ನಗರದಲ್ಲಿ 3 ಲಕ್ಷ ದಾಟಿಕ ಬೀದಿನಾಯಿಗಳ ಸಂಖ್ಯೆ | ರಾತ್ರಿ ವೇಳೆ ರಸ್ತೆಗಳಿಯಲು ಮಕ್ಕಳಿಗೆ ಅಷ್ಟೇ ಅಲ್ಲ ದೊಡ್ಡವರಿಗೂ ಢವ ಢವ | ನೈಟ್ ಶಿಫ್ಟ್ ಮುಗಿಸಿ ಬೈಕಲ್ಲಿ ಮನೆಗೆ ಹೋಗಲು ನಡುಕ | ಮಿತಿ ಮೀರಿದ ಬೀದಿನಾಯಿಗಳ ಕಾಟಕ್ಕೆ ಬ್ರೇಕ್ ಹಾಕಲು ಪಾಲಿಕೆ ವಿಫಲ
ಸಂಪತ್ ತರೀಕೆರೆ
ಬೆಂಗಳೂರು(ಜ.12): ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ರಸ್ತೆಗಳಲ್ಲಿ ಮಕ್ಕಳಷ್ಟೇ ಅಲ್ಲ ದೊಡ್ಡವರು ಕೂಡ ಸುರಕ್ಷಿತವಾಗಿ ಓಡಾಡುವುದಕ್ಕೆ ಹೆದರುವಂತ ಪರಿಸ್ಥಿತಿ ಇದೆ. ನಗರದ ಎಂಟು ವಲಯಗಳ ವಿವಿಧ ಬಡಾವಣೆಗಳಲ್ಲಿ ವಾಸವಿರುವ ಬರೋಬ್ಬರಿ 3,09,975 ಬೀದಿ ನಾಯಿಗಳ ನಿಯಂತ್ರಣ ಪಾಲಿಕೆಗೆ ತಲೆನೋವಾಗಿ ಪರಿಣಮಿಸಿದೆ.
undefined
ನಗರದ ಬನಶಂಕರಿ, ಪದ್ಮನಾಭನಗರ, ಸುಂಕದಕಟ್ಟೆ, ನಾಗವಾರ, ಕುಮಾರಸ್ವಾಮಿ ಲೇಔಟ್, ಸಂಜಯನಗರದ ನಾಗಶೆಟ್ಟಿಹಳ್ಳಿಯ ಅಂಗಡಿ ತಿಮ್ಮಯ್ಯ ಲೇಔಟ್, ಗೋವಿಂದರಾಜನಗರ ಮುಖ್ಯ ರಸ್ತೆ ಸಮೀಪದ ತಿಮ್ಮೇನಹಳ್ಳಿ ಸುತ್ತಮುತ್ತ, ಕಾಮಾಕ್ಷಿಪಾಳ್ಯ, ಗವಿಗಂಗಾಧರೇಶ್ವರ ದೇವಸ್ಥಾನ ಬಳಿಯ ಲಕ್ಷ್ಮೇಪುರ, ಗಿರಿನಗರ, ಮರಿಯಪ್ಪನ ಪಾಳ್ಯ, ಹನುಮಂತನಗರ, ತ್ಯಾಗರಾಜನಗರ, ಮಾವಳ್ಳಿ ಸೇರಿದಂತೆ ಹಲವು ಬಡಾವಣೆæಗಳಲ್ಲೂ ಬೀದಿ ನಾಯಿಗಳ ಕಾಟ ಮಿತಿಮೀರಿದೆ.
ತಡರಾತ್ರಿ ಪಾಳಿ ಮುಗಿಸಿ ವಾಪಸಾಗುವ ಉದ್ಯೋಗಿಗಳು, ವ್ಯಾಪಾರಿಗಳು, ಸಾರ್ವಜನಿಕರು ಬೀದಿ ನಾಯಿ ಕಾಟದಿಂದ ಭಯದಿಂದಲೇ ರಸ್ತೆಯಲ್ಲಿ ಸಂಚರಿಸುವಂತಾಗಿದೆ. ಪ್ರಾಣಿ ಹಕ್ಕುಗಳ ಎದುರು ಅಸಹಾಯಕವಾಗಿರುವ ಪಾಲಿಕೆ ಆಡಳಿತ ನಾಯಿಗಳ ಸಂತಾನ ನಿಯಂತ್ರಣದ ಮೂಲಕ ಪರಿಹಾರ ಹುಡುಕುವ ಯತ್ನ ನಡೆಸುತ್ತಿದೆಯಾದರೂ ಈವರೆಗೂ ಯಶಸ್ಸು ಮಾತ್ರ ಸಿಕ್ಕಿಲ್ಲ.
ರೇಬಿಸ್ ಲಸಿಕೆ, ಸಂತಾನಹರಣಕ್ಕೆ ಕೋಟಿ ಕೋಟಿ:
2012ರ ಗಣತಿಯಂತೆ ನಗರದಲ್ಲಿ ಸುಮಾರು 1.83 ಲಕ್ಷ ಬೀದಿ ನಾಯಿಗಳು ಇದ್ದ ಸಂಖ್ಯೆ ಈಗ ಬರೋಬ್ಬರಿ 3.09 ಲಕ್ಷಕ್ಕೆ ಏರಿಕೆಯಾಗಿದೆ. ಬೀದಿ ನಾಯಿಗಳು ಹೆಚ್ಚಳವಾಗದಂತೆ ಪಾಲಿಕೆ 2019-20ನೇ ಸಾಲಿನಲ್ಲಿ 38,035 ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿದ್ದು, 37,241 ನಾಯಿಗಳಿಗೆ ರೇಬಿಸ್ ಲಸಿಕೆ ನೀಡಿದೆ. ಅದಕ್ಕಾಗಿ 4.37 ಕೋಟಿ ರು.ವೆಚ್ಚ ಮಾಡಿದೆ. 2020 ಏಪ್ರಿಲ್-ನವೆಂಬರ್‌ವರೆಗೆ 21,962 ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮತ್ತು 20861 ನಾಯಿಗಳಿಗೆ ರೇಬಿಸ್ ಲಸಿಕೆ ಹಾಕಿಸಿದ್ದು ಒಟ್ಟು 2.94 ಕೋಟಿ ರು.ಗಳನ್ನು ಖರ್ಚು ಮಾಡಲಾಗಿದೆ.
ಬೀದಿ ನಾಯಿಯೊಂದನ್ನು ಹಿಡಿದು , ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಿ, ಮೂರು ದಿನ ಆರೈಕೆ ಮಾಡಿ ವಾಪಸ್ ಬಿಡಲು ನಾಲ್ಕೈದು ದಿನ ಬೇಕು. ಅದಕ್ಕಾಗಿ ಪಾಲಿಕೆ 1,150ರಿಂದ 1200 ರು.ಗಳನ್ನು ಖರ್ಚು ಮಾಡುತ್ತದೆ. ಆದರೆ ನಗರದಲ್ಲಿ ಮೂರು ಲಕ್ಷಕ್ಕೂ ಅಧಿಕ ನಾಯಿಗಳಿದ್ದು ಒಂದು ಬಾರಿಗೆ ಏಳೆಂಟು ಮರಿಗಳನ್ನು ಹಾಕುತ್ತವೆ. ಇದರಿಂದ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗದ ಅದೆಷ್ಟೋ ನಾಯಿಗಳಿದ್ದು, ಪ್ರತಿ ವರ್ಷವೂ 50ರಿಂದ 75 ಸಾವಿರ ಬೀದಿ ನಾಯಿಗಳು ಹೆಚ್ಚಾಗುತ್ತಿವೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2019ರಲ್ಲಿ 54 ಮಂದಿ ಮೇಲೆ ದಾಳಿ
2019-20ರಲ್ಲಿ ಮಕ್ಕಳ ಮೇಲೆ ದಾಳಿ ನಡೆಸಿರುವ 54 ಪ್ರಕರಣಗಳು ದಾಖಲಾಗಿವೆ. ದಾಳಿಗೊಳಗಾದವರಿಗೆ 90,438 ರು.ಗಳನ್ನು ಪಾಲಿಕೆ ಪರಿಹಾರವಾಗಿ ನೀಡಿದೆ. 2020 ಏಪ್ರಿಲ್-ನವೆಂಬರ್ ಅಂತ್ಯದವರೆಗೆ 19 ಬೀದಿನಾಯಿ ದಾಳಿ ಪ್ರಕರಣ ದಾಖಲಾಗಿದ್ದು, 77,936 ರು.ಗಳನ್ನು ಪರಿಹಾರವಾಗಿ ನೀಡಲಾಗಿದೆ ಎಂದು ಬಿಬಿಎಂಪಿ ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕ ಲಕ್ಷ್ಮೇನರಸಿಂಹಸ್ವಾಮಿ ಮಾಹಿತಿ ನೀಡಿದ್ದಾರೆ.
ಸ್ಥಳಾಂತರ ಕೂಡ ಅಪರಾಧ
2001ರಲ್ಲಿಪ್ರಾಣಿಗಳ ಸಂತಾನ ನಿಯಂತ್ರಣ ಕಾನೂನಿನ ಪ್ರಕಾರ ಸಂತಾನ ನಿಯಂತ್ರಣ ಚಿಕಿತ್ಸೆ ಪಡೆದ ಪ್ರಾಣಿಗಳನ್ನು ಸ್ಥಳಾಂತರಿಸುವಂತಿಲ್ಲ. ನಾಯಿಗಳಿಗೆ ಸಾರ್ವಜನಿಕರು ಊಟ ಕೊಡಬೇಡಿ ಎಂದು ಹೇಳುವಂತಿಲ್ಲ. ಈ ನಿಯಮಗಳನ್ನು ಉಲ್ಲಂಘಿಸುವುದು ಕಾಯ್ದೆ ಪ್ರಕಾರ ಅಪರಾಧವಾಗಿದ್ದು ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂಬುದು ಕೆಲವು ಅಧಿಕಾರಿಗಳ ಆರೋಪ.
ಸುಮಾರು 15ಕ್ಕಿಂತ ಹೆಚ್ಚು ಬೀದಿ ನಾಯಿಗಳು ರಾತ್ರಿಯಿಡೀ ಒಂದೆಡೆ ಗುಂಪುಗೂಡಿ ರಸ್ತೆಯಲ್ಲಿ ಓಡಾಡುವವರನ್ನು ಅಟ್ಟಿಸಿಕೊಂಡು ಹೋಗುತ್ತವೆ. ಚಿಕ್ಕಮಕ್ಕಳು, ವೃದ್ಧರು, ಮಹಿಳೆಯರಂತೂ 10 ಗಂಟೆಯ ನಂತರ ಹೊರಗೆ ಓಡಾಡುವಂತಿಲ್ಲ. ಈ ಬಗ್ಗೆ ಪಾಲಿಕೆಯ ಸಹಾಯವಾಣಿಗೆ ಕರೆ ಮಾಡಿದರೂ ಪ್ರಯೋಜನವಾಗಿಲ್ಲ ಎಂದಿದ್ದಾರೆ ನಾಗಶೆಟ್ಟಿಹಳ್ಳಿ ಧನಲಕ್ಷ್ಮೀ.