ಶಿವಮೊಗ್ಗ-ತುಮಕೂರು ಚತುಷ್ಪತ ಹೆದ್ದಾರಿ ತ್ವರಿತವಾಗಿ ಮುಗಿಸಿ: ಸಂಸದ ರಾಘವೇಂದ್ರ ಸೂಚನೆ

By Kannadaprabha NewsFirst Published May 9, 2020, 11:32 AM IST
Highlights

ರಾಷ್ಟ್ರೀಯ ಹೆದ್ದಾರಿ-206 ಶಿವಮೊಗ್ಗ, ತುಮಕೂರು ಚತುಷ್ಪಥ ರಸ್ತೆ ಕಾಮಗಾರಿ ತ್ವರಿತಗತಿ ಪೂರ್ಣಗೊಳಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಕುರಿತಾಧ ರಿಪೋರ್ಟ್ ಇಲ್ಲಿದೆ ನೋಡಿ.

ಶಿವಮೊಗ್ಗ(ಮೇ.09): ಮುಖ್ಯಮಂತ್ರಿಗಳ ತವರು ಜಿಲ್ಲೆ ಶಿವಮೊಗ್ಗದಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-206 ಶಿವಮೊಗ್ಗ, ತುಮಕೂರು ಚತುಷ್ಪಥ ರಸ್ತೆ ಕಾಮಗಾರಿ ತ್ವರಿತಗತಿ ಪೂರ್ಣಗೊಳಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ತುಮಕೂರಿನ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾ​ಧಿಕಾರದ ಯೋಜನಾ ನಿರ್ದೇಶಕ ಶಿರೀಷ್‌ ಗಂಗಾಧರ್‌ ಅವರಿಗೆ ಸೂಚಿಸಿದರು.

ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳ ಕುರಿತು ಶಿವಮೊಗ್ಗ ಜಿಲ್ಲಾ​ಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಸಲ್ಲದ ವಿವಿಧ ಕಾರಣಗಳನ್ನು ನೀಡಿ, ರಸ್ತೆ ಕಾಮಗಾರಿಯನ್ನು ವಿಳಂಬ ಮಾಡುವ ಅ​ಧಿಕಾರಿಗಳ ವರ್ತನೆಯನ್ನು ಸಹಿಸಿಕೊಳ್ಳಲಾಗುವುದಿಲ್ಲ ಎಂದರು.

4ನೇ ಹಂತ ಚಾಲನೆ ಇಲ್ಲ:

ಈ ಕಾಮಗಾರಿಯನ್ನು 4 ಹಂತಗಳಲ್ಲಿ ಕೈಗೆತ್ತಿಕೊಂಡಿದ್ದು, ಈಗಾಗಲೇ ಮೂರು ಹಂತದ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, 4ನೇ ಹಂತದ ಭದ್ರಾವತಿ-ಶಿವಮೊಗ್ಗ ನಡುವಿನ ಕಾಮಗಾರಿಗೆ ಈವರೆಗೆ ಚಾಲನೆ ದೊರೆತಿಲ್ಲ. ಈ ನಡುವೆ ರಸ್ತೆ ಬದಿಯ ಮರಗಳ ಕಟಾವು ಮಾಡುವ ಬಗ್ಗೆ ಅರಣ್ಯ ಇಲಾಖೆ ಹಾಗೂ ಖಾಸಗಿ ಭೂಮಾಲೀಕರೊಂದಿಗೆ ಮಾಡಿಕೊಂಡ ಒಪ್ಪಂದದ ಮೇರೆಗೆ ಹಣ ಸಂದಾಯ ಮಾಡಲಾಗಿದೆ. ಉಳಿದಂತೆ ಅರಣ್ಯ ಇಲಾಖೆಯ ಮರಗಳಿಗೆ ನಿಯಮಾನುಸಾರ ಹಣ ಪಾವತಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದ ಅವರು, ಕಾಮಗಾರಿಯನ್ನು ನಡೆಸಲು ಎದುರಾಗಿರುವ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಂಡು ಕೂಡಲೇ ಶಿವಮೊಗ್ಗದಿಂದಲೇ ಕಾರ್ಯಾರಂಭ ಮಾಡುವಂತೆ ಅವರು ಸೂಚಿಸಿದರು.

ರಸ್ತೆ ಕಾಮಗಾರಿ ಆರಂಭಿಸುವಲ್ಲಿ ಮರಗಳ ಕಡಿತಲೆ ಕುರಿತು ಅರಣ್ಯ ಇಲಾಖೆಯ ಅ​ಧಿಕಾರಿಗಳೊಂದಿಗೆ ತಾವೇ ಖುದ್ದಾಗಿ ಸಮಾಲೋಚನೆ ನಡೆಸುವುದಾಗಿ ತಿಳಿಸಿದ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾ​ಧಿಕಾರವು ಮಾಡಿಕೊಂಡ ಒಡಂಬಡಿಕೆ ಅನ್ವಯ ರಸ್ತೆ ಬದಿ ಗಿಡಗಳನ್ನು ನೆಟ್ಟು, 15ವರ್ಷಗಳವರೆಗೆ ಪೋಷಿಸುವಂತೆ ಅವರು ಸೂಚಿಸಿದರು.

ವಾರದೊಳಗಾಗಿ ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭ: ಈಶ್ವರಪ್ಪ

ಈ ಕಾಮಗಾರಿಯನ್ನು ಪೂರ್ಣಗೊಳಿಸುವಲ್ಲಿ ಅಗತ್ಯವಾಗಿರುವ ಕಲ್ಲುಕ್ವಾರಿ ಹಾಗೂ ಮರಳು ಕ್ವಾರಿಗಳನ್ನು ಜಿಲ್ಲಾ​ಧಿಕಾರಿಗಳ ಅನುಮತಿ ಪಡೆದು ಒದಗಿಸಲಾಗುವುದು. ಅಲ್ಲದೇ ಭದ್ರಾ ಮೇಲ್ದಂಡೆ ಯೋಜನೆ ಕಾಲುವೆ ಕಾಮಗಾರಿಯಲ್ಲಿ ದೊರೆತ ಕಲುಗಳನ್ನು ಈ ಕಾಮಗಾರಿಗೆ ಬಳಸಿಕೊಳ್ಳಲು ಸಹಕರಿಸುವಂತೆ ನೀರಾವರಿ ನಿಗಮದ ಅ​ಧಿಕಾರಿಗಳಿಗೆ ಸೂಚಿಸಿದರಲ್ಲದೆ ಕಾಮಗಾರಿ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಕೆರೆಗಳ ಹೂಳನ್ನು ಎತ್ತಿಕೊಳ್ಳುವಂತೆ ಅವರು ಸೂಚಿಸಿದರು.

ಜಿಲ್ಲಾಡಳಿತ ಸಹಕಾರ:

ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ​ಧಿಕಾರಿ ಕೆ.ಬಿ.ಶಿವಕುಮಾರ್‌ ಅವರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳಲು ಅಗತ್ಯವಿರುವ ಕಲ್ಲು ಮರಳು ಮತ್ತು ಮಣ್ಣನ್ನು ಪೂರೈಸಲು ಜಿಲ್ಲಾಡಳಿತದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಸಂಸದರಿಗೆ ತಿಳಿಸಿದರು. ಶಿವಮೊಗ್ಗ ನಗರದ ಹೊರವಲಯದಲ್ಲಿ ಉದ್ದೇಶಿತ ವರ್ತುಲ ರಸ್ತೆ ನಿರ್ಮಾಣ ಮಾಡುವಲ್ಲಿ ಯಾವುದೇ ಅಡತಡೆ ಇಲ್ಲ. ಈ ಸಂಬಂಧ ಹಲವು ದಾಖಲೆಗಳನ್ನು ನಿರ್ವಹಿಸುವ ಕಾರ್ಯ ಭರದಿಂದ ಸಾಗಿದೆ. ಈ ಮಾಸಾಂತ್ಯದೊಳಗಾಗಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಊರಗಡೂರು ಮತ್ತು ಇಸ್ಲಾಪುರಗಳಲ್ಲಿನ ಸಣ್ಣ-ಪುಟ್ಟಸಮಸ್ಯೆಗಳನ್ನು ಇತ್ಯರ್ಥಪಡಿಸಿ ಕಾಮಗಾರಿ ಆರಂಭಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದರು.

ಸಭೆಯಲ್ಲಿ ಆರ್ಯ ವೈಶ್ಯ ನಿಗಮದ ರಾಜ್ಯ ಅಧ್ಯಕ್ಷ ಡಿ.ಎಸ್‌. ಅರುಣ್‌, ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕ ಶಿರೀಷ್‌ ಗಂಗಾಧರ್‌, ಜಿಲ್ಲಾ ಭೂಸ್ವಾ​ಧೀನಾ​ಕಾರಿ ಗಣಪತಿ ಕಟ್ಟಿನಕೆರೆ, ಜಿಲ್ಲೆಯ ಎಲ್ಲಾ ವಲಯಗಳ ಅರಣ್ಯ ಸಂರಕ್ಷಣಾ​ಧಿಕಾರಿಗಳು, ಸಂಬಧಿಂ​ತ ವಿವಿಧ ಇಲಾಖೆಗಳ ಅ​ಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

click me!