗೆ 7 ಗಂಟೆಯಿಂದೇ ಪಟ್ಟಣದಲ್ಲಿ ಹರಿದಾಡಲು ಪ್ರಾರಂಭವಾಗಿದ್ದೇ ತಡ, ತಾಲೂಕಿನಾದ್ಯಂತ ಸುದ್ದಿ ಗಾಡ್ಗಿಚ್ಚಿನಂತೆ ಹಬ್ಬಿದ್ದರಿಂದ ಜನ ತೀವ್ರ ಭಯಭೀತರಾಗಿದ್ದಾರೆ. ತಮ್ಮ ಮನೆಯ ಕಿಟಕಿ ಬಾಗಿಲು ಮುಚ್ಚಿ ಒಳಗೆ ಸೇರಿಕೊಂಡವರು ಸಂಜೆಯಾದರೂ ಹೊರ ಬರಲಿಲ್ಲ.
ಪಟ್ಟಣದಲ್ಲಿ ಲಾಕ್‌ಡೌನ್ ಕರ್ತವ್ಯಕ್ಕೆ ಬಳಸಿದ್ದ ಬ್ಯಾರಿಕೇಡ್‌ಗಳನ್ನು ಪೊಲೀಸರು ಸೋಮವಾರ ಸಂಜೆ ಪೊಲೀಸ್ ಠಾಣೆ ಮುಂಭಾಗಕ್ಕೆ ತಂದು ಶೇಖರಿಸಿಟ್ಟಿದ್ದರಿಂದ ಜನ ಕೋವೀಡ್-19 ಭಯಭೀತಿಯಿಂದ ಹೊರಬಂದು ಇನ್ನೇನು ತೊಂದರೆಯಿಲ್ಲ ಎಂದುಕೊಂಡಿದ್ದರು. ಮಂಗಳವಾರ ಬೆಳಗ್ಗೆಯಿಂದಲೇ ಚಿಕ್ಕಮಗಳೂರಿನಿಂದ ಪೊಲೀಸ್ ವಾಹನದಲ್ಲಿ ಇನ್ನಷ್ಟುಬ್ಯಾರಿಕೇಡ್ ಸಹಿತ ಪೊಲೀಸ್ ತುಕಡಿಗಳು ಪಟ್ಟಣದಲ್ಲಿ ಜಮಾಯಿಸಿ ಎಂ.ಜಿ.ರಸ್ತೆ, ಕೆ.ಎಂ.ರಸ್ತೆ ಸಹಿತ ಬಹುತೇಕ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಇಟ್ಟು ಪೊಲೀಸರು ಗಸ್ತು ತಿರಗತೊಡಗಿದಾಗ ಕೋವಿಡ್-19 ಪಾಸಿಟಿವ್ ಬಗ್ಗೆ ಜನರಿಗೆ ಕುತೂಹಲ ಪ್ರಾರಂಭವಾಯಿತು. ಮೂಡಿಗೆರೆ ಪಟ್ಟಣ ಸೇರಿ ತಾಲೂಕನ್ನೇ ಸೀಲ್‌ಡೌನ್ ಮಾಡಲಿದ್ದಾರೆಂದು ತಿಳಿದು ತೀರಾ ಆತಂಕಗೊಂಡರು.
ಕೊರೋನಾ ಪಾಸಿಟಿವ್‌ಗೆ ತುತ್ತಾಗಿರುವ ವೈದ್ಯಾಧಿಕಾರಿ ವಾಸವಾಗಿದ್ದ ಮನೆಯ ಸುತ್ತ 100 ಮೀ ವ್ಯಾಪ್ತಿಯ ಮಧ್ಯಾಹ್ನದ ವೇಳೆಗೆ ಕಂಟೋನ್ಮೆಂಟ್ ವಲಯವೆಂದು ಘೋಷಿಸಿ ಸೀಲ್‌ಡೌನ್ ಮಾಡಲಾಯಿತು. ಅಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸರು ಜಮಾಯಿಸಿದ್ದರು. ವೈದ್ಯಾಧಿಕಾರಿ ಇತ್ತೀಚೆಗೆ ಬೆಂಗಳೂರಿಗೆ ತೆರಳಿ ಹಿಂದುರಿಗಿದ್ದಾರೆಂದು ಸ್ಥಳೀಯರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಅವರಿಗೆ ಕೆಮ್ಮು, ಶೀತ, ಜ್ವರ ಸಹಿತ ಸೋಂಕಿನ ಬಗ್ಗೆ ಯಾವುದೇ ಕುರುಹು ಇರಲಿಲ್ಲ. ವೈದ್ಯಕೀಯ ಸಿಬ್ಬಂದಿ ರಕ್ತ ಹಾಗೂ ಗಂಟಲು ದ್ರವದ ಮಾದರಿಯನ್ನು ಕಳೆದ 5 ದಿನದ ಹಿಂದೆ ಎಂಜಿಎಂ ಸರ್ಕಾರಿ ಆಸ್ಪತ್ರೆಯಲ್ಲಿ ಸಂಗ್ರಹಿಸಿ ಪರೀಕ್ಷೆಗಾಗಿ ಲ್ಯಾಬ್‌ಗೆ ಕಳುಹಿಸಲಾಗಿದೆ. ಮಂಗಳವಾರ ಬೆಳಗಿನ ಜಾವ ಇದರ ವರದಿ ಬಂದಾಗ ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯಾಧಿಕಾರಿಯೇ ಸೋಂಕಿಗೆ ತುತ್ತಾಗಿರುವುದು ಬೆಳಕಿಗೆ ಬಂದಿದೆ.
ಮಲೆನಾಡಿನ ನಿದ್ದೆಗೆಡಿಸಿದ ವೈದ್ಯರ ಟ್ರಾವೆಲ್ ಹಿಸ್ಟರಿ..!
ಈ ವೈದ್ಯರು ರೋಗಿಗಳ ತಪಾಸಣೆ ವೇಳೆ ಸೋಂಕಿಗೆ ಒಳಗಾದರೋ ಅಥವಾ ಬೇರೆ ಜಿಲ್ಲೆಗೆ ತೆರಳಿದ್ದರಿಂದ ಅಲ್ಲಿ ಸೋಂಕಿಗೆ ತುತ್ತಾದರೋ ಎನ್ನುವುದು ಇನ್ನಷ್ಟೇ ತಿಳಿಯಬೇಕಾಗಿದೆ. ಕೊರೋನಾ ಮುಕ್ತ ಜಿಲ್ಲೆ ಕನಸು ಕಂಡವರಿಗೆ ಪಾಸಿಟಿವ್ ಪ್ರಕರಣದಿಂದ ತೀವ್ರ ನಿರಾಸೆ ಉಂಟಾಗಿದೆ. ಲಾಕ್‌ಡೌನ್ ವೇಳೆ ಜನ ಮನೆಯಿಂದ ಹೊರಬರದಂತೆ ಪೊಲೀಸರು ಹರಸಾಹಸಪಟ್ಟು ಜನರನ್ನು ನಿಯಂತ್ರಿಸಿದರೂ ಸಾಧ್ಯವಾಗಿರಲಿಲ್ಲ. ಹಸಿರು ವಲಯದಲ್ಲಿ ಪಾಸಿಟಿವ್ ಬಂದು ಒಂದು ಗಂಟೆಯಲ್ಲಿ ಜನ ಸ್ವಯಂ ಪ್ರೇರಿತರಾಗಿ ತಮ್ಮ ಮನೆಗಳಲ್ಲಿ ಸೇರಿಕೊಂಡವರು. ಸಂಜೆಯಾದರೂ ಹೊರ ಬರಲಿಲ್ಲ. ಯಾರಾದರೂ ಬಾಗಿಲು ತಟ್ಟಿದರೆ ಕಿಟಕಿಯಲ್ಲೇ ಇಣುಕಿ ನೋಡಿ ವಾಪಸ್ ಕಳಿಸಿದ ಘಟನೆಗಳು ಬೆಳಗ್ಗೆಯಿಂದ ಸಾಮಾನ್ಯವಾಗಿದ್ದವು. ಕೋವಿಡ್-19 ಪಾಸಿಟಿವ್‌ನಿಂದಾಗಿ ತಾಲೂಕಿನ ಜನ ಒಂದೇ ದಿನದಲ್ಲಿ ಇನ್ನಷ್ಟುಪಾಠ ಕಲಿತಂತಾಗಿದೆ.
ಪಟ್ಟಣಕ್ಕೆ ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಜಿಲ್ಲಾಧಿಕಾರಿ ಬಗಾದಿ ಗೌತಮ್, ಎಸ್‌ಪಿ ಹರೀಶ್ ಪಾಂಡೆ, ಜಿಪಂ ಸಿಇಒ ಪೂವಿತಾ, ಡಿವೈಎಸ್‌ಪಿ ಬಸಪ್ಪ ಅಂಗಡಿ ಸಹಿತ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನಲ್ಲಿ ಒಬ್ಬ ವ್ಯಕ್ತಿಗೆ ಕೋವಿಡ್-19 ಸೋಂಕು ತಗುಲಿರುವುದು ಪ್ರಕರಣ ಪತ್ತೆಯಾಗಿದೆ. ಸೋಂಕಿತ ವ್ಯಕ್ತಿ ಪಿ-795 ಜನರ ಸಂಪರ್ಕದಲ್ಲಿದ್ದಿದ್ದಾಗಿ ತಿಳಿದು ಬಂದಿದೆ. ಅವರೆಲ್ಲರನ್ನೂ ವಾರಿಯರ್ಸ್ ತಂಡ ಪತ್ತೆ ಹಚ್ಚಿ ಕ್ವಾರಂಟೈನ್‌ಗೆ ಒಳಪಡಿಸುತ್ತಾರೆ. ಸೋಂಕಿತ ವ್ಯಕ್ತಿ ವಾಸವಿದ್ದ ಮನೆಯ 100 ಮೀಟರ್ ವ್ಯಾಪ್ತಿಯಲ್ಲಿ ಕಂಟೊನ್ಮೆಂಟ್ ವಲಯ, 5ಕಿ.ಮೀ. ವ್ಯಾಪ್ತಿಯಲ್ಲಿ ನಿಯಂತ್ರಿತ ವಲಯ ಎಂದು ಘೋಷಿಸಲಾಗಿದೆ. ತಹಸೀಲ್ದಾರ್ ಈ ವಲಯದ ನಿಯಂತ್ರಣ ನೋಡಿಕೊಳ್ಳುತ್ತಾರೆ. ಜನ ಭಯಭೀತರಾಗುವ ಅಗತ್ಯವಿಲ್ಲ. ಯಾವುದೇ ತೊಂದರೆ ಬಾರದಂತೆ ಜನ ಮುನ್ನೆಚ್ಚರಿಕೆ ವಹಿಸಬೇಕು. ಸ್ಯಾನಿಟೈಸರ್ ಹಾಗೂ ಮಾಸ್ಕ್ ಬಳಸಿಕೊಂಡು ಹೆಚ್ಚಾಗಿ ಮನೆಯಲ್ಲಿರಲು ಪ್ರಯತ್ನಿಸಬೇಕು
- ಬಗಾದಿ ಗೌತಮ್, ಜಿಲ್ಲಾಧಿಕಾರಿ