ಮಲೆನಾಡಿನ ನಿದ್ದೆಗೆಡಿಸಿದ ವೈದ್ಯರ ಟ್ರಾವೆಲ್‌ ಹಿಸ್ಟರಿ..!

By Kannadaprabha NewsFirst Published May 20, 2020, 9:17 AM IST
Highlights

ಕಾಫಿನಾಡಿನಲ್ಲಿ ವೈದ್ಯರೊಬ್ಬರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 15 ದಿನ ಅಂದರೆ ಮೇ 2ರಿಂದ 16ರವರೆಗೆ ಕೆಲಸ ನಿರ್ವಹಿಸಿ ಆ ದಿನಗಳಂದು ಆಸ್ಪತ್ರೆಗೆ ಬಂದಿರುವ ರೋಗಿಗಳನ್ನು ತಪಾಸಣೆ ಮಾಡಿದ್ದಾರೆ. ಇದು ಜಿಲ್ಲೆಯ ಜನರ ನಿದ್ದೆಗೆಡಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಚಿಕ್ಕಮಗಳೂರು(ಮೇ.20): ಜಿಲ್ಲೆಯಲ್ಲಿ ಪತ್ತೆಯಾಗಿರುವ 5 ಕೊರೋನಾ ಸೋಂಕಿತರ ಪೈಕಿ ವೈದ್ಯರೋರ್ವರ ಟ್ರಾವೆಲ್‌ ಹಿಸ್ಟರಿ ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಬರೀ ಇಷ್ಟೆಅಲ್ಲಾ, ವೈದ್ಯರು ತಾವು ಕೆಲಸ ಮಾಡುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 15 ದಿನ ಅಂದರೆ ಮೇ 2ರಿಂದ 16ರವರೆಗೆ ಕೆಲಸ ನಿರ್ವಹಿಸಿ ಆ ದಿನಗಳಂದು ಆಸ್ಪತ್ರೆಗೆ ಬಂದಿರುವ ರೋಗಿಗಳನ್ನು ತಪಾಸಣೆ ಮಾಡಿದ್ದಾರೆ.

ಮೂಡಿಗೆರೆ ಪಟ್ಟಣ ಸೇರಿ ಕೆಲವು ಗ್ರಾಮಾಂತರ ಪ್ರದೇಶದಲ್ಲೂ ಓಡಾಡಿದ್ದಾರೆ. ಇದರಿಂದ ಮಲೆನಾಡಿನ ಜನರಲ್ಲಿ ಆತಂಕ ಎದುರಾಗಿದೆ. ಮೇ 2ಕ್ಕೂ ಮುನ್ನ ವೈದ್ಯರು ಬೆಂಗಳೂರು ಹಾಗೂ ಕೊಡಗು ಜಿಲ್ಲೆಗಳಿಗೂ ಹೋಗಿ ಬಂದಿದ್ದಾರೆ. ಅಲ್ಲಿ ಸ್ನೇಹಿತರೊಂದಿಗೆ ಸುತ್ತಾಡಿದ್ದಾರೆ. ಅವರ ಮನೆಗಳಲ್ಲಿ ಊಟ ಮಾಡಿದ್ದಾರೆ. ಅವರು ವೈದ್ಯರಾಗಿ ಕೆಲಸ ಮಾಡುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಮೂಡಿಗೆರೆ ತಾಲೂಕು ಕೇಂದ್ರದಿಂದ 10 ಕಿ.ಮೀ. ದೂರದಲ್ಲಿದೆ. ಈ ಆಸ್ಪತ್ರೆಗೆ ಬರುವುದು ಸುತ್ತಮುತ್ತಲಿನ ಕಾಫಿ ತೋಟದಲ್ಲಿರುವ ಕೂಲಿ ಕಾರ್ಮಿಕರು, ಪ್ರತಿ ದಿನ ಹೆಚ್ಚು ಮಂದಿ ಚಿಕಿತ್ಸೆ ಪಡೆಯಲು ಇಲ್ಲಿಗೆ ಬರುತ್ತಿರುತ್ತಾರೆ. ಅದರಲ್ಲೂ ಸೋಂಕಿತ ವೈದ್ಯರ ಕೈಗುಣ ಚೆನ್ನಾಗಿದೆ ಎಂಬ ಪ್ರತಿತಿ ಆ ಭಾಗದಲ್ಲಿದೆ. ಅದ್ದರಿಂದ ಹೆಚ್ಚು ಮಂದಿ ಚಿಕಿತ್ಸೆಗಾಗಿ ಇಲ್ಲಿಗೆ ಬರುತ್ತಿದ್ದರು. ಒಂದು ಅಂದಾಜಿನ ಪ್ರಕಾರ ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದವರ ಸಂಖ್ಯೆ 500ರ ಗಡಿ ದಾಟಿರಬಹುದೆಂದು ಸ್ಥಳೀಯರು ಅಂದಾಜು ಮಾಡಿದ್ದಾರೆ.

ಮೇ 17ರಂದು ಪರೀಕ್ಷೆ:

ಮೂಡಿಗೆರೆ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ನರ್ಸ್‌ ಹಾಗೂ ಆಶಾ ಕಾರ್ಯಕರ್ತರ ಆರೋಗ್ಯವನ್ನು ಮೇ 17ರಂದು ತಪಾಸಣೆ ಮಾಡಲಾಗಿತ್ತು. ಸಂಶಯ ಬಂದಿದ್ದರಿಂದ ವೈದ್ಯರ ಗಂಟಲ ದ್ರವವನ್ನು ಪರೀಕ್ಷೆಗಾಗಿ ಹಾಸನಕ್ಕೆ ಕಳುಹಿಸಲಾಗಿದ್ದು, ಮಂಗಳವಾರ ಮಧ್ಯಾಹ್ನ 12ಗಂಟೆಗೆ ಪಾಸಿಟಿವ್‌ ವರದಿ ಬಂದಿತು. ಆದರೆ, ಇದೇ ಆಸ್ಪತ್ರೆಯಲ್ಲಿ ಒಟ್ಟು 6 ಮಂದಿ ನರ್ಸ್‌ ಹಾಗೂ ಆಶಾ ಕಾರ್ಯಕರ್ತೆಯರು ಇದ್ದು, ಅವರಗಳ ಗಂಟಲ ದ್ರವ ಮಾದರಿಯಲ್ಲಿ ನೆಗೆಟಿವ್‌ ವರದಿ ಬಂದಿರುವುದು ಸಮಧಾನಕರ.

ನಾಲ್ವರಿಗೆ ಮುಂಬೈ ನಂಜಿನ ನಂಟು:

ಸೋಂಕಿತ ಐವರಲ್ಲಿ ನಾಲ್ಕು ಮಂದಿ ಮುಂಬೈ ನಂಟು ಹೊಂದಿದ್ದಾರೆಂದು ಪ್ರಾಥಮಿಕ ವರದಿಯಲ್ಲಿ ಅಂದಾಜು ಮಾಡಲಾಗಿದೆ. ತರೀಕೆರೆಯ ಒಬ್ಬ ಮಹಿಳೆ ಸೇರಿ ಎನ್‌.ಆರ್‌.ಪುರ ತಾಲೂಕಿನ ಮೂರು ಮಕ್ಕಳು ಮುಂಬೈನಿಂದ ಬಂದವರು. ಎನ್‌.ಆರ್‌.ಪುರ ತಾಲೂಕಿಗೆ ಬಂದವರನ್ನು ನೇರವಾಗಿ ಚಿಕ್ಕಮಗಳೂರಿಗೆ ಕರೆ ತಂದು ಇಲ್ಲಿನ ತೇಗೂರಿನಲ್ಲಿ ತೆರೆಯಲಾಗಿರುವ ನಿಗಾ ಘಟಕದಲ್ಲಿ ತಪಾಸಣೆ ನಡೆಸಲಾಗಿತ್ತು. ಒಟ್ಟಾರೆ, ಜಿಲ್ಲೆಯಲ್ಲಿ ಕೊರೋನಾ ಆತಂಕ ಸ್ಪೋಟಗೊಂಡಿದೆ.

ಶಿವಮೊಗ್ಗದಲ್ಲಿ ಮುಂದುವರೆದ ಕೊರೋನಾ ಕಂಟಕ..!

ಮೂಡಿಗೆರೆ ತಾಲೂಕಿನ ನಂದೀಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೇ 2ರಿಂದ ಮೇ 16ರವರೆಗೆ ಹೊರ ರೋಗಿಗಳಾಗಿ ಚಿಕಿತ್ಸೆ, ತಪಾಸಣೆ ಮಾಡಿಸಿಕೊಂಡವರು ವೈದ್ಯರೊಂದಿಗೆ ಪ್ರಾಥಮಿಕ ಸಂಪರ್ಕ ಮತ್ತು ದ್ವಿತೀಯ ಸಂಪರ್ಕ ಸಂಬಂಧವಾಗಿ ಸಂಪರ್ಕಿಸಲು ಪಟ್ಟಿತಯಾರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಕುಮಾರ್‌ ಅವರು ತಿಳಿಸಿದ್ದಾರೆ. ಈಗಾಗಲೇ ತಯಾರಿಸಿರುವ ಪಟ್ಟಿಯಲ್ಲಿ ಹೆಸರು ಸೇರದೆ ಇದ್ದಲ್ಲಿ ಅಂತಹ ವ್ಯಕ್ತಿಗಳು ಕೂಡಲೇ ಡಾ.ಮಧುಸೂದನ್‌, ಮೊಬೈಲ್‌: 9740937036ಗೆ ಸಂಪರ್ಕಿಸುವಂತೆ ಕೋರಿದ್ದಾರೆ.

click me!