Bengaluru: ಹೈ-ಟೆನ್ಷನ್‌ ಕೆಳಗೆ ಅನಧಿಕೃತ ಮಸೀದಿ ನಿರ್ಮಾಣ: ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಮೋಹನ್ ಗೌಡ ಆಕ್ರೋಶ

By Sathish Kumar KHFirst Published Feb 4, 2023, 12:18 PM IST
Highlights

ಹೈ-ಟೆನ್ಷನ್‌ ವಿದ್ಯುತ್‌ ಲೈನ್‌ ಕೆಳಗೆ ಅನಧಿಕೃತವಾಗಿ ಮೂರು ಅಂತಸ್ತಿನ ಮಸೀದಿಯನ್ನೇ ನಿರ್ಮಾಣ ಮಾಡಲಾಗುತ್ತಿದ್ದರೂ ಬಿಬಿಎಂಪಿ ಹಾಗೂ ಕೆಪಿಟಿಸಿಎಲ್‌ ಯಾಕೆ ತಡೆಯುತ್ತಿಲ್ಲ ಎಂದು ಹಿಂದೂ ಜನಜಾಗೃತಿ ಸಮಿತಿಯ ಅಧ್ಯಕ್ಷ ಮೋಹನ್ ಗೌಡ ಆರೋಪ ಮಾಡಿದ್ದಾರೆ. 

ಬೆಂಗಳೂರು (ಫೆ.04): ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಹೈಟೆನ್ಷನ್‌ ವಿದ್ಯುತ್ ಲೈನ್‌ ಕೆಳಗೆ ಮನೆ ಸೇರಿ ಯಾವುದೇ ಕಾಮಗಾರಿಗಳನ್ನು ಮಾಡುವಂತಿಲ್ಲ ಎಂದು ಬಿಬಿಎಂಪಿ ನಿಯಮವನ್ನೇ ರೂಪಿಸಿದೆ. ಆದರೆ, ಹೈ-ಟೆನ್ಷನ್‌ ವಿದ್ಯುತ್‌ ಲೈನ್‌ ಕೆಳಗೆ ಅನಧಿಕೃತವಾಗಿ ಮೂರು ಅಂತಸ್ತಿನ ಮಸೀದಿಯನ್ನೇ ನಿರ್ಮಾಣ ಮಾಡಲಾಗುತ್ತಿದ್ದರೂ ಬಿಬಿಎಂಪಿ ಹಾಗೂ ಕೆಪಿಟಿಸಿಎಲ್‌ ಯಾಕೆ ತಡೆಯುತ್ತಿಲ್ಲ ಎಂದು ಹಿಂದೂ ಜನಜಾಗೃತಿ ಸಮಿತಿಯ ಅಧ್ಯಕ್ಷ ಮೋಹನ್ ಗೌಡ ಆರೋಪ ಮಾಡಿದ್ದಾರೆ. 

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ಧರ್ಮದಂಗಲ್‌, ಚಾಮರಾಜಪೇಟೆ ಈದ್ಗಾ ಮೈದಾನ ಹಾಗೂ ವಿವಿಧ ಕಾರಣಗಳಿಗೆ ಹಿಂದು- ಮುಸ್ಲಿಂ ಧರ್ಮೀಯರ ನಡುವೆ ಸಾಮರಸ್ಯ ಕದಡುವ ಘಟನೆಗಳು ನಡೆಯುತ್ತಲೇ ಇವೆ. ಈ ಘಟನೆಗಳಿಗೆ ಪರೋಕ್ಷವಾಗಿ ಬಿಬಿಎಂಪಿ ಸೇರಿ ಅನೇಕ ಸರ್ಕಾರಿ ಇಲಾಖೆಗಳೇ ಕಾರಣ ಆಗಿರುವುದಂತೂ ಕಂಡುಬರುತ್ತಿದೆ. ಇತ್ತೀಚೆಗೆ ಅನಧಿಕೃತ ಧಾರ್ಮಿಕ ಕೇಂದ್ರಗಳನ್ನು ನಿರ್ಮಿಸುವಂತಿಲ್ಲ ಎಂದು ಹಲವು ಹಿಂದೂ ದೇವಾಲಯಗಳನ್ನು ಬಿಬಿಎಂಪಿ ತೆರವುಗೊಳಿಸಿದೆ. ಆದರೆ, ಈಗ ಎಲೆಕ್ಟ್ರಾನಿಕ್ ಸಿಟಿಯ ಬಳಿ ಇರುವ ಸಿಂಗಸಂದ್ರದಲ್ಲಿ ಹೈ-ಟೆನ್ಷನ್‌ ವಿದ್ಯುತ್‌ ತಂತಿಯ ಕೆಳಗೆ ಅಕ್ರಮವಾಗಿ ಮಸೀದಿ ನಿರ್ಮಾಣವಾಗುತ್ತಿದ್ದರೂ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಹಿಂದೂಪರ ಸಂಘಟನೆಗಳು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Bengaluru: ಉಲ್ಲಾಳ ವಾರ್ಡ್‌ನಲ್ಲಿ ಹೊಸ ರಸ್ತೆಯನ್ನೇ ಅಗೆದ ಟೆಲಿಕಾಂ ಕಂಪನಿ: ಆಕ್ರೋಶ

ಸಿಂಗಸಂದ್ರದಲ್ಲಿ ಅಕ್ರಮವಾಗಿ ಮಸೀದಿ: ಬಿಬಿಎಂಪಿ ವ್ಯಾಪ್ತಿಯಲ್ಲಿ KPTCL ಹೈಟೆಂನ್ಷನ್ ಲೈನ್ ಕೆಳಗೆ ಮಸೀದಿ ನಿರ್ಮಾಣ ಮಾಡಲಾಗುತ್ತಿದೆ. ಆದರೂ, ಈ ಬಗ್ಗೆ ಕ್ರಮಕೈಗೊಳ್ಳದೇ ಬಿಬಿಎಂಪಿ ಅಧಿಕಾರಿಗಳು ಸುಮ್ಮನೆ ಕುಳಿತಿದ್ದಾರೆ. ಕೂಡಲೇ ಅನಧಿಕೃತ ಮಸೀದಿ ತೆರವುಮಾಡುವಂತೆ ಹಲವು ಹಿಂದೂ ಪರ ಸಂಘಟನೆಗಳು ಬಿಬಿಎಂಪಿ ಕಮೀಷನರ್ ಗೆ ಮನವಿ ಮಾಡಿವೆ. ಈ ವೇಲೆ ಹಿಂದೂ ಜನಜಾಗೃತಿ ಸಮಿತಿಯ ಅಧ್ಯಕ್ಷ ಮೋಹನ್ ಗೌಡ ಮಾತನಾಡಿ, KPTCL ಹೈ-ಟೆಂನ್ಷನ್ ಲೈನ್ ಕೆಳಗೆ ಯಾವುದೇ ಕಾಮಗಾರಿ ನಡೆಸುವಂತಿಲ್ಲ. ಆದರೂ ಬಿಬಿಎಂಪಿ ವ್ಯಾಪ್ತಿಯ ಎಲೆಕ್ಟ್ರಾನಿಕ್ ಸಿಟಿಯ ಬಳಿ ಇರುವ ಸಿಂಗಸಂದ್ರದಲ್ಲಿ ಅಕ್ರಮವಾಗಿ ಮಸೀದಿ ನಿರ್ಮಾಣವಾಗುತ್ತಿದೆ. ಹೈ- ಟೆನ್ಷನ್ ಲೈನ್ ಕೆಳಗೆ ಯಾವುದೇ ಕಾಮಗಾರಿ ನಡೆಸುವುದು ಸುರಕ್ಷತಾ ದೃಷ್ಟಿಯಿಂದ ಸರಿಯಲ್ಲ. ಆದರೂ ಸಿಂಗಸಂದ್ರದಲ್ಲಿ 3-4 ಅಂತಸ್ತಿನ ಅಕ್ರಮ ಮಸೀದಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಹಲವು ಹಿಂದೂ ದೇವಾಲಯಗಳ ತೆರವು: ಸಿಂಗಸಂದ್ರದ ಗ್ರಾಮಸ್ಥರು ಈ ಬಗ್ಗೆ ರಾಜ್ಯ ಸರ್ಕಾರ, ಬಿಬಿಎಂಪಿ, ಬೆಸ್ಕಾಂ, ಕೆಪಿಟಿಸಿಎಲ್‌ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಇಲ್ಲಿನ ಸ್ಥಳೀಯ ಸಂಸ್ಥೆಗಳು ಈ ಬಗ್ಗೆ ನೋಟಿಸ್‌ ನೀಡಿ ಕೂಡಲೇ ತೆರವು ಮಾಡಬೇಕು. ರಾಜ್ಯಸರ್ಕಾರ ಬೆಂಗಳೂರಲ್ಲಿ ಇರುವ ಹಿಂದೂ ದೇವಸ್ಥಾನಗಳನ್ನ ಅಕ್ರಮವಾಗಿ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಸಾವಿರಾರು ದೇವಸ್ಥಾನಗಳನ್ನ ತೆರವು ಮಾಡಿದೆ. ಆದರೆ ಅನ್ಯ ಧರ್ಮಿಯರ ದೇವಸ್ಥಾನಗಳು ಅಕ್ರಮವಾಗಿ ನಿರ್ಮಾಣವಾಗಿದ್ದರೂ ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಇರುವುದು ದುರದೃಷ್ಟಕರ ಎಂದು ಕಿಡಿ ಕಾರಿದ್ದಾರೆ.

ಪಾಲಿಕೆ ವಿದ್ಯಾರ್ಥಿಗಳಿಗೆ ಸ್ವೆಟರ್‌ ಭಾಗ್ಯವಿಲ್ಲ: ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ ಮಕ್ಕಳಿಗೆ ಸ್ವೆಟರ್‌ ಕೊಡದ ಬಿಬಿಎಂಪಿ

ಫೋಟೋ ಸಮೇತ ಕಮಿಷನರ್‌ಗೆ ದೂರು: ಹೈಕೋರ್ಟ್‌ ನಿರ್ದೇಶನದ ಅನ್ವಯ ಸರ್ಕಾರದ ಇಲಾಖೆ, ಸಂಸ್ಥೆಗಳು ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ಯಾವುದೇ ಧಾರ್ಮಿಕ ಕೇಂದ್ರಗಳನ್ನು (ದೇವಾಲಯ, ಮಸೀದಿ, ಚರ್ಚ್‌, ಗುರುದ್ವಾರ, ಇತರೆ..) ತೆರವುಗೊಳಿಸಬೇಕು. ಇನ್ನು ನ್ಯಾಯಾಲಯ ನಿರ್ದೇಶನದಂತೆ ಕೆರೆ, ಪಾದಚಾರಿ ಮಾರ್ಗ, ಬಿಬಿಎಂಪಿ ಸ್ಥಳ, ಮೈದಾನ, ಉದ್ಯಾನ ಸೇರಿ ವಿವಿಧ ಸ್ಥಳಗಳಲ್ಲಿರುವ ಹಲವು ಹಿಂದೂ ದೇವಾಲಯಗಳನ್ನು ಈಗಾಗಲೇ ತೆರವು ಮಾಡಲಾಗಿದೆ. ಜೊತೆಗೆ, ಹೈ-ಟೆನ್ಷನ್‌ ವಿದ್ಯಲ್‌ ಲೈನ್‌ ಕೆಳಗೆ ಇರುವ ಮನೆಗಳನ್ನು ಕೂಡ ತೆರವು ಮಾಡಲಾಗಿದೆ. ಈಗ ಹೈಟೆನ್ಷನ್‌ ಲೈನ್‌ ಕೆಳಗೆ ಮಸೀದಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಫೋಟೋ ಸಮೇತ ದೂರು ಕೇಳಿಬಂದಿದ್ದು, ಬಿಬಿಎಂಪಿ ಅಧಿಕಾರಿಗಳು ತೆರವು ಮಾಡುತ್ತಾರೋ.? ಇಲ್ಲವೋ ಕಾದು ನೋಡಬೇಕು. 

ಮಸೀದಿ ನಿರ್ಮಾಣಕ್ಕೆ ಬಿಬಿಎಂಪಿ ಅನುಮತಿ ಕೊಟ್ಟಿಲ್ಲ: 

ಕೆಪಿಟಿಸಿಎಲ್ ಹೈ-ಟೆನ್ಷನ್‌ ಲೈನ್ ಕೆಳಗೆ ಯಾವುದೇ ಖಾಸಗಿ ವ್ಯಕ್ತಿ ಅಥವಾ ಸಂಸ್ಥೆಗಳ ಸ್ವಂತ ಭೂಮಿ ಇದ್ದರೂ ಅಲ್ಲಿ ಯಾವುದೇ ಕಾಮಗಾರಿ ಮಾಡುವಂತಿಲ್ಲ. ಇದನ್ನ ನಿಯಮಉಲ್ಲಂಘನೆ ಮಾಡಿ ನಿರ್ಮಾಣ ಮಾಡಿದ್ದರೆ ಕ್ರಿಮಿನಲ್ ಕೇಸ್ ದಾಖಲಿಸಬಹುದು. ಈಗ ನಿರ್ಮಾಣ ಆಗುತ್ತಿರೋ ಕಟ್ಟಡಕ್ಕೆ ನಾವು ಅನುಮತಿಯನ್ನು ಕೊಟ್ಟಿಲ್ಲ. ನಮ್ಮಲ್ಲಿ ನಿರ್ಮಾಣ ಮಾಡದಂತೆ ರೂಲ್ಸ್ ಇದೆ. ಈ ರೀತಿ ಆದರೆ ಸಂಬಂಧಪಟ್ಟ ಮಾಲೀಕರಿಗೆ  ಹೇಳಿ ಡ್ಯಾಮಲಿಶನ್‌ ಮಾಡಲು ತಿಳಿಸುತ್ತೇವೆ. ಸದ್ಯ ಇದನ್ನ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇವೆ.

- ತುಷಾರ್‌ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತ

click me!