ಒಂದೆಡೆ ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಉತ್ತೇಜಿಸುತ್ತೇವೆ ಎನ್ನುವ ಸರ್ಕಾರ ಅಂಗನವಾಡಿಗಳಲ್ಲೇ ಎಲ್.ಕೆ.ಜಿ ಮತ್ತು ಯುಕೆಜಿಯನ್ನೂ ಆರಂಭಿಸುತ್ತೇವೆ ಎನ್ನುತ್ತದೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜ.08): ಒಂದೆಡೆ ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಉತ್ತೇಜಿಸುತ್ತೇವೆ ಎನ್ನುವ ಸರ್ಕಾರ ಅಂಗನವಾಡಿಗಳಲ್ಲೇ ಎಲ್.ಕೆ.ಜಿ ಮತ್ತು ಯುಕೆಜಿಯನ್ನೂ ಆರಂಭಿಸುತ್ತೇವೆ ಎನ್ನುತ್ತದೆ. ಆದರೆ ಅಂಗನವಾಡಿಗಳಿಗೆ ಬೇಕಾಗಿರುವ ಮೂಲಭೂತ ಸೌಕರ್ಯ ಒದಗಿಸದೇ ಇದ್ದರೆ ಸರ್ಕಾರದ ಉದ್ದೇಶದಲ್ಲಿ ವೈರುದ್ಯವಿದೆ ಎನಿಸುತ್ತದೆ. ಹೌದು ಕೊಡಗಿನ ಹತ್ತಾರು ಅಂಗನವಾಡಿಗಳಲ್ಲಿ ಸಹಾಯಕಿಯರೇ ಇಲ್ಲ. ಇದು ಅಂಗನವಾಡಿಗೆ ಹೋಗುವ ನೂರಾರು ಪುಟಾಣಿಗಳ ಕಲಿಕೆ ಮೇಲೆ ತೀವ್ರ ಸಮಸ್ಯೆ ಎದುರಾಗುವಂತೆ ಮಾಡಿದೆ. ಕೊಡಗಿನ ಐದು ತಾಲ್ಲೂಕುಗಳಲ್ಲಿ ನೂರಾರು ಅಂಗನವಾಡಿಗಳಿದ್ದು, ಅವುಗಳಲ್ಲಿ 30 ಕ್ಕೂ ಹೆಚ್ಚು ಅಂಗನವಾಡಿಗಳಲ್ಲಿ ಸಹಾಯಕಿಯರೇ ಇಲ್ಲ.
ಅದರಲ್ಲೂ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ನಗರದಲ್ಲಿ 24 ಅಂಗನವಾಡಿಗಳಿವೆ. ಅವುಗಳ ಪೈಕಿ 7 ಅಂಗನವಾಡಿಗಳಲ್ಲಿ ಸಹಾಯಕಿಯರೇ ಇಲ್ಲ. ಹೀಗಾಗಿ ಪ್ರತಿಯೊಂದು ಕೆಲಸವನ್ನು ಶಿಕ್ಷಕಿಯೇ ಮಾಡಬೇಕು. ಅಂಗನವಾಡಿಗೆ ಬರುವ ಪುಟಾಣಿಗಳಿಗೆ ಮಧ್ಯಾಹ್ನದ ಊಟಕ್ಕೆ ಶಿಕ್ಷಕಿಯೇ ಅಡುಗೆ ಮಾಡಬೇಕು. ಸಹಾಯಕಿ ಇಲ್ಲದೆ ಇರುವುದರಿಂದ ಅವರೇ ಅಡುಗೆ ಮಾಡಬೇಕಾಗಿರುವುದರಿಂದ ಅವರು ಅಡುಗೆ ಮಾಡಲು ಆರಂಭಿಸಿದರೆಂದರೆ ಇತ್ತ ಪುಟಾಣಿಗಳಿಗೆ ಏನಾದರೂ ಕಲಿಸುವುದಕ್ಕೆ ಹಾಗುವುದೇ ಇಲ್ಲ. ಅಷ್ಟೇ ಅಲ್ಲ, ಪುಟಾಣಿಗಳು ಏನು ಮಾಡುತ್ತಿದ್ದಾರೆ ಎನ್ನುವುದನ್ನು ಗಮನಿಸುವುದಕ್ಕೂ ಆಗುವುದಿಲ್ಲ.
ಜೀವನದಿ ಕಾವೇರಿ ಒಡಲಿಗೆ ಸೇರುತ್ತಿದೆ ಶುಂಠಿತ್ಯಾಜ್ಯ ನೀರು: ಶುದ್ಧೀಕರಣ ಘಟಕಗಳಿಂದ ಕಾವೇರಿಗೆ ಕಂಟಕ
ಈ ಪುಟಾಣಿಗಳಿಗಾಗಿ ಬರೀ ಅಡುಗೆ ಮಾಡುದಷ್ಟೇ ಆಗಿದ್ದರೆ ಬಹುಷ್ಯ ಇಷ್ಟೊಂದು ಸಮಸ್ಯೆಯೂ ಆಗುತ್ತಿರಲಿಲ್ಲವೇನೋ, ಅಡುಗೆ ಮಾಡುವ ಜೊತೆಗೆ ಬಾಣಂತಿಯರು ಮತ್ತು ಗರ್ಭಿಣಿಯರಿಗೆ ಆಹಾರಧಾನ್ಯ ವಿತರಣೆ ಮಾಡಬೇಕು. ಇದರ ನಡುವೆಯೇ ಇಲಾಖೆಗೆ ಸಂಬಂಧಿಸಿದ ಮಾಹಿತಿಗಳನ್ನು ದಾಖಲು ಮಾಡಬೇಕು. ಇವುಗಳೆಲ್ಲಾ ಕೆಲಸಗಳನ್ನು ಮಾಡುವುದರಲ್ಲಿ ದಿನವೇ ಮುಗಿದು ಹೋಗಿರುತ್ತದೆ. ಹೀಗಾಗಿ ಪುಟಾಣಿಗಳ ಕಲಿಕೆ ಬಗೆಗೆ ಗಮನವನ್ನು ಕೊಡಲು ಸಾಧ್ಯವೇ ಆಗುವುದಿಲ್ಲ. ಕಲಿಕೆ ಬಗ್ಗೆ ಇರಲಿ ಕನಿಷ್ಠ ಅವರು ಏನು ಮಾಡುತ್ತಿದ್ದಾರೆ ಎಂದು ನೋಡಲು ಆಗುವುದಿಲ್ಲ ಎನ್ನುವುದು ಅಂಗನವಾಡಿ ಶಿಕ್ಷಕಿಯರ ಅಳಲು.
ಈ ಅಂಗನವಾಡಿಗಳಿಗೆ ಸಹಾಯಕಿಯರನ್ನು ಕೊಡಿ ಎಂದು ಪೋಷಕರ ಸಮಿತಿಗಳು ಕಳೆದ ಮೂರು ವರ್ಷಗಳಿಂದಲೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಮನವಿಗಳಿಗೆ ಯಾವುದೇ ಸ್ಪಂದನೆ ದೊರೆತ್ತಿಲ್ಲ ಎನ್ನುತ್ತಿದ್ದಾರೆ ಪೋಷಕರ ಸಮಿತಿ ಮುಖಂಡರು. ಸಹಾಯಕಿಯರು ಇಲ್ಲದೇ ಇರುವುದರಿಂದ ಶಿಕ್ಷಕಿಯವರಿಗೆ ಅನಾರೋಗ್ಯ ಎದುರಾದರೋ ಅಥವಾ ಯಾವುದಾದರೂ ತಮ್ಮ ವೈಯಕ್ತಿಕ ಸಮಸ್ಯೆ ಹಿನ್ನೆಲೆಯಲ್ಲಿ ರಜೆ ಹಾಕಿಕೊಳ್ಳಬೇಕೆಂದರೂ ಸಾಧ್ಯವಿಲ್ಲ ಎನ್ನುವಂತಹ ಪರಿಸ್ಥಿತಿ ಎದುರಾಗಿದೆ. ರಜೆ ಹಾಕಿಕೊಳ್ಳಬೇಕೆಂದರೆ ಅಕ್ಕಪಕ್ಕದ ಅಂಗನವಾಡಿಗಳ ಶಿಕ್ಷಕಿಯರಿಗೆ ಮನವಿ ಮಾಡಿ ಬಳಿಕ ಇಲಾಖೆ ಗಮನಕ್ಕೆ ತಂದು ರಜೆ ತೆಗೆದುಕೊಳ್ಳಬೇಕಾಗಿದೆ.
ಮಲತ್ಯಾಜ್ಯ ನಿರ್ವಹಣೆ ಘಟಕಕ್ಕೆ ಸುರಿದಿದ್ದ 80 ಲಕ್ಷ ಹಣ ಪೋಲು: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯಿಂದಲೇ ಅಶುಚ್ಛಿತ್ವ!
ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ನಟರಾಜ ಅವರನ್ನು ಕೇಳಿದರೆ ಅಂಗನವಾಡಿಗಳಿಗೆ ಸಹಾಯಕಿಯರು ಇಲ್ಲ ಎನ್ನುವ ಮಾಹಿತಿ ಇದೆ. ಆದರೆ ಇಷ್ಟು ಅಂಗನವಾಡಿಗಳಿಗೆ ಸಹಾಯಕಿಯರು ಇಲ್ಲ ಎನ್ನುವ ಮಾಹಿತಿ ಸದ್ಯಕ್ಕೆ ಇಲ್ಲ. ಅದನ್ನು ಆಯಾ ಸಿಡಿಪಿಓಗಳಿಂದ ತರಿಸಿಕೊಳ್ಳಬೇಕು ಎಂದು ಹೇಳಿ ಇಲಾಖೆಯ ನಿರ್ಲಕ್ಷ್ಯತನ ಎಷ್ಟಿದೆ ಎನ್ನುವುದನ್ನು ತೋರಿಸಿದ್ದಾರೆ. ಒಟ್ಟಿನಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣದ ಬಗ್ಗೆ ಸರ್ಕಾರಗಳು ತೀವ್ರ ನಿರ್ಲಕ್ಷ್ಯ ವಹಿಸಿವೆ ಎನ್ನುವುದಕ್ಕೆ ಇದೇ ದೊಡ್ಡ ಸಾಕ್ಷಿ.