M.R Poovamma: ಚಿನ್ನ ಗೆದ್ದು ಮಂಗಳೂರಿಗೆ ಬರುತ್ತಿದ್ದಂತೆ ರಾಜ್ಯ ಸರ್ಕಾರ ವಿರುದ್ಧ ಬೇಸರ ಹೊರಹಾಕಿದ ಪೂವಮ್ಮ; ಕಾರಣವೇನು?

Published : Oct 03, 2026, 11:48 AM IST
Machettira Raju Poovamma

ಸಾರಾಂಶ

ಏಷ್ಯನ್ ಗೇಮ್ಸ್‌ನ 4×400 ಮೀಟರ್ ರಿಲೆಯಲ್ಲಿ ಚಿನ್ನದ ಪದಕ ಗೆದ್ದ ಕನ್ನಡಿಗ ಎಂ.ಆರ್. ಪೂವಮ್ಮ ಅವರಿಗೆ ಮಂಗಳೂರಿನಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ಈ ವೇಳೆ ರಾಜ್ಯ ಸರ್ಕಾರದ ಕಡಿಮೆ ನಗದು ಬಹುಮಾನ ಹಾಗೂ ಆರಂಭಿಕ ನಿರ್ಲಕ್ಷ್ಯದ ಬಗ್ಗೆ ಅವರು ತೀವ್ರ ಬೇಸರ ವ್ಯಕ್ತಪಡಿಸಿದರು. ಬಳಿಕ ಡಿ.ಕೆ. ಶಿವಕುಮಾರ್ ಸೇರಿದಂತೆ ಪ್ರಮುಖ ನಾಯಕರು ಕರೆ ಮಾಡಿ ಶುಭಕೋರಿದ್ದು, ಭೇಟಿಗೆ ಆಹ್ವಾನಿಸಿದ್ದಾರೆ.

ಮಂಗಳೂರು: ಏಷ್ಯನ್ ಗೇಮ್ಸ್ ರಿಲೆಯಲ್ಲಿ ಚಿನ್ನ ಪದಕ ಗೆದ್ದ ಕನ್ನಡತಿ ಎಂ.ಆರ್ ಪೂವಮ್ಮ ಮಂಗಳೂರಿಗೆ ಆಗಮಿಸಿದರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪೂವಮ್ಮ ಅವರಿಗೆ ಕ್ರೀಡಾಭಿಮಾನಿಗಳು, ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಅದ್ದೂರಿ ಸ್ವಾಗತ ನೀಡಿದರು. ಎಂ.ಆರ್.ಪೂವಮ್ಮ ಅವರು ಜಪಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್ 4×400 ಮಹಿಳೆಯರ ರಿಲೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಚಿನ್ನ ಗೆದ್ದ ಪೂವಮ್ಮಗೆ ಸ್ವಾಗತ: ಆದರೆ ಕಾಡಿದ ಆ ಒಂದು ಬೇಸರವೇನು?

ವಿಮಾನ ನಿಲ್ದಾಣದ ಆಗಮನ ದ್ವಾರದಲ್ಲಿ ಸೇರಿದ ಅಭಿಮಾನಿಗಳು ಮತ್ತು ಬಂಧು-ಮಿತ್ರರು ಪೂವಮ್ಮ ಅವರಿಗೆ ಶಾಲು ಹೊದಿಸಿ, ಬೃಹತ್ ಸೇಬಿನ ಹಾರ, ಫಲ-ತಾಂಬೂಲ ಹಾಗೂ ಹೂಗುಚ್ಛ ನೀಡಿ ಅದ್ಧೂರಿ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಮಂಗಳೂರಿನ ಪ್ರಮುಖ ಕ್ರೀಡಾ ತರಬೇತಿ ಮತ್ತು ಅಥ್ಲೆಟಿಕ್ಸ್ ಸಂಘಟನೆಯಾದ ಮಂಗಳ ಅಥ್ಲೆಟಿಕ್ಸ್ ಮಕ್ಕಳು ಹಸ್ತಲಾಘವ ನೀಡಿದರು. ಅಭಿಮಾನಿಗಳು ಪೂವಮ್ಮರೊಂದಿಗೆ ಫೋಟೋ, ಸೆಲ್ಫಿ ಸೆರೆಹಿಡಿದು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮೂಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಹಾಜರಿದ್ದರು.

ಏಷ್ಯನ್ ಗೇಮ್ಸ್‌ಗಳಲ್ಲಿ ಪೂವಮ್ಮ ಅವರಿಗೆ 6ನೇ ಪದಕ

ಅದ್ದೂರಿ ಸ್ವಾಗತ ಸ್ವೀಕರಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಂ.ಆರ್. ಪೂವಮ್ಮ ಅವರು, ನನಗೆ ತುಂಬಾ ಖುಷಿಯಾಗುತ್ತಿದೆ, ನಾನು ಭಾಗವಹಿಸಿದ ಮೂರು ಏಷ್ಯನ್ ಗೇಮ್ಸ್‌ಗಳಲ್ಲಿ ಇದು ನನ್ನ 6ನೇ ಪದಕವಾಗಿದೆ. ಈ ಬಾರಿ ಅಥ್ಲೆಟಿಕ್ಸ್‌ನಲ್ಲಿ ನಮ್ಮ 4x400 ಮಹಿಳೆಯರ ರಿಲೇ ತಂಡಕ್ಕೆ ಗೋಲ್ಡ್ ಮೆಡಲ್ ಲಭಿಸಿದೆ. ಏಷ್ಯನ್ ಗೇಮ್ಸ್ ಕ್ರೀಡಾಂಗಣದಲ್ಲಿ ನಮ್ಮ ರಾಷ್ಟ್ರಗೀತೆ ಮೊಳಗಿದಾಗ ಕೇಳಿ ತುಂಬಾ ಹೆಮ್ಮೆ ಎನಿಸಿತು. ಕಂಠೀರವ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿ ದೇಶಕ್ಕೆ ಮತ್ತೊಂದು ಪದಕ ತಂದಿರುವುದಕ್ಕೆ ಸಂತಸವಿದೆ ಎಂದು ಹೇಳಿದರು.

ಚಿನ್ನದ ಪದಕ ಗೆದ್ದರು ಒಂದೇ ಒಂದು ಶುಭಾಶಯ ಇಲ್ಲ!

ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ ಎಂ.ಆರ್. ಪೂವಮ್ಮ ಅವರು, ಏಷ್ಯನ್ ಗೇಮ್ಸ್‌ನಲ್ಲಿ ಇತರ ರಾಜ್ಯಗಳ ಅಥ್ಲೀಟ್‌ಗಳು ಪದಕ ಗೆಲ್ಲುತ್ತಿದ್ದಂತೆ ಅವರ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕ್ರೀಡಾ ಸಚಿವರು ತಕ್ಷಣ ಕರೆ ಮಾಡಿ ಶುಭ ಕೋರುತ್ತಿದ್ದರು. ಆದರೆ ನನಗೆ ಆರಂಭದಲ್ಲಿ ಯಾವುದೇ ಕರೆಗಳು ಬಂದಿರಲಿಲ್ಲ. ಮಾಧ್ಯಮಗಳ ವರದಿಗಳನ್ನು ನೋಡಿ ನಿನ್ನೆ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಹಾಗೂ ಜಿ. ಪರಮೇಶ್ವರ್ ಸರ್ ಕರೆ ಮಾಡಿ ಮಾತನಾಡಿದ್ದಾರೆ ಎಂದು ತಿಳಿಸಿದರು.

'ದೀದಿ, ನಿಮಗೇನು ಸಿಗುತ್ತಿದೆ?' ಅಂದರೆ ಬೇಸರ ಆಗುತ್ತೆ!

ಅಲ್ಲದೇ, ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಕರ್ನಾಟಕದಲ್ಲಿ ನೀಡಲಾಗುವ ನಗದು ಬಹುಮಾನ ತೀರಾ ಕಡಿಮೆಯಿದೆ. ಹರಿಯಾಣ ಸೇರಿದಂತೆ ಬೇರೆ ರಾಜ್ಯಗಳು ಚಿನ್ನ ಗೆದ್ದವರಿಗೆ ₹3 ಕೋಟಿ ಬಹುಮಾನ ನೀಡುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಕೇವಲ ₹35 ಲಕ್ಷ ಮಾತ್ರ ನೀಡಲಾಗುತ್ತಿದೆ. ಇದನ್ನು ಹೆಚ್ಚಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಬೇರೆ ರಾಜ್ಯಗಳ ಸ್ಪರ್ಧಿಗಳು ಬಂದು 'ದೀದಿ, ನಿಮಗೇನು ಸಿಗುತ್ತಿದೆ?' ಎಂದು ಕೇಳುವಾಗ ನಮಗೂ ಬೇಸರವಾಗುತ್ತದೆ. ಕಳೆದ 22-23 ವರ್ಷಗಳಿಂದ ಈ ಕ್ರೀಡಾ ಕ್ಷೇತ್ರದಲ್ಲಿ ಕಠಿಣ ಪರಿಶ್ರಮ ಪಟ್ಟಿದ್ದೇನೆ. ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಕರ್ನಾಟಕ ರಾಜ್ಯಕ್ಕೆ ಸಿಕ್ಕ ಮೊದಲ ಬಂಗಾರದ ಪದಕವಿದು. ಆದ್ದರಿಂದ ರಾಜ್ಯ ಸರ್ಕಾರವು ಕ್ರೀಡಾಪಟುಗಳ ಸಾಧನೆಯನ್ನು ಪರಿಗಣಿಸಬೇಕು. ನಗದು ಬಹುಮಾನ ಹಾಗೂ ಕ್ರೀಡಾ ಸೌಲಭ್ಯಗಳನ್ನು ಹೆಚ್ಚಿಸಬೇಕು. ಇದು ಮುಂದೆ ಬರುವ ಯುವ ಅಥ್ಲೀಟ್‌ಗಳಿಗೂ ದೊಡ್ಡ ಬೆಂಬಲವಾಗಲಿದೆ. ಮುಂದೆ ಏನು ಎಂಬುದನ್ನು ನಾನಿನ್ನೂ ನಿರ್ಧರಿಸಿಲ್ಲ, ಎಲ್ಲವೂ ದೇವರ ದಯೆ. ಸದ್ಯಕ್ಕೆ ಈ ಗೆಲುವಿನ ಕ್ಷಣವನ್ನು ಆನಂದಿಸುತ್ತಿದ್ದೇನೆ. ನನ್ನ ತಂದೆ-ತಾಯಿ, ಪತಿ ಹಾಗೂ ಕೋಚ್‌ಗಳ ಬೆಂಬಲವೇ ನನ್ನ ಸಾಧನೆಗೆ ಕಾರಣ. ಇಲ್ಲಿಗೆ ಬಂದು ಸ್ವಾಗತಿಸಿದ ಪ್ರತಿಯೊಬ್ಬರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು ಎಂದು ತಿಳಿಸಿದರು.

ಪೂವಮ್ಮ ಅವರಿಗೆ ಸಿಎಂ ಕರೆ, ಭೇಟಿ ಮಾಡಲು ಆಹ್ವಾನ

ಸರ್ಕಾರದ ಪ್ರತಿನಿಧಿಗಳ ನಿರ್ಲಕ್ಷ್ಯ ದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಬೆನ್ನಲ್ಲೇ ಸಿಎಂ ಡಿಕೆ ಶಿವಕುಮಾರ್ ಅವರು ಸ್ವತಃ ಪೂವಮ್ಮ ಅವರಿಗೆ ಕರೆ ಮಾಡಿ, ಪೂವಮ್ಮ ಸಾಧನೆಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ಅಲ್ಲದೇ ಅಕ್ಟೋಬರ್ 06ರಂದು ಭೇಟಿಯಾಗಲು ಆಹ್ವಾನ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಡಿಸಿಎಂ ಪರಮೇಶ್ವರ್, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಪೂವಮ್ಮ ಅವರಿಗೆ ಶುಭಾಶಯ ತಿಳಿಸಿದ್ದಾರೆ.

PREV
Read more Articles on
click me!

Recommended Stories

ಒಂದೇ ಘಟನೆಯ ದೂರು-ಪ್ರತಿದೂರಿಗೆ ಇಬ್ಬರು ಪೊಲೀಸರಿಂದ ತನಿಖೆ ಸಲ್ಲ: ಹೈಕೋರ್ಟ್‌
Shivamogga: ಹೊಳೆಹೊನ್ನೂರು 100 ವರ್ಷದ ಪಾದುಕೆ ಕಳ್ಳತನ ಕಥೆಗೆ ಬಿಗ್ ಟ್ವಿಸ್ಟ್! ತನಿಖೆಯಲ್ಲಿ ಬಯಲಾಯ್ತು ಸತ್ಯ!