
ಬೆಳಗಾವಿ: ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಹಾಗೂ ರೈಲ್ವೆ ಗೇಟ್‌ಗಳಿಂದ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ನಗರದ ಹೃದಯಭಾಗದಲ್ಲಿ ಸುಮಾರು 9 ಕಿ.ಮೀ ಉದ್ದದ ಎಲಿವೇಟೆಡ್ ರೈಲ್ವೆ ಟ್ರ್ಯಾಕ್ ನಿರ್ಮಿಸಬೇಕು ಎಂದು ರಾಜ್ಯಸಭಾ ಸದಸ್ಯ ಪ್ರೊ.ಎಂ.ನಾಗರಾಜ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ನವದೆಹಲಿಯಲ್ಲಿ ಸೋಮವಾರ ನಡೆದ ರಾಜ್ಯಸಭೆ ಅಧಿವೇಶನದಲ್ಲಿ ಬೆಳಗಾವಿ ನಗರದ ಸಂಚಾರ ಸಮಸ್ಯೆಯನ್ನು ಪ್ರಸ್ತಾಪಿಸಿದ ಅವರು, ನಗರದ ಮಧ್ಯಭಾಗದಲ್ಲಿ ಹಾದುಹೋಗಿರುವ ರೈಲ್ವೆ ಮಾರ್ಗದಿಂದಾಗಿ ಲೆವೆಲ್ ಕ್ರಾಸಿಂಗ್‌ಗಳಲ್ಲಿ ಪದೇ ಪದೇ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದಕ್ಕೆ ದೀರ್ಘಕಾಲದ ಮತ್ತು ವೈಜ್ಞಾನಿಕ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ನಗರದ ಹೃದಯಭಾಗದಲ್ಲಿ ಸುಮಾರು 9 ಕಿ.ಮೀ. ಉದ್ದದ ರೈಲ್ವೆ ಮಾರ್ಗವನ್ನು ವೈಯಾಡಕ್ಟ್‌ಗಳ ಮೇಲೆ ಎತ್ತರಿಸಿ ಎಲಿವೇಟೆಡ್ ರೈಲ್ವೆ ಟ್ರ್ಯಾಕ್ ಆಗಿ ಅಭಿವೃದ್ಧಿಪಡಿಸಿದರೆ, ನಗರದೊಳಗಿನ ಲೆವೆಲ್ ಕ್ರಾಸಿಂಗ್‌ಗಳಿಂದ ಉಂಟಾಗುತ್ತಿರುವ ಸಮಸ್ಯೆಯನ್ನು ನಿವಾರಿಸಬಹುದು. ಅಲ್ಲದೆ, ಈಗಿರುವ ರೈಲ್ವೆ ಮೇಲ್ಸೇತುವೆಗಳ ಸುತ್ತ ಉಂಟಾಗುವ ಸಂಚಾರ ದಟ್ಟಣೆಯನ್ನೂ ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಎಲಿವೇಟೆಡ್ ರೈಲ್ವೆ ಯೋಜನೆ ಜಾರಿಯಾದರೆ ರೈಲ್ವೆ ಗೇಟ್‌ಗಳಲ್ಲಿ ವಾಹನಗಳು ಕಾಯುವ ಪರಿಸ್ಥಿತಿ ತಪ್ಪಲಿದೆ. ಆಂಬ್ಯುಲೆನ್ಸ್ ಸೇರಿದಂತೆ ತುರ್ತು ಸೇವೆಗಳ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಸಾರ್ವಜನಿಕ ಸುರಕ್ಷತೆ ಹೆಚ್ಚುವುದರ ಜತೆಗೆ ಭಾರೀ ವಾಹನಗಳ ಸಂಚಾರ ಹಾಗೂ ನಗರದ ವಿವಿಧ ಪ್ರದೇಶಗಳ ನಡುವಿನ ಸಂಪರ್ಕ ವ್ಯವಸ್ಥೆಯೂ ಸುಧಾರಿಸಲಿದೆ ಎಂದು ಹೇಳಿದರು.
ಇದನ್ನೂ ಓದಿ: triplets born ಬೆಳಗಾವಿಯಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ 20 ವರ್ಷದ ಯುವತಿ!
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಬೆಳಗಾವಿಯ ಎಲಿವೇಟೆಡ್ ರೈಲ್ವೆ ಟ್ರ್ಯಾಕ್ ಯೋಜನೆಯನ್ನು ಆದ್ಯತೆಯ ಮೇರೆಗೆ ಪರಿಗಣಿಸಿ ಅನುಮೋದನೆ ನೀಡಬೇಕು ಎಂದು ರಾಜ್ಯಸಭೆಯಲ್ಲಿ ಪ್ರೊ.ಎಂ.ನಾಗರಾಜ ಆಗ್ರಹಿಸಿದರು.
ಇದನ್ನೂ ಓದಿ: ಅಥಣಿ: ಶಿವಭಕ್ತರ ಅನುಕೂಲಕ್ಕಾಗಿ Athani ಸಾರಿಗೆ ಘಟಕದಿಂದ 2 ನೂತನ ಬಸ್; ವೇಳಾಪಟ್ಟಿ, ಟಿಕೆಟ್ ದರ ಈ ರೀತಿಯಾಗಿದೆ