ಪಾಂಡವಪುರ (ಡಿ.02): ಇತ್ತೀಚೆಗೆ ಸುರಿದ ಮಳೆಯಿಂದ ನೀರು ತುಂಬಿಕೊಂಡು ಮನೆಗೋಡೆ ಕುಸಿದು ಹಾನಿಗೊಳಗಾಗಿದ್ದ ತಾಲೂಕಿನ ಲಿಂಗಾಪುರ ಮತ್ತು ಕೆನ್ನಾಳು ಗ್ರಾಮಕ್ಕೆ ಸಂಸದೆ ಸುಮಲತಾ ಅಂಬರೀಷ್ ಅವರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳೆಯಿಂದಾಗಿ ಲಿಂಗಾಪುರದ ಹಳ್ಳ ಉಕ್ಕಿಹರಿದು ಮನೆಗಳಿಗೆ ನೀರು ನುಗ್ಗಿತ್ತು, ಹಲವಾರು ಮನೆ ಜಲಾವೃತಗೊಂಡಿದ್ದವು, ಮನೆಗಳ ಗೋಡೆ ಕುಸಿದು ಹಾನಿ ಸಂಭವಿಸಿತ್ತು. ಅದೇ ರೀತಿ ತಾಲೂಕಿನ ಕೆನ್ನಾಳು ಗ್ರಾಮದಲ್ಲೂ ಸಹ ಹಲವು ಮನೆಗಳ ಗೋಡೆಗಳು ಕುಸಿದಿದ್ದವು. ಜತೆಗೆ ಮನೆಯ ಮುಂದೆ ಆಟವಾಡುತ್ತಿದ್ದ 11 ವರ್ಷದ ಬಾಲಕನ ಮೇಲೂ ಮನೆಯ ಗೋಡೆ ಕುಸಿದು ಬಾಲಕ ಸಾವಪ್ಪಿದ್ದನು. ಹಸು, ಕುರಿಗಳೂ ಗೋಡೆ ಕುಸಿದು ಮೃತಪಟ್ಟಿದ್ದವು.
ಘಟನೆ ನಡೆದು ಹಲವು ದಿನಗಳ ಬಳಿಕ ಸಂಸದೆ ಸುಮಲತಾ ಅಂಬರೀಷ್ ಅವರು ಕೆನ್ನಾಳು ಮತ್ತು ಲಿಂಗಾಪುರ ಗ್ರಾಮಗಳಿಗೆ ಭೇಟಿಕೊಟ್ಟು ಮನೆಗಳನ್ನು ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಕೆನ್ನಾಳು ಗ್ರಾಮದಲ್ಲಿ ಗೋಡೆ ಕುಸಿದು ಮೃತಪಟ್ಟಬಾಲಕನ ಮನೆಗೂ ಸಹ ತೆರಳಿ ಪೋಷಕರಿಗೆ ಸಾಂತ್ವನ ಹೇಳಿದರು.
ಪರಿಹಾರಕ್ಕೆ ಜಿಲ್ಲಾಡಳಿತದಿಂದ ಕ್ರಮ: ಬಳಿಕ ಮಾತನಾಡಿದ ಸಂಸದೆ ಸುಮಲತಾ ಅಂಬರೀಷ್, ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿ ಶೀಲಿಸಿದ್ದೇನೆ. ಪರಿಹಾರಕ್ಕೆ ಜಿಲ್ಲಾಡಳಿತದಿಂದ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಇದೀಗ ಎಂಎಲ್ಸಿ ಚುನಾವಣೆಯ ನೀತಿ ಸಂಹಿತೆ ಇರುವುದರಿಂದ ಸರ್ಕಾರದಿಂದ ಪರಿಹಾರ ಬರುವುದು ತಡವಾಗಿದೆ. ಅಧಿಕಾರಿಗಳಿಂದ ಸಂಪೂರ್ಣ ವರದಿ ತರಿಸಿಕೊಂಡು ಮನೆ ಕಳೆದುಕೊಂಡಿರುವ ಕುಟುಂಬಗಳಿಗೆ ಸೂಕ್ತ ಪರಿಹಾರ ದೊರಕಿಸಿಕೊಡಲಾಗುವುದು. ಪರಿಹಾರದ ಸಂಬಂಧ ಮುಖ್ಯಮಂತ್ರಿಗಳೊಂದಿಗೂ ಸಹ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು. ಅಧಿಕಾರಿಗಳು ಹಾಗೂ ರೈತಸಂಘ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಹಾಜರಿದ್ದರು.
ಶಾಕ್ ಕೊಟ್ಟಸಂಸದೆ ಸುಮಲತಾ : ರಾಜಕೀಯ ಪಕ್ಷಗಳ ನಡುವೆ ಪ್ರತಿಷ್ಠೆಯ ಕಣವಾಗಿರುವ ವಿಧಾನಪರಿಷತ್ ಚುನಾವಣೆ ರಂಗೇರಿದೆ. ಈಗಾಗಲೇ ಮತದಾರರಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಜೆಡಿಎಸ್, ಕಾಂಗ್ರೆಸ್, ಬಿಜೆಪಿಯ ಅಭ್ಯರ್ಥಿಗಳು ಮತದಾರರ ಓಲೈಕೆಗೆ ನಾನಾ ರೀತಿಯ ಕಸರತ್ತನ್ನು ನಡೆಸುತ್ತಿದ್ದಾರೆ.
ಅದರಲ್ಲೂ ಮಂಡ್ಯದಲ್ಲಿ ಕಾಂಗ್ರೆಸ್ ಬಿಜೆಪಿ ಹಾಗೂ ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಇದರ ಮಧ್ಯೆ ಮಂಡ್ಯದ ಪಕ್ಷೇತರ ಸಂಸದೇ ಸುಮಲತಾ ಅಂಬರೀಶ್ ಅವರು ಕಾಂಗ್ರೆಸ್, ಬಿಜೆಪಿ ಹಾಗೂ ದಳಪತಿಗಳಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ಸುಮಲತಾ ಅಂಬರೀಶ್ ಮಂಡ್ಯದಲ್ಲಿ ತಮ್ಮ ಬೆಂಬಲ ಯಾವ ಪಕ್ಷಕ್ಕೆ ನೀಡಲಿದ್ದಾರೆ ಎನ್ನುವ ಬಗ್ಗೆ ಚರ್ಚೆ ಶುರುವಾಗಿತ್ತು. ಇದೀಗ ಅದಕ್ಕೆ ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿದ್ದು, ಒಂದು ಪಕ್ಷಕ್ಕೆ ಬೆಂಬಲ ಕೊಟ್ಟರೆ ಅದು ವಿವಾದ ಸೃಷ್ಟಿಸುತ್ತದೆ, ಮಂಡ್ಯ ಜಿಲ್ಲೆಗೆ ಯಾರು ಅಭಿವೃದ್ದಿ ಕೆಲಸ ಮಾಡುತ್ತಾರೋ ಅವರಿಗೆ ವೋಟ್ ಹಾಕುವೆ ಎಂದು ಸ್ಪಷ್ಟಪಡಿಸಿದರು.
ಈ ಬಾರೀ ಯಾರಿಗೂ ಬೆಂಬಲ ನೀಡುವುದಿಲ್ಲ, ಇದು ಚುನಾಯಿತ ಸದಸ್ಯರಿಂದ ನಡೆಯುವ ಚುನಾವಣೆ, ನಾನು ಎಲ್ಲಿಗೂ ಕೂಡ ಬರುವುದಿಲ್ಲ, ನನ್ನನ್ನು ಸಂಪರ್ಕಿಸಿ ಬೆಂಬಲ ನೀಡಿದವರಿಗೆ ಶುಭಾಶಯ ಅಷ್ಟೇ ಹೇಳಲಿದ್ದೇನೆ ಎಂದು ಹೇಳುವ ಮೂಲಕ ಕಾಂಗ್ರೆಸ್- ಬಿಜೆಪಿಗೆ ಶಾಕ್ ಕೊಟ್ಟರು.
ಅದರಲ್ಲೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಸುಮಲತಾ ಅವರಿಗೆ ಬೆಂಬಲ ಸೂಚಿಸಿತ್ತು. ಈಗ ಪರಿಷತ್ ಚುನಾವಣೆಯಲ್ಲಿ ಸುಮಲತಾ ಅವರು ನಮಗೆ ಬೆಂಬಲ ಕೊಡ್ತಾರೆ ಎಂದು ಬಿಜೆಪಿ ವಿಶ್ವಾಸದಲ್ಲಿತ್ತು. ಆದ್ರೆ, ಸುಮಲತಾ ಯಾವ ಪಕ್ಷಕ್ಕೂ ಬಹಿರಂಗ ಬೆಂಬಲ ಇಲ್ಲ ಎಂದು ಘಂಟಾಘೋಷವಾಗಿ ಹೇಳಿದ್ದಾರೆ. ಇದರಿಂದ ಬಿಜೆಪಿಗೆ ಭಾರೀ ಮುಖಭಂಗವಾದಂತಾಗಿದೆ.
ಮಂಡ್ಯ ಜಿಲ್ಲಾ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳ ಆಯ್ಕೆಯಿಂದ ನಡೆಯಲಿರುವ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಉಮೇದುದಾರರಾಗಿ ದಿನೇಶ್ ಗೂಳಿಗೌಡ ಅವರು ಸ್ಪರ್ಧಿಸಿದ್ರೆ, ಬಿಜೆಪಿಯಿಂದ ಮಂಜು ಕೆ.ಆರ್.ಪೇಟೆ ಕಣಕ್ಕಿಳಿದಿದ್ದಾರೆ. ಇನ್ನು ಜೆಡಿಎಸ್‌ನಿಂದ ಹಾಲಿ ವಿಧಾನಪರಿಷತ್ ಸದಸ್ಯ ಅಪ್ಪಾಜಿ ಗೌಡ ಅವರು ಅಖಾಡದಲ್ಲಿದ್ದಾರೆ.