'ನನ್ನ ಸ್ಥಾನ ಕೆಡವಿದರೆ ಆಕಾಶದಿಂದ ಬೆಂಕಿ ಸುರಿಸುತ್ತೇನೆ' MRPL ಸ್ಫೋಟಕ್ಕೆ ಕಾರಣವಾಯ್ತಾ ಜುಮಾದಿ ದೈವದ ಶಾಪ?

Published : Oct 01, 2026, 05:30 PM IST
MRPL blast and Nellidadi Guttu Jumadi Daiva

ಸಾರಾಂಶ

MRPL Blast Daiva Story: ಮಂಗಳೂರಿನ MRPLಗೆ ನೆಲ್ಲಿದಡಿ ಗುತ್ತು ಜುಮಾದಿ ದೈವದ ಶಾಪ ತಟ್ಟಿತಾ ಎಂಬ ಪ್ರಶ್ನೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಅದಕ್ಕೆ ಕಾರಣ ಕಳೆದ ನಾಲ್ಕು ತಿಂಗಳ ಹಿಂದೆ ಜುಮಾದಿ ದೈವ ನೀಡಿರುವ ಎಚ್ಚರಿಕೆ. ಅಂದು ಈ ದೈವ ಏನು ಹೇಳಿತ್ತು? ಈಗ ಏನಾಯ್ತು? ಕಂಪ್ಲೀಟ್ ಸ್ಟೋರಿ ಇಲ್ಲಿದೆ..

ದಕ್ಷಿಣ ಕನ್ನಡ: ಮಂಗಳೂರು ಕೈಗಾರಿಕಾ ವಲಯದಲ್ಲಿ ನಿನ್ನೆ ಮಧ್ಯಾಹ್ನ ಭೀಕರ ಸ್ಫೋಟ ಸಂಭವಿಸಿದೆ. ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಘಟಕದಲ್ಲಿ ಸಂಭವಿಸಿದ ದುರಂತದಲ್ಲಿ ಓರ್ವ ಕಾರ್ಮಿಕ ಮೃತಪಟ್ಟಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಸ್ಫೋಟ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿದೆ. MRPLಗೆ ನೆಲ್ಲಿದಡಿ ಗುತ್ತು ಜುಮಾದಿ ದೈವದ ಶಾಪ ತಟ್ಟಿತಾ ಎಂಬ ಬಿಸಿಬಿಸಿ ಚರ್ಚೆ ಕರಾವಳಿ ಭಾಗದಲ್ಲಿ ಜೋರಾಗಿ ನಡೆಯುತ್ತಿದೆ..

ಹೌದು, ನಿನ್ನೆ ನಡೆದ ಸ್ಫೋಟವು ಕರಾವಳಿಯ ಜನರಿಗೆ ಕೇವಲ ಕೈಗಾರಿಕಾ ಅನಾಹುತವಾಗಿ ಕಾಣುತ್ತಿಲ್ಲ. ಬದಲಾಗಿ ಸ್ಫೋಟದ ಹಿಂದೆ ತುಳುನಾಡಿನ ಕಾರ್ಣಿಕ ಶಕ್ತಿ ಇದೆ ಎನ್ನಲಾಗುತ್ತಿದೆ. ಇಲ್ಲಿನ ನೆಲ್ಲಿದಡಿ ಗುತ್ತಿನ ಕಾಂತೇರಿ ಜುಮಾದಿ ಹಾಗೂ ಮರ್ಲು ಜುಮಾದಿ ದೈವಗಳ ಆಕ್ರೋಶವೇ ಇದಕ್ಕೆ ಕಾರಣ ಎಂಬ ಚರ್ಚೆ ಶುರುವಾಗಿದೆ. ಇದು ಕೇವಲ ಆಕಸ್ಮಿಕ ಸ್ಫೋಟವಲ್ಲ. ದೈವದ ನೆಲವನ್ನು ತುಳಿದು ಅಹಂಕಾರ ಪ್ರದರ್ಶಿಸುತ್ತಿರುವ ಕಂಪನಿ ಮತ್ತು ಅಧಿಕಾರಿಗಳಿಗೆ ದೈವ ನೀಡಿರುವ ನೇರ ಎಚ್ಚರಿಕೆ ಎಂದು ಸ್ಥಳೀಯರು ಹೇಳ್ತಿದ್ದಾರೆ.

ಇದೇ ಮೊದಲಲ್ಲ

ಎಂಆರ್‌ಪಿಎಲ್ ಮತ್ತು ಎಂಎಸ್‌ಇಝಡ್ (MSEZ - Mangalore Special Economic Zone) ವ್ಯಾಪ್ತಿಯಲ್ಲಿ ಇಂತಹ ಬೆಂಕಿ ಅವಘಡಗಳು ಮತ್ತು ದುರಂತಗಳು ನಡೀತಿರೋದು ಇದೇ ಮೊದಲಲ್ಲ. ಒಮ್ಮೆ ನಡೆದರೆ ಅದನ್ನು ತಾಂತ್ರಿಕ ದೋಷ ಅಥವಾ ಆಕಸ್ಮಿಕ ಅನ್ನಬಹುದು. ಆದರೆ.. ಅದೇ ನಿರ್ದಿಷ್ಟ ವ್ಯಾಪ್ತಿಯಲ್ಲಿ ಪದೇ ಪದೇ ಬೆಂಕಿ ಹೊತ್ತಿಕೊಳ್ಳುವುದು, ಯಂತ್ರಗಳು ಕೈಕೊಡುವುದು ಮತ್ತು ಅನಾಹುತಗಳು ಸಂಭವಿಸುವುದು ಯಾಕೆ ಎಂಬ ಪ್ರಶ್ನೆ ಇದೆ.

ಸ್ಥಳೀಯರ ಪ್ರಕಾರ.. ಇದಕ್ಕೆಲ್ಲ ಕಾರಣ ನೆಲ್ಲಿದಡಿ ಗುತ್ತಿನ ದೈವಗಳ ಶಾಪ. ಕೈಗಾರಿಕೀಕರಣದ ಹೆಸರಿನಲ್ಲಿ ದೈವ-ದೇವರುಗಳ ನೆಲೆಬೀಡಾಗಿದ್ದ ಪುಣ್ಯಭೂಮಿಯನ್ನು ಸರ್ವನಾಶ ಮಾಡಿ, ದೈವಾರಾಧನೆಗೆ ಅಡ್ಡಿಪಡಿಸಿದ ಪರಿಣಾಮವೇ ಈ ಬೆಂಕಿಯ ದುರಂತಗಳು ಎನ್ನಲಾಗುತ್ತಿದೆ.

ಹಿನ್ನೆಲೆ ಏನು?

ಸುಮಾರು 20-30 ವರ್ಷಗಳ ಹಿಂದೆ ಈ MRPL ಮತ್ತು MSEZ ಜಾಗ ಸಮೃದ್ಧ ಕೃಷಿಭೂಮಿಯಾಗಿತ್ತು. 4-5 ಹಳ್ಳಿಗಳು, ದೇವಸ್ಥಾನಗಳು, ನಾಗಬನಗಳು, ದೈವಸ್ಥಾನಗಳು, ಚರ್ಚ್, ಮಸೀದಿಗಳಿದ್ವು. ಒಂದು ಸುಂದರ ಪರಿಸರ ಅದಾಗಿತ್ತು. ಆದರೆ, ವಿಶೇಷ ಆರ್ಥಿಕ ವಲಯ (SEZ) ನಿರ್ಮಾಣದ ಹೆಸರಿನಲ್ಲಿ ಸರ್ಕಾರ ಸಾವಿರಾರು ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಂಡಿತು. ಜನರಿಗೆ ಕೋಟ್ಯಂತರ ರೂಪಾಯಿ ಪರಿಹಾರ ಸಿಕ್ಕಿತು. ಕೆಲವರು ಪರಿಹಾರದ ಹಣ ಪಡೆದು ಬೇರೆಡೆ ಫ್ಲಾಟ್, ಮನೆಗಳನ್ನು ಖರೀದಿಸಿ ಊರು ಖಾಲಿ ಮಾಡಿದರು.

ಇಡೀ ಊರೇ ಖಾಲಿ ಮಾಡದರೂ ಒಂದು ಮನೆತನ ಮಾತ್ರ ಇನ್ನೂ ಖಾಲಿ ಮಾಡಿಲ್ಲ. ಅದುವೇ ನೆಲ್ಲಿದಡಿ ಗುತ್ತು ಮನೆತನ. 800 ವರ್ಷಗಳ ಇತಿಹಾಸವಿರುವ.. ಕಾಂತೇರಿ ಜುಮಾದಿ ಮತ್ತು ಮರ್ಲು ಜುಮಾದಿ ದೈವಗಳ ಮೂಲ ಚಾವಡಿಯಾಗಿರುವ ನೆಲ್ಲಿದಡಿ ಗುತ್ತಿನ ಯಜಮಾನರು (ಗಡಿ ಪ್ರಧಾನರು ಲಕ್ಷ್ಮಣ ಚೌಟರು) ಕಂಪನಿ ಮತ್ತು ಸರ್ಕಾರದ ಮುಂದೆ ಮಂಡಿಯೂರಿಲ್ಲ.

ನೀವು ಕೋಟಿ ಅಲ್ಲ.. 100 ಕೋಟಿ ರೂಪಾಯಿ ಕೊಟ್ಟರೂ ಸರಿ, ನಮ್ಮ ಜೀವ ಹೋದರೂ ನಮ್ಮ ದೈವದ ಜಾಗವನ್ನು, ಮಣ್ಣನ್ನು ಬಿಟ್ಟುಕೊಡುವುದಿಲ್ಲ ಎಂದು ಪಟ್ಟುಹಿಡಿದರು. ಎಸ್‌ಇಝಡ್ ನೀಡಿದ ಕೋಟ್ಯಂತರ ರೂಪಾಯಿ ಪರಿಹಾರದ ಹಣ ಇಂದಿಗೂ ಬ್ಯಾಂಕ್ ಖಾತೆಯಲ್ಲೇ ಕೊಳೆಯುತ್ತಿದೆಯೇ ಹೊರತು ಆ ಕುಟುಂಬದವರು ನಯಾಪೈಸೆಯನ್ನೂ ಮುಟ್ಟಿಲ್ಲ.

ಸ್ಥಳೀಯವಾಗಿ ದೈವಸ್ಥಾನ ಉಳಿಸಿಕೊಳ್ಳಲು ಹೋರಾಟ ನಡೆದಾಗ ಇವರಿಗೆ ಅಧಿಕಾರಿಗಳು ಕೊಡಬಾರದ ಕಾಟ ಕೊಟ್ಟಿದ್ದಾರೆ ಎನ್ನಲಾಗಿದೆ. ತಿಂಗಳಿಗೊಮ್ಮೆ ಸಂಕ್ರಮಣದಂದು ದೈವಕ್ಕೆ ಪೂಜೆ ಸಲ್ಲಿಸಲು ಭಕ್ತರು ಗೇಟ್‌ನಲ್ಲಿ ಪಾಸ್ ಪಡೆಯಬೇಕಾದ ದುಃಸ್ಥಿತಿ ಬಂತು. ವರ್ಷಕ್ಕೊಮ್ಮೆ ನಡೆಯುವ ನೇಮ-ಕೋಲಗಳಿಗೆ ಒಡಿಶಾ, ಗುಜರಾತ್‌ನಿಂದ ಬಂದ ಕಂಪನಿಯ ಭದ್ರತಾ ಅಧಿಕಾರಿಗಳಿಂದ ಅನುಮತಿ ಪಡೆಯಬೇಕಾಯಿತು. ಇದಕ್ಕೆ ನಮ್ಮ ಊರಿನ, ನಮ್ಮ ಮಣ್ಣಿನ ದೈವಕ್ಕೆ ನಾವೆಲ್ಲಿ, ಹೇಗೆ ಪೂಜೆ ಮಾಡಬೇಕು ಎಂಬುದನ್ನು ಯಾರೋ ಪರರಾಜ್ಯದ ಅಧಿಕಾರಿಗಳು ನಿರ್ಧರಿಸುವುದೇ? ಎಂದು ಕರಾವಳಿಯ ಜನ ಆಕ್ರೋಶ ಹೊರಹಾಕಿದ್ದರು. ದೈವಸ್ಥಾನದ ವ್ಯಾಪ್ತಿಯಲ್ಲಿದ್ದ ಐತಿಹಾಸಿಕ ಮಂತ್ರದ ಬಾವಿಗೆ ಕಾಂಪೌಂಡ್ ಹಾಕಿ, ಗೇಟ್ ಮುಚ್ಚಿ ಸೆಕ್ಯೂರಿಟಿ ನಿಯೋಜಿಸಲಾಯಿತು.

4 ತಿಂಗಳ ಹಿಂದೆ ಎಚ್ಚರಿಕೆ ಕೊಟ್ಟೆದ್ದ ಮರ್ಲು ಜುಮಾದಿ

ಇತ್ತೀಚೆಗೆ ನೆಲ್ಲಿದಡಿ ಗುತ್ತಿನ ಮನೆಯಲ್ಲಿ ನಡೆದ ನೇಮೋತ್ಸವದಲ್ಲಿ ದೈವವು ನುಡಿ ಕೊಟ್ಟಿತ್ತು. ಆ ದೈವವಾಣಿ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಜನರಲ್ಲಿ ರೋಮಾಂಚನ ಮೂಡಿಸಿದೆ. ‘ಈ ಮಣ್ಣು ನನ್ನದು.. ಈ ಮಣ್ಣನ್ನು ಹೇಗೆ ಉಳಿಸಿಕೊಳ್ಳಬೇಕು ಎಂದು ನನಗೆ ಚೆನ್ನಾಗಿ ಗೊತ್ತು. ನಾನಿಲ್ಲಿಂದ ಕದಲುವುದಿಲ್ಲ. ನನ್ನ ಸ್ಥಾನವನ್ನು ಕೆಡವಲು ಬಂದರೆ ನಾನು ಆಕಾಶದಿಂದ ಬೆಂಕಿ ಸುರಿಸುತ್ತೇನೆ. ನನ್ನ ಬಾಲ ತುಳಿದರೆ ಸುಮ್ಮನಿರುತ್ತೇನೆ, ಬೆನ್ನು ತುಳಿದರೆ ಒಮ್ಮೆ ತಿರುಗಿ ನೋಡುತ್ತೇನೆ. ಆದರೆ ನನ್ನ ತಲೆಯ ಮೇಲೆ ಎಡೆ ಮೆಟ್ಟಲು ಬಂದರೆ ಯಾರನ್ನೂ ಸುಮ್ಮನೆ ಬಿಡುವುದಿಲ್ಲ’ ಎಂದು ದೈವ ಎಚ್ಚರಿಕೆಯನ್ನ ನೀಡಿತ್ತು. ಇದೀಗ ಭೀಕರ ಬೆಂಕಿ ಸ್ಫೋಟವನ್ನು ನೋಡಿದ ಜನ, ದೈವದ ಎಡೆ ಮೆಟ್ಟಲು ಹೋದ ಅಧಿಕಾರಿಗಳಿಗೆ ಜುಮಾದಿ ದೈವ ತನ್ನ ಶಕ್ತಿ ತೋರಿಸಿದೆ ಎಂದು ಮಾತಾಡಿಕೊಳ್ಳುತ್ತಿದ್ದಾರೆ.

PREV
Read more Articles on
click me!

Recommended Stories

Shivamogga: ಅರಣ್ಯ ಇಲಾಖೆ ಸೆರೆಹಿಡಿದ 7 ತಿಂಗಳಿಗೆ 'ಶೌರ್ಯ' ಆನೆ ಸಾವು; ರಾಜ್ಯದಲ್ಲಿ ವಾರದಲ್ಲಿ ಎರಡು ಆನೆ ಸಾವು!
MRPL ಸ್ಫೋಟ: ಮೃತ ಮನೀಶ್ ಕುಟುಂಬಕ್ಕೆ ಬರೋಬ್ಬರಿ ₹1.20 ಕೋಟಿ ಪರಿಹಾರ