26 ವರ್ಷದ ಮಗ ರಾಮದಾಸ ಕುಲಂ ಅವರಿಗೆ ತಮ್ಮ ಕಿಡ್ನಿ ಧಾರೆ ಎರೆದಿದ ತಾಯಿ ಗುಣವಂತಿ ಕುಲಂ
ಬೆಳಗಾವಿ(ಜ.07): ಕಳೆದ ಹಲವು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮಗನಿಗೆ ತಾಯಿ ಕಿಡ್ನಿ ನೀಡಿ ಆತನಿಗೆ ಜೀವದಾನ ನೀಡಿದ್ದಾರೆ. ನಗರದ ಅರಿಹಂತ ಆಸ್ಪತ್ರೆಯಲ್ಲಿ ತಾಯಿ ನೀಡಿದ ಕಿಡ್ನಿ ಮಗನಿಗೆ ಕಸಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 26 ವರ್ಷದ ಮಗ ರಾಮದಾಸ ಕುಲಂ ಅವರಿಗೆ ತಾಯಿ ಗುಣವಂತಿ ಕುಲಂ ತಮ್ಮ ಕಿಡ್ನಿ ಧಾರೆ ಎರೆದಿದ್ದಾರೆ.
ಜಿಲ್ಲೆಯ ಖಾನಾಪುರ ತಾಲೂಕಿನ ಗೋಲ್ಯಾಳಿ ಗ್ರಾಮದ ನಿವಾಸಿ ರಾಮದಾಸ ಕುಲಂ, ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದ. ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಡಿಸೆಂಬರ್ 29ರಂದು ಶಸ್ತ್ರಚಿಕಿತ್ಸೆ ನೆರವೇರಿಸಿ ಕಿಡ್ನಿ ಕಸಿ ಮಾಡುವಲ್ಲಿ ವೈದ್ಯರು ಯಶಸ್ವಿಯಾದರು.
ಬೆಳಗಾವಿ: ಕೊಕಟನೂರು ಜಾತ್ರೆಯಲ್ಲಿ ಪ್ರಾಣಿ ಬಲಿ ತಡೆಯಿರಿ, ಪೊಲೀಸರಿಗೆ ಅಧ್ಯಕ್ಷ ದಯಾನಂದ ಶ್ರೀ ಆಗ್ರಹ
ಯುರಾಲಾಜಿಸ್ಟ ಡಾ. ಅಮಿತ ಮುಂಗರವಾಡಿ, ಡಾ.ಶಿವಗೌಡಾ ಪಾಟೀಲ ಅವರು ನೆರವೇರಿಸಿದ ಶಸ್ತ್ರಚಿಕಿತ್ಸೆಗೆ ನೆಫ್ರಾಲಜಿಸ್ಟ್ ಡಾ.ವಿಜಯಕುಮಾರ ಪಾಟೀಲ್, ಅರಿವಳಿಕೆ ತಜ್ಞವೈದ್ಯ ಡಾ.ಪ್ರಶಾಂತ ಎಂ.ಬಿ, ಡಾ. ಅವಿನಾಶ ಲೋಂಡೆ, ಡಾ.ಅಂಬರೀಷ ನೇರ್ಲಿಕರ ಅವರು ಸಹಕಾರ ನೀಡಿದರು. ಯಶಸ್ವಿ ಕಸಿ ನಂತರ ತಾಯಿ, ಮಗನನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ಡಿ. ದೀಕ್ಷಿತ ಅವರು, ಅರಿಹಂತ ಆಸ್ಪತ್ರೆಯು ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುವ, ಆರೋಗ್ಯ ಸೇವೆಗಳ ಪ್ರಗತಿಗೆ ಕೊಡುಗೆ ನೀಡುವ ತನ್ನ ಬದ್ಧತೆ ಎತ್ತಿಹಿಡಿಯುತ್ತದೆ. ಅಂಗಾಂಗ ಕಸಿಯ ಮೂಲಕ ಜೀವ ಉಳಿಸುವ ಕಾರ್ಯದಲ್ಲಿ ತೊಡಗಿದೆ ಎಂದು ತಿಳಿಸಿದರು.
ಯಶಸ್ವಿ ಮೂತ್ರಪಿಂಡ ಕಸಿ ನೆರವೇರಿಸಿದ ತಜ್ಞವೈದ್ಯರ ತಂಡವನ್ನು ಸಂಸ್ಥೆಯ ಅಧ್ಯಕ್ಷ ರಾವಸಾಹೇಬ ಪಾಟೀಲ, ನಿರ್ದೇಶಕ ಅಭಿನಂದನ ಪಾಟೀಲ ಮತ್ತು ಉತ್ತಮ ಪಾಟೀಲ ಅಭಿನಂದಿಸಿದ್ದಾರೆ.