ಉಡುಪಿಯಲ್ಲಿ 7151 ಗೃಹಲಕ್ಷ್ಮೀ ವಂಚಿತರು! ಗೃಹಜ್ಯೋತಿ ಬಳಕೆಗೆ ಹೆಚ್ಚಿನ ಬಿಲ್!

Published : May 04, 2025, 10:49 AM ISTUpdated : May 04, 2025, 10:54 AM IST
ಉಡುಪಿಯಲ್ಲಿ 7151 ಗೃಹಲಕ್ಷ್ಮೀ  ವಂಚಿತರು! ಗೃಹಜ್ಯೋತಿ ಬಳಕೆಗೆ ಹೆಚ್ಚಿನ ಬಿಲ್!

ಸಾರಾಂಶ

ಉಡುಪಿಯಲ್ಲಿ 7151 ಗೃಹಲಕ್ಷ್ಮೀ ಅರ್ಜಿಗಳು ತಾಂತ್ರಿಕ ಕಾರಣಗಳಿಂದ ಬಾಕಿ ಉಳಿದಿದ್ದು, ಅರ್ಹರಿಗೆ ಲಾಭ ತಲುಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವಿದ್ಯುತ್ ಬಿಲ್‌ ಹೆಚ್ಚಳ, ಬಾಕಿ ಕಂತುಗಳ ಬಿಡುಗಡೆ ಸೇರಿದಂತೆ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಲಾಗಿದೆ. ೪೦ ಹೊಸ ಬಸ್‌ಗಳು ಜಿಲ್ಲೆಗೆ ಬರಲಿದ್ದು, ಕೆಎಸ್‌ಆರ್‌ಟಿಸಿ ನಿಲ್ದಾಣದ ಸುಧಾರಣೆಗೆ ಸೂಚಿಸಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲೊಂದಾದ ಗೃಹಲಕ್ಷ್ಮೀ ಯೋಜನೆಯಡಿ ಸುಮಾರು 7151 ಅರ್ಜಿದಾರರರು ಐ.ಟಿ, ಜಿ.ಎಸ್.ಟಿ, ಇ-ಕೆವೈಸಿ ಮ್ಯಾಪಿಂಗ್ ಇತ್ಯಾದಿ ಕಾರಣಗಳಿಗೆ ಸೌಲಭ್ಯವಂಚಿತರಾಗಿದ್ದಾರೆ. ಅವರ ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿದ್ದಲ್ಲಿ ಅವರಿಗೂ ಯೋಜನೆಯ ಲಾಭ ತಲುಪಿಸಬೇಕು ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಮಂಗಳವಾರ ರಜತಾದ್ರಿಯ ಜಿ.ಪಂ. ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೃಹಲಕ್ಷ್ಮೀ ಯೋಜನೆಯ ಫಲಾನುಭವಿ ಕುಟುಂಬದ ಯಜಮಾನಿ ಮರಣ ಹೊಂದಿದ್ದಲ್ಲಿ ಯಜಮಾನಿ ಬದಲಾವಣೆಗೆ, ಹೊಸ ಮನೆ ಕಟ್ಟಿದಾಗ ಹೊಸ ಅರ್ಜಿಯ ಸೇರ್ಪಡೆಗೆ, ಹೊಸ ರೇಷನ್ ಕಾರ್ಡುದಾರರಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಪ್ರಾರಂಭದ 3- 4 ಕಂತುಗಳ ಹಣ ಬಂದಿದೆ. ನಂತರ ಬಂದಿಲ್ಲ ಎಂಬ ದೂರುಗಳು ಬಂದಿವೆ ಎಂದವರು ಹೇಳಿದರು.

ಗೃಹಜ್ಯೋತಿ ಯೋಜನೆಯಡಿ ಪ್ರತಿ ಕುಟುಂಬಕ್ಕೆ ಗರಿಷ್ಠ 200 ಯೂನಿಟ್ ಉಚಿತ ನೀಡಲಾಗುತ್ತಿದೆ. ಆದರೆ ಬೇಸಿಗೆಯಾದ್ದರಿಂದ ಸ್ವಲ್ಪ ಹೆಚ್ಚು ವಿದ್ಯುತ್ ಬಳಕೆಯಾದರೂ, ಸಾವಿರಾರು ರು. ವಿದ್ಯುತ್ ಬಿಲ್ ಬಂದಿದೆ. ಬಿಲ್ ಕಟ್ಟುವುದಕ್ಕೆ ವಿಳಂಬವಾದರೇ ಮೆಸ್ಕಾಂ ಸಿಬ್ಬಂದಿ ಫ್ಯೂಸ್ ತೆಗೆಯುತಿದ್ದಾರೆ. ಹೀಗೆ ಮಾಡದೇ ಬಿಲ್ ಕಟ್ಟುವುದಕ್ಕೆ ಹೆಚ್ಚುವರಿ ಸಮಯ ನೀಡಿ ಎಂದವರು ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರ ಮಂಗಳೂರು ವಿಭಾಗಕ್ಕೆ 100 ಹೊಸ ಸರ್ಕಾರಿ ಬಸ್‌ಗಳನ್ನು ನೀಡಲಿದ್ದು, ಅವುಗಳಲ್ಲಿ 40 ಬಸ್‌ಗಳು ಉಡುಪಿ ಜಿಲ್ಲೆಗೆ ಆಗಮಿಸಲಿದೆ. ಅಗತ್ಯವಿರುವ ರೂಟ್‌ಗಳನ್ನು ಗುರುತಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದ ಅವರು, ಉಡುಪಿಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಎಸ್ಕಲೇಟರ್ ಕಳಪೆ ನಿರ್ವಹಣೆ ಮತ್ತು ಶೌಚಾಲಯದ ಶುಚಿತ್ವದ ಗಮನವ ಹರಿಸುವಂತೆ ಹೇಳಿದರು.

ಜಿಪಂ ಸಿಇಓ ಪ್ರತೀಕ್ ಬಾಯಲ್ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರು ಯಾವುದೇ ಸಮಸ್ಯೆಗಳನ್ನು ತಂದಲ್ಲಿ ಅದನ್ನು ಸಮಾಧಾನಯುತವಾಗಿ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಪ್ರಶಾಂತ ಜತ್ತನ್ನ, ಸತೀಶ್, ಸಂತೋಷ್ ಕುಲಾಲ್ ಹಾಗೂ ಗೀತಾ ವಾಗ್ಲೆ, ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯ ಸದಸ್ಯರು, ತಾಲೂಕುಗಳ ಅಧ್ಯಕ್ಷರು, ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ: ಸಂಸದ ಕೋಟ ಸೂಚನೆ
ಜಿಲ್ಲೆಯ ಕೈಗಾರಿಕೋದ್ಯಮಗಳ ಉದ್ಯೋಗಾವಕಾಶಗಳಲ್ಲಿ ಸ್ಥಳೀಯ ಯುವಕರಿಗೆ ಪ್ರಥಮ ಪ್ರಾಶಸ್ತ್ಯ ನೀಡುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಡಾ. ಸರೋಜಿನಿ ಮಹಿಷಿ ಅವರ ವರದಿಯ ಶಿಫಾರಸ್ಸಿನಂತೆ ಸಣ್ಣ ಕೈಗಾರಿಕೆಗಳು, ಮಧ್ಯಮ ಕೈಗಾರಿಕೆಗಳು ಮತ್ತು ಬೃಹತ್ ಮತ್ತು ಬಹುರಾಷ್ಟ್ರೀಯ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಶೇ 70 ರಷ್ಟು ಉದ್ಯೋಗಗಳನ್ನು ನೀಡುವುದು ಕಡ್ಡಾಯ. ಆದ್ದರಿಂದ ಕೈಗಾರಿಕೆಗಳ ಮಾಲೀಕರು ಸ್ಥಳೀಯರಿಗೆ ಉದ್ಯೋಗಕ್ಕೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ 37 ಸಣ್ಣ, 45 ಮಧ್ಯಮ ಮತ್ತು 7 ಬೃಹತ್ ಕೈಗಾರಿಕೆಗಳಿದ್ದು, ಇವುಗಳಲ್ಲಿ ಸಾವಿರಾರು ಉದ್ಯೋಗಾವಕಾಶಗಳು ಇವೆ. ಯು.ಪಿ.ಸಿ.ಎಲ್, ಕೊಚ್ಚಿನ್ ಶಿಪ್‌ಯಾರ್ಡ್ ಮುಂತಾದ ಸಂಸ್ಥೆಗಳು ಇನ್ನೂ ಹೆಚ್ಚಿನ ಪ್ರಾಧಾನ್ಯತೆಯನ್ನು ಸ್ಥಳೀಯರಿಗೆ ನೀಡಬೇಕು ಎಂದರು.

ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ನಿರುದ್ಯೋಗಿ ಯುವಕರು ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸುತಿದ್ದು, ಉದ್ಯಮಿಗಳು ಸ್ಥಳೀಯರಿಗೆ ಉದ್ಯೋಗ ನೀಡುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಜಿಲ್ಲಾಡಳಿತ ಕೈಗಾರಿಕೆಯ ಅಭಿವೃದ್ಧಿಗೆ ಎಲ್ಲಾ ನೆರವು ನೀಡಲಿದೆ ಎಂದು ಭರವಸೆ ನೀಡಿದರು.

ವಿವಿಧ ಕೈಗಾರಿಕೋದ್ಯಮಿಗಳು ಮಾತನಾಡಿ, ಈಗಾಗಲೇ ಬಹುತೇಕ ಸಂಸ್ಥೆಗಳಲ್ಲಿ ಶೇ ೧೦೦ ರಷ್ಟು ಉದ್ಯೋಗಿಗಳು ಸ್ಥಳೀಯರೇ ಆಗಿರುತ್ತಾರೆ. ಕೆಲವು ಕಡೆ ಡಿ ದರ್ಜೆ ನೌಕರರು ಸಿಗುತ್ತಿಲ್ಲವಾದ್ದರಿಂದ ಹೊರ ರಾಜ್ಯದಿಂದ ಸೇವೆ ಪಡೆಯಲಾಗುತ್ತದೆ ಎಂದು ಸಂಸದರ ಗಮನಕ್ಕೆ ತಂದರು. ಜಿಲ್ಲಾ ಕೈಗಾರಿಕಾ ಇಲಾಖೆ ಅಧಿಕಾ ನಾಗರಾಜ ನಾಯಕ್ ಮತ್ತಿತರ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
 

PREV
Read more Articles on
click me!

Recommended Stories

ಅಡಕೆ ಬೆಳೆಗಾರರ ನೆರವಿಗೆ ಕೇಂದ್ರ ತುರ್ತಾಗಿ ಮಧ್ಯಪ್ರವೇಶಿಸಲಿ: ಸಂಸದ ಬಿ.ವೈ.ರಾಘವೇಂದ್ರ
ಡಿವೈಡರ್‌ಗೆ ಕಾರ್‌ ಡಿಕ್ಕಿ, ಕುಟುಂಬವನ್ನು ಭೇಟಿ ಮಾಡಲು ಹೋಗುತ್ತಿದ್ದ ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಸಜೀವ ದಹನ